Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೋಶುವ 18 - ಕನ್ನಡ ಸತ್ಯವೇದವು J.V. (BSI)


ಉಳಿದ ಪ್ರದೇಶಗಳ ಪಟ್ಟಿಯನ್ನು ಮಾಡಿಸಿದ್ದು

1 ದೇಶವೆಲ್ಲಾ ವಶವಾದ ಮೇಲೆ ಇಸ್ರಾಯೇಲ್ ಸಮೂಹದ ಎಲ್ಲಾ ಜನರೂ ಶೀಲೋವಿನಲ್ಲಿ ಕೂಡಿ ಬಂದು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.

2 ಇಸ್ರಾಯೇಲ್ಯರಲ್ಲಿ ಇನ್ನೂ ಏಳು ಕುಲಗಳಿಗೆ ಪಾಲುಸಿಕ್ಕಿರಲಿಲ್ಲ.

3 ಅಗ ಯೆಹೋಶುವನು ಇಸ್ರಾಯೇಲ್ಯರಿಗೆ - ನಿಮ್ಮ ಪಿತೃಗಳ ದೇವರಾದ ಯೆಹೋವನು ನಿಮಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವದರಲ್ಲಿ ಇನ್ನೆಷ್ಟು ತಡಮಾಡುತ್ತೀರಿ?

4 ಪ್ರತಿಯೊಂದು ಕುಲದಿಂದ ಮೂರು ಮೂರು ಜನರನ್ನು ನೇವಿುಸಿರಿ; ನಾನು ಅವರನ್ನು ಕಳುಹಿಸುವೆನು. ಅವರು ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ತಮ್ಮ ತಮ್ಮ ಕುಲಗಳಿಗನುಸಾರವಾಗಿ ಎಲ್ಲಾ ಪ್ರದೇಶಗಳ ಪಟ್ಟಿಯನ್ನು ಬರೆದುಕೊಂಡು ನನ್ನ ಬಳಿಗೆ ಬರಲಿ.

5 ತರುವಾಯ ಅವರು ಏಳು ಪಾಲುಗಳನ್ನು ಮಾಡಿ ತಮ್ಮ ತಮ್ಮೊಳಗೆ ಹಂಚಿಕೊಳ್ಳಲಿ. ದಕ್ಷಿಣದಲ್ಲಿ ಯೆಹೂದಕುಲದವರಿಗೂ ಉತ್ತರದಲ್ಲಿ ಯೋಸೇಫನ ಕುಲದವರಿಗೂ ಸ್ವಾಸ್ತ್ಯವು ಸಿಕ್ಕಿರುತ್ತದೆ. ಅದು ಅವರಿಗೇ ಇರಲಿ.

6 ಅವರು ಪಟ್ಟಿಯಲ್ಲಿ ದೇಶವನ್ನು ಏಳು ಪಾಲುಮಾಡಿ ಇಲ್ಲಿ ನನ್ನ ಬಳಿಗೆ ತೆಗೆದುಕೊಂಡು ಬರಲಿ; ನಾನು ನಿಮಗೋಸ್ಕರ ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಚೀಟುಹಾಕುವೆನು.

7 ಲೇವಿಯರಿಗೆ ನಿಮ್ಮ ಸಂಗಡ ಪಾಲು ಸಿಕ್ಕುವದಿಲ್ಲ; ಯೆಹೋವನ ಯಾಜಕ ಸೇವೆಯೇ ಅವರ ಸ್ವಾಸ್ತ್ಯವಾಗಿದೆ. ಗಾದ್ ರೂಬೇನ್ ಕುಲಗಳಿಗೂ ಮನಸ್ಸೆಕುಲದ ಅರ್ಧಜನರಿಗೂ ಯೊರ್ದನಿನ ಪೂರ್ವ ದಿಕ್ಕಿನಲ್ಲಿ ಯೆಹೋವನ ಸೇವಕನಾದ ಮೋಶೆಯಿಂದ ಸ್ವಾಸ್ತ್ಯವು ಸಿಕ್ಕಿತು ಅಂದನು.

8 ದೇಶದ ಪಟ್ಟಿಯನ್ನು ಮಾಡತಕ್ಕ ಜನರು ಹೊರಡುವದಕ್ಕಿಂತ ಮುಂಚೆ ಯೆಹೋಶುವನು ಅವರಿಗೆ - ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ಪಟ್ಟಿಮಾಡಿಕೊಂಡು ಶೀಲೋವಿಗೆ ನನ್ನ ಬಳಿಗೆ ಬನ್ನಿರಿ; ನಾನು ಯೆಹೋವನ ಮುಂದೆ ನಿಮಗೋಸ್ಕರ ಚೀಟುಹಾಕುವೆನು ಎಂದು ಹೇಳಿ ಕಳುಹಿಸಿದನು.

9 ಆ ಜನರು ಹೊರಟು ದೇಶದಲ್ಲೆಲ್ಲಾ ಸಂಚರಿಸಿ ಒಂದು ಪುಸ್ತಕದಲ್ಲಿ ಅದರ ಗ್ರಾಮನಗರಗಳನ್ನೆಲ್ಲಾ ಬರೆದು ಏಳು ಭಾಗಗಳನ್ನು ಮಾಡಿ ಶೀಲೋವಿನಲ್ಲಿದ್ದ ಯೆಹೋಶುವನ ಪಾಳೆಯಕ್ಕೆ ಹಿಂದಿರುಗಿ ಬಂದರು.

10 ಯೆಹೋಶುವನು ಶೀಲೋವಿನಲ್ಲಿಯೇ ಯೆಹೋವನ ಮುಂದೆ ಅವರಿಗೋಸ್ಕರ ಚೀಟುಹಾಕಿ ದೇಶವನ್ನು ಅವರ ಶಾಖೆಗಳಿಗೆ ಹಂಚಿಕೊಟ್ಟನು.


ಬೆನ್ಯಾಮೀನ್ಯರ ಸ್ವಾಸ್ತ್ಯವು

11 ಚೀಟು ಮೊದಲು ಬೆನ್ಯಾಮೀನ್ ಕುಲದವರಿಗೆ ಬಿದ್ದಿತು. ಅವರ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವು ಯೆಹೂದ್ಯರ ಮತ್ತು ಯೋಸೇಫ್ಯರ ಪ್ರಾಂತಗಳ ಮಧ್ಯದಲ್ಲಿರುತ್ತದೆ.

12 ಅದರ ಉತ್ತರದಿಕ್ಕಿನ ಮೇರೆಯು ಯೊರ್ದನ್ ಹೊಳೆಯಿಂದ ತೊಡಗಿ ಯೆರಿಕೋವಿನ ಉತ್ತರದಲ್ಲಿರುವ ಗುಡ್ಡದ ಮೇಲಿನಿಂದ ಪಶ್ಚಿಮಕ್ಕೆ ಹೋಗಿ ಗಟ್ಟಾಹತ್ತಿ ಬೇತಾವೆನಿನ ಬೈಲಿನಲ್ಲಿ ಮುಗಿಯುತ್ತದೆ.

13 ಅಲ್ಲಿಂದ ದಕ್ಷಿಣಕ್ಕೆ ತಿರುಗಿಕೊಂಡು ಈಗ ಬೇತೇಲ್ ಅನ್ನಿಸಿಕೊಳ್ಳುವ ಲೂಜ್ ಊರಿರುವ ಬೆಟ್ಟಕ್ಕೆ ಹೋಗಿ ಅಲ್ಲಿಂದ ಇಳಿದು ಅಟಾರೋತದ್ದಾರಿನ ಮೇಲೆ ಕೆಳಗಿನ ಬೇತ್‍ಹೋರೋನಿನ ಬಳಿಯಲ್ಲಿರುವ ಬೆಟ್ಟಕ್ಕೆ ಹೋಗುತ್ತದೆ.

14 ಮೇರೆಯ ಪಶ್ಚಿಮದ ಮೂಲೆಯಾಗಿರುವ ಈ ಬೆಟ್ಟದಿಂದ ಅದು ದಕ್ಷಿಣಕ್ಕೆ ತಿರುಗಿಕೊಂಡು ಕಿರ್ಯತ್‍ಬಾಳ್ ಅನ್ನಿಸಿಕೊಳ್ಳುತ್ತಿದ್ದ ಯೆಹೂದ್ಯರ ಕಿರ್ಯತ್ಯಾರೀಮ್ ಎಂಬ ಪಟ್ಟಣದಲ್ಲಿ ಮುಗಿಯುತ್ತದೆ. ಇದೇ ಅವರ ಪಡುವಣ ಮೇರೆ.

15 ದಕ್ಷಿಣದಿಕ್ಕಿನ ಮೇರೆಯು ಪಡುವಣ ಮೂಲೆಯಾಗಿರುವ ಕಿರ್ಯತ್ಯಾರೀವಿುನ ಪ್ರಾಂತದಿಂದ ತೊಡಗಿ

16 ನೆಫ್ತೋಹ ಬುಗ್ಗೆಯ ಮೇಲೆ ಬೆನ್‍ಹಿನ್ನೋಮ್ ತಗ್ಗಿನ ಈಚೆಗೂ ರೆಫಾಯಿಮ್ ತಗ್ಗಿನ ಉತ್ತರದಲ್ಲಿಯೂ ಇರುವ ಬೆಟ್ಟದ ಅಂಚಿಗೆ ಹೋಗಿ ಅಲ್ಲಿಂದ ಯೆಬೂಸಿಯರ ಬೆಟ್ಟದ ದಕ್ಷಿಣದಲ್ಲಿದ್ದ ಬೆನ್‍ಹಿನ್ನೋಮ್ ತಗ್ಗಿನ ಮಾರ್ಗವಾಗಿ ಏನ್‍ರೋಗೆಲಿಗೆ ಬರುತ್ತದೆ.

17 ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಇಳಿಯುತ್ತಾ ಏನ್‍ಷೆಮೆಸ್, ಅದುಮೀವಿುನ ದಾರಿಯ ಎದುರಿನಲ್ಲಿರುವ ಗೆಲೀಲೋತ್, ರೂಬೇನನ ಮಗನಾದ ಬೋಹನನ ಬಂಡೆ,

18 ಅರಾಬದ ಉತ್ತರದಲ್ಲಿರುವ ಬೆಟ್ಟ ಇವುಗಳ ಮೇಲೆ ಅರಾಬಾ ಎಂಬ ತಗ್ಗಾದ ಪ್ರದೇಶಕ್ಕೆ ಹೋಗುತ್ತದೆ.

19 ಅಲ್ಲಿಂದ ಮೇರೆಯು ಬೇತ್‍ಹೊಗ್ಲಾ ಎಂಬ ಊರಿನ ಉತ್ತರದಲ್ಲಿರುವ ಗುಡ್ಡದ ಮೇಲೆ ಲವಣಸಮುದ್ರದ ಬಡಗಣ ಮೂಲೆಗೆ ಹೋಗಿ ಯೊರ್ದನ್ ಹೊಳೆಯು ಆ ಸಮುದ್ರಕ್ಕೆ ಕೂಡುವ ಸ್ಥಳದಲ್ಲಿ ಮುಗಿಯುತ್ತದೆ.

20 ಇದೇ ದಕ್ಷಿಣದಿಕ್ಕಿನ ಮೇರೆಯು. ಯೊರ್ದನ್ ಹೊಳೆಯೇ ಅವರ ಪೂರ್ವದಿಕ್ಕಿನ ಮೇರೆ. ಬೆನ್ಯಾಮೀನ್ ಗೋತ್ರಗಳ ಸ್ವಾಸ್ತ್ಯದ ಸುತ್ತಣ ಮೇರೆಯು ಇದೇ.

21 ಬೆನ್ಯಾಮೀನ್ ಗೋತ್ರಗಳಿಗೆ ದೊರಕಿದ ಪಟ್ಟಣಗಳಾವವಂದರೆ - ಯೆರಿಕೋ, ಬೇತ್‍ಹೊಗ್ಲಾ,

22 ಏಮೆಕ್ಕೆಚ್ಚೀಚ್, ಬೇತ್ಅರಾಬಾ, ಚೆಮಾರಯಿಮ್,

23-24 ಬೇತೇಲ್, ಅವ್ವೀಮ್, ಪಾರಾ, ಒಫ್ರಾ, ಅಮ್ಮೋನ್ಯ, ಕೆಫೆರ್, ಒಫ್ನೀ, ಗೆಬಾ ಎಂಬ ಹನ್ನೆರಡು ನಗರಗಳೂ ಅವುಗಳ ಗ್ರಾಮಗಳೂ;

25 ಮತ್ತು ಗಿಬ್ಯೋನ್, ರಾಮಾ, ಬೇರೋತ್, ವಿುಚ್ಪೆ, ಕೆಫೀರಾ,

26-27 ಮೋಚಾ, ರೆಕೆಮ್, ಇರ್ಪೇಲ್, ತರಲಾ, ಚೇಲ,

28 ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ನಗರಗಳೂ ಅವುಗಳ ಗ್ರಾಮಗಳೂ ಇವೇ. ಬೆನ್ಯಾಮೀನ್ ಗೋತ್ರಗಳಿಗೆ ಸಿಕ್ಕಿದ ಸ್ವಾಸ್ತ್ಯವು ಇದೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು