ಯೆಹೋಶುವ 23 - ಕನ್ನಡ ಸತ್ಯವೇದವು J.V. (BSI)ಯೆಹೋಶುವನ ಅಂತ್ಯಪ್ರಬೋಧನೆ 1 ಯೆಹೋವನು ಸುತ್ತಣ ವಿರೋಧಿಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹುದಿನಗಳು ಗತಿಸಿದ ಮೇಲೆ 2 ದಿನತುಂಬಿದ ಮುದುಕನಾದ ಯೆಹೋಶುವನು ಇಸ್ರಾಯೇಲ್ಯರ ಹಿರಿಯರು, ಪ್ರಭುಗಳು, ನ್ಯಾಯಾಧಿಪತಿಗಳು, ಅಧಿಕಾರಿಗಳು ಇವರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ತನ್ನ ಬಳಿಗೆ ಕರಿಸಿ ಅವರಿಗೆ - ನಾನು ದಿನತುಂಬಿದ ಮುದುಕನಾಗಿದ್ದೇನೆ. 3 ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಈ ಜನಾಂಗಗಳಿಗೆಲ್ಲಾ ಮಾಡಿದ್ದೆಲ್ಲವನ್ನೂ ನೋಡಿದ್ದೀರಷ್ಟೆ; ಹೌದು, ನಿಮಗಾಗಿ ಯುದ್ಧ ಮಾಡಿದಾತನು ನಿಮ್ಮ ದೇವರಾದ ಯೆಹೋವನೇ. 4 ನಾನು ಯೊರ್ದನಿನಿಂದ ಪಶ್ಚಿಮ ಮಹಾಸಾಗರದವರೆಗೂ ಇರುವ ಜನಾಂಗಗಳಲ್ಲಿ ಸಂಹೃತರಾದವರ ಮತ್ತು ಉಳಿದಿರುವವರ ದೇಶವನ್ನು ನಿಮಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ. 5 ನಿಮ್ಮ ದೇವರಾದ ಯೆಹೋವನು ತಾನೇ ಅವರನ್ನು ನಿಮ್ಮ ಕಣ್ಣುಮುಂದೆ ಹೊರಡಿಸಿಬಿಡುವನು. ಆತನ ವಾಗ್ದಾನದಂತೆ ಅವರ ದೇಶವನ್ನು ನೀವು ಸ್ವತಂತ್ರಿಸಿಕೊಳ್ಳುವಿರಿ. 6 ಮೋಶೆಯ ಧರ್ಮಶಾಸ್ತ್ರವಿಧಿಗಳನ್ನೆಲ್ಲಾ ಸ್ಥಿರಚಿತ್ತದಿಂದ ಕೈಕೊಳ್ಳಿರಿ; ಎಡಕ್ಕಾದರೂ ಬಲಕ್ಕಾದರೂ ಓರೆಯಾಗಬೇಡಿರಿ. 7 ಉಳಿದಿರುವ ಈ ಜನಾಂಗಗಳ ಜೊತೆಯಲ್ಲಿ ಸೇರಿಕೊಳ್ಳಬೇಡಿರಿ. ಅವರ ದೇವತೆಗಳ ಹೆಸರು ಹೇಳಿ ಆರಾಧಿಸಲೂ ಪ್ರಮಾಣಮಾಡಲೂಬಾರದು, ಅವುಗಳಿಗೆ ಅಡ್ಡಬಿದ್ದು ಸೇವಿಸಲೂಬಾರದು. 8 ಈವರೆಗೆ ಹೇಗೋ ಹಾಗೆಯೇ ಇನ್ನು ಮುಂದಕ್ಕೂ ನಿಮ್ಮ ದೇವರಾದ ಯೆಹೋವನನ್ನೇ ಹೊಂದಿಕೊಂಡಿರ್ರಿ. 9 ಯೆಹೋವನು ಮಹಾಪರಾಕ್ರವಿುಗಳಾದ ಜನಾಂಗಗಳನ್ನು ನಿಮ್ಮೆದುರಿನಿಂದ ಓಡಿಸಿಬಿಟ್ಟಿದ್ದಾನೆ; ನಿಮ್ಮ ಮುಂದೆ ಈವರೆಗೆ ಒಬ್ಬನೂ ನಿಲ್ಲಲಿಲ್ಲವಲ್ಲಾ. 10 ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನದಂತೆಯೇ ನಿಮಗೋಸ್ಕರ ಯುದ್ಧಮಾಡಿದ್ದರಿಂದ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವದಕ್ಕೆ ಶಕ್ತನಾದನು. 11 ಹೀಗಿರುವದರಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಂಡು ನಿಮ್ಮ ದೇವರಾದ ಯೆಹೋವನನ್ನೇ ಪ್ರೀತಿಸಿರಿ. 12 ನೀವು ದೇವರಿಗೆ ವಿಮುಖರಾಗಿ ನಿಮ್ಮ ಮಧ್ಯದಲ್ಲಿ ಉಳಿದಿರುವ ಈ ಜನಾಂಗಗಳೊಡನೆ ಕೊಟ್ಟು ತಂದು ವಿುಶ್ರವಾದರೆ 13 ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸುವದೇ ಇಲ್ಲವೆಂದು ತಿಳಿದುಕೊಳ್ಳಿರಿ. ಅವರೇ ನಿಮಗೆ ಉರುಲೂ ಬೋನೂ ಆಗುವರು. ಅವರು ಪಕ್ಕೆಗೆ ಹೊಡೆಯುವ ಕೊರಡೆಯಂತೆಯೂ ಕಣ್ಣುಚುಚ್ಚುವ ಮುಳ್ಳಿನಂತೆಯೂ ಇರುವರು. ಕಡೆಯಲ್ಲಿ ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟ ಈ ಉತ್ತಮ ದೇಶದಲ್ಲಿ ಇಲ್ಲದಂತಾಗುವಿರಿ. 14 ಭೂಲೋಕದವರೆಲ್ಲರೂ ಹೋಗುವ ಮಾರ್ಗವನ್ನು ನಾನೂ ಈಗ ಅನುಸರಿಸಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ. 15 ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ಈಗ ನಿಮಗೆ ಎಲ್ಲಾ ತರದ ಮೇಲನ್ನು ಅನುಗ್ರಹಿಸಿದಂತೆಯೇ ನಿಮ್ಮ ಮೇಲೆ ಸಕಲವಿಧವಾದ ಕೇಡುಗಳನ್ನೂ ಬರಮಾಡಿ ತಾನು ಕೊಟ್ಟಿರುವ ಈ ಉತ್ತಮದೇಶದಿಂದ ನಿಮ್ಮನ್ನು ತೆಗೆದು ನಾಶಮಾಡಿಬಿಡುವನು. 16 ನೀವು ದೇವರಾದ ಯೆಹೋವನ ನಿಬಂಧನೆಯನ್ನು ಮೀರಿ ಅನ್ಯದೇವತೆಗಳಿಗೆ ಅಡ್ಡಬಿದ್ದು ಸೇವಿಸಿದರೆ ಯೆಹೋವನ ಕೋಪಾಗ್ನಿಯು ನಿಮ್ಮ ಮೇಲೆ ಉರಿಯುವದು; ಮತ್ತು ಆತನು ಕೊಟ್ಟ ಒಳ್ಳೆಯ ದೇಶದಿಂದ ನೀವು ತೆಗೆದುಹಾಕಲ್ಪಟ್ಟು ಬೇಗನೆ ನಾಶವಾದೀರಿ ಅಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India