Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಹಾನ 9 - ಕನ್ನಡ ಸತ್ಯವೇದವು J.V. (BSI)


ಯೇಸು ಸಬ್ಬತ್‍ದಿನದಲ್ಲಿ ಹುಟ್ಟುಕುರುಡನಿಗೆ ಕಣ್ಣುಕೊಟ್ಟದ್ದು; ಫರಿಸಾಯರು ಆ ಕುರುಡನನ್ನು ಬಹಿಷ್ಕರಿಸಿದ್ದು

1 ಯೇಸು ಹಾದುಹೋಗುತ್ತಿರುವಾಗ ಒಬ್ಬ ಹುಟ್ಟುಕುರುಡನನ್ನು ಕಂಡನು.

2 ಆತನ ಶಿಷ್ಯರು - ಗುರುವೇ, ಇವನು ಕುರುಡನಾಗಿ ಹುಟ್ಟಿರುವದಕ್ಕೆ ಯಾರು ಪಾಪಮಾಡಿದರು? ಇವನೋ? ಇವನ ತಂದೆತಾಯಿಗಳೋ? ಎಂದು ಆತನನ್ನು ಕೇಳಿದ್ದಕ್ಕೆ

3 ಯೇಸು - ಇವನೂ ಪಾಪಮಾಡಲಿಲ್ಲ, ಇವನ ತಂದೆತಾಯಿಗಳೂ ಪಾಪಮಾಡಲಿಲ್ಲ; ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವದಕ್ಕೆ ಇದಾಯಿತು.

4 ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು. ರಾತ್ರಿ ಬರುತ್ತದೆ, ಅದು ಬಂದ ಮೇಲೆ ಯಾರೂ ಕೆಲಸ ಮಾಡಲಾರರು.

5 ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ ಅಂದನು.

6 ಇದನ್ನು ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರುಮಾಡಿ ಆ ಕೆಸರನ್ನು ಅವನ ಕಣ್ಣುಗಳಿಗೆ ಹಚ್ಚಿ -

7 ನೀನು ಸಿಲೋವ ಕೊಳಕ್ಕೆ ಹೋಗಿ ತೊಳಕೋ ಅಂದನು. (ಸಿಲೋವ ಎಂಬ ಮಾತಿಗೆ ಕಳುಹಿಸಲ್ಪಟ್ಟವನು ಎಂದರ್ಥ.) ಅವನು ಹೋಗಿ ತೊಳಕೊಂಡು ಕಣ್ಣು ಹೊಂದಿದವನಾಗಿ ಬಂದನು.

8 ಆಗ ನೆರೆಹೊರೆಯವರೂ ಅವನು ಭಿಕ್ಷಗಾರನಾಗಿದ್ದದ್ದನ್ನು ಮೊದಲು ನೋಡಿದವರೂ - ಇವನು ಕೂತಿದ್ದ ಆ ಭಿಕ್ಷುಕನಲ್ಲವೇ ಅಂದರು.

9 ಕೆಲವರು - ಹೌದು, ಅವನೇ ಅಂದರು; ಇನ್ನೂ ಕೆಲವರು - ಅವನಲ್ಲ, ಅವನ ಹಾಗಿದ್ದಾನೆ ಅಂದರು. ಅವನಾದರೆ - ನಾನೇ ಅವನು ಅಂದನು.

10 ಆಗ ಅವರು - ನಿನಗೆ ಕಣ್ಣು ಹೇಗೆ ಬಂದವು? ಎಂದು ಅವನನ್ನು ಕೇಳಿದ್ದಕ್ಕೆ ಇವನು - ಯೇಸು ಎಂಬವನಿದ್ದಾನಲ್ಲಾ,

11 ಅವನು ಕೆಸರುಮಾಡಿ ನನ್ನ ಕಣ್ಣಿಗೆ ಹಚ್ಚಿ ಸಿಲೋವ ಕೊಳಕ್ಕೆ ಹೋಗಿ ತೊಳಕೋ ಎಂದು ಹೇಳಿದನು; ನಾನು ಹೋಗಿ ತೊಳಕೊಂಡೆನು; ಕಣ್ಣು ಬಂದವು ಅಂದನು.

12 ಅವರು - ಅವನೆಲ್ಲಿದ್ದಾನೆ ಎಂದು ಅವನನ್ನು ಕೇಳಿದ್ದಕ್ಕೆ ಅವನು - ನನಗೆ ಗೊತ್ತಿಲ್ಲ ಅಂದನು.

13 ಮುಂಚೆ ಕುರುಡನಾಗಿದ್ದ ಇವನನ್ನು ಫರಿಸಾಯರ ಬಳಿಗೆ ಕರಕೊಂಡು ಹೋದರು.

14 ಯೇಸು ಕೆಸರುಮಾಡಿ ಅವನಿಗೆ ಕಣ್ಣು ಕೊಟ್ಟ ದಿವಸವು ಸಬ್ಬತ್‍ದಿವಸವಾಗಿತ್ತು.

15 ಆದಕಾರಣ ಈ ಫರಿಸಾಯರು ಸಹ ಅವನನ್ನು ವಿಚಾರಿಸಿ - ನಿನಗೆ ಹೇಗೆ ಕಣ್ಣು ಬಂದವು ಎಂದು ಕೇಳಿದರು. ಅವನು ಅವರಿಗೆ - ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳಕೊಂಡೆನು, ಕಣ್ಣು ಕಾಣುತ್ತವೆ ಎಂದು ಉತ್ತರಕೊಟ್ಟನು.

16 ಆ ಫರಿಸಾಯರಲ್ಲಿ ಕೆಲವರು - ಈ ಮನುಷ್ಯನು ದೇವರಿಂದ ಬಂದವನಲ್ಲ; ಅವನು ಸಬ್ಬತ್‍ದಿವಸವನ್ನು ಲಕ್ಷ್ಯಮಾಡುವದಿಲ್ಲವಲ್ಲಾ ಅಂದರು. ಇನ್ನು ಕೆಲವರು - ಇಂಥ ಮಹತ್ತುಗಳನ್ನು ಮಾಡುವದು ಭಕ್ತಿಹೀನನ ಕೈಯಿಂದ ಹೇಗಾದೀತು? ಅಂದರು. ಹೀಗೆ ಅವರಲ್ಲಿ ಭೇದವಾಯಿತು.

17 ಹೀಗಿರಲಾಗಿ ಅವರು ತಿರಿಗಿ ಆ ಕುರುಡನನ್ನು - ಅವನು ನಿನಗೆ ಕಣ್ಣುಕೊಟ್ಟದ್ದರಿಂದ ನೀನು ಅವನ ವಿಷಯವಾಗಿ ಏನು ಹೇಳುತ್ತೀ ಎಂದು ಕೇಳಿದಾಗ ಅವನು - ಆತನು ಪ್ರವಾದಿ ಅನ್ನುತ್ತೇನೆ ಎಂದು ಹೇಳಿದನು.

18 ಆದರೆ ಕಣ್ಣುಬಂದವನ ವಿಷಯವಾಗಿ ಆ ಯೆಹೂದ್ಯರು - ಇವನು ಕುರುಡನಾಗಿದ್ದು ಈಗ ಕಣ್ಣುಳ್ಳವನಾದನೆಂದು ನಂಬದೆ ಅವನ ತಂದೆತಾಯಿಗಳನ್ನು ಕರೆಯಿಸಿ -

19 ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವಂಥ ನಿಮ್ಮ ಮಗನು ಇವನೋ? ಈಗ ಇವನಿಗೆ ಕಣ್ಣು ಹೇಗೆ ಬಂದವು ಎಂದು ಅವರನ್ನು ಕೇಳಿದರು.

20 ಅವನ ತಂದೆತಾಯಿಗಳು - ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು;

21 ಈಗ ಹೇಗೆ ಕಣ್ಣು ಬಂದವೋ ಅರಿಯೆವು; ಕಣ್ಣು ಕೊಟ್ಟವನು ಯಾರೋ ಅರಿಯೆವು; ಇವನನ್ನೇ ಕೇಳಿರಿ; ಪ್ರಾಯದವನಾಗಿದ್ದಾನಲ್ಲಾ; ಇವನೇ ತನ್ನ ವಿಷಯವಾಗಿ ಹೇಳುವನು ಎಂದು ಉತ್ತರಕೊಟ್ಟರು.

22 ಅವನ ತಂದೆತಾಯಿಗಳು ಯೆಹೂದ್ಯರಿಗೆ ಅಂಜಿದ ಕಾರಣ ಈ ಪ್ರಕಾರ ಹೇಳಿದರು. ಯಾಕಂದರೆ - ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡು ಹೇಳಿದರೆ ಅಂಥವನಿಗೆ ಬಹಿಷ್ಕಾರಹಾಕಬೇಕೆಂದು ಯೆಹೂದ್ಯರು ಅದಕ್ಕೆ ಮುಂಚೆ ಗೊತ್ತುಮಾಡಿಕೊಂಡಿದ್ದರು.

23 ಇವನು ಪ್ರಾಯದವನು, ಇವನನ್ನೇ ಕೇಳಿರಿ ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ.

24 ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು - ನೀನು ದೇವರಿಗೆ ಮಾನಬರುವಂತೆ ಹೇಳು; ಆ ಮನುಷ್ಯನು ಭಕ್ತಿಹೀನನೆಂದು ನಾವು ಬಲ್ಲೆವು ಎಂದು ಹೇಳಲು

25 ಅವನು - ಆತನು ಭಕ್ತಿಹೀನನೋ ಏನೋ ನಾನರಿಯೆ, ಒಂದು ಮಾತ್ರ ಬಲ್ಲೆ, ಕುರುಡನಾಗಿದ್ದೆನು, ಈಗ ಕಣ್ಣು ಕಾಣುತ್ತವೆ ಅಂದನು.

26 ಅವರು ಅವನನ್ನು - ನಿನಗೆ ಏನು ಮಾಡಿದನು? ನಿನಗೆ ಹೇಗೆ ಕಣ್ಣುಕೊಟ್ಟನು ಎಂದು ಕೇಳಿದ್ದಕ್ಕೆ ಅವನು -

27 ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ; ಯಾಕೆ ತಿರಿಗಿ ಕೇಳಬೇಕೆಂದಿದ್ದೀರಿ? ಆತನ ಶಿಷ್ಯರಾಗುವದಕ್ಕೆ ನಿಮಗೂ ಮನಸ್ಸದೆಯೋ? ಅಂದನು.

28 ಅದಕ್ಕೆ ಅವರು ಅವನನ್ನು ಬೈದು - ನೀನು ಆ ಮನುಷ್ಯನ ಶಿಷ್ಯ; ನಾವು ಮೋಶೆಯ ಶಿಷ್ಯರು;

29 ಮೋಶೆಯ ಸಂಗಡ ದೇವರು ಮಾತಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ಅರಿಯೆವು ಅಂದರು.

30 ಅದಕ್ಕೆ ಆ ಮನುಷ್ಯನು - ಆತನು ನನಗೆ ಕಣ್ಣುಕೊಟ್ಟರೂ ಆತನು ಎಲ್ಲಿಯವನೋ ನಿಮಗೆ ಗೊತ್ತಿಲ್ಲದೆ ಇರುವದು ಆಶ್ಚರ್ಯವಲ್ಲವೇ.

31 ಭಕ್ತಿಹೀನರ ಪ್ರಾರ್ಥನೆಯನ್ನು ದೇವರು ಕೇಳುವದಿಲ್ಲ; ಯಾವನು ಭಕ್ತನಾಗಿದ್ದು ಆತನ ಚಿತ್ತದಂತೆ ನಡೆಯುತ್ತಾನೋ ಅವನ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು.

32 ಹುಟ್ಟುಕುರುಡನಿಗೆ ಯಾರಾದರೂ ಕಣ್ಣು ಕೊಟ್ಟ ಸಂಗತಿಯನ್ನು ಲೋಕಾದಿಯಿಂದ ಒಬ್ಬರೂ ಕೇಳಿದ್ದಿಲ್ಲ;

33 ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು ಅಂದನು.

34 ಈ ಮಾತಿಗೆ ಅವರು - ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನಮಗೆ ಉಪದೇಶಮಾಡುತ್ತೀಯೋ ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.


ಯೇಸು ಆ ಬಹಿಷ್ಕಾರದವನನ್ನು ಹುಡುಕಿದ್ದು; ಒಳ್ಳೇ ಕುರುಬನ ವಿಷಯವಾಗಿಯೂ ಕಳ್ಳಕುರುಬನ ವಿಷಯವಾಗಿಯೂ ಉಪಮಾನ ಹೇಳಿದ್ದು

35 ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು - ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ ಎಂದು ಕೇಳಿದನು.

36 ಅದಕ್ಕವನು - ಆತನು ಯಾರು, ಸ್ವಾಮೀ? ತಿಳಿಸಿದರೆ ಆತನನ್ನು ನಂಬುತ್ತೇನೆ ಅಂದಾಗ

37 ಯೇಸು - ನೀನು ಅವನನ್ನು ಕಂಡಿದ್ದೀ; ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಅವನು ಅಂದನು.

38 ಅವನು - ನಂಬುತ್ತೇನೆ, ಸ್ವಾಮೀ, ಎಂದು ಹೇಳಿ ಆತನಿಗೆ ಅಡ್ಡಬಿದ್ದನು.

39 ಆಗ ಯೇಸು - ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ; ಆ ತೀರ್ಪು ಏನಂದರೆ, ಕಣ್ಣಿಲ್ಲದವರಿಗೆ ಕಣ್ಣುಬರುವವು. ಕಣ್ಣಿದ್ದವರು ಕುರುಡರಾಗುವರು ಅಂದನು.

40 ಇದನ್ನು ಆತನ ಸಂಗಡ ಇದ್ದ ಫರಿಸಾಯರು ಕೇಳಿ - ನಾವೂ ಕುರುಡರೇನು? ಎಂದು ಕೇಳಿದಾಗ

41 ಯೇಸು ಅವರಿಗೆ - ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ; ನಮಗೆ ಕಣ್ಣು ಕಾಣುತ್ತವೆ ಅನ್ನುತ್ತೀರಾದ್ದರಿಂದ ನಿಮ್ಮ ಪಾಪವು ಉಳಿದದೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು