Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 39 - ಕನ್ನಡ ಸತ್ಯವೇದವು J.V. (BSI)

1 ಬೆಟ್ಟದ ಮೇಕೆಗಳು ಈಯುವ ಸಮಯವನ್ನು ತಿಳಿದುಕೊಂಡಿದ್ದೀಯೋ? ಹುಲ್ಲೆಗಳ ಹೆರಿಗೆಯನ್ನು ನೋಡಿಕೊಳ್ಳುವಿಯಾ?

2 ಅವು ಗಬ್ಬವನ್ನು ಹೊರುವ ತಿಂಗಳುಗಳನ್ನು ಲೆಕ್ಕಿಸಿ ಈಯುವ ಕಾಲವನ್ನು ಗೊತ್ತುಮಾಡುವಿಯೋ?

3 ಅವು ಬೊಗ್ಗಿಕೊಂಡು ಮರಿಗಳನ್ನು ಹಾಕಿದೊಡನೆಯೇ ತಮ್ಮ ವೇದನೆಯನ್ನೂ ತೊರೆದುಬಿಡುವವು.

4 ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ ಬೆಳೆದು ಅಗಲಿದ ಮೇಲೆ ತಾಯಿಯ ಬಳಿಗೆ ಪುನಃ ಸೇರುವದೇ ಇಲ್ಲ.

5 ಕಾಡುಕತ್ತೆಯನ್ನು ಸ್ವತಂತ್ರವಾಗಿರುವಂತೆ ಯಾರು ಕಳುಹಿಸಿಬಿಟ್ಟರು? ಅದರ ಕಟ್ಟನ್ನು ಬಿಚ್ಚಿದವರು ಯಾರು?

6 ನಾನು ಅಡವಿಯನ್ನು ಅದಕ್ಕೆ ಮನೆಯನ್ನಾಗಿಯೂ ಸವುಳು ಭೂವಿುಯನ್ನು ಅದರ ನಿವಾಸವನ್ನಾಗಿಯೂ ಮಾಡಿದ್ದೇನಷ್ಟೆ.

7 ಅದು ಊರಗದ್ದಲವನ್ನು ಧಿಕ್ಕರಿಸಿ ಹೊಡೆಯುವವನ ಕೂಗಾಟವನ್ನು ಕೇಳಿದ್ದೇ ಇಲ್ಲ.

8 ಅದರ ಕಾವಲು ವಿಶಾಲವಾದ ಬೆಟ್ಟಗಳೇ. ಹಸುರು ಎಲ್ಲಿದ್ದರೂ ಅದನ್ನು ಹುಡುಕುತ್ತಲೇ ಇರುವದು.

9 ಕಾಡುಕೋಣವು ನಿನ್ನನ್ನು ಸೇವಿಸಲು ಒಪ್ಪಿ ನಿನ್ನ ಗೋದಲಿಯ ಹತ್ತಿರ ತಂಗುವದೋ?

10 ನೇಗಿಲಸಾಲಿಗೆ ತಪ್ಪದಂತೆ ಅದನ್ನು ಹಗ್ಗದಿಂದ ಕಟ್ಟುವಿಯಾ? ಅದು ತಗ್ಗಿನ ಭೂವಿುಯಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವದೋ?

11 ಬಲಹೆಚ್ಚಾಗಿರುವದರಿಂದ ಅದರಲ್ಲಿ ನಂಬಿಕೆಯಿಟ್ಟು ನಿನ್ನ ಕೆಲಸವನ್ನು ಅದಕ್ಕೆ ಒಪ್ಪಿಸಿಬಿಡುವಿಯೋ?

12 ಅದು ನಿನ್ನ ಕಣದಲ್ಲಿ ಕಾಳನ್ನು ಕೂಡಿಸಿ ನಿನ್ನ ಬೆಳೆಯನ್ನು ಹೊತ್ತುಕೊಂಡು ಬರುವದೆಂದು ಭರವಸವಿಡುವಿಯಾ?

13 ಉಷ್ಟ್ರಪಕ್ಷಿಯ ಪಕ್ಷವು ಸಂತೋಷದಿಂದ ಬಡಿದಾಡುವದು, ಆದರೆ ಅದರ ರೆಕ್ಕೆಗರಿಗಳಿಗೆ ಪ್ರೀತಿಭಾವವುಂಟೋ?

14 ಅದು ತನ್ನ ಮೊಟ್ಟೆಗಳನ್ನು ಭೂವಿುಯಲ್ಲಿಟ್ಟುಬಿಟ್ಟು ದೂಳಿನಿಂದಲೇ ಅವುಗಳಿಗೆ ಕಾವು ಕೊಡಿಸುವದಲ್ಲವೇ.

15 ಕಾಲಿನಿಂದ ಮೆಟ್ಟಿಯಾರು, ಕಾಡುಮೃಗ ತುಳಿದೀತು ಎಂದು ನೆನಸುವದೇ ಇಲ್ಲ.

16 ತನ್ನ ಮರಿಗಳನ್ನು ತನ್ನವುಗಳೆಂದೆಣಿಸದೆ ಬಾಧೆಗೊಳಪಡಿಸುವದು, ತನ್ನ ಹೆರಿಗೆ ನಿಷ್ಫಲವಾದರೂ ಅದಕ್ಕೆ ಏನೂ ಚಿಂತೆ ಇಲ್ಲ.

17 ದೇವರು ಅದಕ್ಕೆ ಜ್ಞಾನವನ್ನು ಮರೆಮಾಡಿ ವಿವೇಕವನ್ನು ದಯಪಾಲಿಸದೆ ಇದ್ದಾನಷ್ಟೆ!

18 ಅದು ರೆಕ್ಕೆಬಡಿಯುತ್ತಾ ನೀಳವಾಗಿ ಓಡುವ ಸಮಯದಲ್ಲಾದರೋ ಕುದುರೆಯನ್ನೂ ಸವಾರನನ್ನೂ ಹೀಯಾಳಿಸುವದು.

19 ನೀನು ಕುದುರೆಗೆ ಶಕ್ತಿಯನ್ನು ಕೊಟ್ಟು ಅದರ ಕೊರಳಿಗೆ ಅದರಾಟವನ್ನು ಸುತ್ತಿಸಿದಿಯೋ?

20 ಅದು ವಿುಡತೆಯ ಹಾಗೆ ಕುಪ್ಪಳಿಸಿ ಹಾರುವಂತೆ ಮಾಡಿದಿಯಾ? ಅದರ ಕೆನೆತದ ಪ್ರತಾಪವು ಭಯಂಕರವಾಗಿದೆ.

21 ಅದು ತಗ್ಗಿನ ನೆಲವನ್ನು ಕೆರೆದು ತನ್ನ ಬಲಕ್ಕೆ ಹಿಗ್ಗಿ ಸನ್ನಾಹದ ಸೈನ್ಯವನ್ನು ಎದುರಿಸಲು ಹೋಗುವದು.

22 ಅದು ಕಳವಳಗೊಳ್ಳದೆ ಖಡ್ಗಕ್ಕೆ ಹಿಂದೆಗೆಯದೆ ಭಯವನ್ನು ತಾತ್ಸಾರಮಾಡುವದು.

23 ಬತ್ತಳಿಕೆಯೂ ಥಳಥಳಿಸುವ ಬರ್ಜಿಯೂ ಈಟಿಯೂ ಅದರ ಮೇಲೆ ಜಣಜಣಿಸುವವು.

24 ಅದು ತುತೂರಿಯ ಶಬ್ದವನ್ನು ಕೇಳಿದರೂ ನಿಲ್ಲದೆ ಉಗ್ರತೆಯಿಂದ ಕಂಪಿಸುತ್ತಾ ನೆಲವನ್ನು ನುಂಗಿಬಿಡುವದೋ ಎಂಬಂತೆ ಓಡುವದು.

25 ತುತೂರಿಯೂದಿದಾಗೆಲ್ಲಾ ಆಹಾ ಎಂದುಕೊಂಡು ಕಾಳಗ, ಆರ್ಭಟ, ಸೇನಾಪತಿಗಳ ಗರ್ಜನೆ, ಇವುಗಳನ್ನು ದೂರದಲ್ಲಿದ್ದರೂ ಮೂಸಿನೋಡಿ ತಿಳಿಯುವದು.

26 ಗಿಡಗವು ತನ್ನ ರೆಕ್ಕೆಗಳನ್ನು ಹರಡಿ ತೆಂಕಣ ದಿಕ್ಕಿಗೆ ಹಾರುವದು ನಿನ್ನ ವಿವೇಕದಿಂದಲೋ?

27 ಹದ್ದು ಮೇಲಕ್ಕೆ ಹಾರಿ ಉನ್ನತದಲ್ಲಿ ಗೂಡುಮಾಡುವದು ನಿನ್ನ ಅಪ್ಪಣೆಯಿಂದಲೋ?

28 ಅದಕ್ಕೆ ಬಂಡೆಯೇ ನಿವಾಸವು; ಅದು ಶಿಲಾಶಿಖರದಲ್ಲಿಯೂ ದುರ್ಗದಲ್ಲಿಯೂ ತಂಗುವದು.

29 ಅಲ್ಲಿಂದಲೇ ಬೇಟೆಯನ್ನು ನೋಡುತ್ತಾ ದೂರದಲ್ಲಿದ್ದರೂ ಅದನ್ನು ಕಂಡುಹಿಡಿಯುವದು.

30 ಅದರ ಮರಿಗಳೂ ರಕ್ತವನ್ನು ಕುಡಿಯುವವು; ಹತರಿದ್ದಲ್ಲಿ ಹದ್ದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು