Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 24 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲ್ಯರು ತಾವು ಯೆಹೋವನನ್ನೇ ಸೇವಿಸುವೆವೆಂದು ಯೆಹೋಶುವನೊಡನೆ ಪ್ರಮಾಣಮಾಡಿದ್ದು

1 ತರುವಾಯ ಯೆಹೋಶುವನು ಇಸ್ರಾಯೇಲ್ಯರ ಎಲ್ಲಾ ಕುಲದವರನ್ನು ಶೆಕೆವಿುನಲ್ಲಿ ಕೂಟಕ್ಕೆ ಕರಿಸಲು ಅವರ ಹಿರಿಯರೂ ಪ್ರಧಾನರೂ ನ್ಯಾಯಾಧಿಪತಿಗಳೂ ಅಧಿಕಾರಿಗಳೂ ಬಂದು ದೇವರ ಸನ್ನಿಧಿಯಲ್ಲಿ ಕಾಣಿಸಿಕೊಂಡರು.

2 ಯೆಹೋಶುವನು ಅವರೆಲ್ಲರಿಗೆ - ನಿಮ್ಮ ದೇವರಾದ ಯೆಹೋವನು ಹೇಳುವದೇನಂದರೆ - ಅಬ್ರಹಾಮ್, ನಾಹೋರ್ ಎಂಬವರ ತಂದೆಯಾದ ತೆರಹ ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ [ಯೂಫ್ರೇಟೀಸ್] ಹೊಳೆಯ ಆಚೆಯಲ್ಲಿದ್ದು ಅನ್ಯದೇವತೆಗಳನ್ನು ಪೂಜಿಸುತ್ತಿದ್ದರು.

3 ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರತಂದು ಕಾನಾನ್ ದೇಶದಲ್ಲೆಲ್ಲಾ ಸಂಚಾರ ಮಾಡಿಸಿ ಇಸಾಕನೆಂಬ ಮಗನನ್ನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆನು.

4 ಇಸಾಕನಿಗೆ ಯಾಕೋಬ್, ಏಸಾವ್ ಎಂಬಿಬ್ಬರು ಮಕ್ಕಳನ್ನು ಅನುಗ್ರಹಿಸಿ ಏಸಾವನಿಗೆ ಸೇಯೀರ್ ಪರ್ವತವನ್ನು ಸ್ವಾಸ್ತ್ಯವಾಗಿ ದಯಪಾಲಿಸಿದೆನು. ಯಾಕೋಬನಾದರೋ ತನ್ನ ಮಕ್ಕಳ ಸಹಿತವಾಗಿ ಐಗುಪ್ತ ದೇಶಕ್ಕೆ ಹೋದನು.

5 ತರುವಾಯ ನಾನು ಮೋಶೆ ಆರೋನರನ್ನು ಕಳುಹಿಸಿ ಆ ಐಗುಪ್ತ್ಯರಲ್ಲಿ ಅನೇಕ ಮಹತ್ಕಾರ್ಯಗಳನ್ನು ನಡಿಸಿ ಅವರನ್ನು ಬಾಧಿಸಿ ನಿಮ್ಮನ್ನು ಹೊರಗೆ ಕರತಂದೆನು.

6 ನಿಮ್ಮ ಪಿತೃಗಳು ಐಗುಪ್ತದಿಂದ ಬಿಡುಗಡೆಯಾಗಿ ಕೆಂಪುಸಮುದ್ರಕ್ಕೆ ಬರುತ್ತಿರುವಾಗ ಐಗುಪ್ತ್ಯರು ರಥಾಶ್ವಬಲಗಳ ಸಹಿತವಾಗಿ ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿದರು.

7 ಆಗ ಅವರು ಯೆಹೋವನಾದ ನನಗೆ ಮೊರೆಯಿಡಲು ನಾನು ಅವರಿಗೂ ಐಗುಪ್ತ್ಯರಿಗೂ ಮಧ್ಯದಲ್ಲಿ ಕಾರ್ಗತ್ತಲೆಯನ್ನುಂಟುಮಾಡಿದೆನು. ಇದಲ್ಲದೆ ನಾನು ಐಗುಪ್ತ್ಯರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಚ್ಚಿಬಿಟ್ಟೆನು. ನಾನು ಐಗುಪ್ತದಲ್ಲಿ ಏನೇನು ಮಾಡಿದೆನೆಂಬದಕ್ಕೆ ನೀವು ಸಾಕ್ಷಿಗಳಾಗಿದ್ದೀರಿ.

8 ನೀವು ಬಹುಕಾಲದವರೆಗೆ ಅರಣ್ಯದಲ್ಲಿದ್ದನಂತರ ನಿಮ್ಮನ್ನು ಯೊರ್ದನಿನ ಆಚೆಯಲ್ಲಿ ಅಮೋರಿಯರ ದೇಶಕ್ಕೆ ಕರತಂದೆನು. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈಗೆ ಕೊಟ್ಟುಬಿಟ್ಟೆನು. ನೀವು ಅವರ ದೇಶವನ್ನು ಸ್ವತಂತ್ರಿಸಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲಿ ಸಂಹರಿಸಿದೆನು.

9 ಅನಂತರ ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು ಇಸ್ರಾಯೇಲ್ಯರಾದ ನಿಮಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಎದ್ದು ನಿಮ್ಮನ್ನು ಶಪಿಸುವದಕ್ಕೋಸ್ಕರ ಬೆಯೋರನ ಮಗನಾದ ಬಿಳಾಮನನ್ನು ಕರೇಕಳುಹಿಸಿದನು.

10 ಆದರೆ ನಾನು ಆ ಬಿಳಾಮನಿಗೆ ಸಮ್ಮತಿಕೊಡಲಿಲ್ಲವಾದದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆನು.

11 ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಆಗ ಯೆರಿಕೋವಿನವರು, ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷಿಯರು, ಹಿವ್ವಿಯರು, ಯೆಬೂಸಿಯರು ಇವರೆಲ್ಲಾ ನಿಮಗೆ ವಿರೋಧವಾಗಿ ಯುದ್ಧಕ್ಕೆ ಬರಲು ನಾನು ಅವರೆಲ್ಲರನ್ನೂ ನಿಮ್ಮ ಕೈಗೆ ಒಪ್ಪಿಸಿದೆನು.

12 ಇದಲ್ಲದೆ ನಾನು ಕಡಜದ ಹುಳಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆನು. ಅವು ಅಮೋರಿಯರ ಅರಸರಿಬ್ಬರನ್ನೂ ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿಬಿಲ್ಲುಗಳಿಂದಾದದ್ದಲ್ಲ.

13 ನೀವು ವ್ಯವಸಾಯಮಾಡದೆ ಬೆಳೆದಿರುವ ಭೂವಿುಯನ್ನು ನಿಮಗೆ ಕೊಟ್ಟೆನು. ನೀವು ಕಟ್ಟದೆ ಇರುವ ಪಟ್ಟಣಗಳಲ್ಲಿ ನೀವು ವಾಸಿಸುತ್ತೀರಿ. ನೀವು ನೆಟ್ಟು ಬೆಳಸದೆ ಇರುವ ದ್ರಾಕ್ಷೆ, ಎಣ್ಣೇಮರ ಇವುಗಳ ತೋಟಗಳನ್ನು ಅನುಭವಿಸುತ್ತಿದ್ದೀರಿ ಎಂಬದೇ.

14 ಹೀಗಿರುವದರಿಂದ ನೀವು ಯೆಹೋವನಲ್ಲಿ ಭಯ ಭಕ್ತಿಯುಳ್ಳವರಾಗಿರ್ರಿ; ಆತನನ್ನು ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವಿಸಿರಿ. ನಿಮ್ಮ ಪೂರ್ವಿಕರು [ಯೂಫ್ರೇಟೀಸ್] ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಪೂಜಿಸುತ್ತಿದ್ದ ದೇವತೆಗಳನ್ನು ನಿಮ್ಮಲ್ಲಿಂದ ತೆಗೆದುಹಾಕಿರಿ; ಯೆಹೋವನನ್ನೇ ಸೇವಿಸಿರಿ.

15 ಯೆಹೋವನನ್ನು ಸೇವಿಸುವದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು [ಯೂಫ್ರೇಟೀಸ್] ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲನಿವಾಸಿಗಳಾದ ಅಮೋರಿಯರ ದೇವತೆಗಳೋ, ಹೇಳಿರಿ. ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು ಅಂದನು.

16 ಅದಕ್ಕೆ ಜನರು - ಯೆಹೋವನ ಸೇವೆಯನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವದು ನಮಗೆ ದೂರವಾಗಿರಲಿ;

17 ನಾವು ದಾಸತ್ವದಲ್ಲಿದ್ದ ಐಗುಪ್ತದಿಂದ ನಮ್ಮನ್ನೂ ನಮ್ಮ ಪಿತೃಗಳನ್ನೂ ಹೊರತಂದು ನಮ್ಮೆದುರಿನಲ್ಲಿಯೇ ಮಹತ್ಕಾರ್ಯಗಳನ್ನು ನಡಿಸಿ ನಮ್ಮ ಎಲ್ಲಾ ಪ್ರಯಾಣಗಳಲ್ಲಿಯೂ ದಾಟಿ ಬಂದ ಅನ್ಯಜನಾಂಗಗಳ ಮಧ್ಯದಲ್ಲಿಯೂ ನಮ್ಮನ್ನು ಕಾಪಾಡಿದವನು ನಮ್ಮ ದೇವರಾದ ಯೆಹೋವನೇ ಅಲ್ಲವೇ.

18 ಈ ದೇಶವಾಸಿಗಳಾಗಿದ್ದ ಅಮೋರಿಯರು ಮೊದಲಾದ ಸರ್ವಜನಾಂಗಗಳನ್ನು ನಮ್ಮ ಮುಂದೆ ಹೊರಡಿಸಿ ಬಿಟ್ಟವನು ಆತನೇ. ಆದದರಿಂದ ನಾವೂ ಯೆಹೋವನನ್ನೇ ಸೇವಿಸುವೆವು; ಆತನೇ ನಮ್ಮ ದೇವರು ಎಂದು ಉತ್ತರಕೊಟ್ಟರು.

19 ಆಗ ಯೆಹೋಶುವನು ಅವರಿಗೆ - ನೀವು ಯೆಹೋವನನ್ನು ಸೇವಿಸಲಾರಿರಿ. ಆತನು ಪರಿಶುದ್ಧನೂ ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದವನೂ ಆಗಿರುವ ದೇವರು. ಆತನು ನಿಮ್ಮ ದ್ರೋಹಾಪರಾಧಗಳನ್ನು ಕ್ಷವಿುಸುವದಿಲ್ಲ.

20 ನೀವು ಆತನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸಿದರೆ ಆತನು ವಿಮುಖನಾಗಿ ಮೇಲಿಗೆ ಬದಲಾಗಿ ಕೇಡನ್ನು ಬರಮಾಡಿ ನಿಮ್ಮನ್ನು ನಾಶಮಾಡಿಬಿಡುವನು ಅಂದನು.

21 ಜನರು ಯೆಹೋಶುವನಿಗೆ - ಇಲ್ಲ, ನಾವು ಯೆಹೋವನನ್ನೇ ಸೇವಿಸುವೆವು ಅಂದರು.

22 ಅವನು ಅವರಿಗೆ - ನೀವು ಯೆಹೋವನ ಸೇವೆಯನ್ನು ಆರಿಸಿಕೊಂಡಿರುವದಕ್ಕೆ ನೀವೇ ಸಾಕ್ಷಿಗಳು ಎನ್ನಲು ಅವರು - ಹೌದು, ನಾವೇ ಸಾಕ್ಷಿಗಳು ಅಂದರು.

23 ಆಗ ಯೆಹೋಶುವನು ಅವರಿಗೆ - ಹಾಗಾದರೆ ನಿಮ್ಮಲ್ಲಿರುವ ಅನ್ಯದೇವತೆಗಳನ್ನು ತೆಗೆದು ಹಾಕಿ ಇಸ್ರಾಯೇಲ್‍ದೇವರಾದ ಯೆಹೋವನ ಕಡೆಗೆ ಮನಸ್ಸನ್ನು ತಿರುಗಿಸಿಕೊಳ್ಳಿರಿ ಅಂದನು.

24 ಅದಕ್ಕೆ ಜನರು - ನಮ್ಮ ದೇವರಾದ ಯೆಹೋವನನ್ನೇ ಸೇವಿಸುತ್ತಾ ಆತನ ಮಾತನ್ನು ಕೇಳುವೆವು ಅಂದರು.

25 ಹೀಗೆ ಯೆಹೋಶುವನು ಶೆಕೆವಿುನಲ್ಲಿ ಇಸ್ರಾಯೇಲ್ಯರೊಡನೆ ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ ನ್ಯಾಯವಿಧಿಗಳನ್ನು ನೇವಿುಸಿದನು.

26 ಇದಲ್ಲದೆ ಅವನು ಈ ಎಲ್ಲಾ ಮಾತುಗಳನ್ನು ದೇವರ ಧರ್ಮಶಾಸ್ತ್ರಗ್ರಂಥದಲ್ಲಿ ಬರೆದು ಒಂದು ದೊಡ್ಡ ಕಲ್ಲನ್ನು ತಂದು ಯೆಹೋವನ ಆಲಯದ ಬಳಿಯಲ್ಲೇ ಇದ್ದ ಅಲ್ಲಾವೃಕ್ಷದ ಅಡಿಯಲ್ಲಿ ನಿಲ್ಲಿಸಿ

27 ಎಲ್ಲಾ ಜನರಿಗೆ - ಇಗೋ, ಈ ಕಲ್ಲು ನಮ್ಮ ವಿಷಯದಲ್ಲಿ ಸಾಕ್ಷಿ ಹೇಳುವದು. ಯೆಹೋವನು ನಮಗೆ ಹೇಳಿದ ಎಲ್ಲಾ ಮಾತುಗಳನ್ನು ಇದು ಕೇಳಿರುವದರಿಂದ ನೀವು ನಿಮ್ಮ ದೇವರಾದ ಆತನನ್ನು ಅಲ್ಲಗಳೆದರೆ ಇದೇ ನಿಮಗೆ ವಿರೋಧಸಾಕ್ಷಿಯಾಗಿರುವದು ಎಂದು ಹೇಳಿ

28 ಅವರನ್ನು ಅವರವರ ಸ್ವಾಸ್ತ್ಯಗಳಿಗೆ ಕಳುಹಿಸಿದನು.


ಯೆಹೋಶುವನ ಮರಣ

29 ಇದಾದ ಮೇಲೆ ಯೆಹೋವನ ಸೇವಕನಾದ ನೂನನ ಮಗ ಯೆಹೋಶುವನು ನೂರ ಹತ್ತು ವರುಷದವನಾಗಿ ಮರಣ ಹೊಂದಿದನು.

30 ಅವನ ಶವವನ್ನು ಎಫ್ರಾಯೀಮ್ ಪರ್ವತಪ್ರದೇಶದಲ್ಲಿ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿರುವ ತಿಮ್ನತ್‍ಸೆರಹ ಎಂಬ ಅವನ ಸ್ವಾಸ್ತ್ಯಭೂವಿುಯಲ್ಲಿ ಸಮಾಧಿಮಾಡಿದರು.

31 ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ನಡಿಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು.

32 ಇಸ್ರಾಯೇಲ್ಯರು ಐಗುಪ್ತದಿಂದ ತಂದ ಯೋಸೇಫನ ಎಲುಬುಗಳನ್ನು, ಯಾಕೋಬನು ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ನೂರು ವರಹಾ ಕೊಟ್ಟು ಕೊಂಡುಕೊಂಡ ಶೆಕೆಮ್ ಊರಿನ ಹೊಲದಲ್ಲಿ ಹೂಣಿಟ್ಟರು. ಆ ಹೊಲವು ಯೋಸೇಫ್ಯರ ಸ್ವಾಸ್ತ್ಯವಾಯಿತು.

33 ಆರೋನನ ಮಗನಾದ ಎಲ್ಲಾಜಾರನೂ ಮರಣ ಹೊಂದಿದನು. ಅವನ ಶವವನ್ನು ಎಫ್ರಾಯೀಮ್ ಪರ್ವತಪ್ರಾಂತದಲ್ಲಿ ಅವನ ಮಗನಾದ ಫೀನೆಹಾಸನ ಪಾಲಿಗೆ ಬಂದ ಗುಡ್ಡದಲ್ಲಿ ಸಮಾಧಿಮಾಡಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು