Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 15 - ಕನ್ನಡ ಸತ್ಯವೇದವು J.V. (BSI)

1 ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗಂದನು -

2 ಜ್ಞಾನಿಯು ತನ್ನ ಹೊಟ್ಟೆಯಲ್ಲಿ ಮೂಡಣ ಗಾಳಿಯನ್ನು ತುಂಬಿಕೊಂಡು ಶೂನ್ಯವಾದ ತಿಳುವಳಿಕೆಯಿಂದ ಮಾತಾಡತಕ್ಕದ್ದೋ?

3 ಪ್ರಯೋಜನವಿಲ್ಲದ ನುಡಿಯಿಂದಲೂ ಫಲವಿಲ್ಲದ ವಾಕ್ಯಗಳಿಂದಲೂ ತರ್ಕಿಸುವದು ಯುಕ್ತವೋ?

4 ಇದಲ್ಲದೆ ನೀನು ದೇವರ ಭಯವನ್ನು ಹಾಳುಮಾಡಿ ದೇವಭಕ್ತಿಯನ್ನು ಕ್ಷಯಗೊಳಿಸುತ್ತೀ.

5 ನಿನ್ನ ಪಾಪವೇ ನಿನ್ನ ಬಾಯಿಗೆ [ಮಾತುಗಳನ್ನು] ಕಲಿಸಿಕೊಡುತ್ತದೆ, ಯುಕ್ತಿವಂತರ ಭಾಷೆಯನ್ನು ಆರಿಸಿಕೊಂಡಿದ್ದೀ.

6 ನಿನ್ನನ್ನು ಅಪರಾಧಿಯೆಂದು ನಿರ್ಣಯಿಸುವವನು ನಾನಲ್ಲ, ನಿನ್ನ ಬಾಯೇ, ನಿನ್ನ ತುಟಿಗಳು ಕೂಡಾ ನಿನಗೆ ವಿರುದ್ಧವಾಗಿ ಸಾಕ್ಷಿಕೊಡುತ್ತವೆ.

7 ನೀನು ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚೆ ಹುಟ್ಟಿದಿಯಾ?

8 ದೇವರ ಆಲೋಚನಾಸಭೆಯಲ್ಲಿದ್ದುಕೊಂಡು ಅಲ್ಲಿ ಹೇಳಿದ್ದನ್ನು ಕೇಳಿದಿಯೇನೋ? ಜ್ಞಾನವನ್ನೆಲ್ಲಾ ನಿನ್ನ ಕಡೆಗೆ ಸೆಳೆದುಕೊಂಡಿದ್ದೀಯಾ?

9 ನಮಗೆ ತಿಳಿಯದಿರುವ ಯಾವದು ನಿನಗೆ ಗೊತ್ತುಂಟು? ನಮ್ಮಲ್ಲಿಲ್ಲದ ಯಾವ ಸಂಗತಿಯನ್ನು ಗ್ರಹಿಸಿದ್ದೀ?

10 ತಲೆನರೆತು ನಿಮ್ಮಪ್ಪನಿಗಿಂತ ವೃದ್ಧನಾದ ಮುದುಕನು ನಮ್ಮಲ್ಲಿದ್ದಾನೆ.

11 ದೇವರ ಆದರಣೆಗಳೂ ನಿನಗೆ ದೊರೆತ ಶಾಂತಿಯ ಮಾತುಗಳೂ ಸಾಲವೋ?

12 ನಿನ್ನ ಹೃದಯವು ಏಕೆ ನಿನ್ನನ್ನು ಸೆಳೆದುಕೊಂಡು ಹೋಗುವದು? ನಿನ್ನ ಕಣ್ಣುಗಳು ಕಿಡಿಕಿಡಿಯಾಗುವದೇಕೆ? ನೀನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು

13 ಬಾಯಿಂದ ಮಾತುಗಳನ್ನು ಸುಮ್ಮನೆ ಸುರಿಸುತ್ತೀಯಲ್ಲಾ!

14 ನರನು ಎಷ್ಟರವನು! ಅವನು ಪರಿಶುದ್ಧನಾಗಿರುವದು ಸಾಧ್ಯವೋ? ಸ್ತ್ರೀಯಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೇ?

15 ಆಹಾ, ತನ್ನ ದೂತರಲ್ಲಿಯೂ ಆತನು ನಂಬಿಕೆಯಿಡುವದಿಲ್ಲ, ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಾಗಿರದು.

16 ಹೀಗಿರಲು ಅಧರ್ಮವನ್ನು ನೀರಿನಂತೆ ಕುಡಿಯುತ್ತಾ ಅಸಹ್ಯನೂ ಕೆಟ್ಟವನೂ ಆದ ನರಜನ್ಮದವನು ಮತ್ತೂ ಅಶುದ್ಧನಲ್ಲವೇ!

17 ಕೇಳು, ನಾನು ಒಂದು ಸಂಗತಿಯನ್ನು ತಿಳಿಸುವೆನು, ಕಂಡದ್ದನ್ನೇ ವಿವರಿಸುವೆನು.

18 ದತ್ತದೇಶದ ಬಾಧ್ಯತೆಯನ್ನು ಕಳಕೊಳ್ಳದೆ ಪರದೇಶಿಗಳ ಬಳಿಕೆಯಿಲ್ಲದ ಜ್ಞಾನಿಗಳು

19 ಇದೇ ಸಂಗತಿಯನ್ನು ತಮ್ಮ ಪಿತೃಗಳಿಂದ ಕೇಳಿ ಮರೆಮಾಜದೆ ಪ್ರಕಟಿಸಿದ್ದಾರೆ.

20 ಹಿಂಸಕನಿಗೆ ಎಷ್ಟು ವರುಷಗಳು ನೇಮಕವಾಗಿವೆಯೋ ಅಷ್ಟು ಕಾಲವೂ ಆ ದುಷ್ಟನು ಪೀಡಿತನಾಗಿಯೇ ಇರುವನು.

21 ಅಪಾಯಗಳ ಸಪ್ಪಳವು ಅವನ ಕಿವಿಯಲ್ಲೇ ಇರುವದು, ತಾನು ಸುಖವಾಗಿರುವಾಗಲೂ ಸೂರೆಗಾರನು ತನ್ನ ಮೇಲೆ ಬೀಳುವನೆಂದು ಭಯಪಡುವನು.

22 ಕತ್ತಲೊಳಗಿಂದ ತಾನು ಹಿಂದಿರುಗುವೆನೆಂಬ ನಂಬಿಕೆಯಿಲ್ಲದೆ ಕತ್ತಿಯು ತನಗಾಗಿ ಕಾದಿದೆ ಎಂಬದಾಗಿಯೂ

23 ರೊಟ್ಟಿ ಎಲ್ಲಿ ಎಂದು ಹುಡುಕುತ್ತಾ ಅಲೆದಾಡುವೆನೆಂಬದಾಗಿಯೂ ನಿಶ್ಚಯಿಸಿಕೊಂಡು ಆ ಕತ್ತಲಿನ ದಿನವು ತನ್ನ ಪಕ್ಕದಲ್ಲಿ ಸಿದ್ಧವಾಗಿದೆ ಎಂದು ತಿಳಿದುಕೊಂಡಿರುವನು.

24 ಸಂಕಟವೂ ಪೇಚಾಟವೂ ಯುದ್ಧ ಸನ್ನದ್ಧರಾಜರಂತೆ ಅವನನ್ನು ಹೆದರಿಸಿ ಸೋಲಿಸುವವು.

25 ಅವನು ದೇವರಿಗೆ ವಿರುದ್ಧವಾಗಿ ಕೈಚಾಚಿ ಸರ್ವಶಕ್ತನಿಗೆ ಎದುರು ನಿಂತು ಶೂರನಂತೆ ಮೆರೆದನಲ್ಲಾ.

26 ಹೆಬ್ಬುಗುಟುಗಳಿಂದ ಕೂಡಿದ ಗುರಾಣಿಯನ್ನು ಹಿಡಿದು ಕುತ್ತಿಗೆಯನ್ನೆತ್ತಿಕೊಂಡು ಆತನ ಮೇಲೆ ಬೀಳಬೇಕೆಂದು ಓಡಿದನು.

27 ಅವನು ಮುಖದಲ್ಲಿ ಕೊಬ್ಬೇರಿಸಿಕೊಂಡು ಸೊಂಟದಲ್ಲಿ ಬೊಜ್ಜನ್ನು ಬೆಳಿಸಿಕೊಂಡಿದ್ದನು.

28 ಅವನು ಹಾಳು ಪಟ್ಟಣಗಳಲ್ಲಿ ಸೇರಿಕೊಂಡು ದಿಬ್ಬಗಳಾಗಿ ಹೋಗಲಿ ಯಾರೂ ವಾಸಿಸದಿರಲಿ ಎಂದು ಶಾಪಹೊಂದಿದ ಮನೆಗಳೊಳಗೆ ವಾಸವಾಗಿದ್ದನು.

29 ಇಂಥವನು ಐಶ್ವರ್ಯವಂತನಾಗುವದಿಲ್ಲ, ಅವನ ಆಸ್ತಿಯು ನಿಲ್ಲುವದಿಲ್ಲ, ಅವನ ಫಲವು ಭಾರದಿಂದ ಭೂವಿುಯ ಕಡೆಗೆ ಬಾಗುವದಿಲ್ಲ.

30 ಕತ್ತಲೊಳಗಿಂದ ಅವನು ಪಾರಾಗುವದಿಲ್ಲ, ಕಿಚ್ಚು ಅವನ ಕೊಂಬೆಗಳನ್ನು ಒಣಗಿಸುವದು, ದೇವರ ಬಾಯ ಶ್ವಾಸದಿಂದ ಬಡಿಸಿಕೊಂಡು ಹೋಗುವನು.

31 ಅವನು ಭ್ರಮೆಗೊಂಡು ಶೂನ್ಯವಾದದ್ದರ ಮೇಲೆ ನಂಬಿಕೆಯಿಡದಿರಲಿ, ಇಟ್ಟರೆ ಅವನಿಗಾಗುವ ಪ್ರತಿಫಲವು ಶೂನ್ಯವೇ,

32 ಅವನ ಕಾಲವು ಕೊನೆಮುಟ್ಟುವದಕ್ಕೆ ಮುಂಚೆಯೇ ಆ ಪ್ರತಿಫಲವು ತಲಪಿಬಿಡುವದು. ಅವನ ಗರಿಯು ಹಸುರಾಗಿರುವದಿಲ್ಲ,

33 ದ್ರಾಕ್ಷೆಯ ಬಳ್ಳಿಯಂತೆ ಅವನು ತನ್ನ ಮಾಗದ ಫಲವನ್ನು ಹಾಳುಮಾಡಿಕೊಳ್ಳುವನು, ಎಣ್ಣೆಯ ಮರದ ಹಾಗೆ ತನ್ನ ಹೂವುಗಳನ್ನು ಉದುರಿಸಿಬಿಡುವನು.

34 ಭ್ರಷ್ಟರ ಸಂಘವು ನಿರರ್ಥಕ, ಬೆಂಕಿಯು ಲಂಚಕೋರರ ಗುಡಾರಗಳನ್ನು ಸುಟ್ಟುಹಾಕುವದು.

35 ಅವರು ಹಿಂಸೆಯನ್ನು ಗರ್ಭಧರಿಸಿ ಶ್ರಮೆಯನ್ನು ಹೆರುವರು, ಅವರ ಹೊಟ್ಟೆಯು ಕಲ್ಪಿಸುವದು ಮೋಸವೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು