Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 22 - ಕನ್ನಡ ಸತ್ಯವೇದವು J.V. (BSI)


ಯೆಹೋಶುವನ ಚರಿತ್ರದ ಸಮಾಪ್ತಿ ( 22—24 ) ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ತಮ್ಮ ಸ್ವಾಸ್ತ್ಯಗಳಿಗೆ ಹಿಂದಿರುಗಿ ಹೋದದ್ದು

1 ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಕುಲದ ಅರ್ಧಜನರನ್ನೂ ಕರಿಸಿ ಅವರಿಗೆ -

2 ನೀವು ಯೆಹೋವನ ಸೇವಕನಾದ ಮೋಶೆಯು ವಿಧಿಸಿದ್ದೆಲ್ಲವನ್ನೂ ಕೈಕೊಂಡಿದ್ದೀರಿ.

3 ನಾನು ಆಜ್ಞಾಪಿಸಿದ್ದನ್ನೂ ನೆರವೇರಿಸಿದಿರಿ. ಈ ಕಾಲವೆಲ್ಲಾ ನೀವು ನಿಮ್ಮ ಸಹೋದರರನ್ನು ಕೈಬಿಡಲಿಲ್ಲ. ಈವರೆಗೆ ನಿಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸುತ್ತಾ ಬಂದಿದ್ದೀರಿ.

4 ಈಗ ನಿಮ್ಮ ದೇವರಾದ ಯೆಹೋವನು ತನ್ನ ವಾಗ್ದಾನಕ್ಕನುಸಾರವಾಗಿ ನಿಮ್ಮ ಸಹೋದರರಿಗೆ ವಿಶ್ರಾಂತಿಯನ್ನು ದಯಪಾಲಿಸಿದ್ದದರಿಂದ ಆತನ ಸೇವಕನಾದ ಮೋಶೆಯು ಯೊರ್ದನಿನ ಆಚೆಯಲ್ಲಿ ನಿಮಗೆ ಕೊಟ್ಟ ಸ್ವಾಸ್ತ್ಯದಲ್ಲಿರುವ ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಬಹುದು.

5 ಯೆಹೋವನ ಸೇವಕನಾದ ಮೋಶೆಯು ನಿಮಗೆ ಕೊಟ್ಟ ಧರ್ಮೋಪದೇಶವಿಧಿಗಳನ್ನು ಜಾಗರೂಕತೆಯಿಂದ ಕೈಕೊಳ್ಳಿರಿ. ಹೀಗಿರಲಾಗಿ ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲೇ ನಡೆದು ಆತನ ಆಜ್ಞೆಗಳನ್ನು ಕೈಕೊಂಡು ಆತನನ್ನೇ ಹೊಂದಿಕೊಂಡು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಆತನನ್ನು ಸೇವಿಸಿರಿ ಎಂದು ಹೇಳಿ

6 ಅವರನ್ನು ಆಶೀರ್ವದಿಸಿ ಕಳುಹಿಸಿದನು.

7 ಅವರು ತಮ್ಮ ನಿವಾಸಗಳಿಗೆ ಹೋದರು. (ಮೋಶೆಯು ಮನಸ್ಸೆಕುಲದ ಅರ್ಧಜನರಿಗೆ ಬಾಷಾನಿನಲ್ಲಿ ಸ್ವಾಸ್ತ್ಯವನ್ನು ಕೊಟ್ಟಿದ್ದನು. ಉಳಿದ ಅರ್ಧಜನರಿಗೆ ಯೆಹೋಶುವನು ಯೊರ್ದನಿನ ಪಶ್ಚಿಮದಲ್ಲಿ ಬೇರೆ ಕುಲದವರೊಂದಿಗೆ ಪಾಲುಕೊಟ್ಟನು.) ಇದಲ್ಲದೆ ಯೆಹೋಶುವನು ಅವರನ್ನು ಆಶೀರ್ವದಿಸಿ ಸ್ವಸ್ಥಳಗಳಿಗೆ ಕಳುಹಿಸುವಾಗ ಅವರಿಗೆ -

8 ನೀವು ಬಹಳ ದನ, ಕುರಿ, ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ವಸ್ತ್ರ ಮೊದಲಾದ ವಸ್ತು ಸಮೃದ್ಧಿಯುಳ್ಳವರಾಗಿ ನಿಮ್ಮ ನಿವಾಸಗಳಿಗೆ ಹೋಗಿರಿ; ನೀವು ಶತ್ರುಗಳಿಂದ ತೆಗೆದುಕೊಂಡ ಕೊಳ್ಳೆಯಲ್ಲಿ ನಿಮ್ಮ ಸಹೋದರರಿಗೂ ಪಾಲು ಕೊಡಿರಿ ಅಂದನು.

9 ಆಗ ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಕಾನಾನ್ ದೇಶದ ಶೀಲೋವಿನಲ್ಲಿದ್ದ ಇಸ್ರಾಯೇಲ್ಯರನ್ನು ಬಿಟ್ಟು ಯೆಹೋವನ ಆಜ್ಞೆಗನುಸಾರವಾಗಿ ಮೋಶೆಯಿಂದ ತಮಗೆ ಸಿಕ್ಕಿದ ಸ್ವಾಸ್ತ್ಯವಾದ ಗಿಲ್ಯಾದ್ ದೇಶಕ್ಕೆ ಹೋದರು.


ಯೊರ್ದನಿನ ಆಚೆಯ ಪ್ರದೇಶಕ್ಕೆ ಹಿಂದಿರುಗಿ ಹೋದವರು ದಾರಿಯಲ್ಲಿ ವೇದಿಯನ್ನು ಕಟ್ಟಿದ್ದು

10 ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಕಾನಾನ್ ದೇಶದಲ್ಲಿರುವ ಯೊರ್ದನ್ ತೀರ ಪ್ರದೇಶಕ್ಕೆ ಬಂದಾಗ ಅಲ್ಲಿ ಒಂದು ಮಹಾವೇದಿಯನ್ನು ಕಟ್ಟಿದರು.

11 ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ಇಸ್ರಾಯೇಲ್‍ದೇಶವಾದ ಕಾನಾನಿನ ಪೂರ್ವಕ್ಕಿರುವ ಯೊರ್ದನ್‍ಹೊಳೆಯ ತೀರಪ್ರದೇಶದಲ್ಲಿ ವೇದಿಯನ್ನು ಕಟ್ಟಿದ್ದಾರೆಂಬ ವರ್ತಮಾನವು ವಿುಕ್ಕ ಇಸ್ರಾಯೇಲ್ಯರಿಗೆ ಮುಟ್ಟಿದಾಗ

12 ಅವರೆಲ್ಲರೂ ಶೀಲೋವಿನಲ್ಲಿ ಕೂಡಿ ಬಂದು ಅವರೊಡನೆ ಯುದ್ಧಕ್ಕೆ ಹೊರಡಲು ಸಿದ್ಧರಾದರು.

13 ಆದರೆ ಮೊದಲು ಗಿಲ್ಯಾದಿನಲ್ಲಿರುವ ರೂಬೇನ್ಯರು, ಗಾದ್ಯರು, ಮನಸ್ಸೆಕುಲದ ಅರ್ಧಜನರು ಇವರ ಬಳಿಗೆ ಮಹಾಯಾಜಕ ಎಲ್ಲಾಜಾರನ ಮಗನಾದ ಫೀನೆಹಾಸನನ್ನೂ

14 ಕುಲಕ್ಕೆ ಒಬ್ಬನಂತೆ ಹತ್ತುಮಂದಿ ಪ್ರಭುಗಳನ್ನೂ ಕಳುಹಿಸಿದರು. ಅವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ಕುಲಗೋತ್ರ ಕುಟುಂಬಗಳಲ್ಲಿ ಮುಖ್ಯನಾಗಿದ್ದನು.

15 ಅವರು ಗಿಲ್ಯಾದಿನಲ್ಲಿದ್ದ ರೂಬೇನ್ಯರು, ಗಾದ್ಯರು ಮನಸ್ಸೆ ಕುಲದ ಅರ್ಧಜನರು ಇವರ ಬಳಿಗೆ ಬಂದು -

16 ಯೆಹೋವನ ಸರ್ವಸಭೆಯ ಮಾತನ್ನು ಕೇಳಿರಿ - ನೀವು ಇಸ್ರಾಯೇಲ್ ದೇವರಿಗೆ ವಿರುದ್ಧವಾಗಿ ಇಂಥ ದ್ರೋಹ ಮಾಡಿದ್ದೇಕೆ? ನಿಮಗೋಸ್ಕರ ವೇದಿಯನ್ನು ಕಟ್ಟಿಕೊಂಡದರಿಂದ ನೀವು ಯೆಹೋವನಿಗೆ ವಿಮುಖರಾದ ಹಾಗಾಯಿತಲ್ಲವೇ. ನೀವು ಈ ಹೊತ್ತು ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದಂತಾಯಿತು.

17 ನಾವು ಪೆಗೋರದ ಸಂಗತಿಯಲ್ಲಿ ಅಪರಾಧಿಗಳಾದದ್ದು ಸಾಕಾಗಲಿಲ್ಲವೋ? ಅದರ ದೆಸೆಯಿಂದ ಯೆಹೋವನ ಸಭೆಗೆ ವ್ಯಾಧಿ ಬಂದರೂ ಅದು ಇನ್ನೂ ಶುದ್ಧವಾಗಲಿಲ್ಲ.

18 ಈಗ ನೀವು ತಿರಿಗಿ ಯೆಹೋವನನ್ನು ಬಿಡುತ್ತೀರೋ? ನೀವು ಈ ಹೊತ್ತು ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದರೆ ನಾಳೆಯೇ ಆತನ ಕೋಪಾಗ್ನಿಯು ಇಸ್ರಾಯೇಲ್ ಸರ್ವಸಭೆಯ ಮೇಲೆ ಉರಿಯಹತ್ತುವದು.

19 ನಿಮ್ಮ ದೇಶವು ಅಶುದ್ಧವಾಗಿದೆಯೆಂದು ತೋರಿದರೆ ಯೆಹೋವನ ಗುಡಾರವಿರುವ ಆತನ ಸ್ವಂತ ಸೀಮೆಗೆ ಬಂದು ನಮ್ಮ ಮಧ್ಯದಲ್ಲಿ ಸ್ವಾಸ್ತ್ಯವನ್ನು ತೆಗೆದುಕೊಳ್ಳಿರಿ. ನಮ್ಮ ದೇವರಾದ ಯೆಹೋವನ ವೇದಿಯ ಹೊರತು ನಿಮಗೋಸ್ಕರ ಇನ್ನೊಂದನ್ನು ಕಟ್ಟಿಕೊಂಡು ಯೆಹೋವನಿಗೂ ನಮಗೂ ವಿರೋಧವಾಗಿ ತಿರುಗಿ ಬೀಳಬೇಡಿರಿ.

20 ಜೆರಹನ ಮಗನಾದ ಆಕಾನನು ಯೆಹೋವನ ಸೊತ್ತನ್ನು ಕದ್ದುಕೊಂಡು ದ್ರೋಹಿಯಾದಾಗ ಯೆಹೋವನ ಕೋಪವು ಇಸ್ರಾಯೇಲ್ಯರ ಸರ್ವಸಭೆಯ ಮೇಲೆ ಬಂದಿತು. ಮತ್ತು ಅವನ ಪಾಪದ ದೆಸೆಯಿಂದ ಅವನೊಡನೆ ಅನೇಕರು ಸಾಯಬೇಕಾಯಿತಲ್ಲಾ ಎಂದು ಹೇಳಿದರು.

21 ಆಗ ರೂಬೇನ್ಯರೂ ಗಾದ್ಯರೂ ಮನಸ್ಸೆ ಕುಲದ ಅರ್ಧಜನರೂ ಆ ಇಸ್ರಾಯೇಲ್ ಕುಲಾಧಿಪತಿಗಳಿಗೆ - ದೇವದೇವನಾದ ಯೆಹೋವನು

22 ಇದಕ್ಕೆ ಸಾಕ್ಷಿ; ದೇವದೇವನಾದ ಯೆಹೋವನಿಗೆ ಇದು ಗೊತ್ತುಂಟು. ಇಸ್ರಾಯೇಲ್ಯರಿಗೂ ಗೊತ್ತಾಗುವದು. ನಾವು ದ್ರೋಹಿಗಳೂ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವರೂ ಆಗಿದ್ದರೆ ಆತನು ನಮ್ಮನ್ನು ಈ ಹೊತ್ತೇ ಕೈಬಿಡಲಿ.

23 ನಾವು ಯೆಹೋವನಿಂದ ವಿಮುಖರಾಗಿ ಸರ್ವಾಂಗಹೋಮ, ಸಮಾಧಾನಯಜ್ಞ, ಧಾನ್ಯ ನೈವೇದ್ಯ ಇವುಗಳನ್ನು ಸಮರ್ಪಿಸುವದಕ್ಕೋಸ್ಕರ ಈ ವೇದಿಯನ್ನು ಕಟ್ಟಿದ್ದರೆ ಯೆಹೋವನು ತಾನೇ ನಮ್ಮನ್ನು ಶಿಕ್ಷಿಸಲಿ.

24 ಒಂದು ವಿಶೇಷವಾದ ಉದ್ದೇಶದಿಂದ ಈ ಕೆಲಸವನ್ನು ಮಾಡಿದೆವು. ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ - ಇಸ್ರಾಯೇಲ್ ದೇವರಾದ ಯೆಹೋವನಲ್ಲಿ ನಿಮಗೇನು ಪಾಲಿದೆ?

25 ರೂಬೇನ್ಯರೇ, ಗಾದ್ಯರೇ, ಯೆಹೋವನು ನಮಗೂ ನಿಮಗೂ ನಡುವೆ ಯೊರ್ದನ್ ಹೊಳೆಯನ್ನು ಮೇರೆಯಾಗಿಟ್ಟಿದ್ದಾನೆ. ಆತನಲ್ಲಿ ನಿಮಗೇನೂ ಪಾಲಿಲ್ಲ ಎಂದು ಹೇಳಿ ಅವರನ್ನು ದೇವಭಕ್ತಿಯಿಂದ ತೊಲಗಿಸಿ ಬಿಟ್ಟಾರು ಎಂಬ ಭಯದಿಂದ ನಾವು -

26 ಬನ್ನಿರಿ, ಒಂದು ವೇದಿಯನ್ನು ಕಟ್ಟೋಣ ಎಂದುಕೊಂಡು ಹಾಗೆಯೇ ಮಾಡಿದೆವು. ಅದು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವದಕ್ಕೋಸ್ಕರವಲ್ಲ;

27 ಆದರೆ ಯೆಹೋವನ ಸಾನ್ನಿಧ್ಯದಲ್ಲಿ ಸರ್ವಾಂಗಹೋಮಯಜ್ಞ, ಸಮಾಧಾನಯಜ್ಞ ಮೊದಲಾದವುಗಳನ್ನು ಸಮರ್ಪಿಸಿ ಆರಾಧಿಸುವದಕ್ಕೆ ನಮಗೂ ಹಕ್ಕುಂಟೆಂಬದಕ್ಕೆ ಇದು ನಮಗೂ ನಿಮಗೂ ನಮ್ಮ ಸಂತಾನಕ್ಕೂ ನಿಮ್ಮ ಸಂತಾನಕ್ಕೂ ಸಾಕ್ಷಿಯಾಗಿರುವದು. ಇದರಿಂದ ಮುಂದೆ ನಿಮ್ಮ ಮಕ್ಕಳು ನಮ್ಮ ಮಕ್ಕಳಿಗೆ - ಯೆಹೋವನಲ್ಲಿ ನಿಮಗೆ ಪಾಲಿಲ್ಲವೆಂದು ಹೇಳುವದಕ್ಕೆ ಆಸ್ಪದವಿಲ್ಲ.

28 ಅವರು ಮುಂದೆ ನಮಗಾಗಲಿ ನಮ್ಮ ಸಂತಾನದವರಿಗಾಗಲಿ ಈ ಪ್ರಕಾರ ಹೇಳಿದರೆ ನಾವು ಅವರಿಗೆ - ಈ ಯೆಹೋವವೇದಿಯ ಮಾದರಿಯನ್ನು ನೋಡಿರಿ; ನಮ್ಮ ಪಿತೃಗಳು ಇದನ್ನು ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸುವದಕ್ಕೋಸ್ಕರ ಕಟ್ಟಲಿಲ್ಲ; ಇದು ನಮಗೂ ನಿಮಗೂ ಮಧ್ಯದಲ್ಲಿ ಸಾಕ್ಷಿಯಾಗಿರುತ್ತದೆಯಷ್ಟೆ ಎಂದು ಹೇಳುವೆವು.

29 ನಮ್ಮ ದೇವರಾದ ಯೆಹೋವನ ಗುಡಾರದ ಮುಂದಿರುವ ಯಜ್ಞವೇದಿಯ ಹೊರತು ಸರ್ವಾಂಗಹೋಮ, ಧಾನ್ಯನೈವೇದ್ಯ, ಸಮಾಧಾನಯಜ್ಞ ಮೊದಲಾದವುಗಳನ್ನು ಸಮರ್ಪಿಸುವದಕ್ಕೋಸ್ಕರ ಬೇರೊಂದು ವೇದಿಯನ್ನು ಕಟ್ಟಿ ಯೆಹೋವನಿಗೆ ವಿಮುಖರಾಗಿ ದ್ರೋಹಿಗಳಾಗುವದು ನಮಗೆ ದೂರವಾಗಿರಲಿ ಅಂದರು.

30 ಯಾಜಕನಾದ ಫೀನೆಹಾಸನೂ ಅವನ ಜೊತೆಯಲ್ಲಿ ಬಂದ ಕುಲಾಧಿಪತಿಗಳಾಗಿರುವ ಇಸ್ರಾಯೇಲ್ ಪ್ರಭುಗಳೂ ರೂಬೇನ್ ಗಾದ್ ಮನಸ್ಸೆಕುಲಗಳವರ ಮಾತುಗಳನ್ನು ಕೇಳಿ ಸಂತೋಷಪಟ್ಟರು.

31 ಮಹಾಯಾಜಕ ಎಲ್ಲಾಜಾರನ ಮಗನಾದ ಫೀನೆಹಾಸನು ರೂಬೇನ್ ಗಾದ್ ಮನಸ್ಸೆಕುಲಗಳವರಿಗೆ - ನೀವು ಯೆಹೋವನಿಗೆ ವಿರುದ್ಧವಾಗಿ ಅಂಥ ದ್ರೋಹವನ್ನು ಮಾಡಲಿಲ್ಲವಾದದರಿಂದ ಆತನು ನಮ್ಮ ಮಧ್ಯದಲ್ಲಿರುತ್ತಾನೆಂದು ಈಗ ತಿಳಿಯಿತು. ಹೀಗಿರಲಾಗಿ ನೀವು ಇಸ್ರಾಯೇಲ್ಯರನ್ನು ಯೆಹೋವನ ಶಿಕ್ಷಾಹಸ್ತಕ್ಕೆ ತಪ್ಪಿಸಿದ್ದೀರಿ ಅಂದನು.

32 ಮಹಾಯಾಜಕ ಎಲ್ಲಾಜಾರನ ಮಗನಾದ ಫೀನೆಹಾಸನೂ ಪ್ರಭುಗಳೂ ಗಿಲ್ಯಾದ್ ಸೀಮೆಯಲ್ಲಿದ್ದ ರೂಬೇನ್ಯರು, ಗಾದ್ಯರು ಇವರ ಬಳಿಯಿಂದ ಕಾನಾನ್ ದೇಶದಲ್ಲಿದ್ದ ಇಸ್ರಾಯೇಲ್ಯರ ಬಳಿಗೆ ಬಂದು ಅವರಿಗೆ ಈ ವರ್ತಮಾನವನ್ನು ತಿಳಿಸಲು

33 ಅವರೂ ಬಹುಸಂತೋಷ ಪಟ್ಟು ದೇವರನ್ನು ಕೊಂಡಾಡಿ ರೂಬೇನ್ ಗಾದ್ ಕುಲಗಳೊಡನೆ ಯುದ್ಧಮಾಡಿ ಅವರ ದೇಶವನ್ನು ಹಾಳುಮಾಡಬೇಕೆಂಬ ಆಲೋಚನೆಯನ್ನು ಬಿಟ್ಟರು.

34 ರೂಬೇನ್ಯರೂ ಗಾದ್ಯರೂ ಯೆಹೋವನೇ ದೇವರು ಎಂಬದಕ್ಕೆ ಈ ವೇದಿಯೇ ಸಾಕ್ಷಿ ಎಂದು ಹೇಳಿ ಅದಕ್ಕೆ ಏದ್ ಎಂಬ ಹೆಸರಿಟ್ಟರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು