Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಹಾನ 10 - ಕನ್ನಡ ಸತ್ಯವೇದವು J.V. (BSI)

1 ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರೀಹಟ್ಟಿಯೊಳಗೆ ಬಾಗಲಿಂದ ಬಾರದೆ ಮತ್ತೆಲ್ಲಿಂದಾದರೂ ಹತ್ತಿಬರುವವನು ಕಳ್ಳನೂ ಸುಲುಕೊಳ್ಳುವವನೂ ಆಗಿದ್ದಾನೆ.

2 ಬಾಗಲಿಂದ ಒಳಗೆ ಬರುವವನು ಆ ಕುರಿಗಳ ಕುರುಬನು.

3 ಬಾಗಲು ಕಾಯುವವನು ಅವನಿಗೆ ಬಾಗಲನ್ನು ತೆರೆಯುತ್ತಾನೆ, ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ.

4 ಅವನು ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಹೊರಗೆ ಬಿಡುತ್ತಾನೆ. ಸ್ವಂತ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ; ಕುರಿಗಳು ಅವನ ಸ್ವರವನ್ನು ತಿಳುಕೊಂಡು ಅವನ ಹಿಂದೆ ಹೋಗುತ್ತವೆ.

5 ಅವು ಅನ್ಯರ ಸ್ವರವನ್ನು ತಿಳಿಯುವದಿಲ್ಲ; ಅನ್ಯನ ಹಿಂದೆ ಹೋಗದೆ ಅವನ ಬಳಿಯಿಂದ ಓಡಿಹೋಗುತ್ತವೆ.

6 ಈ ಉಪಮಾನವನ್ನು ಯೇಸು ಅವರಿಗೆ ಹೇಳಿದನು; ಆದರೂ ಆತನ ಮಾತಿನ ಅರ್ಥವನ್ನು ಅವರು ಗ್ರಹಿಸಲಿಲ್ಲ.

7 ಆದಕಾರಣ ಯೇಸು ಮತ್ತೂ ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಲಾಗಿದ್ದೇನೆ.

8 ನನಗಿಂತ ಮುಂಚೆ ಬಂದವರೆಲ್ಲರು ಕಳ್ಳರೂ ಸುಲುಕೊಳ್ಳುವವರೂ ಆಗಿದ್ದಾರೆ; ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.

9 ನಾನೇ ಆ ಬಾಗಲು; ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಹೋದರೆ ಸುರಕ್ಷಿತವಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು, ಮೇವನ್ನು ಕಂಡುಕೊಳ್ಳುವನು.

10 ಕಳ್ಳನು ಕದ್ದುಕೊಳ್ಳುವದಕ್ಕೂ ಕೊಯ್ಯುವದಕ್ಕೂ ಹಾಳುಮಾಡುವದಕ್ಕೂ ಬರುತ್ತಾನೆ ಹೊರತು ಮತ್ತಾವದಕ್ಕೂ ಬರುವದಿಲ್ಲ; ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು.

11 ನಾನೇ ಒಳ್ಳೇ ಕುರುಬನು; ಒಳ್ಳೇ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.

12 ಕೂಲಿಯಾಳು ಕುರುಬನೂ ಕುರಿಗಳ ಒಡೆಯನೂ ಆಗಿರದೆ ತೋಳ ಬರುವದನ್ನು ಕಾಣುತ್ತಲೇ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ; ತೋಳವು ಅವುಗಳನ್ನು ಹಿಡುಕೊಂಡು ಹಿಂಡನ್ನು ಚದರಿಸುತ್ತದೆ.

13 ಅವನು ಕೂಲಿಯಾಳು; ಕುರಿಗಳ ಚಿಂತೆ ಅವನಿಗಿಲ್ಲ.

14-15 ನಾನೇ ಒಳ್ಳೇ ಕುರುಬನು; ತಂದೆಯು ನನ್ನನ್ನು ನಾನು ತಂದೆಯನ್ನು ತಿಳಿದಿರುವಂತೆಯೇ ನಾನು ನನ್ನ ಕುರಿಗಳನ್ನು ತಿಳಿದಿದ್ದೇನೆ; ನನ್ನ ಕುರಿಗಳು ನನ್ನನ್ನು ತಿಳಿದವೆ; ಮತ್ತು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನು ಕೊಡುತ್ತೇನೆ.

16 ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.

17 ನಾನು ತಿರಿಗಿ ಪಡಕೊಳ್ಳುತ್ತೇನೆಂದು ನನ್ನ ಪ್ರಾಣವನ್ನು ಕೊಡುತ್ತೇನೆ; ಅದರ ನಿವಿುತ್ತವಾಗಿ ತಂದೆಯು ನನ್ನನ್ನು ಪ್ರೀತಿಸುತ್ತಾನೆ.

18 ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ; ಅದನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು, ಅದನ್ನು ತಿರಿಗಿ ಪಡಕೊಳ್ಳುವದಕ್ಕೆ ನನಗೆ ಅಧಿಕಾರ ಉಂಟು; ಈ ಅಪ್ಪಣೆಯನ್ನು ನನ್ನ ತಂದೆಯಿಂದ ಹೊಂದಿದ್ದೇನೆ ಅಂದನು.

19 ಈ ಮಾತುಗಳ ದೆಸೆಯಿಂದ ಯೆಹೂದ್ಯರಲ್ಲಿ ತಿರಿಗಿ ಭೇದವಾಯಿತು.

20 ಅವರಲ್ಲಿ ಅನೇಕರು - ಅವನಿಗೆ ದೆವ್ವಹಿಡಿದದೆ, ಹುಚ್ಚುಹಿಡಿದದೆ, ಯಾಕೆ ಅವನ ಮಾತು ಕೇಳುತ್ತೀರಿ? ಅಂದರು.

21 ಮತ್ತು ಕೆಲವರು - ಇವು ದೆವ್ವಹಿಡಿದವನ ಮಾತುಗಳಲ್ಲ; ದೆವ್ವವು ಕುರುಡರಿಗೆ ಕಣ್ಣುಕೊಡಬಲ್ಲದೇ? ಅಂದರು.


ಯೇಸು ಪ್ರತಿಷ್ಠೆಯ ಹಬ್ಬದಲ್ಲಿ ತಾನು ದೇವರ ಮಗನೆಂದು ಸೂಚಿಸಲು ಯೆಹೂದ್ಯರು ಆತನನ್ನು ಹಿಡಿಯುವದಕ್ಕೆ ತಿರಿಗಿ ಪ್ರಯತ್ನಮಾಡಿದ್ದು

22 ಆ ಕಾಲದಲ್ಲಿ ದೇವಾಲಯಪ್ರತಿಷ್ಠೆಯ ಹಬ್ಬವು ಯೆರೂಸಲೇವಿುನಲ್ಲಿ ನಡೆಯಿತು; ಆಗ ಚಳಿಕಾಲವಾಗಿತ್ತು.

23 ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ ಯೆಹೂದ್ಯರು ಆತನನ್ನು ಸುತ್ತಿಕೊಂಡು -

24 ಇನ್ನು ಎಷ್ಟು ಕಾಲ ನಮ್ಮಲ್ಲಿ ಅನುಮಾನ ಹುಟ್ಟಿಸುತ್ತೀ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು ಅಂದರು.

25 ಅದಕ್ಕೆ ಯೇಸು - ನಿಮಗೆ ಹೇಳಿದೆನು, ಆದರೆ ನೀವು ನಂಬದೆ ಇದ್ದೀರಿ; ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನಗೆ ಸಾಕ್ಷಿಯಾಗಿವೆ.

26 ಆದರೂ ನೀವು ನನ್ನ ಕುರಿಗಳಿಗೆ ಸೇರಿದವರಲ್ಲವಾದದರಿಂದ ನಂಬದೆ ಇದ್ದೀರಿ.

27 ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ.

28 ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಯೊಳಗಿಂದ ಕಸಕೊಳ್ಳರು.

29 ನನ್ನ ತಂದೆಯು ನನಗೆ ಕೊಟ್ಟದ್ದು ಎಲ್ಲಾದ್ದಕ್ಕಿಂತ ದೊಡ್ಡದು; ಅದನ್ನು ತಂದೆಯ ಕೈಯೊಳಗಿಂದ ಯಾರೂ ಕಸಕೊಳ್ಳಲಾರರು.

30 ನಾನೂ ತಂದೆಯೂ ಒಂದಾಗಿದ್ದೇವೆ ಅಂದನು.

31 ಯೆಹೂದ್ಯರು ಆತನನ್ನು ಹೊಡೆದು ಕೊಲ್ಲಬೇಕೆಂದು ತಿರಿಗಿ ಕಲ್ಲುಗಳನ್ನು ತೆಗೆದುಕೊಂಡು ಬರಲು

32 ಯೇಸು ಅವರನ್ನು - ತಂದೆಯ ಕಡೆಯಿಂದ ಅನೇಕ ಒಳ್ಳೇ ಕ್ರಿಯೆಗಳನ್ನು ನಿಮಗೆ ತೋರಿಸಿದೆನು; ಅವುಗಳಲ್ಲಿ ಯಾವ ಕ್ರಿಯೆಯ ದೆಸೆಯಿಂದ ನನ್ನ ಮೇಲೆ ಕಲ್ಲೆಸೆಯುತ್ತೀರಿ ಎಂದು ಕೇಳಿದ್ದಕ್ಕೆ

33 ಯೆಹೂದ್ಯರು - ನಾವು ನಿನ್ನ ಮೇಲೆ ಕಲ್ಲೆಸೆಯುವದು ಒಳ್ಳೇ ಕಾರ್ಯದ ದೆಸೆಯಿಂದಲ್ಲ, ದೇವದೂಷಣೆಯ ದೆಸೆಯಿಂದಲೂ ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವದರ ದೆಸೆಯಿಂದಲೂ ನಿನ್ನ ಮೇಲೆ ಕಲ್ಲೆಸೆಯುತ್ತೇವೆ ಅಂದರು.

34 ಅದಕ್ಕೆ ಯೇಸು - ನೀವು ದೇವರುಗಳೇ ಎಂದು ನಾನು ಹೇಳಿದೆನು ಎಂಬದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದದೆಯಲ್ಲಾ; ಶಾಸ್ತ್ರವು ಸುಳ್ಳಾಗಲಾರದಷ್ಟೆ;

35 ಹಾಗಾದರೆ ದೇವರ ವಾಕ್ಯವನ್ನು ಹೊಂದಿದವರನ್ನು ದೇವರುಗಳೆಂದು ಆತನು ಹೇಳಿರುವಲ್ಲಿ

36 ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ನಾನು ದೇವರ ಮಗನಾಗಿದ್ದೇನೆಂದು ಹೇಳಿದ್ದಕ್ಕೆ ನೀನು ದೇವದೂಷಣೆ ಮಾಡುತ್ತೀ ಅನ್ನುತ್ತೀರೋ?

37 ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನ ಮಾತನ್ನು ನಂಬಬೇಡಿರಿ;

38 ಮಾಡಿದರೆ ನನ್ನ ಮಾತನ್ನು ನಂಬದೆ ಇದ್ದರೂ ಆ ಕ್ರಿಯೆಗಳ ಸಾಕ್ಷಿಯನ್ನಾದರೂ ನಂಬಿರಿ; ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ ತಂದೆಯಲ್ಲಿ ನಾನು ಇದ್ದೇನೆಂತಲೂ ನೀವು ತಿಳುಕೊಂಡು ಮನನಮಾಡಿಕೊಳ್ಳುವಿರಿ ಅಂದನು.

39 ಅವರು ತಿರಿಗಿ ಆತನನ್ನು ಹಿಡಿಯುವದಕ್ಕೆ ನೋಡಿದರು; ಆದರೆ ಅವರ ಕೈಗೆ ತಪ್ಪಿಸಿಕೊಂಡು ಹೋದನು.

40 ಆಮೇಲೆ ಆತನು ಯೊರ್ದನ್‍ಹೊಳೆಯ ಆಚೆ ಯೋಹಾನನು ಮೊದಲು ಸ್ನಾನಮಾಡಿಸುತ್ತಿದ್ದ ಸ್ಥಳಕ್ಕೆ ತಿರಿಗಿ ಹೋಗಿ ಅಲ್ಲಿ ಇದ್ದನು.

41 ಅನೇಕರು ಆತನ ಬಳಿಗೆ ಬಂದು - ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ನಿಜವಾಗಿತ್ತು ಎಂದು ಮಾತಾಡುತ್ತಿದ್ದರು.

42 ಅಲ್ಲಿ ಅನೇಕರು ಆತನನ್ನು ನಂಬಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು