Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 9 - ಕನ್ನಡ ಸತ್ಯವೇದವು J.V. (BSI)

1 ಆಮೇಲೆ ಯೋಬನು ಪ್ರತ್ಯುತ್ತರವಾಗಿ ಇಂತೆಂದನು -

2 ನೀನು ಹೇಳಿದ್ದು ಸತ್ಯವೇ ಸರಿ; ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವದು ಹೇಗೆ?

3 ಆತನೊಂದಿಗೆ ವ್ಯಾಜ್ಯವಾಡಬೇಕೆಂದು ಇಷ್ಟಪಟ್ಟರೂ ಆತನ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಕೊಡಲಾರನು.

4 ದೇವರ ಹೃದಯವು ವಿವೇಕವುಳ್ಳದ್ದು, ಆತನ ಶಕ್ತಿಯು ಪ್ರಬಲವಾದದ್ದು; ಆತನಿಗೆ ವಿರುದ್ಧವಾಗಿ ಮನಸ್ಸು ಕಠಿಣಮಾಡಿಕೊಂಡವನು ಸಾರ್ಥಕನಾದದ್ದುಂಟೇ?

5 ಆತನು ಪರ್ವತಗಳನ್ನು ಅರಿಯದಂತೆ ಸರಿಸಿ ಕೋಪದಿಂದ ಅವುಗಳನ್ನು ಉರುಳಿಸುತ್ತಾನೆ.

6 ಭೂಲೋಕವನ್ನು ಸ್ಥಳದೊಳಗಿಂದ ಕದಲಿಸಿ ಅದರ ಸ್ತಂಭಗಳನ್ನು ನಡುಗಿಸುತ್ತಾನೆ.

7 ಹುಟ್ಟಬೇಡವೆಂದು ಆತನು ಅಪ್ಪಣೆಕೊಟ್ಟರೆ ಸೂರ್ಯನು ಹುಟ್ಟುವದಿಲ್ಲ; ನಕ್ಷತ್ರಗಳನ್ನು ಮುಚ್ಚಿಟ್ಟು ಮುದ್ರೆಹಾಕುತ್ತಾನೆ.

8 ಆಕಾಶಮಂಡಲವನ್ನು ವಿಶಾಲಪಡಿಸಿದವನು ಆತನೊಬ್ಬನೇ. ಅಲ್ಲೋಲಕಲ್ಲೋಲವಾದ ಸಮುದ್ರದ ಮೇಲೆ ನಡೆಯುತ್ತಾನೆ.

9 ಸಪ್ತರ್ಷಿಗಳನ್ನೂ ಮೃಗಶಿರವನ್ನೂ ಕೃತ್ತಿಕೆಯನ್ನೂ ತೆಂಕಣ ದಿಕ್ಕಿನ ನಕ್ಷತ್ರಗ್ರಹಗಳನ್ನೂ ನಿರ್ಮಿಸಿದವನು ಆತನೇ.

10 ಅಪ್ರಮೇಯ ಮಹಾಕಾರ್ಯಗಳನ್ನೂ ಅಸಂಖ್ಯವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.

11 ಆಹಾ, ಆತನು ನನ್ನ ಪಕ್ಕದಲ್ಲಿ ದಾಟಿಹೋದರೂ ನಾನು ಕಾಣೆನು; ಮುಂದಕ್ಕೆ ಹಾದುಹೋದರೂ ನನಗೆ ತಿಳಿಯುವದಿಲ್ಲ.

12 ಇಗೋ ಹಿಡಿದುಕೊಳ್ಳುತ್ತಾನೆ, ಆತನನ್ನು ತಳ್ಳುವವರು ಯಾರು? ನೀನು ಏನು ಮಾಡುತ್ತಿ ಎಂದು ಆತನನ್ನು ಕೇಳುವವರಾರು?

13 ದೇವರು ತನ್ನ ಸಿಟ್ಟನ್ನು ತೊಲಗಿಸಿಬಿಡುವದಿಲ್ಲ; ಘಟಸರ್ಪದ ಸಹಾಯಕರು ಆತನಿಗೆ ಪಾದಾಕ್ರಾಂತರಾದರಲ್ಲಾ.

14 ನಾನಾದರೋ ದೇವರೊಂದಿಗೆ ವಾದಿಸಿ ಆತನಿಗೆ ಉತ್ತರಕೊಡುವದಕ್ಕೆ ಮತ್ತೂ ಅಶಕ್ತನು.

15 ನನಗೆ ನ್ಯಾಯವಿದ್ದರೂ ಪ್ರತಿವಾದ ಮಾಡಲಾರದೆ ನನ್ನ ವಿರೋಧಿಗೆ ಶರಣಾಗತನಾಗುತ್ತಿದ್ದೆನು.

16 ನಾನು ಕರೆಸಿದಾಗ ಆತನು ನನಗೆ ಕಾಣಿಸಿಕೊಂಡಿದ್ದರೂ ನನ್ನ ವಿಜ್ಞಾಪನೆಯನ್ನು ಲಾಲಿಸುವನೆಂದು ನಂಬುತ್ತಿರಲಿಲ್ಲ.

17 ಆತನು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾ ಸುಮ್ಮಸುಮ್ಮನೆ ಒಂದರ ಮೇಲೊಂದು ಗಾಯಮಾಡುತ್ತಾ

18 ಉಸಿರಾಡಗೊಡಿಸದೆ ಕಹಿಯಾದ ಪದಾರ್ಥದಿಂದ ನನ್ನ ಹೊಟ್ಟೆಯನ್ನು ತುಂಬಿಸುತ್ತಾನೆ.

19 ನಾನು ಬಲಿಷ್ಠನ ಶಕ್ತಿಯನ್ನು ಮರೆಹೊಗುವೆನೆಂದರೆ [ದೇವರು] - ಇಗೋ, [ಇದ್ದೇನೆ; ಅನ್ನುವನು] ನ್ಯಾಯವಿಚಾರಣೆಯು [ಆಗಲಿ ಎಂದರೆ ಆತನು] ನನಗೆ ಕಾಲನಿಯಾಮಕರು ಯಾರು [ಅನ್ನುವನು].

20 ನಾನು ನೀತಿವಂತನಾಗಿದ್ದರೂ ನನ್ನ ಬಾಯೇ ನನ್ನನ್ನು ಅಪರಾಧಿಯೆಂದು ತೋರ್ಪಡಿಸುವದು. ನಾನು ನಿರ್ದೋಷಿಯಾಗಿದ್ದರೂ ಆತನು ನನ್ನನ್ನು ದುರ್ಮಾರ್ಗಿಯೆಂದು ನಿರೂಪಿಸುವನು.

21 ನಾನು ನಿರ್ದೋಷಿಯೇ ಹೌದು; ನನ್ನ ವಿಷಯದಲ್ಲಿ ನನಗೇನೂ ಚಿಂತೆಯಿಲ್ಲ; ನನ್ನ ಪ್ರಾಣವನ್ನು ತೃಣೀಕರಿಸುತ್ತೇನೆ.

22 ಎಲ್ಲಾ ಒಂದೇ ಸರಿ, ಆದಕಾರಣ ನಾನು - ನಿರ್ದೋಷಿಯನ್ನೂ ದೋಷಿಯನ್ನೂ ಆತನು ನಾಶಮಾಡುತ್ತಾನೆ ಎಂದು ಹೇಳುತ್ತೇನೆ.

23 ವಿಪತ್ತು ಅಕಸ್ಮಾತ್ತಾಗಿ ಜನರನ್ನು ಸಂಹರಿಸಲು ನಿರ್ಮಲಚಿತ್ತರು ಮನಗುಂದುವದನ್ನು ಆತನು ನೋಡಿ ಹಾಸ್ಯಮಾಡುವನು.

24 ಭೂಲೋಕವು ದುಷ್ಟರ ಕೈ ಸೇರಿದೆ; ಲೋಕದ ನ್ಯಾಯಾಧಿಪತಿಗಳ ಮುಖಗಳಿಗೆ ಮುಸುಕು ಹಾಕಿದ್ದಾನೆ. ಇದನ್ನು ಮಾಡಿದವನು ಆತನಲ್ಲದೆ ಮತ್ತೆ ಯಾರು?

25 ನನ್ನ ದಿನಗಳು ಅಂಚೆಯವನಿಗಿಂತ ಶೀಘ್ರವಾಗಿರುತ್ತವೆ. ಯಾವ ಸುಖವನ್ನೂ ಕಾಣದೆ ಓಡಿ ಹೋಗುತ್ತವೆ.

26 ಬೆಂಡಿನ ದೋಣಿಗಳು ದಾಟಿ ಹೋಗುವಂತೆಯೂ ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ವೇಗವಾಗಿ ಗತಿಸಿ ಹೋಗುತ್ತವೆ.

27 ನಾನು ನನ್ನ ಪ್ರಲಾಪವನ್ನು ಮರೆತುಬಿಟ್ಟು ಕಳೆಗುಂದಿದ ನನ್ನ ಮುಖವನ್ನು ಮಾರ್ಪಡಿಸಿಕೊಂಡು ಹರ್ಷಿಸುವೆನೆಂದು ಮನಸ್ಸು ಮಾಡಿದರೆ

28 ನನ್ನ ಎಲ್ಲಾ ಸಂಕಟಗಳಿಂದ ನನಗೆ ಭಯವುಂಟಾಗುತ್ತದೆ; ನೀನು ನನ್ನನ್ನು ನಿರ್ದೋಷಿಯೆಂದೆಣಿಸುವದಿಲ್ಲವೆಂದು ತಿಳಿದುಕೊಳ್ಳುತ್ತೇನೆ.

29 ನಾನು ಅಪರಾಧಿಯೆಂದು ನಿರ್ಣಯಿಸಲ್ಪಡಬೇಕಷ್ಟೆ. ನಾನು ವ್ಯರ್ಥವಾಗಿ ಪ್ರಯಾಸಪಡುವದೇಕೆ?

30 ನಾನು ಹಿಮದಿಂದ ಸ್ನಾನಮಾಡಿದರೂ ಚೌಳಿನಿಂದ ಕೈ ತೊಳಕೊಂಡರೂ

31 ನೀನು ನನ್ನನ್ನು ಗುಂಡಿಯಲ್ಲಿ ಮುಣುಗಿಸಿ ನನ್ನ ಬಟ್ಟೆಗಳಿಗೇ ನಾನು ಅಸಹ್ಯನಾಗುವಂತೆ ಮಾಡುವಿ.

32 ಆತನು ನನ್ನಂಥವನಲ್ಲ, ಮನುಷ್ಯನಲ್ಲ, ನಾನು ಆತನೊಂದಿಗೆ ವಾದಿಸುವದು ಹೇಗೆ? ನಾವಿಬ್ಬರೂ ನ್ಯಾಯಾಸನದ ಮುಂದೆ ಕೂಡುವದು ಹೇಗೆ?

33 ನವ್ಮಿುಬ್ಬರ ಮೇಲೆ ಕೈಯಿಡುವವನಾಗಿಯೂ ಮಧ್ಯಸ್ಥನಾಗಿಯೂ ಇರುವ ನ್ಯಾಯಾಧಿಪತಿಯು ಯಾರೂ ಇಲ್ಲ.

34 ನನ್ನ ಮೇಲೆ ಎತ್ತಿರುವ ತನ್ನ ದಂಡವನ್ನು ಆತನು ತೆಗೆದುಹಾಕಲಿ. ಆತನಿಂದಾಗುವ ದಿಗಿಲು ನನ್ನನ್ನು ಹೆದರಿಸದಿರಲಿ,

35 ಹೀಗಿದ್ದರೆ ನಾನು ಭಯಪಡದೆ ಮಾತಾಡುವೆನು; ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು