ರೂತಳು 2 - ಕನ್ನಡ ಸತ್ಯವೇದವು J.V. (BSI)ರೂತಳು ಬೋವಜನ ಹೊಲದಲ್ಲಿ ಹಕ್ಕಲಾಯ್ದದ್ದು 1 ನೊವೊವಿುಯ ಗಂಡನಾದ ಎಲೀಮೆಲೆಕನ ಗೋತ್ರದಲ್ಲಿ ಬೋವಜನೆಂಬ ಒಬ್ಬ ಧನವಂತನಾದ ಸಂಬಂಧಿಯಿದ್ದನು. 2 ಮೋವಾಬ್ಯಳಾದ ರೂತಳು ನೊವೊವಿುಗೆ - ನಾನು ಹೋಗಿ ಯಾವನು ನನಗೆ ದಯೆತೋರಿಸುವನೋ ಅವನ ಹೊಲದಲ್ಲಿ ಹಕ್ಕಲತೆನೆಗಳನ್ನು ಕೂಡಿಸಿಕೊಂಡು ಬರುವೆನು ಅಂದಳು. 3 ಅದಕ್ಕವಳು - ನನ್ನ ಮಗಳೇ, ಹೋಗು ಎನ್ನಲು ಆಕೆಯು ದೈವಯೋಗದಿಂದ ಎಲೀಮೆಲೆಕನ ಗೋತ್ರದವನಾದ ಬೋವಜನ ಸ್ವಾಸ್ತ್ಯವಾಗಿದ್ದ ಹೊಲಕ್ಕೆ ಹೋಗಿ ಕೊಯ್ಯುವವರ ಹಿಂದಿನಿಂದ ಹಕ್ಕಲಾಯುತ್ತಾ ಇದ್ದಳು. 4 ಆಗ ಬೋವಜನು ಬೇತ್ಲೆಹೇವಿುನಿಂದ ಹೊಲಕ್ಕೆ ಬಂದು ಕೊಯ್ಯುವವರಿಗೆ - ಯೆಹೋವನು ನಿಮ್ಮ ಸಂಗಡ ಇರಲಿ ಅಂದನು. ಅವರು - ಯೆಹೋವನು ನಿನ್ನನ್ನು ಆಶೀರ್ವದಿಸಲಿ ಎಂದು ಹರಸಿದರು. 5 ಬೋವಜನು ಕೊಯ್ಯುವವರ ಮೇಲಿರಿಸಿದ ತನ್ನ ಸೇವಕನನ್ನು - ಇವಳು ಯಾರ ಹುಡುಗಿ ಎಂದು ಕೇಳಿದ್ದಕ್ಕೆ 6 ಅವನು - ನೊವೊವಿುಯ ಸಂಗಡ ಬಂದ ಮೋವಾಬ್‍ಸ್ತ್ರೀಯು; 7 ಇವಳು - ಕೊಯ್ಯುವವರ ಹಿಂದಿನಿಂದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾಯ್ದುಕೊಳ್ಳುವ ಹಾಗೆ ತನಗೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡಳು. ಈಕೆಯು ಮನೆಯಲ್ಲಿ ಹೆಚ್ಚಾಗಿ ಕಾಲ ಕಳೆಯಲಿಲ್ಲ; ಬೆಳಿಗ್ಗೆ ಬಂದವಳು ಇನ್ನೂ ಇಲ್ಲಿಯೇ ಇದ್ದಾಳೆ ಅಂದನು. 8 ಆಗ ಬೋವಜನು ರೂತಳಿಗೆ - ನನ್ನ ಮಗಳೇ, ಕೇಳು; ನನ್ನ ಹೊಲವನ್ನು ಬಿಟ್ಟು ಬೇರೆಯವರ ಹೊಲಕ್ಕೆ ಹೋಗಬೇಡ; ನನ್ನ ಹೆಣ್ಣಾಳುಗಳ ಜೊತೆಯಲ್ಲೇ ಇದ್ದುಕೊಂಡು 9 ನನ್ನ ಆಳುಗಳು ಕೊಯ್ಯುವದಕ್ಕೋಸ್ಕರ ಯಾವ ಹೊಲಕ್ಕೆ ಹೋಗುತ್ತಾರೋ ಆ ಹೊಲಕ್ಕೆ ನೀನೂ ಹೋಗು. ನಿನ್ನನ್ನು ಯಾರೂ ಮುಟ್ಟಬಾರದೆಂದು ನನ್ನ ಸೇವಕರಿಗೆ ಅಪ್ಪಣೆಕೊಟ್ಟಿದ್ದೇನೆ. ನಿನಗೆ ದಾಹವಾದರೆ ನನ್ನ ಸೇವಕರೇ ನೀರು ತಂದು ತುಂಬಿಸಿದ ನೀರಿನ ಪಾತ್ರೆಗಳ ಬಳಿಗೆ ಹೋಗಿ ಕುಡಿ ಎಂದು ಹೇಳಿದನು. 10 ರೂತಳು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿ - ಪರದೇಶಿಯಾದ ನನ್ನಲ್ಲಿ ಇಷ್ಟು ಕಟಾಕ್ಷವೇಕೆ ಅನ್ನಲು 11 ಬೋವಜನು - ನಿನ್ನ ಗಂಡನು ಸತ್ತ ಮೇಲೆ ನೀನು ಅತ್ತೆಯನ್ನು ಪ್ರೀತಿಸಿ ತಂದೆತಾಯಿಗಳನ್ನೂ ಸ್ವದೇಶವನ್ನೂ ಬಿಟ್ಟು ನೀನು ಈವರೆಗೂ ಅರಿಯದ ಜನರ ಬಳಿಗೆ ಬಂದಿರುವಿಯೆಂಬದು ನನಗೆ ಚೆನ್ನಾಗಿ ಗೊತ್ತಾಗಿದೆ. 12 ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯೆಹೋವನು ನಿನಗೆ ಉಪಕಾರಮಾಡಲಿ; ನೀನು ಯಾವಾತನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳ ಬಂದಿಯೋ ಆ ಇಸ್ರಾಯೇಲ್‍ದೇವರಾದ ಯೆಹೋವನು ನಿನಗೆ ಉತ್ತಮವಾದ ಪ್ರತಿಫಲವನ್ನು ಅನುಗ್ರಹಿಸಲಿ ಎಂದು ಉತ್ತರಕೊಟ್ಟನು. 13 ಆಗ ಆಕೆಯು - ಸ್ವಾಮೀ, ತಾವು ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದೀರಿ; ನಾನು ತಮ್ಮ ದಾಸಿಯೆನಿಸಿಕೊಳ್ಳುವದಕ್ಕೆ ಯೋಗ್ಯಳಲ್ಲದಿದ್ದರೂ ನನ್ನನ್ನು ಕನಿಕರಿಸಿ ಪ್ರೀತಿಯಿಂದ ಮಾತಾಡಿಸಿದಿರಿ ಅಂದಳು. 14 ಊಟದ ವೇಳೆಯಾದಾಗ ಬೋವಜನು - ಇಲ್ಲಿ ಬಾ; ರೊಟ್ಟಿಯನ್ನು ತೆಗೆದುಕೊಂಡು ಮುರಿದು ಹುಳಿರಸದಲ್ಲಿ ಅದ್ದಿ ತಿನ್ನು ಎಂದು ಕರೆಯಲು ಆಕೆಯು ಹೋಗಿ ಕೊಯ್ಯುವವರ ಬಳಿಯಲ್ಲಿ ಕೂತುಕೊಂಡಳು. ಇದಲ್ಲದೆ ಅವನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ಆಕೆಯು ತಿಂದು ತೃಪ್ತಳಾಗಿ ಇನ್ನೂ ಉಳಿಸಿಟ್ಟುಕೊಂಡಳು. 15 ತರುವಾಯ ತಿರಿಗಿ ಹಕ್ಕಲಾಯುವದಕ್ಕೆ ಏಳಲು ಬೋವಜನು ತನ್ನ ಸೇವಕರಿಗೆ - ಈಕೆಯು ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ, ಬೈಯಬೇಡಿರಿ; 16 ಕಟ್ಟುಗಳಿಂದ ತೆನೆಗಳನ್ನು ಕಿತ್ತುಹಾಕಿರಿ; ಈಕೆಯು ಕೂಡಿಸಿಕೊಳ್ಳಲಿ, ಗದರಿಸಬೇಡಿರಿ ಎಂದು ಆಜ್ಞಾಪಿಸಿದನು. 17 ರೂತಳು ಸಾಯಂಕಾಲದವರೆಗೂ ಹಕ್ಕಲಾಯ್ದು ಕೂಡಿಸಿದ್ದನ್ನು ಬಡಿದಾಗ ಸುಮಾರು ಮೂವತ್ತು ಸೇರು ಜವೆಗೋದಿ ಸಿಕ್ಕಿತು. 18 ಆಕೆಯು ಅದನ್ನು ಹೊತ್ತುಕೊಂಡು ಊರಿಗೆ ಬಂದು ಅತ್ತೆಗೆ ತೋರಿಸಿ ತಾನು ಉಳಿಸಿಟ್ಟಿದ್ದನ್ನು ತೆಗೆದುಕೊಟ್ಟಳು. 19 ಅತ್ತೆಯು - ನೀನು ಈ ಹೊತ್ತು ಯಾರ ಹೊಲದಲ್ಲಿ ಹಕ್ಕಲಾಯ್ದಿ? ಎಲ್ಲಿ ಕೆಲಸ ಮಾಡಿದಿ? ನಿನ್ನನ್ನು ಕಟಾಕ್ಷಿಸಿದವನಿಗೆ ಶುಭವಾಗಲಿ ಎನ್ನಲು ರೂತಳು - ನಾನು ಯಾವನ ಹೊಲದಲ್ಲಿ ಹಕ್ಕಲಾಯ್ದೆನೋ ಅವನ ಹೆಸರು ಬೋವಜನೆಂದು ತಿಳಿಸಿದಳು. 20 ಆಗ ನೊವೊವಿುಯು - ಸತ್ತವರಿಗೂ ಬದುಕುವವರಿಗೂ ಬಿಡದೆ ದಯೆತೋರಿಸುತ್ತಿರುವ ಇವನು ಯೆಹೋವನಿಂದ ಆಶೀರ್ವಾದ ಹೊಂದಲಿ ಎಂದು ಹೇಳಿ, ಆ ಮನುಷ್ಯನು ತಮ್ಮ ಸಂಬಂಧಿಕನೆಂದೂ ಸಮೀಪಬಂಧುಗಳಲ್ಲೊಬ್ಬನೆಂದೂ ರೂತಳಿಗೆ ತಿಳಿಸಿದಳು. 21 ಆಗ ಮೋವಾಬ್ಯಳಾದ ರೂತಳು - ಇದಲ್ಲದೆ ಆ ಮನುಷ್ಯನು ನನಗೆ - ಸುಗ್ಗಿಯೆಲ್ಲಾ ತೀರುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರು ಎಂದು ಹೇಳಿದ್ದಾನೆ ಅನ್ನಲು 22 ನೊವೊವಿುಯು ತನ್ನ ಸೊಸೆಯಾದ ರೂತಳಿಗೆ - ನನ್ನ ಮಗಳೇ, ನೀನು ಅವನ ಹೆಣ್ಣಾಳುಗಳ ಸಂಗಡಲೇ ಹೊರಟುಹೋಗುವದು ಒಳ್ಳೇದು; ಬೇರೆ ಹೊಲದಲ್ಲಿ ನಿನಗೆ ತೊಂದರೆಯಾದೀತು ಎಂದು ಹೇಳಿದಳು. 23 ಅದರಂತೆಯೇ ರೂತಳು ಅತ್ತೆಯ ಮನೆಯಲ್ಲಿದ್ದುಕೊಂಡು ಜವೆಗೋದಿಯ ಮತ್ತು ಗೋದಿಯ ಸುಗ್ಗಿ ತೀರುವವರೆಗೆ ಬೋವಜನ ಹೆಣ್ಣಾಳುಗಳ ಸಂಗಡಲೇ ಹೋಗಿ ಹಕ್ಕಲಾಯುತ್ತಿದ್ದಳು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India