Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 18 - ಕನ್ನಡ ಸತ್ಯವೇದವು J.V. (BSI)

1 ಆಗ ಶೂಹ್ಯನಾದ ಬಿಲ್ದದನು ಪ್ರತ್ಯುತ್ತರವಾಗಿ ಹೀಗಂದನು -

2 ಇನ್ನೆಷ್ಟರವರೆಗೆ ಮಾತುಗಳನ್ನು ಹಿಡಿಯುವದಕ್ಕೆ ಉರ್ಲೊಡ್ಡುತ್ತಿರುವಿ? ನೀನು ಆಲೋಚಿಸು, ಆಮೇಲೆ ಮಾತಾಡೋಣ.

3 ಏಕೆ ನಮ್ಮನ್ನು ಮೃಗಗಳೆಂದು ಎಣಿಸಿದ್ದೀ? ನಿನ್ನ ದೃಷ್ಟಿಯಲ್ಲಿ ನಾವು ಹೆಡ್ಡರೋ?

4 ಸಿಟ್ಟಿನಿಂದ ನಿನ್ನನ್ನು ಸೀಳಿಕೊಳ್ಳುವವನೇ, ನಿನಗಾಗಿ ಲೋಕವೇ ಹಾಳಾಗಬೇಕೋ, ಬಂಡೆಯು ತನ್ನ ಸ್ಥಳದಿಂದ ಜರಗಬೇಕೋ?

5 ಹೇಗಾದರೂ ದುಷ್ಟನ ದೀಪವು ಆರುವದು, ಅವನ ಒಲೆಯು ಉರಿಯುವದಿಲ್ಲ.

6 ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವದು, ಅವನ ಮೇಲಣ [ತೂಗು] ದೀವಿಗೆಯು ನಂದುವದು.

7 ಅವನ ಬಲವುಳ್ಳ ಹೆಜ್ಜೆಗಳಿಗೆ ಇಕ್ಕಟ್ಟಾಗುವದು, ಅವನ ಆಲೋಚನೆಯೇ ಅವನನ್ನು ಕೆಡವಿಹಾಕುವದು.

8 ತನ್ನ ಹೆಜ್ಜೆಗಳಿಂದಲೇ ಬಲೆಗೆ ಬೀಳುವನು, ಗುಂಡಿಯನ್ನು ಮುಚ್ಚಿದ ತಟ್ಟಿಯ ಮೇಲೆ ನಡೆಯುವನು,

9 ಕತ್ತರಿಬೋನು ಅವನ ಹಿಮ್ಮಡಿಯನ್ನು ಕಚ್ಚುವದು, ಉರುಲು ಅವನನ್ನು ಹಿಡಿಯುವದು,

10 ನೆಲದ ಮೇಲೆ ಪಾಶವೂ ದಾರಿಯಲ್ಲಿ ಜಾಲವೂ ಅವನಿಗೆ ಹೊಂಚಿಕೊಂಡಿರುವವು.

11 ಎಲ್ಲಾ ಕಡೆಯಲ್ಲಿಯೂ ಅಪಾಯಗಳು ಅವನನ್ನು ಅಂಜಿಸಿ ಹಿಮ್ಮಡಿತುಳಿಯುತ್ತಾ ಬೆನ್ಹತ್ತುವವು.

12 ಅವನ ಬಲವು ಕುಂದಿಹೋಗುವದು. ಅವನು ಎಡವಿ ಬಿದ್ದಾನೇ ಎಂದು ವಿಪತ್ತು ಕಾದಿರುವದು.

13 ಮೃತ್ಯುವಿನ ಹಿರೀಮಗನು ಅವನ ಚರ್ಮವನ್ನು ಚೂರು ಚೂರಾಗಿ ತಿಂದು ಅವನ ಅಂಗಗಳನ್ನು ನುಂಗಿಬಿಡುವನು;

14 ಅವನ ನಿರ್ಭಯದ ಗುಡಾರದಿಂದ ಅವನನ್ನು ಎಳೆದು ಮಹಾಭೀತಿಗಳ ರಾಜನ ಸನ್ನಿಧಿಗೆ ಸಾಗಿಸಿಕೊಂಡು ಹೋಗುವನು.

15 ಅವನಿಗೆ ಸಂಬಂಧಿಗಳಲ್ಲದವರು ಅವನ ಗುಡಾರದಲ್ಲಿ ವಾಸಿಸುವರು, ಅವನ ಮನೆಯ ಮೇಲೆ ಗಂಧಕವು ಎರಚಲ್ಪಡುವದು.

16 ಅವನ ಬುಡವು ಕೆಳಗೆ ಒಣಗುವದು, ಅವನ ರೆಂಬೆಯು ಮೇಲೆ ಬಾಡುವದು.

17 ಅವನ ಸ್ಮರಣೆಯು ಭೂವಿುಯಲ್ಲಿ ಅಳಿದುಹೋಗುವದು, ಅವನ ಹೆಸರು ಹೊರಗಣ ಪ್ರಾಂತ್ಯಗಳಲ್ಲಿಯೂ ನಿಲ್ಲುವದಿಲ್ಲ.

18 ಅವನನ್ನು ಬೆಳಕಿನಿಂದ ಕತ್ತಲೆಗೆ ನೂಕಿ ಲೋಕದಿಂದಲೇ ಅಟ್ಟಿಬಿಡುವರು.

19 ಅವನಿಗೆ ಸ್ವಜನರಲ್ಲಿ ಮಗನಾಗಲಿ ಮೊಮ್ಮಗನಾಗಲಿ ಇರುವದಿಲ್ಲ, ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವದಿಲ್ಲ.

20 ಹಿಂದಿನವರು ಅವನ [ನಾಶನ] ದಿನವನ್ನು ನೋಡಿ ಹೇಗೆ ಬೆರಗಾದರೋ ಹಾಗೆಯೇ ಮುಂದಿನವರೂ ಅದಕ್ಕೆ ವಿಸ್ಮಯಪಡುವರು.

21 ಕೆಡುಕರ ನಿವಾಸಗಳ ಅವಸ್ಥೆಯು ಇಂಥದೇ. ದೇವರನ್ನು ಲಕ್ಷಿಸದವನ ಸ್ಥಿತಿಯು ಹೀಗೆಯೇ ಸರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು