ಯೋಬ 10 - ಕನ್ನಡ ಸತ್ಯವೇದವು J.V. (BSI)1 ನನ್ನ ಜೀವವೇ ನನಗೆ ಬೇಸರವಾಗಿದೆ. ಎದೆಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು. 2 ನಾನು ದೇವರ ಮುಂದೆ - ನನ್ನನ್ನು ಅಪರಾಧಿಯೆಂದು ನಿರ್ಣಯಿಸಬೇಡ, ನನ್ನೊಡನೆ ಏಕೆ ವ್ಯಾಜ್ಯವಾಡುತ್ತೀ ತಿಳಿಸು ಅನ್ನುವೆನು. 3 ನೀನು ದುಷ್ಟರ ಆಲೋಚನೆಗೆ ಪ್ರಸನ್ನನಾಗಿ ನಿನ್ನ ಕೈಕಷ್ಟದಿಂದ ಸೃಷ್ಟಿಸಿದ್ದನ್ನು ತಿರಸ್ಕರಿಸಿ ಬಾಧಿಸುವದು ನಿನಗೆ ಸಂತೋಷವೋ? 4 ನೀನು ಮಾಂಸದ ಕಣ್ಣುಳ್ಳವನೋ? ಮನುಷ್ಯರು ನೋಡುವಂತೆ ನೋಡುತ್ತೀಯಾ? 5 ನಿನ್ನ ದಿನಗಳು ಮನುಷ್ಯನ ದಿನಗಳಷ್ಟು ಅಲ್ಪವಾಗಿವೆಯೋ? ನಿನ್ನ ಸಂವತ್ಸರಗಳೂ ಮಾನವನ ದಿನಗಳಷ್ಟೇನೇ; 6 ನೀನು [ಇಷ್ಟು ಅವಸರದಿಂದ] ನನ್ನ ದೋಷವನ್ನು ಹುಡುಕಿ ನನ್ನ ಪಾಪವನ್ನು ವಿಚಾರಿಸುವದೇಕೆ? 7 ನಾನು ಅಪರಾಧಿಯಲ್ಲವೆಂದು ನಿನಗೆ ಗೊತ್ತಾಯಿತಲ್ಲಾ; ನಿನ್ನ ಕೈಯೊಳಗಿಂದ ಬಿಡಿಸತಕ್ಕವರು ಯಾರೂ ಇಲ್ಲವಷ್ಟೆ, 8 ನೀನು ನನ್ನನ್ನು ನಿರ್ಮಿಸಿ ರೂಪಿಸಿದ್ದರೂ ಈಗ ಮನಸ್ಸು ಬೇರೆ ಮಾಡಿಕೊಂಡು ನನ್ನನ್ನು ನಾಶನ ಮಾಡಿಬಿಡುವಿಯಾ? 9 ನೀನು ನನ್ನನ್ನು ಜೇಡಿಮಣ್ಣಿನಿಂದಲೋ ಎಂಬಂತೆ ರೂಪಿಸಿದ್ದೀಯೆಂದು ಕೃಪೆಮಾಡಿ ನೆನಸಿಕೋ. ನನ್ನನ್ನು ತಿರಿಗಿ ಮಣ್ಣಾಗುವಂತೆ ಮಾಡುವಿಯಾ? 10 ನೀನು ನನ್ನನ್ನು ಹಾಲಿನಂತೆ ಹೊಯ್ದು ಮೊಸರಿನ ಹಾಗೆ ಹೆಪ್ಪುಗಟ್ಟಿಸಿದಿಯಲ್ಲಾ. 11 ನನ್ನನ್ನು ಎಲುಬು ನರಗಳಿಂದ ಹೆಣೆದು ಮಾಂಸಚರ್ಮಗಳಿಂದ ಹೊದಿಸಿದಿ. 12 ನೀನು ನನಗೆ ಜೀವವನ್ನು ಅನುಗ್ರಹಿಸಿ ಕೃಪೆತೋರಿಸಿದ್ದೀ; ನಿನ್ನ ಪರಾಮರಿಕೆ ನನ್ನ ಆತ್ಮವನ್ನು ಕಾಪಾಡಿದೆ. 13 ಆದರೂ ನಿನ್ನ ಹೃದಯದಲ್ಲಿ ಇವುಗಳನ್ನು ಮರೆಮಾಡಿಕೊಂಡಿದ್ದೀ, ಇವು ನಿನ್ನಲ್ಲಿ ಇದ್ದೇ ಇರುತ್ತವೆಂದು ನನಗೆ ಗೊತ್ತುಂಟು. 14 ಅದೇನಂದರೆ - ನಾನು ತಪ್ಪುಮಾಡಿದರೆ ನೀನು ಗಮನಿಸುತ್ತೀ; ನನ್ನ ದೋಷವನ್ನು ಕ್ಷವಿುಸುವದಿಲ್ಲ. 15 ಅಯ್ಯೋ, ನಾನು ದುರ್ಮಾರ್ಗಿಯಾದರಂತು ನನಗೇನು ಗತಿ! ನಾನು ಸನ್ಮಾರ್ಗಿಯಾದರೂ ನನ್ನ ಶ್ರಮೆಗಳನ್ನು ನೋಡುತ್ತಾ ಅಪಮಾನಭರಿತನಾಗಿ ತಲೆಯೆತ್ತಲಾರೆನು. 16 ತಲೆಯೆತ್ತಿದರೆ ಸಿಂಹದಂತೆ ನನ್ನನ್ನು ಬೇಟೆಯಾಡುವಿ. ನಿನ್ನ ಅದ್ಭುತಚಮತ್ಕಾರವನ್ನು ತಿರಿಗಿ ನನ್ನಲ್ಲಿ ತೋರಿಸುವಿ. 17 ನನಗೆ ವಿರೋಧವಾಗಿ ಹೊಸ ಹೊಸ ಸಾಕ್ಷಿಗಳನ್ನು ಬರಮಾಡಿ ಹೆಚ್ಚೆಚ್ಚಾಗಿ ನನ್ನ ಮೇಲೆ ಸಿಟ್ಟುಗೊಳ್ಳುವಿ. ಸೈನ್ಯವು ತರಂಗ ತರಂಗವಾಗಿ ನನ್ನ ಮೇಲೆ ಬೀಳುವದಲ್ಲಾ. 18 ನನ್ನನ್ನು ಗರ್ಭದಿಂದ ಏಕೆ ಹೊರದೆಗೆದಿ? ಯಾರೂ ನನ್ನನ್ನು ನೋಡದಿರುವಾಗಲೇ ನಾನು ಪ್ರಾಣಬಿಡಬೇಕಾಗಿತ್ತು. 19 ಆಗ ಇಲ್ಲದವನಾಗಿರುತ್ತಿದ್ದೆನು. ನನ್ನನ್ನು ಗರ್ಭದಿಂದ ಸಮಾಧಿಗೆ ಹೊತ್ತುಕೊಂಡು ಹೋಗುತ್ತಿದ್ದರು. 20 ನನ್ನ ದಿನಗಳು ಅಲ್ಪವಾಗಿರುತ್ತವಲ್ಲಾ. ಬಿಡು; ನಿನ್ನ ದೃಷ್ಟಿಯನ್ನು ನನ್ನ ಕಡೆಯಿಂದ ತಿರುಗಿಸು. 21 ನಾನು ಅಂಧಕಾರದಿಂದಲೂ ಮರಣಾಂಧಕಾರದಿಂದಲೂ ತುಂಬಿದ ದೇಶಕ್ಕೆ ಹೋಗುವದರೊಳಗೆ ಸ್ವಲ್ಪ ಹರ್ಷಗೊಳ್ಳಲು ಅವಕಾಶವಾಗಲಿ. ಆ ದೇಶದಿಂದ ತಿರಿಗಿ ಬರಲಾರೆನು. 22 ರಾತ್ರಿಗೂ ಮರಣಾಂಧಕಾರಕ್ಕೂ ಸಮಾನವಾದ ಕಗ್ಗತ್ತಲು ಅದನ್ನು ಆವರಿಸಿದೆ, ಅಲ್ಲಿ ಏನೂ ಕ್ರಮವಿಲ್ಲ, ಅದರ ಬೆಳಕು ರಾತ್ರಿಯ ತಮಸ್ಸೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India