ಯೋಯೇಲ 2 - ಕನ್ನಡ ಸತ್ಯವೇದವು J.V. (BSI)1 ಚೀಯೋನಿನಲ್ಲಿ ಕೊಂಬೂದಿರಿ, ನನ್ನ ಪರಿಶುದ್ಧಪರ್ವತದಲ್ಲಿ ದನಿಗೈಯಿರಿ; ಸಮಸ್ತ ದೇಶನಿವಾಸಿಗಳು ನಡುಗಲಿ; ಯೆಹೋವನ ದಿನವು ಬರುತ್ತಲಿದೆ, ಸಮೀಪಿಸಿತು; 2 ಅದು ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ. ಉದಯವು ಬೆಟ್ಟಗಳ ಮೇಲೆ ಹರಡಿಕೊಳ್ಳುವ ಹಾಗೆ ಇಗೋ, ಪ್ರಬಲವಾದ ದೊಡ್ಡ ದಂಡು! ಇಂಥದು ಹಿಂದೆಂದೂ ಬಂದಿಲ್ಲ, ಇನ್ನು ಮುಂದೆ ತಲತಲಾಂತರಗಳ ಬಹು ವರುಷಗಳಲ್ಲಿಯೂ ಬರುವದಿಲ್ಲ. ವಿುಡತೆ ದಂಡಿನ ವರ್ಣನೆ 3 ಅದರ ಮುಂಗಡೆ ಬೆಂಕಿಯು ನುಂಗಿಕೊಂಡು ಬರುತ್ತದೆ, ಹಿಂಗಡೆ ಜ್ವಾಲೆಯು ಧಗಧಗಿಸುತ್ತದೆ; ಅದು ಬರುವದಕ್ಕೆ ಮುಂಚೆ ದೇಶವು ಏದೆನ್ ಉದ್ಯಾನದಂತೆ ಕಂಗೊಳಿಸುತ್ತದೆ; ದಾಟಿಹೋದ ಮೇಲೆ ಬೆಗ್ಗಾಡಾಗಿದೆ; ಅದಕ್ಕೆ ಯಾವದೂ ತಪ್ಪಿಸಿಕೊಳ್ಳಲಾರದು. 4 ಆ ದಂಡಾಳುಗಳ ರೂಪವು ಕುದುರೆಗಳ ರೂಪದಂತೆ ಕಾಣಿಸುತ್ತದೆ; ಅವು ಸವಾರರಂತೆ ಓಡಾಡುತ್ತವೆ. 5 ಪರ್ವತಾಗ್ರಗಳಲ್ಲಿ ಅವು ಹಾರಾಡುವ ಶಬ್ದವು ರಥಗಳ ಚೀತ್ಕಾರದಂತೆಯೂ ಕೂಳೆಯನ್ನು ನುಂಗುವ ಬೆಂಕಿಯ ಚಟಪಟ ಧ್ವನಿಯ ಹಾಗೂ ಕೇಳಿಸುತ್ತದೆ; ಅವು ವ್ಯೂಹಕಟ್ಟಿಕೊಂಡ ಪ್ರಬಲವಾದ ಸೈನ್ಯವೇ. 6 ಅವುಗಳ ದೆಸೆಯಿಂದ ಜನಾಂಗಗಳು ಸಂಕಟಪಡುತ್ತವೆ; ಎಲ್ಲರ ಮುಖಗಳೂ ಬಾಡಿಹೋಗುತ್ತವೆ. 7 ಅವು ಶೂರರಂತೆ ಓಡಾಡುತ್ತವೆ; ಯೋಧರ ಹಾಗೆ ಗೋಡೆಯೇರುತ್ತವೆ; ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ, ಆ ಸಾಲುಗಳನ್ನು ಕಲಸುವದಿಲ್ಲ. 8 ಒಂದಕ್ಕೊಂದು ನೂಕಾಡುವದಿಲ್ಲ, ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ; ಆಯುಧಗಳ ನಡುವೆ ನುಗ್ಗುತ್ತವೆ, ಸಾಲುಗಳು ಒಡೆದುಹೋಗುವದಿಲ್ಲ. 9 ಪಟ್ಟಣದಲ್ಲೆಲ್ಲಾ ತ್ವರೆಪಡುತ್ತವೆ, ಗೋಡೆಯ ಮೇಲೆ ಓಡಾಡುತ್ತವೆ, ಮನೆಗಳನ್ನು ಹತ್ತುತ್ತವೆ, ಕಿಟಕಿಗಳಲ್ಲಿ ಕಳ್ಳರಂತೆ ನುಗ್ಗುತ್ತವೆ. 10 ಅವುಗಳ ಆಗಮನದಿಂದ ಭೂವಿುಯು ಕಂಪಿಸುತ್ತದೆ, ಆಕಾಶಮಂಡಲವು ನಡುಗುತ್ತದೆ, ಸೂರ್ಯಚಂದ್ರರು ಮಂಕಾಗುತ್ತಾರೆ, ನಕ್ಷತ್ರಗಳು ಕಾಂತಿಯನ್ನು ಅಡಗಿಸಿಕೊಳ್ಳುತ್ತವೆ; 11 ಯೆಹೋವನು ತನ್ನ ಸೈನ್ಯದ ಮುಂದೆ ದನಿಗೈಯುತ್ತಾನೆ; ಆತನ ದಂಡು ಬಹು ದೊಡ್ಡದು; ತನ್ನ ಮಾತನ್ನು ನೆರವೇರಿಸಿಕೊಳ್ಳುವಾತನು ಬಲಿಷ್ಟನಾಗಿದ್ದಾನೆ; ಯೆಹೋವನ ದಿನವು ಮಹತ್ತರವೂ ಅತಿ ಭಯಂಕರವೂ ಆಗಿದೆ; ಅದನ್ನು ತಾಳಿಕೊಳ್ಳುವವರು ಯಾರು? ಜನರನ್ನು ಪಶ್ಚಾತ್ತಾಪಪಡುವಂತೆ ಪ್ರೇರಿಸಿದ್ದು 12 ಯೆಹೋವನು ಇಂತೆನ್ನುತ್ತಾನೆ - ಈಗಲಾದರೋ ನೀವು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಂಡು ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ; 13 ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು ನಿಮ್ಮ ದೇವರಾದ ಯೆಹೋವನ ಕಡೆಗೆ ತಿರಿಗಿಕೊಳ್ಳಿರಿ; ಆತನು ದಯೆಯೂ ಕನಿಕರವೂ ದೀರ್ಘಶಾಂತಿಯೂ ಮಹಾಕೃಪೆಯೂ ಉಳ್ಳವನಾಗಿ ಮಾಡಬೇಕೆಂದಿದ್ದ ಕೇಡಿಗೆ ಮನಮರುಗುತ್ತಾನೆ. 14 ಆತನು ಒಂದು ವೇಳೆ ಪಶ್ಚಾತ್ತಾಪಪಟ್ಟು ಹಿಂದಿರುಗಿ ನಿಮ್ಮ ದೇವರಾದ ಯೆಹೋವನ ಧಾನ್ಯಪಾನನೈವೇದ್ಯಗಳಿಗೆ ಅನುಕೂಲವಾದ ಸುವರಗಳನ್ನು ದಯಪಾಲಿಸಿ ಹೋದಾನು. 15 ಚೀಯೋನಿನಲ್ಲಿ ಕೊಂಬೂದಿರಿ, ಉಪವಾಸದಿನವನ್ನು ಗೊತ್ತುಮಾಡಿರಿ, ಸಂಘವನ್ನು ನೆರೆಯಿಸಿರಿ; 16 ಜನರನ್ನು ಒಟ್ಟಿಗೆ ಬರಮಾಡಿರಿ, ಕೂಟವನ್ನು ಏರ್ಪಡಿಸಿರಿ, ವೃದ್ಧರನ್ನು ಕೂಡಿಸಿರಿ, ಮಕ್ಕಳನ್ನೂ ಮೊಲೆಕೂಸುಗಳನ್ನೂ ಸೇರಿಸಿರಿ; ವಧೂವರರೂ ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. 17 ಯೆಹೋವನ ಸೇವಕರಾದ ಯಾಜಕರು ದ್ವಾರಮಂಟಪಕ್ಕೂ ಯಜ್ಞವೇದಿಗೂ ನಡುವೆ ಅಳುತ್ತಾ - ಯೆಹೋವನೇ, ನಿನ್ನ ಜನರನ್ನು ಕರುಣಿಸು; ಅನ್ಯಜನಾಂಗಗಳು ಅವರ ಹೆಸರನ್ನು ಕಟ್ಟುಗಾದೆಯಾಗಿ ಎತ್ತುವ ನಿಂದೆಗೆ ನಿನ್ನ ಸ್ವಾಸ್ತ್ಯದವರನ್ನು ಗುರಿಮಾಡಬೇಡ; ಅವರ ದೇವರು ಎಲ್ಲಿ ಎಂಬ ಮಾತು ಮ್ಲೇಚ್ಫರಲ್ಲಿ ಏಕೆ ಸಲ್ಲಬೇಕು ಎಂದು ವಿಜ್ಞಾಪಿಸಲಿ. ಯೆಹೋವನ ಕರುಣೆ ( 2.18-32 ) ಸುಭಿಕ್ಷೆಯ ವಾಗ್ದಾನ 18 ಆಗ ಯೆಹೋವನು ತನ್ನ ದೇಶಕ್ಕೆ ಅಪಕೀರ್ತಿ ಬರಬಾರದೆಂದು ತನ್ನ ಜನರನ್ನು ಕರುಣಿಸಿ 19 ಅವರ ಬಿನ್ನಹವನ್ನು ಲಾಲಿಸಿ ಅವರಿಗೆ ಹೀಗೆ ಹೇಳಿದನು - ಇಗೋ, ನಾನು ಧಾನ್ಯದ್ರಾಕ್ಷಾರಸತೈಲಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ; ಅವುಗಳಿಂದ ನಿಮಗೆ ತೃಪ್ತಿಯಾಗುವದು; ನಿಮ್ಮನ್ನು ಅನ್ಯಜನಾಂಗಗಳ ನಿಂದೆಗೆ ಇನ್ನು ಗುರಿಮಾಡೆನು; 20 ನಾನು ಬಡಗಣ ದಂಡನ್ನು ನಿಮ್ಮ ಕಡೆಯಿಂದ ದೂರ ತೊಲಗಿಸಿ ಹಾಳು ಬೆಗ್ಗಾಡಿಗೆ ಓಡಿಸಿ ಅದರ ಮುಂಭಾಗವನ್ನು ಮೂಡಣ ಸಮುದ್ರಕ್ಕೂ ಹಿಂಭಾಗವನ್ನು ಪಡುವಣ ಸಮುದ್ರಕ್ಕೂ ತಳ್ಳಿಬಿಡುವೆನು; ಆಹಾ, ಮಹತ್ಕಾರ್ಯಗಳನ್ನು ಮಾಡಿತು, ಅದರ [ಹೆಣಗಳ] ದುರ್ವಾಸನೆಯು ಏರುವದು, ಗಬ್ಬು ನಾರುವದು. 21 ಭೂವಿುಯೇ, ಹೆದರಬೇಡ, ಹರ್ಷಿಸು, ಉಲ್ಲಾಸಿಸು; ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು. 22 ಭೂಜಂತುಗಳೇ, ಅಂಜಬೇಡಿರಿ; ಕಾಡಿನ ಕಾವಲಲ್ಲಿ ಹುಲ್ಲು ಮೊಳೆಯುವದು, ಮರವು ಹಣ್ಣುಬಿಡುವದು, ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು. 23 ಚೀಯೋನಿನ ಸಂತತಿಯವರೇ, ನಿಮ್ಮ ದೇವರಾದ ಯೆಹೋವನಲ್ಲಿ ಹರ್ಷಿಸಿರಿ, ಉಲ್ಲಾಸಿಸಿರಿ; ಆತನು ಮುಂಗಾರನ್ನು ತಕ್ಕ ಹಾಗೆ ನಿಮಗೆ ಕೊಡುವನು; ಮುಂಗಾರು ಹಿಂಗಾರು ಮಳೆಗಳನ್ನು ಮೊದಲಿನಂತೆ ನಿಮಗಾಗಿ ಸುರಿಸುವನು. 24 ಕಣಗಳಲ್ಲಿ ಗೋದಿಯು ರಾಶಿರಾಶಿಯಾಗಿರುವದು, ತೊಟ್ಟಿಗಳಲ್ಲಿ ದ್ರಾಕ್ಷಾರಸವೂ ಎಣ್ಣೆಯೂ ತುಂಬಿತುಳುಕುವವು. 25 ಗುಂಪುವಿುಡತೆ, ಸಣ್ಣವಿುಡತೆ, ದೊಡ್ಡವಿುಡತೆ, ಚೂರಿವಿುಡತೆ, ಅಂತು ನಾನು ನಿಮ್ಮ ಮೇಲೆ ಕಳುಹಿಸಿದ ನನ್ನ ದೊಡ್ಡ ದಂಡು ತಿಂದುಬಿಟ್ಟ ವರುಷಗಳನ್ನು ನಾನು ನಿಮಗೆ ಕಟ್ಟಿಕೊಡುವೆನು. 26 ನೀವು ಹೊಟ್ಟೆತುಂಬಾ ಊಟಮಾಡಿ ತೃಪ್ತಿಗೊಂಡು ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ; ನನ್ನ ಜನರು ಎಂದಿಗೂ ಆಶಾಭಂಗಪಡರು. 27 ನಾನು ಇಸ್ರಾಯೇಲಿನ ಮಧ್ಯದಲ್ಲಿ ನೆಲೆಯಾಗಿದ್ದೇನೆಂತಲೂ ಅದ್ವಿತೀಯನಾದ ನಾನೇ ನಿಮ್ಮ ದೇವರಾದ ಯೆಹೋವನಾಗಿದ್ದೇನೆಂತಲೂ ನಿಮಗೆ ನಿಶ್ಚಯವಾಗುವದು; ನನ್ನ ಜನರು ಎಂದಿಗೂ ಆಶಾಭಂಗಪಡರು. ದೇವರಾತ್ಮವರ, ಕಡೆಗಾಲದ ಉತ್ಪಾತಗಳು, ಭಕ್ತರ ರಕ್ಷಣೆ 28 ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು, ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು; 29 ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು. 30 ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆ ಭೂಮ್ಯಾಕಾಶಗಳಲ್ಲಿ ರಕ್ತ ಬೆಂಕಿ ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು; 31 ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು. 32 ಆದರೂ ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು; ಯೆಹೋವನು ತಿಳಿಸಿದಂತೆ ಚೀಯೋನ್‍ಪರ್ವತದಲ್ಲಿಯೂ ಯೆರೂಸಲೇವಿುನಲ್ಲಿಯೂ ಅನೇಕರು ಉಳಿದಿರುವರು; ಯೆಹೋವನು ಕರೆಯುವ ಜನಶೇಷದಲ್ಲಿ ಅವರು ಸೇರಿದವರಾಗಿರುವರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India