Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೋನನು 2 - ಕನ್ನಡ ಸತ್ಯವೇದವು J.V. (BSI)


ವಿಪತ್ತಿನಿಂದ ರಕ್ಷಿತನಾದ ಪ್ರವಾದಿಯ ಸ್ತೋತ್ರಗೀತ

1 ಯೋನನು ಆ ಮೀನಿನ ಹೊಟ್ಟೆಯೊಳಗೆ ಇದ್ದುಕೊಂಡು ತನ್ನ ದೇವರಾದ ಯೆಹೋವನಿಗೆ ಹೀಗೆ ಪ್ರಾರ್ಥನೆ ಮಾಡಿದನು.

2 ಇಕ್ಕಟ್ಟಿನಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ ಗರ್ಭದೊಳಗಿಂದ ಕೂಗಿಕೊಂಡೆನು, ಆಹಾ, ನನ್ನ ಧ್ವನಿಯನ್ನು ಲಾಲಿಸಿದಿ.

3 ನನ್ನನ್ನು ಸಮುದ್ರದ ಉದರದಲ್ಲಿ, ಅಗಾಧಸ್ಥಳದಲ್ಲಿ ಎಸೆದುಬಿಟ್ಟಿಯಲ್ಲಾ; ಪ್ರವಾಹವು ನನ್ನನ್ನು ಸುತ್ತಿಕೊಂಡಿತು; ಲೆಕ್ಕವಿಲ್ಲದ ನಿನ್ನ ಅಲೆಗಳೂ ತೆರೆಗಳೂ ನನ್ನ ಮೇಲ್ಗಡೆ ಹಾದುಹೋಗುತ್ತಿದ್ದವು.

4 ನಿನ್ನ ಸಾನ್ನಿಧ್ಯದಿಂದ ಬಿಸಾಡಲ್ಪಟ್ಟಿದ್ದೇನೆ ಅಂದುಕೊಂಡೆನು; ಆದರೂ ನಿನ್ನ ಪರಿಶುದ್ಧಾಲಯವನ್ನು ಪುನಃ ದರ್ಶನಮಾಡುವೆನು.

5 ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ ಬಂದಿತ್ತು, ಮಹಾಸಾಗರವು ನನ್ನನ್ನು ಆವರಿಸಿತು, ಪಾಚಿಯು ನನ್ನ ತಲೆಯನ್ನು ಸುತ್ತಿಕೊಂಡಿತು.

6 ಪರ್ವತಗಳ ಬುಡದ ತನಕ ಇಳಿದೆನು, ಭೂಲೋಕದ ಅಗುಳಿಗಳು ಎಂದಿಗೂ ತೆಗೆಯದ ಹಾಗೆ ನನ್ನ ಹಿಂದೆ ಹಾಕಲ್ಪಟ್ಟವು; ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು ಅಧೋಲೋಕದೊಳಗಿಂದ ಉದ್ಧರಿಸಿದಿ.

7 ನನ್ನ ಆತ್ಮವು ನನ್ನಲ್ಲಿ ಕುಂದಿದಾಗ ಯೆಹೋವನಾದ ನಿನ್ನನ್ನು ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ನಿನ್ನ ಪರಿಶುದ್ಧಾಲಯಕ್ಕೆ ಸೇರಿತು.

8 ಸುಳ್ಳು ವಿಗ್ರಹಗಳನ್ನು ಅವಲಂಬಿಸಿದವರು ತಮ್ಮ ಕರುಣಾನಿಧಿಯನ್ನು ತೊರೆದುಬಿಡುವರು.

9 ನಾನಾದರೋ ಸ್ತೋತ್ರಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು, ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು. ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.

10 ಯೆಹೋವನು ಮೀನಿಗೆ ಅಪ್ಪಣೆಮಾಡಲು ಅದು ಯೋನನನ್ನು ಒಣನೆಲದಲ್ಲಿ ಕಾರಿ ಬಿಟ್ಟಿತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು