Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 5 - ಕನ್ನಡ ಸತ್ಯವೇದವು J.V. (BSI)

1 ನೀನು ಕೂಗಿದರೆ ನಿನಗೆ ಉತ್ತರಕೊಡುವವರುಂಟೋ? ದೇವದೂತರಲ್ಲಿ ಯಾರನ್ನು ಆಶ್ರಯಿಸುವಿ?

2 ಕರಕರೆಯಿಂದ ಮೂರ್ಖನಿಗೆ ನಾಶನವು. ರೋಷದಿಂದ ಮೂಢನಿಗೆ ಮರಣವು ಸಂಭವಿಸುವದಲ್ಲವೇ.

3 ಮೂರ್ಖನು ಬೇರೂರುವದನ್ನು ನಾನು ನೋಡಿದೆನು; ಕೂಡಲೆ ಅವನ ನಿವಾಸವು ಶಾಪಗ್ರಸ್ತವೆನ್ನುವದಕ್ಕೆ ಆಸ್ಪದವಾಯಿತು.

4 ಅವನ ಮಕ್ಕಳು ನಿರಾಶ್ರಯರಾಗಿ ನ್ಯಾಯಸ್ಥಾನದಲ್ಲಿ ಸೋತುಹೋಗುವರು. ಅವರನ್ನು ಬಿಡಿಸತಕ್ಕವರು ಯಾರೂ ಇಲ್ಲ.

5 ಹಸಿದವನು ಅವರ ಬೆಳೆಯನ್ನು ಮುಳ್ಳು ಬೇಲಿಯೊಳಗಿಂದಲೇ ತಿಂದುಬಿಡುವನು. ಅವರ ಸೊತ್ತನ್ನು ನುಂಗಲು ಬೋನು ಬಾಯಿ ತೆರೆದಿದೆ.

6 ಕೇಡು ಉದ್ಭವಿಸುವದು ಮಣ್ಣಿನಿಂದಲ್ಲಾ; ಶ್ರಮೆಯು ಭೂವಿುಯಿಂದ ಮೊಳೆಯುವದಿಲ್ಲ.

7 ಕಿಡಿಗಳು ಮೇಲಕ್ಕೆ ಹಾರುವದೂ ಮನುಷ್ಯರು ಶ್ರಮೆಯನ್ನು ಅನುಭವಿಸುವದೂ ಸಹಜ.

8 [ಈ ಸಂದರ್ಭದಲ್ಲಿ] ನಾನಾದರೋ ದೇವರನ್ನೇ ಆಶ್ರಯಿಸುತ್ತಿದ್ದೆನು; ನನ್ನ ಸಂಗತಿಯನ್ನು ದೇವರಿಗೇ ಅರಿಕೆಮಾಡಿಕೊಳ್ಳುತ್ತಿದ್ದೆನು.

9 ಆತನು ಅಪ್ರಮೇಯ ಮಹಾಕಾರ್ಯಗಳನ್ನೂ ಅಸಂಖ್ಯವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ;

10 ಭೂವಿುಯ ಮೇಲೆ ಮಳೆಸುರಿಸಿ ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಾನೆ.

11 ಹೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ಏರಿಸಿ ದುಃಖಿಸುವವರನ್ನು ನಿರಪಾಯಸ್ಥಳಕ್ಕೆ ಹತ್ತಿಸುತ್ತಾನೆ.

12 ಯುಕ್ತಿವಂತರ ಕೈಯಿಂದ ಏನೂ ಆಗದಂತೆ ಅವರ ಉಪಾಯಗಳನ್ನು ಭಂಗಪಡಿಸುತ್ತಾನೆ.

13 ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡುಕೊಂಡು ವಕ್ರಬುದ್ಧಿಯುಳ್ಳವರ ಆಲೋಚನೆಯನ್ನು ನಿರರ್ಥಕ ಮಾಡುತ್ತಾನೆ.

14 ಅವರು ಹಗಲಿನಲ್ಲಿ ಕತ್ತಲೆಗೊಳಗಾಗಿ ಮಧ್ಯಾಹ್ನದಲ್ಲೂ ರಾತ್ರಿಯಲ್ಲಿರುವಂತೆ ತಡವಾಡುತ್ತಾರೆ.

15 ಇಂಥವರ ಬಾಯೆಂಬ ಕತ್ತಿಯಿಂದಲೂ ಬಲಿಷ್ಠರ ಕೈಯಿಂದಲೂ ದಿಕ್ಕಿಲ್ಲದವರನ್ನು ರಕ್ಷಿಸುತ್ತಾನೆ.

16 ಹೀಗೆ ಬಡವನಿಗೆ ನಿರೀಕ್ಷೆಯುಂಟಾಗುವದು, ಅನ್ಯಾಯವು ಬಾಯಿಮುಚ್ಚಿಕೊಳ್ಳುವದು.

17 ಇಗೋ, ದೇವರು ಯಾವನನ್ನು ಶಿಕ್ಷಿಸುವನೋ ಅವನು ಧನ್ಯನು; ಸರ್ವಶಕ್ತನ ದಂಡನೆಯನ್ನು ತಾತ್ಸಾರಮಾಡಬೇಡ.

18 ಗಾಯಮಾಡುವವನೂ ಗಾಯಕಟ್ಟುವವನೂ ಆತನೇ; ಹೊಡೆಯುವ ಕೈಯೇ ವಾಸಿಮಾಡುತ್ತದೆ.

19 ಆರು ಇಕ್ಕಟ್ಟುಗಳಿಂದ ಆತನು ನಿನ್ನನ್ನು ಬಿಡಿಸುವನು; ಏಳನೆಯ ಇಕ್ಕಟ್ಟು ಉಂಟಾದರೂ ಯಾವ ಕೇಡೂ ನಿನ್ನನ್ನು ಮುಟ್ಟದು.

20 ಬರಗಾಲದಲ್ಲಿ ಮರಣದಿಂದಲೂ ಯುದ್ಧದಲ್ಲಿ ಕತ್ತಿಯಿಂದಲೂ ನಿನ್ನನ್ನು ಬಿಡಿಸುವನು.

21 ನಾಲಿಗೆಯೆಂಬ ಕೊರಡೆಗೆ ನೀನು ಮರೆಯಾಗಿರುವಿ; ವಿನಾಶವುಂಟಾದರೂ ನೀನು ಹೆದರುವದಿಲ್ಲ.

22 ನೀನು ನಾಶನಕ್ಕೂ ಕ್ಷಾಮಕ್ಕೂ ನಗುವಿ; ಕಾಡುಮೃಗಗಳಿಗೆ ಅಂಜಬೇಕಾಗಿಲ್ಲ.

23 ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವಿ; ಕಾಡುಮೃಗಗಳೂ ನಿನ್ನ ಸಂಗಡ ಸಮಾಧಾನವಾಗಿರುವವು.

24 ನಿನ್ನ ಗುಡಾರಕ್ಕೆ ಅಪಾಯವಿಲ್ಲವೆಂದು ನಿನಗೆ ಗೊತ್ತೇ ಇರುವದು; ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವದಿಲ್ಲ;

25 ನಿನ್ನ ಸಂತಾನವು ದೊಡ್ಡದ್ದೆಂದೂ ನಿನ್ನ ಸಂತತಿಯವರು ಭೂವಿುಯ ಹುಲ್ಲಿನಂತೆ [ಲೆಕ್ಕವಿಲ್ಲದವರು] ಎಂದೂ ನಂಬಿರುವಿ;

26 ಸುಗ್ಗೀಕಾಲದಲ್ಲಿ ತೆನೆಸಿವುಡು [ಮನೆಗೆ] ಸೇರುವಂತೆ ನೀನು ವೃದ್ಧಾಪ್ಯದಲ್ಲಿ ಸಮಾಧಿಗೆ ಸೇರುವಿ.

27 ಇಗೋ, ಇದನ್ನು ವಿಚಾರಿಸಿದ್ದೇವೆ, ಯಥಾರ್ಥವಾಗಿಯೇ ಇದೆ; ಇದನ್ನು ಕೇಳು, ನಿನ್ನಷ್ಟಕ್ಕೆ ನೀನೇ ತಿಳಿದುಕೋ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು