ಯೆಹೋಶುವ 3 - ಕನ್ನಡ ಸತ್ಯವೇದವು J.V. (BSI)ಯೊರ್ದನ್ ಹೊಳೆಯನ್ನು ದಾಟಿದ್ದು 1 ಯೆಹೋಶುವನು ಬೆಳಿಗ್ಗೆ ಎದ್ದನು; ಅವನೂ ಇಸ್ರಾಯೇಲ್ಯರೆಲ್ಲರೂ ಶಿಟ್ಟೀಮನ್ನು ಬಿಟ್ಟು ಯೊರ್ದನಿಗೆ ಬಂದು ಅದನ್ನು ದಾಟುವ ಮೊದಲು ಅಲ್ಲಿ ಇಳುಕೊಂಡರು. 2 ಮೂರು ದಿನಗಳ ಮೇಲೆ ಜನಾಧಿಪತಿಗಳು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ - 3 ಯಾಜಕರಾದ ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಮಂಜೂಷ ಹೊತ್ತಿರುವದನ್ನು ಕಂಡಕೂಡಲೆ ನೀವೂ ನಿಮ್ಮ ಸ್ಥಳವನ್ನು ಬಿಟ್ಟು ಅದರ ಹಿಂದೆ ಹೋಗಿರಿ. 4 ಆದರೆ ನಿಮಗೂ ಮಂಜೂಷಕ್ಕೂ ಸುಮಾರು ಎರಡು ಸಾವಿರ ಮೊಳ ಅಂತರವಿರಬೇಕು; ಹತ್ತಿರ ಹೋಗಬಾರದು. ಹೀಗೆ ನೀವು ಹೋಗತಕ್ಕ ಮಾರ್ಗವು ನಿಮಗೆ ಗೊತ್ತಾಗುವದು; ಆ ಮಾರ್ಗದಲ್ಲಿ ನೀವು ಮುಂಚೆ ಬರಲಿಲ್ಲವಲ್ಲಾ ಅಂದರು. 5 ಇದಲ್ಲದೆ ಯೆಹೋಶುವನು ಜನರಿಗೆ - ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ; ಯೆಹೋವನು ನಾಳೆ ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ನಡಿಸುವನು ಎಂದು ಹೇಳಿದನು. 6 ಮತ್ತು ಯಾಜಕರಿಗೆ - ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರ ಮುಂದಾಗಿ ನಡೆದು ಹೊಳೆ ದಾಟಿರಿ ಎಂದು ಆಜ್ಞಾಪಿಸಲು ಅವರು ಆ ಮಂಜೂಷವನ್ನು ಹೊತ್ತುಕೊಂಡು ಅವರ ಮುಂದಾಗಿ ಹೋದರು. 7 ಆಗ ಯೆಹೋವನು ಯೆಹೋಶುವನಿಗೆ - ನಾನು ಇಂದಿನಿಂದ ನಿನ್ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸುವೆನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನೆಂಬದು ಅವರಿಗೆ ಗೊತ್ತಾಗುವದು. 8 ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನ್ ಹೊಳೆಯ ಅಂಚಿಗೆ ಬಂದ ಕೂಡಲೆ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು ಎಂದು ಹೇಳಿದನು. 9 ಆಗ ಯೆಹೋಶುವನು ಇಸ್ರಾಯೇಲ್ಯರಿಗೆ - ಇಲ್ಲಿ ಬಂದು ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ ಎಂದು ಹೇಳಿ - 10 ಚೈತನ್ಯಸ್ವರೂಪನಾದ ದೇವರು ನಿಮ್ಮ ಮಧ್ಯದಲ್ಲಿರುತ್ತಾನೆಂಬದೂ ಆತನು ಕಾನಾನ್ಯರು, ಹಿತ್ತಿಯರು, ಹಿವ್ವಿಯರು, ಪೆರಿಜೀಯರು, ಗಿರ್ಗಾಷಿಯರು, ಅಮೋರಿಯರು, ಯೆಬೂಸಿಯರು ಇವರನ್ನೆಲ್ಲಾ ನಿಮ್ಮ ಮುಂದೆ ತಪ್ಪದೆ ಹೊರಡಿಸುವನೆಂಬದೂ 11 ನಿಮಗೆ ಗೊತ್ತಾಗುವದು ಹೇಗಂದರೆ - ಸರ್ವಲೋಕದ ಒಡೆಯನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದಾಗಿ ಹೋಗಿ ಯೊರ್ದನಿನಲ್ಲಿ ಇಳಿಯುವದು. 12 (ನೀವಾದರೋ ಇಸ್ರಾಯೇಲ್ ಕುಲಗಳಿಂದ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಿರಿ.) 13 ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಯೊರ್ದನ್ ಹೊಳೆಯ ನೀರಲ್ಲಿ ಇಡುತ್ತಲೇ ಮೇಲಣಿಂದ ಬರುವ ನೀರು ಮುಂದೆ ಹೋಗದೆ ಅಲ್ಲೇ ರಾಶಿಯಾಗಿ ನಿಂತುಕೊಳ್ಳುವದು ಎಂದು ತಿಳಿಸಿದನು. 14 ಜನರು ಯೊರ್ದನ್ ಹೊಳೆಯನ್ನು ದಾಟುವದಕ್ಕೋಸ್ಕರ ತಮ್ಮ ಡೇರೆಗಳನ್ನು ಕಿತ್ತುಕೊಂಡು ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು. 15 ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಅದ್ದುತ್ತಲೇ ಸುಗ್ಗೀಕಾಲದಲ್ಲೆಲ್ಲಾ ದಡಮೀರಿ ಹರಿಯುವ ಯೊರ್ದನ್ ಹೊಳೆಯ ನೀರು ನಿಂತು ಹೋಯಿತು. 16 ಮೇಲಣಿಂದ ಬರುವ ನೀರು ಬಹುದೂರದಲ್ಲಿದ್ದ ಚಾರೆತಾನಿನ ಹತ್ತಿರವಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತುಕೊಂಡಿತು. ಕೆಳಗಣ ನೀರು ಅರಾಬಾ ತಗ್ಗಿನಲ್ಲಿರುವ ಲವಣ ಸಮುದ್ರಕ್ಕೆ ಹರಿದುಹೋಯಿತು. ಜನರು ಯೆರಿಕೋವಿನ ಎದುರಿನಲ್ಲಿ ಹೊಳೆದಾಟಿದರು. 17 ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಈ ಪ್ರಕಾರ ಜನರೆಲ್ಲಾ ಯೊರ್ದನಿನ ಆಚೆಗೆ ಸೇರಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India