Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋಬ 11 - ಕನ್ನಡ ಸತ್ಯವೇದವು J.V. (BSI)

1 ಆಗ ನಾಮಾಥ್ಯನಾದ ಚೋಫರನು ಹೀಗೆಂದನು -

2 ಬಹಳ ಮಾತುಗಳಿಗೆ ಉತ್ತರಕೊಡಬಾರದೋ? ಹರಟೇಮಲ್ಲನು ನೀತಿವಂತನೆಂದು ಹೇಳಿಸಿಕೊಂಡಾನೇ?

3 ನೀನು ಬಡಾಯಿಕೊಚ್ಚಿದರೆ ಮನುಷ್ಯರು ಸುಮ್ಮನಿರಬೇಕೋ? ನೀನು ಕುಚೋದ್ಯವಾಗಿ ಮಾತಾಡುವಾಗ ನಿನ್ನನ್ನು ಯಾರೂ ನಾಚಿಕೆಪಡಿಸಕೂಡದೋ?

4 ನನ್ನ ಬೋಧೆಯು ನಿರ್ಮಲವಾದದ್ದು, ದೇವದೃಷ್ಟಿಯಲ್ಲಿ ಶುದ್ಧನಾಗಿದ್ದೇನೆ ಎಂದು ನೀನು ಹೇಳಿದ್ದೀಯಲ್ಲಾ.

5 ಆಹಾ, ದೇವರು ಬಾಯ್ದೆರೆದು ನಿನಗೆ ವಿರುದ್ಧವಾಗಿ ಮಾತಾಡಿದರೆ ಎಷ್ಟೋ ಉತ್ತಮ!

6 ಆತನು ಜ್ಞಾನದ ರಹಸ್ಯಗಳನ್ನು ನಿನಗೆ ತಿಳಿಸಿ ಸುಜ್ಞಾನವು ಬಹುಮುಖವಾಗಿದೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು! ದೇವರು ನಿನ್ನ ಅಧರ್ಮವನ್ನೆಲ್ಲಾ ಗಣನೆಗೆ ತರಲಿಲ್ಲವೆಂದು ತಿಳಿದುಕೋ!

7 ದೇವರ ಅಗಾಧಗಳನ್ನು ಕಂಡುಕೊಳ್ಳಬಲ್ಲಿಯಾ? ಸರ್ವಶಕ್ತನನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಬಹುದೋ?

8 ಆಹಾ, [ಆತನ ಜ್ಞಾನವು] ಆಕಾಶದ ಹಾಗೆ ಉನ್ನತವಾಗಿದೆ; ನೀನು ಮಾಡುವದೇನು? ಪಾತಾಳಕ್ಕಿಂತ ಆಳವಾಗಿದೆ; ನೀನು ತಿಳಿದುಕೊಳ್ಳುವದೇನು?

9 ಅದರ ಅಳತೆಯು ಭೂವಿುಗಿಂತಲೂ ಉದ್ದವಾಗಿದೆ, ಸಮುದ್ರಕ್ಕಿಂತಲೂ ಅಗಲವಾಗಿದೆ.

10 ಆತನು ಹಾದುಹೋದರೂ ಸೆರೆಯಲ್ಲಿಟ್ಟರೂ ನ್ಯಾಯವಿಚಾರಣೆಗೆ ಕರೆದರೂ ಆತನನ್ನು ತಳ್ಳಿಬಿಡುವವರು ಯಾರು?

11 ಆತನೇ ವ್ಯರ್ಥಜನರನ್ನು ತಿಳಿದುಕೊಳ್ಳುವನು; ಯಾವ ವಿಮರ್ಶೆಯೂ ಇಲ್ಲದೆ ಅಧರ್ಮವನ್ನು ಕಂಡುಹಿಡಿಯುವನು.

12 ಕಾಡುಕತ್ತೆಯ ಮರಿಗೆ ನರಜನ್ಮವಾದರೆ ಜಳ್ಳುಮನುಷ್ಯನು ಬುದ್ಧಿಯನ್ನು ಪಡೆದಾನು.

13 ನೀನಂತು ಮನಸ್ಸನ್ನು ತಿರುಗಿಸಿಕೊಂಡು ದೇವರ ಕಡೆಗೆ ಕೈಗಳನ್ನೆತ್ತು.

14 ಅಧರ್ಮವು ನಿನ್ನ ಕೈಯಲ್ಲಿದ್ದರೆ ಅದನ್ನು ದೂರಮಾಡಿಬಿಡು; ಅನ್ಯಾಯವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.

15 ಆಗ ನೀನು ನಿಷ್ಕಳಂಕವಾದ ಮುಖವನ್ನೆತ್ತಿಕೊಂಡು ಸ್ಥಿರಚಿತ್ತನೂ ನಿರ್ಭಯನೂ ಆಗಿರುವಿ.

16 ನಿನ್ನ ಕಷ್ಟವನ್ನು ಮರೆತುಬಿಡುವಿ; ಹರಿದುಹೋದ ನೀರನ್ನೋ ಎಂಬಂತೆ ಅದನ್ನು ಜ್ಞಾಪಿಸಿಕೊಳ್ಳುವಿ.

17 ನಿನ್ನ ಜೀವಮಾನವು ಮಧ್ಯಾಹ್ನಕ್ಕಿಂತ ಪ್ರಜ್ವಲಿಸುವದು, ಕತ್ತಲಿದ್ದರೂ ಬೆಳಗಿನಂತಿರುವದು.

18 ನಿರೀಕ್ಷೆಗೆ ಆಸ್ಪದವಿರುವದರಿಂದ ಧೈರ್ಯಗೊಂಡಿರುವಿ, ಸುತ್ತಲೂ ನೋಡಿ ಅಪಾಯವಿಲ್ಲವೆಂದು ವಿಶ್ರವಿುಸಿಕೊಳ್ಳುವಿ.

19 ಮಲಗಿಕೊಂಡಾಗ ನಿನ್ನನ್ನು ಯಾರೂ ಹೆದರಿಸುವದಿಲ್ಲ. ಅನೇಕರು ನಿನ್ನ ಮುಖಪ್ರಸನ್ನತೆಯನ್ನು ಅಪೇಕ್ಷಿಸುವರು.

20 ಆದರೆ ದುಷ್ಟರು ನಿರಾಶ್ರಯರಾಗಿ ಕಂಗೆಡುವರು, ಪ್ರಾಣಬಿಡಬೇಕೆಂಬದೇ ಅವರ ಆಶೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು