ಯೋನನು 3 - ಕನ್ನಡ ಸತ್ಯವೇದವು J.V. (BSI)ಪ್ರವಾದಿಯ ಪ್ರಕಟನೆಯನ್ನು ಕೇಳಿದ ನಿನೆವೆಯವರ ಮಾನಸಾಂತರ 1 ಅನಂತರ ಯೆಹೋವನು ಯೋನನಿಗೆ - 2 ನೀನೆದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಪ್ರಕಟಿಸುವದನ್ನು ಅಲ್ಲಿ ಸಾರು ಎಂದು ಎರಡನೆಯ ಸಲ ಅಪ್ಪಣೆಮಾಡಿದನು. 3 ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು. ನಿನೆವೆಯು ಮೂರು ದಿನದ ಪ್ರಯಾಣದಷ್ಟು ಅತಿ ವಿಸ್ತಾರವಾದ ಮಹಾ ಪಟ್ಟಣವಾಗಿತ್ತು. 4 ಯೋನನು ಪಟ್ಟಣದಲ್ಲಿ ಸೇರಿ ಮೊದಲು ಒಂದು ದಿವಸದ ಪ್ರಯಾಣದಷ್ಟು ದೂರ ನಡೆದು - ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು ಎಂದು ಸಾರ ತೊಡಗಿದನು. 5 ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಗೊತ್ತುಮಾಡಿ ಸಾರಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು. 6 ಯೋನನ ಪ್ರಕಟನೆಯು ನಿನೆವೆಯ ಅರಸನಿಗೆ ಮುಟ್ಟಲು ಅವನು ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತನು. 7 ಇದಲ್ಲದೆ ಅವನು ತನ್ನ ಮತ್ತು ರಾಜ್ಯಾಧಿಕಾರಿಗಳ ಆಜ್ಞೆಯನ್ನಾಗಿ - ಜನ ಪಶು ಮಂದೆ ಹಿಂಡು ಇವುಗಳು ಏನೂ ರುಚಿನೋಡದಿರಲಿ; ತಿನ್ನದಿರಲಿ, ಕುಡಿಯದಿರಲಿ; 8 ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರು ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗವನ್ನೂ ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದುಬಿಡಲಿ. 9 ದೇವರು ಒಂದು ವೇಳೆ ಮನಮರುಗಿ ಹಿಂದಿರುಗಿ ತನ್ನ ಉಗ್ರಕೋಪವನ್ನು ತೊಲಗಿಸಾನು, ನಾವು ನಾಶವಾಗದೆ ಉಳಿದೇವು ಎಂಬದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು. 10 ದೇವರು ನಿನೆವೆಯವರ ಕಾರ್ಯಗಳನ್ನು ನೋಡಿ ಅವರು ತಮ್ಮ ದುರ್ಮಾರ್ಗದಿಂದ ತಿರುಗಿಕೊಂಡರೆಂದು ತಿಳಿದು ಮನಮರುಗಿ ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India