ಯೆಹೋಶುವ 4 - ಕನ್ನಡ ಸತ್ಯವೇದವು J.V. (BSI)ಗಿಲ್ಗಾಲಿನಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದ್ದು 1 ಜನರೆಲ್ಲಾ ಯೊರ್ದನಿನ ಆಚೆಗೆ ಸೇರಿದ ಮೇಲೆ ಯೆಹೋವನು ಯೆಹೋಶುವನಿಗೆ - 2 ನೀವು ಜನರೊಳಗಿಂದ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ - 3 ಯೊರ್ದನಿನ ಮಧ್ಯದಲ್ಲಿ ಯಾಜಕರು ನಿಂತಿರುವ ಸ್ಥಳದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ಅವುಗಳನ್ನು ನಿಮ್ಮ ಸಂಗಡ ಈಚೇ ದಡಕ್ಕೆ ತಂದು ನೀವು ಈ ರಾತ್ರಿ ಇಳುಕೊಳ್ಳುವ ಸ್ಥಳದಲ್ಲಿ ನಿಲ್ಲಿಸಿರಿ ಎಂದು ಆಜ್ಞಾಪಿಸಬೇಕೆಂದು ಹೇಳಿದನು. 4 ಆಗ ಯೆಹೋಶುವನು ತಾನು ಇಸ್ರಾಯೇಲ್ಯರೊಳಗಿಂದ ಕುಲಕ್ಕೆ ಒಬ್ಬನಂತೆ ಆರಿಸಿಕೊಂಡ ಹನ್ನೆರಡು ಮಂದಿಯನ್ನು ಕರೆದು ಅವರಿಗೆ - 5 ನೀವು ನಿಮ್ಮ ದೇವರಾದ ಯೆಹೋವನ ಮಂಜೂಷದ ಮುಂದಾಗಿ ಯೊರ್ದನಿನ ಮಧ್ಯಕ್ಕೆ ಹೋಗಿ ಇಸ್ರಾಯೇಲ್ ಕುಲಗಳ ಸಂಖ್ಯೆಗೆ ಸರಿಯಾಗುವಂತೆ ಪ್ರತಿಯೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಬನ್ನಿರಿ. 6 ಅವು ನಿಮ್ಮ ಮಧ್ಯದಲ್ಲಿ ಗುರುತಾಗಿರುವವು. ಮುಂದಣ ಕಾಲದಲ್ಲಿ ನಿಮ್ಮ ಮಕ್ಕಳು - ಈ ಕಲ್ಲುಗಳು ಏನು ಸೂಚಿಸುತ್ತವೆಂದು ನಿಮ್ಮನ್ನು ಕೇಳುವಾಗ 7 ನೀವು ಅವರಿಗೆ - ಯೆಹೋವನ ಒಡಂಬಡಿಕೆಯ ಮಂಜೂಷವು ಯೊರ್ದನನ್ನು ದಾಟುವಾಗ ಅದರ ಮುಂದೆ ಯೊರ್ದನಿನ ನೀರು ನಿಂತುಹೋಯಿತೆಂದು ಹೇಳಿರಿ. ಯೊರ್ದನಿನ ನೀರು ನಿಂತುಹೋಯಿತೆಂಬದಕ್ಕೆ ಈ ಕಲ್ಲುಗಳು ಇಸ್ರಾಯೇಲ್ಯರಿಗೆ ಸದಾಕಾಲವೂ ಸಾಕ್ಷಿಗಳಾಗಿರುವವು ಅಂದನು. 8 ಇಸ್ರಾಯೇಲ್ಯರು ಯೆಹೋಶುವನು ಆಜ್ಞಾಪಿಸಿದಂತೆಯೇ ಮಾಡಿದರು. ಯೆಹೋವನು ಯೆಹೋಶುವನಿಗೆ ಹೇಳಿದ ಪ್ರಕಾರ ಅವರು ಇಸ್ರಾಯೇಲ್ಯರ ಕುಲಸಂಖ್ಯೆಗನುಸಾರವಾಗಿ ಯೊರ್ದನಿನ ಮಧ್ಯದಿಂದ ಹನ್ನೆರಡು ಕಲ್ಲುಗಳನ್ನು ಎತ್ತಿ ತಾವು ಇಳುಕೊಳ್ಳುವ ಸ್ಥಳಕ್ಕೆ ತಂದು ಅಲ್ಲಿ ಅವುಗಳನ್ನು ನಿಲ್ಲಿಸಿದರು. 9 ಇದಲ್ಲದೆ ಯೆಹೋಶುವನು ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ನಿಂತಿದ್ದ ಸ್ಥಳದಲ್ಲಿ ನಿಲ್ಲಿಸಿದನು. ಅವು ಇಂದಿನವರೆಗೂ ಅಲ್ಲೇ ಇರುತ್ತವೆ. 10 ಮೋಶೆಯು ಆಜ್ಞಾಪಿಸಿದಂತೆ ಯೆಹೋಶುವನು ಜನರಿಗೆ ತಿಳಿಸಿದ ಯೆಹೋವನ ಅಪ್ಪಣೆಗಳನ್ನೆಲ್ಲಾ ಅವರು ನೆರವೇರಿಸುವವರೆಗೂ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲೇ ನಿಂತರು. ಜನರು ಬೇಗನೆ ಹೊಳೆದಾಟಿದರು. 11 ಜನರೆಲ್ಲಾ ಆಚೆಗೆ ಸೇರಿದ ಮೇಲೆ ಯಾಜಕರು ಯೆಹೋವನ ಮಂಜೂಷಸಹಿತವಾಗಿ ದಾಟಿ ಜನರ ಮುಂಗಡೆಯಲ್ಲಿ ಹೋದರು. 12 ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಮೋಶೆಯು ತಮಗೆ ಆಜ್ಞಾಪಿಸಿದಂತೆ ಯುದ್ಧಸನ್ನದ್ಧರಾಗಿ ಇಸ್ರಾಯೇಲ್ಯರ ಮುಂದಾಗಿ ಹೊರಟು ಹೊಳೆದಾಟಿದರು. 13 ಅವರು ಸುಮಾರು ನಾಲ್ವತ್ತು ಸಾವಿರ ಭಟರಾಗಿದ್ದು ಯುದ್ಧಮಾಡುವದಕ್ಕಾಗಿ ಯೆಹೋವನ ಮುಂದೆ ಯೆರಿಕೋವಿನ ಬೈಲಿಗೆ ಬಂದರು. 14 ಆ ದಿವಸ ಯೆಹೋವನು ಯೆಹೋಶುವನನ್ನು ಇಸ್ರಾಯೇಲ್ಯರೆಲ್ಲರ ದೃಷ್ಟಿಯಲ್ಲಿ ಘನಪಡಿಸಿದ್ದರಿಂದ ಅವರು ಮೋಶೆಯಲ್ಲಿ ಹೇಗೋ ಹಾಗೆಯೇ ಇವನಲ್ಲಿಯೂ ಇವನು ಜೀವದಿಂದಿದ್ದ ಕಾಲವೆಲ್ಲಾ ಭಯಭಕ್ತಿಯುಳ್ಳವರಾಗಿದ್ದರು. 15-16 ಯೆಹೋವನು ಯೆಹೋಶುವನಿಗೆ - ಆಜ್ಞಾಶಾಸನಗಳ ಮಂಜೂಷವನ್ನು ಹೊತ್ತ ಯಾಜಕರಿಗೆ ಯೊರ್ದನಿನಿಂದ ಮೇಲೆ ಬರಲಾಜ್ಞಾಪಿಸೆಂದು ಹೇಳಲು 17 ಅವನು ಆ ಯಾಜಕರಿಗೆ ಮೇಲೆ ಬರಬೇಕೆಂದು ವಿಧಿಸಿದನು. 18 ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನಿಂದ ಮೇಲೆ ಬಂದು ಒಣನೆಲದಲ್ಲಿ ತಮ್ಮ ಕಾಲುಗಳನ್ನಿಟ್ಟ ಕೂಡಲೆ ನೀರು ಮುಂಚಿನಂತೆ ಬಂದು ಯೊರ್ದನ್ ಹೊಳೆಯು ದಡಮೀರಿ ಹರಿಯಹತ್ತಿತು. 19 ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಯೊರ್ದನನ್ನು ದಾಟಿ ಯೆರಿಕೋವಿನ ಪೂರ್ವ ಪ್ರಾಂತದಲ್ಲಿರುವ ಗಿಲ್ಗಾಲೆಂಬಲ್ಲಿ ಇಳುಕೊಂಡರು. 20 ಯೆಹೋಶುವನು ಯೊರ್ದನಿನಿಂದ ತೆಗೆದುಕೊಂಡು ಬಂದ ಹನ್ನೆರಡು ಕಲ್ಲುಗಳನ್ನು ಗಿಲ್ಗಾಲಿನಲ್ಲೇ ನಿಲ್ಲಿಸಿ ಇಸ್ರಾಯೇಲ್ಯರಿಗೆ - 21 ಮುಂದಣ ಕಾಲದಲ್ಲಿ ನಿಮ್ಮ ಮಕ್ಕಳು ಈ ಕಲ್ಲುಗಳನ್ನು ಯಾಕೆ ನಿಲ್ಲಿಸಿದ್ದಾರೆಂದು ನಿಮ್ಮನ್ನು ಕೇಳಿದರೆ ನೀವು ಅವರಿಗೆ - 22 ಇಸ್ರಾಯೇಲ್ಯರು ಒಣನೆಲವಾಗಿದ್ದ ಈ ಯೊರ್ದನನ್ನು ದಾಟಿ ಬಂದದ್ದಕ್ಕಾಗಿ ಎಂದು ಹೇಳಿರಿ. 23 ನಿಮ್ಮ ದೇವರಾದ ಯೆಹೋವನು ನಮ್ಮ ಮುಂದೆ ಕೆಂಪು ಸಮುದ್ರವನ್ನು ಬತ್ತಿಸಿ ನಮ್ಮನ್ನು ದಾಟಿಸಿದಂತೆ ಈಗ ನಿಮ್ಮ ಮುಂದೆ ಈ ಯೊರ್ದನನ್ನು ಬತ್ತಿಸಿ ನಿಮ್ಮನ್ನು ದಾಟಿಸಿದ್ದಾನೆ. 24 ಇದರಿಂದ ಭೂನಿವಾಸಿಗಳೆಲ್ಲರೂ ಯೆಹೋವನ ಹಸ್ತವು ಪರಾಕ್ರಮವುಳ್ಳದ್ದೆಂದು ತಿಳಿದುಕೊಳ್ಳುವರು. ನಿಮ್ಮ ದೇವರಾದ ಯೆಹೋವನಿಗೆ ಯಾವಾಗಲೂ ಭಯಪಡುವರು ಅಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India