ಯೆಹೋಶುವ 2 - ಕನ್ನಡ ಸತ್ಯವೇದವು J.V. (BSI)ಗೂಢಚಾರರು ಯೆರಿಕೋವಿಗೆ ಹೋಗಿ ಬಂದದ್ದು 1 ನೂನನ ಮಗನಾದ ಯೆಹೋಶುವನು [ಕಾನಾನ್] ದೇಶವನ್ನೂ ಯೆರಿಕೋ ಪಟ್ಟಣವನ್ನೂ ನೋಡುವದಕ್ಕೋಸ್ಕರ ಶಿಟ್ಟೀವಿುನಿಂದ ಇಬ್ಬರು ಗೂಢಚಾರರನ್ನು ಕಳುಹಿಸಿದನು. ಅವರು ಹೊರಟು ಹೋಗಿ ರಾಹಾಬಳೆಂಬ ಸೂಳೆಯ ಮನೆಯಲ್ಲಿ ಇಳುಕೊಂಡರು. 2 ಆಗ ಜನರು ಯೆರಿಕೋವಿನ ಅರಸನಿಗೆ - ಇಗೋ, ಈ ರಾತ್ರಿ ಇಸ್ರಾಯೇಲ್ಯರ ಕಡೆಯವರು ನಮ್ಮ ದೇಶವನ್ನು ಸಂಚರಿಸಿ ನೋಡುವದಕ್ಕೆ ಬಂದಿದ್ದಾರೆಂದು ಹೇಳಿದರು. 3 ಯೆರಿಕೋವಿನ ಅರಸನು ರಾಹಾಬಳಿಗೆ - ನಿನ್ನ ಮನೆಯಲ್ಲಿಳುಕೊಂಡಿರುವ ಮನುಷ್ಯರನ್ನು ತಂದೊಪ್ಪಿಸು; ಅವರು ದೇಶವನ್ನೆಲ್ಲಾ ಸಂಚರಿಸಿ ನೋಡುವದಕ್ಕೆ ಬಂದವರು ಎಂದು ಹೇಳಿ ಕಳುಹಿಸಿದನು. 4 ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು ಕೇಳ ಬಂದವರಿಗೆ - ಆ ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ; ಅವರು ಎಲ್ಲಿಯವರೆಂಬದು ನನಗೆ ಗೊತ್ತಿದ್ದಿಲ್ಲ. 5 ಊರುಬಾಗಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲೊಳಗೆ ಹೊರಟುಹೋದರು. ಎಲ್ಲಿಗೆ ಹೋದರೆಂಬದೂ ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು ಎಂದು ಹೇಳಿದಳು. 6 ಆದರೆ ಅವಳು ಆ ಮನುಷ್ಯರನ್ನು ಮಾಳಿಗೆಯ ಮೇಲೆ ಹತ್ತಿಸಿ ಅಲ್ಲಿ ಸಾಲಾಗಿ ಇಟ್ಟಿದ್ದ ಪುಂಡಿಯ ಹೊರೆಗಳಲ್ಲಿ ಅಡಗಿಸಿಟ್ಟಿದ್ದಳು. 7 ಅರಸನ ಆಳುಗಳು ಯೊರ್ದನಿನ ದಾರಿಹಿಡಿದು ಹೋಗಿ ಹೊಳೆದಾಟುವ ಸ್ಥಳಗಳವರೆಗೂ ಹುಡುಕಿದರು. ಹುಡುಕುವವರು ಹೊರಟ ಕೂಡಲೆ ಊರುಬಾಗಲನ್ನು ಮುಚ್ಚಿದರು. 8 ಆ ಮನುಷ್ಯರಿಬ್ಬರೂ ಮಲಗಿಕೊಳ್ಳುವ ಮೊದಲು 9 ಆಕೆಯು ಮಾಳಿಗೆಹತ್ತಿ ಅವರ ಬಳಿಗೆ ಬಂದು ಹೇಳಿದ್ದೇನಂದರೆ - ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿರುವದನ್ನು ಬಲ್ಲೆನು. ನಿಮ್ಮ ನಿವಿುತ್ತ ನಮಗೆ ಮಹಾಭೀತಿಯುಂಟಾಗಿದೆ; ದೇಶದ ನಿವಾಸಿಗಳೆಲ್ಲರೂ ಕಂಗೆಟ್ಟುಹೋಗಿದ್ದಾರೆ. 10 ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪು ಸಮುದ್ರವನ್ನು ಬತ್ತಿಸಿಬಿಟ್ಟದ್ದನ್ನೂ ನೀವು ಯೊರ್ದನಿನ ಆಚೆಯಲ್ಲಿರುವ ಸೀಹೋನ್ ಓಗ್ ಎಂಬ ಅಮೋರಿಯರ ಅರಸರಿಬ್ಬರನ್ನು ನಿರ್ಮೂಲ ಮಾಡಿದ್ದನ್ನೂ ಕೇಳಿ 11 ನಮ್ಮ ಎದೆಯೊಡೆದು ಹೋಯಿತು; ನಿಮ್ಮನ್ನು ಎದುರಿಸುವ ಧೈರ್ಯವು ಒಬ್ಬನಲ್ಲಿಯೂ ಇಲ್ಲ. ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು. 12 ಆದದರಿಂದ ಈಗ ನೀವು ನನಗೆ ನಂಬತಕ್ಕ ಒಂದು ಗುರುತು ಕೊಟ್ಟು ನಾನು ನಿಮಗೆ ದಯೆತೋರಿಸಿದಂತೆ ನೀವೂ ನನ್ನ ತಂದೆಯ ಮನೆಯವರಿಗೆ ದಯೆತೋರಿಸುವದಾಗಿಯೂ 13 ನನ್ನ ತಂದೆತಾಯಿಗಳನ್ನೂ ಸಹೋದರ ಸಹೋದರಿಯರನ್ನೂ ಅವರಿಗಿರುವದೆಲ್ಲವನ್ನೂ ನಾಶಮಾಡದೆ ಉಳಿಸುವದಾಗಿಯೂ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಬೇಕೆಂದು ಬೇಡಿಕೊಳ್ಳುತ್ತೇನೆ ಎಂಬದೇ. 14 ಆಗ ಆ ಮನುಷ್ಯರು - ನೀವು ನಮ್ಮ ಸಂಗತಿಯನ್ನು ಹೊರಪಡಿಸದಿದ್ದರೆ ನಾವು ನಿಮ್ಮ ಪ್ರಾಣಕ್ಕೆ ಹೊಣೆಯಾಗಿರುವೆವು; ಯೆಹೋವನು ಈ ದೇಶವನ್ನು ನಮಗೆ ಅನುಗ್ರಹಿಸಿದ ಮೇಲೆ ನಮ್ಮ ಮಾತಿನಂತೆ ನಿನ್ನಲ್ಲಿ ದಯದಿಂದ ನಡೆದುಕೊಳ್ಳುವೆವು ಅಂದರು. 15 ಅವಳ ಮನೆಯು ಊರುಗೋಡೆಯ ಮೇಲಿದ್ದದರಿಂದ ಅವರನ್ನು ಹಗ್ಗದ ಮೂಲಕ ಕಿಟಕಿಯಿಂದ ಕೆಳಕ್ಕೆ ಇಳಿಸಿ ಅವರಿಗೆ - ನೀವು ಹಿಂದಟ್ಟುವವರಿಗೆ ಸಿಕ್ಕದಂತೆ 16 ಆ ಪರ್ವತಕ್ಕೆ ಓಡಿಹೋಗಿ ಅಲ್ಲಿ ಮೂರು ದಿವಸ ಅಡಗಿಕೊಂಡಿದ್ದು ಅವರು ಹಿಂದಿರುಗಿದ ಮೇಲೆ ನಿಮ್ಮ ದಾರಿ ಹಿಡಿದು ಹೋಗಿರಿ ಅಂದಳು. 17 ಆಗ ಅವರು - [ನಾವು ಹೇಳುವ ಮಾತಿನಂತೆ ನೀನು ನಡೆಯದಿದ್ದರೆ] ನೀನು ನಮ್ಮಿಂದ ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗಿರುವೆವು. 18 ಇಗೋ, ನಾವು ಈ ದೇಶದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಕಿಗೆ ಈ ಕೆಂಪು ದಾರವನ್ನು ಕಟ್ಟಬೇಕು. ಮತ್ತು ನಿನ್ನ ತಂದೆತಾಯಿಗಳನ್ನೂ ಅಣ್ಣ ತಮ್ಮಂದಿರನ್ನೂ ಎಲ್ಲಾ ಬಳಗದವರನ್ನೂ ನಿನ್ನ ಮನೆಯಲ್ಲಿ ಸೇರಿಸಿಕೊಂಡಿರಬೇಕು. 19 ಅವರಲ್ಲಿ ಯಾರಾದರೂ ಮನೆಬಿಟ್ಟು ಬೀದಿಗೆ ಬಂದರೆ ರಕ್ತಾಪರಾಧವು ಅವರ ತಲೆಯ ಮೇಲೆಯೇ ಇರುವದು; ನಾವು ನಿರ್ದೋಷಿಗಳು. ಆದರೆ ನಿನ್ನೊಡನೆ ಮನೆಯಲ್ಲಿದ್ದವರ ಮೇಲೆ ಕೈ ಹಾಕುವದಾದರೆ ಆ ರಕ್ತಾಪರಾಧವು ನಮ್ಮ ತಲೆಯ ಮೇಲಿರುವದು; 20 ಇದಲ್ಲದೆ ನೀನು ಈ ನಮ್ಮ ಸಂಗತಿಯನ್ನು ಹೊರತರುವದಾದರೆ ನಮ್ಮಿಂದ ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗಿರುವೆವು ಎಂದರು. 21 ಅದಕ್ಕವಳು - ನಿಮ್ಮ ಮಾತಿನಂತೆಯೇ ಆಗಲಿ ಎಂದು ಹೇಳಿ ಅವರನ್ನು ಕಳುಹಿಸಿದಳು; ಅವರು ಹೋದ ಮೇಲೆ ಆ ಕೆಂಪು ದಾರವನ್ನು ಕಿಟಕಿಗೆ ಕಟ್ಟಿದಳು. 22 ಅವರು ಆ ಪರ್ವತವನ್ನು ಸೇರಿ ಬೆನ್ನಟ್ಟುವವರು ಹಿಂದಿರುಗುವ ತನಕ ಮೂರು ದಿವಸ ಅಲ್ಲೇ ಇದ್ದರು. ಬೆನ್ನಟ್ಟುವವರು ಅವರನ್ನು ದಾರಿಯುದ್ದಕ್ಕೂ ಹುಡುಕಿ ಕಾಣದೆ ಹಿಂದಿರುಗಿದರು. 23 ಆಗ ಅವರಿಬ್ಬರೂ ಬೆಟ್ಟದಿಂದಿಳಿದು ಹೊಳೆದಾಟಿ ನೂನನ ಮಗನಾದ ಯೆಹೋಶುವನ ಬಳಿಗೆ ಬಂದು ತಮಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದರು. 24 ಇದಲ್ಲದೆ ಅವರು ಯೆಹೋಶುವನಿಗೆ - ಯೆಹೋವನು ನಿಜವಾಗಿ ಆ ದೇಶವನ್ನೆಲ್ಲಾ ನಮಗೆ ಕೊಟ್ಟಿದ್ದಾನೆ; ಅದರ ನಿವಾಸಿಗಳೆಲ್ಲಾ ನಮ್ಮ ನಿವಿುತ್ತ ಕಂಗೆಟ್ಟು ಹೋಗಿದ್ದಾರೆ ಎಂದು ತಿಳಿಸಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India