ಯೋಬ 41 - ಕನ್ನಡ ಸತ್ಯವೇದವು J.V. (BSI)1 ನೀನು ಮೊಸಳೆಯನ್ನು ಗಾಳದಿಂದ ಎಳೆದು ಹುರಿಯಿಂದ ಅದರ ನಾಲಿಗೆಯನ್ನು ಅದುವಿು ಬಿಗಿಯುವಿಯೋ? 2 ಅದರ ಮೂಗಿಗೆ ಆಪನ್ನು ಪೋಣಿಸುವಿಯಾ? ದವಡೆಗೆ ಮುಳ್ಳನ್ನು ಚುಚ್ಚುವಿಯಾ? 3 ಅದು ನಿನಗೆ ಬಹಳವಾಗಿ ವಿಜ್ಞಾಪಿಸುವದೋ? ನಿನ್ನ ಸಂಗಡ ಸವಿಮಾತಾಡೀತೇ? 4 ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ ನಿನ್ನೊಂದಿಗೆ ಒಪ್ಪಂದಮಾಡಿಕೊಳ್ಳುವದೋ? 5 ಅದನ್ನು ಪಕ್ಷಿಯಂತೆ ಆಡಿಸುವಿಯಾ? ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವಿಯಾ? 6 ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? ವರ್ತಕರಿಗೆ ಹಂಚಿ ಮಾರುವರೋ? 7 ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲಿಯಾ? 8 ಅದರ ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವದೇ ಇಲ್ಲ. 9 ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ! ಹಿಡಿಯ ಬಂದವನು ನೋಡಿದ ಮಾತ್ರಕ್ಕೆ ಬಿದ್ದುಹೋಗುವನು. 10 ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆಯು ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು? 11 ನಾನು ಸಾಲತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು? ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ. 12 ನಾನು ಅದರ ಅಂಗಗಳನ್ನೂ ಶಕ್ತಿ ವಿಧಾನವನ್ನೂ ಸೊಗಸಾದ ಜೋಡನೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು. 13 ಅದರ ಹೊರಬಟ್ಟೆಯನ್ನು ಯಾರು ತೆಗೆಯುವರು? ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು? 14 ಮುಖದ ಕದಗಳನ್ನು ಯಾರು ತೆರೆದಾರು? ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ. 15 ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿವೆ. ಅವು ಬಿಗಿದು ಮುದ್ರಿಸಲ್ಪಟ್ಟಿವೆ. 16 ಗಾಳಿಯು ಕೂಡ ನುಗ್ಗದಂತೆ ಅವು ಒಂದಕ್ಕೊಂದು ಹೊಂದಿಕೊಂಡಿವೆ. 17 ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ. 18 ಅದರ ಸೀನಿನ ತುಂತುರುಗಳು ತಳತಳಿಸುವವು, ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ. 19 ಬಾಯೊಳಗಿಂದ ಕೊಳ್ಳಿಗಳು ಹೊರಡುವವು, ಬೆಂಕಿಕಿಡಿಗಳು ಹಾರುವವು. 20 ಆಪುಹುಲ್ಲಿಗೆ ಬೆಂಕಿಯಿಕ್ಕಿ ಊದಿ ಕಾಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಮೂಗಿನ ಸೊಳ್ಳೆಗಳಿಂದ ಹೊಗೆ ಹಾಯುವದು. 21 ಅದರ ಉಸಿರೇ ಇದ್ದಲನ್ನು ಹೊತ್ತಿಸುವದು, ಜ್ವಾಲೆಯು ಬಾಯಿಂದೇಳುವದು. 22 ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವದು. 23 ಮಾಂಸದ ಮಡತೆಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ. 24 ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ. 25 ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು. 26 ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು; ಬಾಣ ಬರ್ಜಿ ಈಟಿ ಇವುಗಳೂ ವ್ಯರ್ಥವೇ. 27 ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ ತಾಮ್ರವನ್ನು ಲೊಡ್ಡುಮರವನ್ನಾಗಿಯೂ ಭಾವಿಸುವದು. 28 ಅಂಬು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು. 29 ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವದು; ಬಿರ್ರನೆ ಬರುವ ಈಟಿಗೆ ನಗುವದು. 30 ಅದರ ಕೆಳಭಾಗವು ಮೊನೆಮೊನೆಯಾದ ಬೋಕಿಗಳಾಗಿದೆ, ಅದು ಕೆಸರಿನ ಮೇಲೆ ಹಲಿಕೆಯ ಹಾಗೆ ನೀಡಿಕೊಂಡಿರುವದು. 31 ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವದು; ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವದು. 32 ಸಾಗರಕ್ಕೆ ನರೆ ಬಂತೋ ಎಂದು ಊಹಿಸುವ ಹಾಗೆ ತಾನು ಬಂದ ದಾರಿಯನ್ನು ಶುಭ್ರಪಡಿಸುವದು. 33 ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ, ಭಯವಿಲ್ಲದ್ದಾಗಿ ಸೃಷ್ಟಿಸಲ್ಪಟ್ಟಿದೆ. 34 ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವದು, ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India