Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 16 - ಕನ್ನಡ ಸತ್ಯವೇದವು J.V. (BSI)

1 ಆಗ ಯೋಬನು ಹೀಗೆ ಉತ್ತರಕೊಟ್ಟನು -

2 ಇಂಥಾ ಮಾತುಗಳನ್ನು ಬಹಳವಾಗಿ ಕೇಳಿದ್ದೇನೆ, ನೀವೆಲ್ಲರೂ ಬೇಸರಿಕೆಯನ್ನು ಹುಟ್ಟಿಸುವ ಆದರಣೆಯವರಾಗಿದ್ದೀರಿ.

3 ಒಣಮಾತುಗಳಿಗೆ ಪಾರವಿಲ್ಲವೋ? ಯಾವ ನೋವಿನಿಂದ ಈ ಉತ್ತರ ಕೊಟ್ಟಿ?

4 ನಾನೂ ನಿಮ್ಮ ಹಾಗೆ ಮಾತಾಡಬಲ್ಲೆನು; ನೀವು ನನ್ನ ಸ್ಥಿತಿಯಲ್ಲಿ ಇದ್ದಿದ್ದರೆ ನಾನು ನಿಮಗೆ ವಿರುದ್ಧವಾಗಿ ಮಾತುಗಳನ್ನು ಹೊಸೆದು ನಿಮ್ಮ ವಿಷಯದಲ್ಲಿ ತಲೆಯಾಡಿಸಬಹುದಾಗಿತ್ತು.

5 ನಾನೂ ಬಾಯಿಂದ ನಿಮ್ಮನ್ನು ಧೈರ್ಯಗೊಳಿಸಿ ತುಟಿಗಳ ಆದರಣೆಯಿಂದ [ನಿಮ್ಮ ದುಃಖವನ್ನು] ಶಮನಪಡಿಸಬಹುದಾಗಿತ್ತು.

6 ನಾನು ಮಾತಾಡಿದರೂ ನನ್ನ ಮನೋವ್ಯಥೆಯು ಶಾಂತವಾಗುವದಿಲ್ಲ. ಸುಮ್ಮನಾದರೂ ಕಷ್ಟ ನಿವಾರಣೆಯಾಗುವದಿಲ್ಲ.

7 ಈಗಲಂತು ಆತನು ನನ್ನನ್ನು ಕುಂದಿಸಿದ್ದಾನೆ; [ದೇವಾ,] ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದೀ.

8 ನೀನು ನನ್ನನ್ನು ಹಿಡಿದಿರುವದು ನನಗೆ ಪ್ರತಿಸಾಕ್ಷಿಯಾಗಿದೆ, ನನ್ನ ಕ್ಷೀಣತ್ವವು ನನಗೆ ವಿರುದ್ಧವಾಗಿ ಎದ್ದು ನನ್ನ ಮುಖದ ಮುಂದೆ ಸಾಕ್ಷಿಕೊಡುತ್ತದೆ.

9 ಆತನ ಸಿಟ್ಟು ನನ್ನನ್ನು ಸೀಳಿ ಹಿಂಸಿಸುತ್ತಿದೆ; ಆತನು ನನ್ನ ಮೇಲೆ ಹಲ್ಲುಕಡಿದಿದ್ದಾನೆ; ನನ್ನ ವಿರೋಧಿಯು ನನ್ನ ಮೇಲೆ ದೃಷ್ಟಿಯನ್ನು ತೀಕ್ಷ್ಣಮಾಡಿದ್ದಾನೆ,

10 ನನಗೆ ವಿರುದ್ಧವಾಗಿ ಹಲವರು ಗುಂಪುಕೂಡಿ ಬಾಯಿಕಿಸಿದು ನನ್ನನ್ನು ಅಣಕಿಸಿ ಛೀ ಎಂದು ನನ್ನ ದವಡೆಯ ಮೇಲೆ ಬಡಿದಿದ್ದಾರೆ.

11 ದೇವರು ನನ್ನನ್ನು ತುಂಟರಿಗೆ ಒಪ್ಪಿಸಿ ಕೆಟ್ಟವರ ಕೈಗೆ ಎಸೆದುಬಿಟ್ಟಿದ್ದಾನೆ.

12 ನಾನು ನೆಮ್ಮದಿಯಿಂದಿದ್ದಾಗ ಆತನು ನನ್ನನ್ನು ಒಡೆದುಹಾಕಿದನು; ಕತ್ತು ಹಿಡಿದು ನನ್ನನ್ನು ಚೂರು ಚೂರು ಮಾಡಿದನು. ನನ್ನನ್ನು ಗುರಿಮಾಡಿಕೊಂಡಿದ್ದಾನೆ;

13 ಆತನ ಬಾಣಗಳು ನನ್ನನ್ನು ಮುತ್ತಿಕೊಂಡಿವೆ. ಆತನು ಕರುಣವಿಲ್ಲದೆ ನನ್ನ ಅಂತರಂಗಗಳನ್ನು ಇರಿದು ಭೂವಿುಯ ಮೇಲೆ ನನ್ನ ಪಿತ್ತವನ್ನು ಸುರಿಸುತ್ತಾನೆ.

14 ನನ್ನನ್ನು ಒಡೆದೊಡೆದು ಶಿಥಿಲಪಡಿಸಿ ಶೂರನ ಹಾಗೆ ನನ್ನ ಮೇಲೆ ಓಡಿಬರುತ್ತಾನೆ.

15 ಗೋಣಿಯನ್ನು ಹೊಲಿದು ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಕೊಂಬನ್ನು ದೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.

16 ಕಣ್ಣೀರು ಸುರಿಯುವದರಿಂದ ನನ್ನ ಮುಖವು ಕೆಂಪಾಗಿಹೋಗಿದೆ. ರೆಪ್ಪೆಯ ಮೇಲೆ ಮರಣಾಂಧಕಾರವು ಕವಿದಿದೆ.

17 ಆದರೆ ನನ್ನ ಕೈ ಯಾವ ಬಲಾತ್ಕಾರವನ್ನೂ ಮಾಡಿರಲಿಲ್ಲವಲ್ಲಾ, ನನ್ನ ವಿಜ್ಞಾಪನೆಯು ನಿರ್ಮಲವಾದದ್ದು.

18 ಭೂವಿುಯೇ, ನನ್ನ ರಕ್ತವನ್ನು ಮುಚ್ಚಬೇಡ! ನನ್ನ ಮೊರೆಗೆ ಬಿಡುವು ಸಿಕ್ಕದಿರಲಿ!

19 ಆಹಾ, ಈಗಲೂ ನನ್ನ ಕಡೆಯ ಸಾಕ್ಷಿಯು ಆಕಾಶದಲ್ಲಿ ಉಂಟು, ನನ್ನ ಪಕ್ಷದ ಹೊಣೆಗಾರನು ಮೇಲಣ ಲೋಕದಲ್ಲಿದ್ದಾನೆ.

20 ಗೆಳೆಯರೋ ನನ್ನನ್ನು ಹೀನೈಸುವವರಾಗಿದ್ದಾರೆ;

21 ನನ್ನ ನ್ಯಾಯವನ್ನು ದೇವರ ಮುಂದೆಯೂ ಮಾನವನ ನ್ಯಾಯವನ್ನು ಅವನ ವಿುತ್ರನ ಮುಂದೆಯೂ ಸ್ಥಾಪಿಸಲಿ ಎಂದು ದೇವರಿಗೇನೇ ಕಣ್ಣೀರು ಸುರಿಸುತ್ತೇನೆ.

22 ನಾನು ಹಿಂದಿರುಗದ ದಾರಿಯನ್ನು ಕೆಲವು ವರುಷಗಳೊಳಗೇ ಹಿಡಿಯುವೆನಲ್ಲವೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು