Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 9 - ಕನ್ನಡ ಸತ್ಯವೇದವು J.V. (BSI)


ಗಿಬ್ಯೋನ್ಯರು ಯುಕ್ತಿಯಿಂದ ಉಳಿದದ್ದೂ ಇಸ್ರಾಯೇಲ್ಯರಿಗೆ ದಾಸರಾದದ್ದೂ

1 ಯೊರ್ದನ್ ಹೊಳೆಯ ಆಚೆ ಬೆಟ್ಟದ ಮೇಲಿನ ಪ್ರದೇಶ, ಇಳಕಲಿನ ಪ್ರದೇಶ, ಲೆಬನೋನಿನ ಎದುರಿಗಿರುವ ಮಹಾಸಾಗರದ ತೀರಪ್ರದೇಶ ಇವುಗಳಲ್ಲಿ ವಾಸವಾಗಿದ್ದ ಅಮೋರಿಯ ಹಿತ್ತಿಯ ಕಾನಾನ್ ಪೆರಿಜ್ಜೀಯ ಹಿವ್ವಿಯ ಯೆಬೂಸಿಯ ರಾಜರು ನಡೆದ ಸಂಗತಿಯನ್ನು ಕೇಳಿ

2 ಒಂದೇ ಮನಸ್ಸಿನಿಂದ ಯೆಹೋಶುವನಿಗೂ ಇಸ್ರಾಯೇಲ್ಯರಿಗೂ ವಿರೋಧವಾಗಿ ಯುದ್ಧಮಾಡುವದಕ್ಕೆ ಕೂಡಿಕೊಂಡರು.

3 ಯೆರಿಕೋವಿನವರನ್ನೂ ಆಯಿ ಎಂಬ ಊರಿನವರನ್ನೂ ಯೆಹೋಶುವನು ಸಂಹರಿಸಿದ ಸುದ್ದಿಯನ್ನು ಗಿಬ್ಯೋನಿನ ನಿವಾಸಿಗಳು ಕೇಳಿ ಅವರೂ ಒಂದು ಯುಕ್ತಿಮಾಡಿದರು.

4 ಹೇಗಂದರೆ - ಅವರು ತಮ್ಮ ಕತ್ತೆಗಳ ಮೇಲೆ ಹಳೆಯ ಗೋಣೀತಟ್ಟುಗಳನ್ನು ಹಾಕಿ, ಅವುಗಳ ಮೇಲೆ ಹರಿದುಹೋಗಿ ಕಟ್ಟಲ್ಪಟ್ಟಿರುವ

5 ದ್ರಾಕ್ಷಾರಸದ ಹಳೆಯ ಬುದ್ದಲಿಗಳನ್ನು ಹೇರಿ ಹರಿದ ಹಳೆಯ ಕೆರಗಳನ್ನು ಮೆಟ್ಟಿ ಹಳೆಯ ಬಟ್ಟೆಗಳನ್ನು ಹೊದೆದು ಒಣರೊಟ್ಟೀ ಚೂರುಗಳನ್ನು ಬುತ್ತೀ ಕಟ್ಟಿಕೊಂಡು

6 ತಾವು ರಾಯಭಾರಿಗಳೆಂದು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಬಂದು ಅವನಿಗೂ ಇಸ್ರಾಯೇಲ್ಯರಿಗೂ - ನಾವು ದೂರದೇಶದಿಂದ ಬಂದೆವು; ನೀವು ನಮ್ಮ ಸಂಗಡ ಒಡಂಬಡಿಕೆಮಾಡಿಕೊಳ್ಳಿರಿ ಎಂದು ಹೇಳಿದರು.

7 ಆಗ ಇಸ್ರಾಯೇಲ್ಯರು ಹಿವ್ವಿಯರಾದ ಅವರಿಗೆ - ನೀವು ಒಂದು ವೇಳೆ ಈ ನಮ್ಮ ದೇಶದ ನಿವಾಸಿಗಳೇ ಆಗಿರಬಹುದು; ಆ ಪಕ್ಷದಲ್ಲಿ ನಾವು ನಿಮ್ಮ ಸಂಗಡ ಒಡಂಬಡಿಕೆಮಾಡಿಕೊಳ್ಳುವದು ಹೇಗೆ ಎಂದು ಉತ್ತರಕೊಟ್ಟರು.

8 ಅವರು ಯೆಹೋಶುವನಿಗೆ - ನಾವು ನಿನ್ನ ದಾಸರಾಗಿದ್ದೇವೆನ್ನಲು ಅವನು ಅವರನ್ನು - ನೀವು ಯಾರು, ಎಲ್ಲಿಯವರು ಎಂದು ಕೇಳಿದನು.

9 ಅದಕ್ಕೆ ಅವರು - ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮಮಹತ್ತಿನ ನಿವಿುತ್ತ ಬಹುದೂರ ದೇಶದಿಂದ ಬಂದಿದ್ದೇವೆ. ನಮ್ಮ ಹಿರಿಯರೂ ದೇಶನಿವಾಸಿಗಳೂ ಆತನು ಐಗುಪ್ತದಲ್ಲಿ ನಡಿಸಿದ ಮಹತ್ಕಾರ್ಯಗಳ ಸುದ್ದಿಯನ್ನೂ

10 ಹೆಷ್ಬೋನಿನ ಅರಸನಾದ ಸೀಹೋನ್, ಅಷ್ಟರೋತಿನಲ್ಲಿ ವಾಸವಾಗಿದ್ದ ಬಾಷಾನಿನ ಅರಸನಾದ ಓಗ್ ಎಂಬ ಈ ಇಬ್ಬರು ಅಮೋರಿಯರ ಅರಸರಿಗೆ ಮಾಡಿದ್ದೆಲ್ಲವನ್ನೂ ಕೇಳಿ -

11 ನೀವು ಪ್ರಯಾಣಕ್ಕೋಸ್ಕರ ಬುತ್ತೀ ಕಟ್ಟಿಕೊಂಡು ಹೋಗಿ ಇಸ್ರಾಯೇಲ್ಯರನ್ನು ಎದುರುಗೊಂಡು - ನಾವು ನಿಮ್ಮ ಸೇವಕರು; ನೀವು ನಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳಿರಿ ಎಂಬದಾಗಿ ಅವರನ್ನು ಬೇಡಿಕೊಳ್ಳಿರಿ ಎಂದು ಹೇಳಿ ನಮ್ಮನ್ನು ಕಳುಹಿಸಿದರು.

12 ನಾವು ನಿಮ್ಮನ್ನು ಎದುರುಗೊಳ್ಳುವದಕ್ಕಾಗಿ ಮನೆಬಿಟ್ಟು ಹೊರಟಾಗ ಪ್ರಯಾಣಕ್ಕೋಸ್ಕರ ತೆಗೆದುಕೊಂಡ ಈ ರೊಟ್ಟಿ ಬಿಸಿಯಾಗಿತ್ತು; ಈಗ ಒಣಗಿ ಚೂರುಚೂರಾಗಿದೆ ನೋಡಿರಿ.

13 ನಾವು ದ್ರಾಕ್ಷಾರಸ ತುಂಬಿಸಿಕೊಂಡಿದ್ದ ಈ ಬುದ್ದಲಿಗಳು ಹೊಸವಾಗಿದ್ದವು; ಈಗ ಹರಿದವೆ. ನಮ್ಮ ಬಟ್ಟೆ ಕೆರಗಳು ದೀರ್ಘಪ್ರಯಾಣದಿಂದ ಹಳೆಯವಾದವು ಅಂದರು.

14 ಆಗ ಇಸ್ರಾಯೇಲ್ಯರು ಅವರ ಬುತ್ತಿಯಲ್ಲಿ ಸ್ವಲ್ಪ ತೆಗೆದುಕೊಂಡರು. ಆದರೆ ಯೆಹೋವನನ್ನು ವಿಚಾರಿಸಲಿಲ್ಲ.

15 ಯೆಹೋಶುವನು ಅವರೊಡನೆ - ನಿಮ್ಮನ್ನು ಜೀವದಿಂದುಳಿಸುವೆವೆಂದು ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಂಡನು. ಸಮೂಹಪ್ರಧಾನರೂ ಪ್ರಮಾಣಮಾಡಿದರು.

16 ಒಡಂಬಡಿಕೆಯಾದ ಮೂರು ದಿನಗಳ ಮೇಲೆ ಅವರು ಹತ್ತಿರದವರೂ ತಮ್ಮ ಮಧ್ಯದಲ್ಲಿಯೇ ವಾಸಿಸುವವರೂ ಆಗಿದ್ದಾರೆಂದು ಇಸ್ರಾಯೇಲ್ಯರಿಗೆ ಗೊತ್ತಾಯಿತು.

17 ಹೇಗಂದರೆ - ಇಸ್ರಾಯೇಲ್ಯರು ಮೂರನೆಯ ದಿನದಲ್ಲಿ ಹೊರಟು ಸೇರಿದಂಥ ಗಿಬ್ಯೋನ್, ಕೆಫೀರಾ, ಬೇರೋತ್, ಕಿರ್ಯತ್ಯಾರೀಮ್ ಎಂಬ ಊರುಗಳು ಅವರವೇ ಆಗಿದ್ದವು.

18 ಸಮೂಹಪ್ರಧಾನರು ಇಸ್ರಾಯೇಲ್‍ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣಮಾಡಿದ್ದರಿಂದ ಇಸ್ರಾಯೇಲ್ಯರು ಅವರನ್ನು ಹೊಡೆಯಲಿಲ್ಲ. ಆದರೆ ಸಮೂಹದವರೆಲ್ಲಾ ಪ್ರಧಾನರಿಗೆ ವಿರೋಧವಾಗಿ ಗುಣುಗುಟ್ಟಿದರು.

19 ಆಗ ಪ್ರಧಾನರೆಲ್ಲರೂ ಸರ್ವ ಸಮೂಹದವರಿಗೆ - ನಾವು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣಮಾಡಿದ್ದರಿಂದ ಅವರನ್ನು ಮುಟ್ಟುವದಕ್ಕಾಗದು.

20 ನಾವು ಇಟ್ಟ ಆಣೆಯ ನಿವಿುತ್ತ ದೇವರ ಕೋಪವು ನಮ್ಮ ಮೇಲೆ ಬಾರದಂತೆ ಅವರನ್ನು ಜೀವದಿಂದುಳಿಸಬೇಕು. ಆದರೆ ಒಂದನ್ನು ಮಾಡೋಣ.

21 ಅವರು ಸಮೂಹಕ್ಕೆಲ್ಲಾ ಕಟ್ಟಿಗೆ ಒಡೆಯುವವರೂ ನೀರು ತರುವವರೂ ಆಗಿ ಬದುಕಲಿ ಎಂದು ಹೇಳಿದರು. ಪ್ರಧಾನರ ಮಾತಿನಂತೆಯೇ ಆಯಿತು.

22 ಯೆಹೋಶುವನು ಗಿಬ್ಯೋನ್ಯರನ್ನು ಕರಿಸಿ ಅವರಿಗೆ - ನೀವು ನಮ್ಮ ಮಧ್ಯದಲ್ಲಿ ವಾಸಿಸುವವರಾಗಿದ್ದರೂ ಬಹುದೂರದವರೆಂದು ಹೇಳಿ ನಮ್ಮನ್ನು ವಂಚಿಸಿದ್ದೇಕೆ?

23 ಇದರಿಂದ ನೀವು ಶಾಪಗ್ರಸ್ತರು. ನೀವು ಯಾವಾಗಲೂ ದಾಸರಾಗಿದ್ದು ನನ್ನ ದೇವರ ಮಂದಿರಕ್ಕೆ ಕಟ್ಟಿಗೆ ಒಡೆಯುವವರೂ ನೀರು ತರುವವರೂ ಆಗಿರಬೇಕು ಅಂದನು.

24 ಅವರು ಯೆಹೋಶುವನಿಗೆ - ನಿನ್ನ ದೇವರಾದ ಯೆಹೋವನು ತನ್ನ ಸೇವಕನಾದ ಮೋಶೆಗೆ - ನಾನು ನಿಮಗೆ ಈ ದೇಶವನ್ನೆಲ್ಲಾ ಕೊಡುವಾಗ ನೀವು ಇದರ ಎಲ್ಲಾ ನಿವಾಸಿಗಳನ್ನು ಸಂಹರಿಸಿಬಿಡಬೇಕೆಂದು ಆಜ್ಞಾಪಿಸಿದ್ದನ್ನು ಕೇಳಿ ನಮ್ಮ ಪ್ರಾಣ ತೆಗೆಯುವಿರೆಂದು ಹೆದರಿ ಹೀಗೆ ಮಾಡಿದೆವು.

25 ಇಗೋ, ಈಗ ನಾವು ನಿನ್ನ ಕೈಯಲ್ಲಿರುತ್ತೇವೆ; ನಿನಗೆ ಒಳ್ಳೇದೆಂದೂ ನ್ಯಾಯವೆಂದೂ ತೋರುವದನ್ನು ನಮಗೆ ಮಾಡು ಎಂದು ಉತ್ತರಕೊಟ್ಟರು.

26 ಯೆಹೋಶುವನು ತಾನು ಮೊದಲು ಹೇಳಿದಂತೆಯೇ ಮಾಡಿದನು. ಅವನು ಅವರನ್ನು ಇಸ್ರಾಯೇಲ್ಯರ ಕೈಯಿಂದ ಸಂಹೃತರಾಗದಂತೆ ತಪ್ಪಿಸಿ

27 ಸಮೂಹಕ್ಕೋಸ್ಕರವೂ ಯೆಹೋವನು ಆದುಕೊಳ್ಳುವ ಸ್ಥಳದಲ್ಲಿ ಆತನ ಯಜ್ಞವೇದಿಗೋಸ್ಕರವೂ ಕಟ್ಟಿಗೆ ಒಡೆಯುವವರನ್ನಾಗಿಯೂ ನೀರು ತರುವವರನ್ನಾಗಿಯೂ ನೇವಿುಸಿದನು. ಅವರು ಇಂದಿನವರೆಗೂ ಅದೇ ಕೆಲಸ ಮಾಡುತ್ತಾರೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು