ಯೋಬ 40 - ಕನ್ನಡ ಸತ್ಯವೇದವು J.V. (BSI)1 ಇದಲ್ಲದೆ ಯೆಹೋವನು ಯೋಬನಿಗೆ - 2 ಆಕ್ಷೇಪಕನು ಸರ್ವಶಕ್ತನ ಸಂಗಡಲೂ ವ್ಯಾಜ್ಯವಾಡುವನೋ? ದೇವರೊಂದಿಗೆ ವಿವಾದಮಾಡುವವನು ಇದಕ್ಕೆಲ್ಲಾ ಉತ್ತರಕೊಡಲಿ ಎಂದು ಹೇಳಿದನು. 3 ಆಗ ಯೋಬನು - 4 ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ? ಬಾಯ ಮೇಲೆ ಕೈಯಿಟ್ಟುಕೊಳ್ಳುವೆನು. 5 ಒಂದು ಸಾರಿ ಮಾತಾಡಿದ್ದೇನೆ, ಪ್ರತಿವಾದ ಮಾಡಲಾರೆನು; ಎರಡು ಸಲ ಹೌದು, ಇನ್ನೇನೂ ನುಡಿಯಲೊಲ್ಲೆನು ಎಂದು ಯೆಹೋವನಿಗೆ ಹೇಳಿದನು. 6 ಆಮೇಲೆ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು - 7 ಶೂರನಂತೆ ನಡುಕಟ್ಟಿಕೋ! ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು. 8 ಏನು! ನನ್ನ ನೀತಿಯನ್ನು ಖಂಡಿಸಿಬಿಡುವಿಯಾ? ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವಿಯೋ? 9 ನಿನ್ನ ಕೈಯೂ ದೇವರ ಕೈಯೂ ಸಮವೋ? ದೇವರ ಧ್ವನಿಯಂತೆ ಗುಡುಗಬಲ್ಲಿಯಾ? 10 ನಿನ್ನನ್ನು ನೀನೇ ಮಹಿಮೆಘನತೆಗಳಿಂದ ಭೂಷಿಸಿಕೊಂಡು ಪ್ರಭಾವಮಹತ್ತುಗಳನ್ನು ಧರಿಸಿಕೋ. 11 ತುಂಬಿತುಳುಕುವ ನಿನ್ನ ಕೋಪವನ್ನು ಎರಚಿ ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಅವನನ್ನು ತಗ್ಗಿಸು. 12 ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಕುಗ್ಗಿಸಿ ದುಷ್ಟರನ್ನು ತಟ್ಟನೆ ಕೆಡವಿಬಿಡು. 13 ಅವರನ್ನು ಒಟ್ಟಿಗೆ ದೂಳಿನಲ್ಲಡಗಿಸಿ ಅಂಧಕಾರಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು. 14 ಹೀಗಾದರೆ ನಿನ್ನ ಬಲಭುಜವು ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ನಿನ್ನನ್ನು ಹೊಗಳುವೆನು. 15 ನಿನ್ನಂತೆ ನನ್ನ ಸೃಷ್ಟಿಯಾಗಿರುವ ನೀರಾನೆಯನ್ನು ನೋಡು; ಎತ್ತಿನ ಹಾಗೆ ಹುಲ್ಲನ್ನು ಮೇಯುವದು. 16 ಇಗೋ, ಅದರ ಬಲವು ಸೊಂಟದಲ್ಲಿಯೂ ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ. 17 ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವದು; ಅದರ ತೊಡೆಯ ನರಗಳು ಹೆಣೆದುಕೊಂಡಿವೆ. 18 ಅದರ ಮೂಳೆಗಳು ತಾಮ್ರದ ನಳಗಳಂತೆಯೂ ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ ಇರುವವು. 19 ಅದು ದೇವರ ಸೃಷ್ಟಿಗಳಲ್ಲಿ ಮುಖ್ಯವಾದದ್ದು; ಅದನ್ನು ನಿರ್ಮಿಸಿದವನು ಅದಕ್ಕೆ ಕೋರೆ ಹಲ್ಲೆಂಬ ಶಸ್ತ್ರವನ್ನೂ ಒದಗಿಸಿದ್ದಾನೆ. 20 ಗುಡ್ಡಗಳು ಅದಕ್ಕೆ ಮೇವನ್ನು ಕೊಡುವವು; ಕಾಡುಮೃಗಗಳೆಲ್ಲಾ ಅಲ್ಲಿ ಆಡುತ್ತಿರುವವು; 21 ಎಲಚಿ ಗಿಡಗಳ ಕೆಳಗೂ ಆಪಿನ ಮರೆಯಲ್ಲಿಯೂ ಜವುಗು ಭೂವಿುಯಲ್ಲಿಯೂ ಮಲಗಿಕೊಳ್ಳುವದು. 22 ಎಲಚಿ ಗಿಡಗಳು ತಮ್ಮ ನೆರಳನ್ನು ಅದರ ಮೇಲೆ ಹರಡುವವು, ನದಿಯ ನೀರವಂಜಿಗಳು ಅದನ್ನು ಸುತ್ತಿಕೊಂಡಿರುವವು. 23 ಓಹೋ, ಹೊಳೆಯು ಹೊಡೆದರೂ ಅದು ಹೆದರುವದಿಲ್ಲ. ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವದು. 24 ಯಾವನಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ? ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ? |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India