ಯೋಬ 4 - ಕನ್ನಡ ಸತ್ಯವೇದವು J.V. (BSI)1 ಇದಕ್ಕೆ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಕೊಟ್ಟನು - 2 ಒಬ್ಬನು ನಿನ್ನ ಸಂಗಡ ಮಾತಾಡ ತೊಡಗಿದರೆ ನಿನಗೆ ಬೇಸರಿಕೆ ಉಂಟಾಗುವದೋ? ಮಾತಾಡದೆ ಸುಮ್ಮನೆ ಇರುವದಕ್ಕೆ ಯಾರಿಂದಾದೀತು? 3 ಇಗೋ, ನೀನು ಅನೇಕರನ್ನು ಶಿಕ್ಷಿಸಿ ಜೋಲುಬಿದ್ದ ಕೈಗಳನ್ನು ಬಲಗೊಳಿಸಿ 4 ಎಡವಿಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದೀ. 5 ಈಗಲಾದರೋ ನಿನಗೇ [ಶ್ರಮೆ] ಬಂತು. ಅದರಿಂದ ನೀನು ಬೇಸರಗೊಂಡಿರುವಿ, ಅದು ನಿನ್ನನ್ನೇ ತಗಲಿರುವ ಕಾರಣ ನಿನಗೆ ಭ್ರಮೆಯುಂಟಾಗಿದೆ. 6 ನಿನ್ನ ನಂಬಿಕೆಗೆ ನಿನ್ನ ಭಯಭಕ್ತಿಯೂ ನಿನ್ನ ನಿರೀಕ್ಷೆಗೆ ನಿನ್ನ ಸನ್ಮಾರ್ಗವೂ ಆಧಾರವಲ್ಲವೋ, 7 ನೀನೇ ಆಲೋಚನೆಮಾಡು, ನಿರಪರಾಧಿಯು ಎಂದಾದರೂ ನಾಶವಾದದ್ದುಂಟೇ, ಯಥಾರ್ಥರು ಅಳಿದುಹೋದದ್ದೆಲ್ಲಿ? 8 ನಾನು ನೋಡಿರುವ ಮಟ್ಟಿಗೆ ಅಧರ್ಮವನ್ನು ಉತ್ತು ಕೇಡನ್ನು ಬಿತ್ತುವವರು ಕೇಡನ್ನೇ ಕೊಯ್ಯುವರು. 9 ದೇವರ ಶ್ವಾಸದಿಂದ ನಾಶವಾಗುತ್ತಾರೆ, ಆತನ ಸಿಟ್ಟೆಂಬ ಗಾಳಿಯಿಂದ ಹಾಳಾಗುತ್ತಾರೆ. 10 ಸಿಂಹಗರ್ಜನೆಯೂ ಆರ್ಭಟಿಸುವ ಸಿಂಹದ ಧ್ವನಿಯೂ [ಅಡಗಿ] ಪ್ರಾಯದ ಸಿಂಹಗಳ ಕೋರೆಗಳು ಮುರಿಯಲ್ಪಡುವವು. 11 ಮೃಗೇಂದ್ರನು ಆಹಾರವಿಲ್ಲದೆ ಸತ್ತು ಸಿಂಹದ ಮರಿಗಳು ಚದರಿಹೋಗುವವು. 12 ಒಂದು ಸಂಗತಿಯು ನನಗೆ ರಹಸ್ಯವಾಗಿ ತಿಳಿಯ ಬಂತು. ಅದು ಗುಸುಗುಸಿನ ಸದ್ದಾಗಿ ನನ್ನ ಕಿವಿಗೆ ಬಿತ್ತು. 13 ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ ರಾತ್ರಿಯ ಕನಸುಗಳಿಂದ ಯೋಚನೆಗಳಲ್ಲಿರುವಾಗ ನನಗೆ 14 ಎಲುಬುಗಳೆಲ್ಲಾ ನಡುಗುವಷ್ಟು ಭಯಂಕರವಾದ ದಿಗಿಲು ಉಂಟಾಯಿತು. 15 ಯಾವದೋ ಒಂದು ಉಸಿರು ನನ್ನ ಮುಖಕ್ಕೆ ಸುಳಿಯಲು ಮೈಯೆಲ್ಲಾ ನಿಲುಗೂದಲಾಯಿತು. 16 ನನ್ನ ಕಣ್ಣು ಮುಂದೆ ಒಂದು ರೂಪವು ಇತ್ತು. ನಿಂತಿದ್ದರೂ ಅದು ಏನೆಂಬದು ಗೊತ್ತಾಗಲಿಲ್ಲ. ಒಂದು ಸೂಕ್ಷ್ಮ ಧ್ವನಿಯು ಕೇಳಬಂತು. 17 ಅದೇನಂದರೆ - ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾದಾನೇ? ಮಾನವನು ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ? 18 ಆಹಾ, ಆತನು ತನ್ನ ಪರಿಚಾರಕರಲ್ಲಿಯೂ ನಂಬಿಕೆಯನ್ನಿಡುವದಿಲ್ಲ, ತನ್ನ ದೂತರ ಮೇಲೆಯೂ ತಪ್ಪುಹೊರಿಸುತ್ತಾನೆ. 19 ದೂಳಿನಲ್ಲಿರುವ ಅಸ್ತಿವಾರದ ಮೇಲೆ ಮಣ್ಣಿನಿಂದಾದ [ಶರೀರಗಳೆಂಬ] ಮನೆಗಳೊಳಗೆ ವಾಸಿಸುವವರಲ್ಲಿ ಇನ್ನೆಷ್ಟೋ ಹೆಚ್ಚಾಗಿ ತಪ್ಪುಕಂಡುಹಿಡಿಯಬೇಕಲ್ಲವೇ. ಅವರು ದೀಪದ ಹುಳದಂತೆ ಅಳಿದು ಹೋಗುತ್ತಾರೆ. 20 ಉದಯಾಸ್ತಮಾನಗಳ ಮಧ್ಯದಲ್ಲಿ [ಜೀವಿಸಿ] ಜಜ್ಜಲ್ಪಡುತ್ತಾರೆ, ಹೀಗೆ ನಿತ್ಯನಾಶನಹೊಂದುವದನ್ನು ಯಾರೂ ಲಕ್ಷಿಸುವದಿಲ್ಲ. 21 ಅವರ ಗುಡಾರದ ಹಗ್ಗವು ಬಿಚ್ಚಿ ಹೋಗುವದಷ್ಟೆ, ಜ್ಞಾನವಿಲ್ಲದವರಾಗಿ ಸಾಯುವರು ಎಂಬದೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India