Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 6 - ಕನ್ನಡ ಸತ್ಯವೇದವು J.V. (BSI)

1 (ಯೆರಿಕೋವಿನವರು ಇಸ್ರಾಯೇಲ್ಯರಿಗೆ ಹೆದರಿ ತಮ್ಮ ಪಟ್ಟಣದ ಬಾಗಲುಗಳನ್ನು ಭದ್ರವಾಗಿ ಮುಚ್ಚಿಕೊಂಡರು. ಯಾರೂ ಒಳಗೆ ಹೋಗಲಿಲ್ಲ; ಹೊರಗೆ ಬರಲಿಲ್ಲ.)

2 ಆಗ ಯೆಹೋವನು ಯೆಹೋಶುವನಿಗೆ - ನೋಡು, ನಾನು ಯೆರಿಕೋವನ್ನೂ ಅದರ ಅರಸನನ್ನೂ ಯುದ್ಧವೀರರನ್ನೂ ನಿನ್ನ ಕೈಗೆ ಒಪ್ಪಿಸಿದ್ದೇನೆ.

3 ನಿಮ್ಮ ಭಟರೆಲ್ಲಾ ಆರು ದಿವಸಗಳವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಲಿ.

4 ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಮಂಜೂಷದ ಮುಂದೆ ನಡೆಯಲಿ. ಏಳನೆಯ ದಿವಸ ನೀವು ಪಟ್ಟಣವನ್ನು ಏಳುಸಾರಿ ಸುತ್ತಬೇಕು;

5 ಯಾಜಕರು ಕೊಂಬುಗಳನ್ನು ಊದಬೇಕು. ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಮಹತ್ತರವಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವದು; ಪ್ರತಿಯೊಬ್ಬನೂ ನೆಟ್ಟಗೆ ಒಳನುಗ್ಗಬಹುದು ಎಂದು ಹೇಳಿದನು.


ಯೆಹೋವನು ಇಸ್ರಾಯೇಲ್ಯರಿಗೆ ಯೆರಿಕೋವನ್ನು ಸ್ವಾಧೀನಪಡಿಸಿದ್ದು

6 ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ - ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ; ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಯೆಹೋವನ ಮಂಜೂಷದ ಮುಂದೆ ನಡೆಯಲಿ ಅಂದನು.

7 ಮತ್ತು ಅವನು ಜನರಿಗೆ - ಹೋಗಿ ಪಟ್ಟಣವನ್ನು ಸುತ್ತಿರಿ. ಯುದ್ಧಸನ್ನದ್ಧರೆಲ್ಲರೂ ಯೆಹೋವನ ಮಂಜೂಷದ ಮುಂದೆ ಹೋಗಲಿ ಎಂದು ಹೇಳಿದನು.

8 ಯೆಹೋಶುವನು ಆಜ್ಞಾಪಿಸಿದಂತೆಯೇ ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆದರು. ಯೆಹೋವನ ಒಡಂಬಡಿಕೆಯ ಮಂಜೂಷವು ಅವರ ಹಿಂದೆ ಹೋಯಿತು.

9 ಯುದ್ಧಸನ್ನದ್ಧರಾದವರು ಕೊಂಬುಗಳನ್ನು ಊದುತ್ತಿದ್ದ ಯಾಜಕರ ಮುಂದೆ ಇದ್ದರು. ಹಿಂದಣ ದಳವು ಮಂಜೂಷದ ಹಿಂದಿತ್ತು. ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.

10 ಯೆಹೋಶುವನು ಜನರಿಗೆ - ನೀವು ಈಗ ಆರ್ಭಟಿಸಬಾರದು; ನಿಮ್ಮ ಧ್ವನಿಯು ಕೇಳಿಸದಿರಲಿ, ನಿಮ್ಮ ಬಾಯಿಂದ ಒಂದು ಮಾತಾದರೂ ಹೊರಡದಿರಲಿ; ಆರ್ಭಟಿಸಿರೆಂದು ನಾನು ಹೇಳುವ ದಿವಸದಲ್ಲಿ ಮಾತ್ರ ಆರ್ಭಟಿಸಿರಿ ಎಂದು ಆಜ್ಞಾಪಿಸಿದನು.

11 ಅವನು ಯೆಹೋವನ ಮಂಜೂಷವನ್ನು ಒಂದು ಸಾರಿ ಪಟ್ಟಣವನ್ನು ಸುತ್ತಿಸಿದ ಮೇಲೆ ಅವರು ತಿರಿಗಿ ಪಾಳೆಯಕ್ಕೆ ಬಂದು ರಾತ್ರಿಕಳೆದರು.

12 ಯೆಹೋಶುವನು ಬೆಳಿಗ್ಗೆ ಎದ್ದನು. ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡು ಹೊರಟರು.

13 ಏಳು ಮಂದಿ ಯಾಜಕರು ಕೊಂಬುಗಳನ್ನು ಊದುತ್ತಾ ಯೆಹೋವನ ಮಂಜೂಷದ ಮುಂದೆ ನಡೆದರು. ಯುದ್ಧಸನ್ನದ್ಧರು ಅವರ ಮುಂದಿದ್ದರು; ಹಿಂದಣ ದಳವು ಯೆಹೋವನ ಮಂಜೂಷದ ಹಿಂದಿತ್ತು. ಕೊಂಬುಗಳನ್ನು ಊದುತ್ತಲೇ ಹೋಗುತ್ತಿದ್ದರು.

14 ಹೀಗೆ ಎರಡನೆಯ ದಿನದಲ್ಲಿಯೂ ಪಟ್ಟಣವನ್ನು ಸುತ್ತಿ ಪಾಳೆಯಕ್ಕೆ ಹಿಂದಿರುಗಿದರು.

15 ಆರು ದಿವಸ ಈ ಪ್ರಕಾರ ಮಾಡಿದರು. ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ಪಟ್ಟಣವನ್ನು ಏಳು ಸಾರಿ ಸುತ್ತಿದರು. ಈ ದಿವಸದಲ್ಲಿ ಮಾತ್ರ ಅದನ್ನು ಏಳು ಸಾರಿ ಸುತ್ತಿದರು.

16 ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಲು ಯೆಹೋಶುವನು ಜನರಿಗೆ - ಆರ್ಭಟಿಸಿರಿ, ಯೆಹೋವನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ.

17 ಇದೂ ಇದರಲ್ಲಿರುವದೆಲ್ಲವೂ ಕೇವಲ ಯೆಹೋವನ ಸೊತ್ತೇ ಎಂದು ತಿಳಿಯಿರಿ. ಸೂಳೆಯಾದ ರಾಹಾಬಳೂ ಅವಳ ಸಂಗಡ ಮನೆಯಲ್ಲಿರುವವರೆಲ್ಲರೂ ಉಳಿಯಲಿ; ನಾವು ಕಳುಹಿಸಿದ ದೂತರನ್ನು ಅವಳು ಅಡಗಿಸಿಟ್ಟಳಲ್ಲಾ.

18 ನೀವಾದರೋ ಯೆಹೋವನಿಗೆ ಮೀಸಲಾದ ವಸ್ತುಗಳ ವಿಷಯದಲ್ಲಿ ಜಾಗರೂಕತೆಯಿಂದಿರಬೇಕು. ನೀವು ಅವುಗಳಲ್ಲಿ ಯಾವದನ್ನಾದರೂ ತೆಗೆದುಕೊಂಡರೆ ಇಸ್ರಾಯೇಲ್ಯರ ಪಾಳೆಯವು ಶಾಪಕ್ಕೆ ಗುರಿಯಾಗಿ ಕೆಟ್ಟೀತು.

19 ಎಲ್ಲಾ ಬೆಳ್ಳಿಬಂಗಾರವೂ ತಾಮ್ರ ಕಬ್ಬಿಣಗಳ ಪಾತ್ರೆಗಳೂ ಯೆಹೋವನ ಮೀಸಲಾಗಿದ್ದು ಆತನ ಭಂಡಾರಕ್ಕೆ ಸೇರತಕ್ಕವುಗಳು ಅಂದನು.

20 ಕೂಡಲೆ ಜನರ ಆರ್ಭಟವೂ ಕೊಂಬುಗಳ ಧ್ವನಿಯೂ ಉಂಟಾದವು. ಜನರು ಕೊಂಬಿನ ಧ್ವನಿಯನ್ನು ಕೇಳಿ ಮಹತ್ತರವಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು. ಪ್ರತಿಯೊಬ್ಬನೂ ನೆಟ್ಟಗೆ ಪಟ್ಟಣದಲ್ಲಿ ನುಗ್ಗಿ ಹೋದನು. ಅದು ಅವರಿಗೆ ಸ್ವಾಧೀನವಾಯಿತು.

21 ಅವರು ಪಟ್ಟಣದಲ್ಲಿದ್ದ ಗಂಡಸರನ್ನೂ ಹೆಂಗಸರನ್ನೂ ಹುಡುಗರನ್ನೂ ಮುದುಕರನ್ನೂ ದನಕುರಿಕತ್ತೆಗಳನ್ನೂ ನಿಶ್ಶೇಷವಾಗಿ ಕತ್ತಿಯಿಂದ ಸಂಹರಿಸಿಬಿಟ್ಟರು.

22 ಯೆಹೋಶುವನು ದೇಶವನ್ನು ಸಂಚರಿಸಿ ನೋಡಿದ್ದ ಇಬ್ಬರು ಮನುಷ್ಯರಿಗೆ - ನೀವು ಆ ಸೂಳೆಯ ಮನೆಗೆ ಹೋಗಿ ಅವಳಿಗೆ ಪ್ರಮಾಣ ಮಾಡಿದಂತೆ ಅವಳನ್ನೂ ಅವಳಿಗಿರುವದೆಲ್ಲವನ್ನೂ ಹೊರಗೆ ತೆಗೆದುಕೊಂಡು ಬನ್ನಿರಿ ಎಂದು ಹೇಳಲು

23 ಆ ಯೌವನಸ್ಥರು ಹೋಗಿ ರಾಹಾಬಳನ್ನೂ ಅವಳ ತಂದೆತಾಯಿಗಳನ್ನೂ ಸಹೋದರರನ್ನೂ ಅವಳಿಗಿರುವದೆಲ್ಲವನ್ನೂ ಅವಳ ಗೋತ್ರದ ಎಲ್ಲಾ ಜನರನ್ನೂ ತಂದು ಇಸ್ರಾಯೇಲ್ಯರ ಪಾಳೆಯದ ಹೊರಗೆ ಇಟ್ಟರು.

24 ಇಸ್ರಾಯೇಲ್ಯರು ಪಟ್ಟಣವನ್ನೂ ಅದರಲ್ಲಿರುವದೆಲ್ಲವನ್ನೂ ಬೆಂಕಿಯಿಂದ ಸುಟ್ಟರು. ಆದರೆ ಬೆಳ್ಳಿಬಂಗಾರವನ್ನೂ ತಾಮ್ರ ಕಬ್ಬಿಣಗಳ ಪಾತ್ರೆಗಳನ್ನೂ ಯೆಹೋವನ ಆಲಯದ ಭಂಡಾರಕ್ಕೆ ಕೊಟ್ಟರು.

25 ಸೂಳೆಯಾದ ರಾಹಾಬಳು ಯೆರಿಕೋ ಪಟ್ಟಣವನ್ನು ಸಂಚರಿಸಿನೋಡುವದಕ್ಕೆ ಬಂದಿದ್ದ ಯೆಹೋಶುವನ ದೂತರನ್ನು ಅಡಗಿಸಿಟ್ಟದರಿಂದ ಅವನು ಅವಳನ್ನೂ ಅವಳ ತಂದೆಯ ಮನೆಯವರನ್ನೂ ಅವಳಿಗಿರುವದೆಲ್ಲವನ್ನೂ ಉಳಿಸಿದನು. ಅವಳು ಇಂದಿನವರೆಗೂ ಇಸ್ರಾಯೇಲ್ಯರಲ್ಲಿ ವಾಸವಾಗಿದ್ದಾಳೆ.

26 ಅದೇ ಸಮಯದಲ್ಲಿ ಯೆಹೋಶುವನು ಇಸ್ರಾಯೇಲ್ಯರಿಂದ ಪ್ರಮಾಣಮಾಡಿಸಿ ಅವರಿಗೆ - ಈ ಯೆರಿಕೋ ಪಟ್ಟಣವನ್ನು ಕಟ್ಟುವದಕ್ಕೆ ಕೈ ಹಚ್ಚುವ ಮನುಷ್ಯನು ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಿರಲಿ. ಅಂಥವನು ಅದಕ್ಕೆ ಅಸ್ತಿವಾರ ಹಾಕುವಾಗ ತನ್ನ ಹಿರೀ ಮಗನನ್ನೂ ಬಾಗಲುಗಳನ್ನಿಡುವಾಗ ಕಿರೀ ಮಗನನ್ನೂ ಕಳೆದುಕೊಳ್ಳಲಿ ಎಂದು ಹೇಳಿದನು.

27 ಯೆಹೋವನು ಯೆಹೋಶುವನ ಸಂಗಡ ಇದ್ದದರಿಂದ ಅವನು ದೇಶದಲ್ಲೆಲ್ಲಾ ಕೀರ್ತಿಗೊಂಡನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು