Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 23 - ಕನ್ನಡ ಸತ್ಯವೇದವು J.V. (BSI)

1 ಆಗ ಯೋಬನು ಇಂತೆಂದನು -

2 ನಾನು ನನ್ನ ನರಳಾಟವನ್ನು ಎಷ್ಟು ಬಿಗಿಹಿಡಿದರೂ ಆ ನನ್ನ ಮೂಲುಗುವಿಕೆಯು ದೇವದ್ರೋಹವೆಂದು ಈಗಲೂ ಎಣಿಸುತ್ತೀರಾ?

3 ಆಹಾ, ಆತನ ದರ್ಶನವು ಎಲ್ಲಿ ಆದೀತು, ನನಗೆ ಗೊತ್ತಾಗಿದ್ದರೆ ಎಷ್ಟೋ ಸಂತೋಷ! ಆತನ ಸನ್ನಿಧಿಯನ್ನು ಸೇರೇನು.

4 ನನ್ನ ಬಾಯನ್ನು ತರ್ಕಗಳಿಂದ ತುಂಬಿಸಿಕೊಂಡು ನನ್ನ ನ್ಯಾಯವನ್ನು ಆತನ ಮುಂದೆ ವಿವರಿಸಿ

5 ಆತನ ಪ್ರತ್ಯುತ್ತರದ ಮಾತುಗಳನ್ನು ತಿಳಿದುಕೊಂಡು ಆತನು ನನಗೆ ಹೇಳುವದನ್ನು ವಿವೇಚಿಸೇನು.

6 ಆತನು ತನ್ನ ಮಹಾಶಕ್ತಿಯಿಂದ ನನ್ನ ಸಂಗಡ ವ್ಯಾಜ್ಯವಾಡುವನೋ? ಇಲ್ಲವೇ ಇಲ್ಲ; ನನ್ನ ವಿಜ್ಞಾಪನೆಯನ್ನು ಗಮನಿಸುವನು.

7 ಅಲ್ಲಿ ಯಥಾರ್ಥಚಿತ್ತನು ಆತನೊಂದಿಗೆ ವಾದಿಸಲು ಅವಕಾಶವಾಗಿ ನನ್ನ ನ್ಯಾಯಾಧಿಪತಿಯಿಂದ ನನಗೆ ನಿತ್ಯವಾದ ಬಿಡುಗಡೆಯಾಗುವದು.

8 ಅಯ್ಯೋ, ನಾನು ಮುಂದೆ ಹೋದರೂ ಆತನು ಸಿಕ್ಕುವದಿಲ್ಲ, ಹಿಂದೆ ಹೋದರೂ ಆತನನ್ನು ಕಾಣಲಾರೆನು.

9 ಎಡಗಡೆಯಲ್ಲಿ ಹುಡುಕಿದರೂ ನೋಡಲಾರೆನು, ಬಲಗಡೆಗೆ ತಿರುಗಿಕೊಂಡರೂ ಆತನು ಕಾಣಿಸುವದಿಲ್ಲ.

10 ಆತನಾದರೋ ನನ್ನ ದಾರಿಯನ್ನು ಬಲ್ಲನು, ಆತನೇ ನನ್ನನ್ನು ಶೋಧಿಸಿ ನೋಡಿದರೆ ಚೊಕ್ಕ ಬಂಗಾರವಾಗಿ ಕಾಣಿಸುವೆನು.

11 ಆತನ ಹೆಜ್ಜೆಯ ಜಾಡಿನಲ್ಲೇ ಕಾಲಿಟ್ಟಿದ್ದೇನೆ, ಓರೆಯಾಗದೆ ಆತನ ದಾರಿಯನ್ನೇ ಹಿಡಿದಿದ್ದೇನೆ.

12 ಆತನ ತುಟಿಗಳಿಂದ ಹೊರಟ ನಿಯಮಗಳಿಗೆ ನಾನು ಹಿಂದೆಗೆಯಲಿಲ್ಲ, ಆತನ ಬಾಯಿಂದ ಬಂದ ಮಾತುಗಳನ್ನು ಎದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.

13 ಆತನಂತು ಒಂದೇ ಮನಸ್ಸುಳ್ಳವನಾಗಿದ್ದಾನೆ, ತಿರುಗಿಸಬಲ್ಲವರು ಯಾರು? ತಾನು ಬಯಸಿದ್ದನ್ನೇ ಮಾಡುತ್ತಾನೆ.

14 ನನ್ನ ವಿಷಯದಲ್ಲಿ ನೇಮಕವಾದದ್ದನ್ನು ಪೂರೈಸುವನಷ್ಟೆ, ಆತನಲ್ಲಿ ಇಂಥಾ ಸಂಕಲ್ಪಗಳು ಅನೇಕವಾಗಿವೆ.

15 ಆದಕಾರಣ ನಾನು ಆತನ ಸನ್ನಿಧಿಗೆ ಗಾಬರಿಯಾಗಿದ್ದೇನೆ; ಇದನ್ನೆಲ್ಲಾ ಯೋಚಿಸಿಕೊಳ್ಳುವಾಗ ಆತನಿಗೆ ಅಂಜುತ್ತೇನೆ.

16 ನನ್ನ ಹೃದಯವನ್ನು ಕುಂದಿಸಿದವನು ದೇವರೇ, ನನ್ನನ್ನು ಗಾಬರಿಪಡಿಸಿದವನು ಸರ್ವಶಕ್ತನೇ.

17 ನಾನು ಹಾಳಾದದ್ದಕ್ಕೆ ಈ ಅಂಧಕಾರವು ನಿವಿುತ್ತವಲ್ಲ, ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲು ಕಾರಣವಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು