ಯೋಬ 13 - ಕನ್ನಡ ಸತ್ಯವೇದವು J.V. (BSI)1 ಇಗೋ, ಇವುಗಳನ್ನೆಲ್ಲಾ ನನ್ನ ಕಣ್ಣು ಕಂಡಿದೆ, ಕಿವಿಯು ಕೇಳಿ ಗ್ರಹಿಸಿದೆ. 2 ನೀವು ತಿಳಿದಿರುವದನ್ನು ನಾನೂ ತಿಳಿದಿದ್ದೇನೆ. ನಿಮಗಿಂತ ನಾನು ಕಡೆಯಲ್ಲ. 3 ಆದರೆ ನಾನು ಸರ್ವಶಕ್ತನ ಸಂಗಡ ಮಾತಾಡಬೇಕು, ದೇವರೊಂದಿಗೆ ವಾದಿಸಲು ಅಪೇಕ್ಷಿಸುತ್ತೇನೆ. 4 ನೀವಾದರೋ ಸುಳ್ಳನ್ನು ಮೆತ್ತುವವರಾಗಿದ್ದೀರಿ, ನೀವೆಲ್ಲರೂ ವ್ಯರ್ಥವೈದ್ಯರೇ. 5 ನೀವು ಬಾಯಿಮುಚ್ಚಿ ಸುಮ್ಮನಾದರೆ ಎಷ್ಟೋ ಉತ್ತಮ! ಮೌನವೇ ನಿಮಗೆ ಜ್ಞಾನವು. 6 ದಯಮಾಡಿ ನನ್ನ ಆಕ್ಷೇಪಣೆಯನ್ನು ಕೇಳಿರಿ, ನನ್ನ ತುಟಿಗಳ ವಾದಕ್ಕೆ ಕಿವಿಗೊಡಿರಿ. 7 ದೇವರ ಪಕ್ಷವಾಗಿ ಅನ್ಯಾಯವನ್ನು ನುಡಿಯುವಿರೋ? ಆತನಿಗೋಸ್ಕರ ಮೋಸದ ಮಾತುಗಳನ್ನಾಡುವಿರೋ? 8 ಆತನಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ? ದೇವರಿಗಾಗಿ ವಾದಿಸುವಿರಾ? 9 ಆತನು ನಿಮ್ಮನ್ನು ಶೋಧಿಸಿದರೆ ನಿಮಗೆ ಒಳ್ಳೇದಾಗುವದೋ? ಮನುಷ್ಯನನ್ನು ಮೋಸಗೊಳಿಸುವಂತೆ ಆತನನ್ನೂ ಮೋಸಗೊಳಿಸುವಿರೋ? 10 ನೀವು ರಹಸ್ಯವಾಗಿ ಪಕ್ಷಪಾತಮಾಡಿದರೆ ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು. 11 ಆತನ ಶ್ರೇಷ್ಠತೆಯು ನಿಮ್ಮನ್ನು ಹೆದರಿಸುವದಿಲ್ಲವೋ? ಆತನ ಭಯವು ನಿಮ್ಮ ಮೇಲೆ ಬೀಳುವದಿಲ್ಲವೋ? 12 ನಿಮ್ಮ ಸ್ಮೃತಿಗಳು ಬೂದಿಯ ಸಾಮತಿಗಳು; ನಿಮ್ಮ ಕೋಟೆಯು ಬರೀ ಮಣ್ಣಿನದೇ. 13 ಸುಮ್ಮನಿರಿ, ನನ್ನನ್ನು ಬಿಡಿರಿ, ನಾನು ಮಾತಾಡಬೇಕು, ನನಗೇನಾದರೂ ಆಗಲಿ. 14 ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು, ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು, 15 ಆಹಾ, ಆತನು ನನ್ನನ್ನು ಕೊಲ್ಲುವನು, ಅದಕ್ಕಾಗಿ ಕಾದಿರುತ್ತೇನೆ, ಆದರೂ ನನ್ನ ನಡತೆಯ ಒಳ್ಳೇತನವನ್ನು ಆತನ ಮುಂದೆ ಸ್ಥಾಪಿಸುವೆನು. 16 ಭ್ರಷ್ಟನು ಆತನ ಮುಂದೆ ಬರುವದಿಲ್ಲವೆಂಬದೇ ನಾನು ರಕ್ಷಣೆಯನ್ನು ಹೊಂದುವೆನೆಂಬದಕ್ಕೆ ಆಧಾರವಾಗಿದೆ. 17 ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ, ನನ್ನ ಅರಿಕೆಗೆ ಕಿವಿಗೊಡಿರಿ. 18 ಇಗೋ, ನನ್ನ ನ್ಯಾಯವನ್ನು ಸಿದ್ಧಪಡಿಸಿದ್ದೇನೆ; ನಾನು ನೀತಿವಂತನೆಂಬದಾಗಿ ನಿರ್ಣಯವಾಗುವದೆಂದು ನನಗೆ ಗೊತ್ತೇ ಇದೆ. 19 ನನಗೆ ಪ್ರತಿವಾದಿ ಇದ್ದಾನೋ? ಇದ್ದರೆ ಸುಮ್ಮನಾಗಿ ಪ್ರಾಣಬಿಡುವೆನು. 20 ಆದರೆ ನಾನು ನನ್ನನ್ನು ನಿನ್ನ ದೃಷ್ಟಿಗೆ ಮರೆಮಾಡಿಕೊಳ್ಳದಂತೆ ಈ ಎರಡು ಕಾರ್ಯಗಳನ್ನು ಮಾಡಬೇಡ. 21 ನನ್ನ ಮೇಲೆತ್ತಿರುವ ನಿನ್ನ ಕೈಯನ್ನು ದೂರಮಾಡು, ನಿನ್ನ ದಿಗಿಲು ನನ್ನನ್ನು ಅಂಜಿಸದಿರಲಿ. 22 ಆಗ ನೀನು ಕರೆದರೆ ನಾನು ಉತ್ತರಕೊಡುವೆನು, ಇಲ್ಲವೆ ನಾನು ಮಾತಾಡುವೆ, ನೀನು ಉತ್ತರ ಕೊಡು. 23 ನನ್ನ ಪಾಪದೋಷಗಳೆಷ್ಟು? ನನ್ನ ಪಾಪವನ್ನೂ ದ್ರೋಹವನ್ನೂ ನನಗೆ ತಿಳಿಯಪಡಿಸು. 24 ನೀನು ವಿಮುಖನಾಗಿ ನನ್ನನ್ನು ಶತ್ರುವೆಂದೆಣಿಸಿರುವದೇಕೆ? 25 ಹಾರಿಹೋಗುವ ಎಲೆಯನ್ನು ನಡುಗಿಸುವಿಯಾ? ಒಣಗಿದ ಹೊಟ್ಟನ್ನು ಅಟ್ಟಿಬಿಡುವಿಯಾ? 26 ನನ್ನ ವಿಷಯವಾಗಿ ಕಠಿಣವಾದ ತೀರ್ಪುಗಳನ್ನು ಬರೆದು ನನ್ನ ಯೌವನದ ಪಾಪಗಳ ಫಲದ ಬಾಧ್ಯತೆಯನ್ನು ನನಗೆ ಕೊಟ್ಟಿದ್ದೀ. 27 ನೀನು ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿದ್ದೀ; ನನ್ನ ದಾರಿಗಳನ್ನೆಲ್ಲಾ ಮಂದಟ್ಟುಮಾಡಿ ನನ್ನ ಹೆಜ್ಜೆಗಳ ಸುತ್ತಲೂ ಗೆರೆಯೆಳೆದಿದ್ದೀ. 28 ಕೊಳೆಯುವ ಪದಾರ್ಥದಂತೆಯೂ ನುಸಿ ಹಿಡಿದ ಬಟ್ಟೆಯ ಹಾಗೂ ಕ್ಷಯಿಸಿಹೋಗುತ್ತಿದ್ದೇನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India