ಯೆಹೋಶುವ 17 - ಕನ್ನಡ ಸತ್ಯವೇದವು J.V. (BSI)ಮನಸ್ಸೆಕುಲದ ಸ್ವಾಸ್ತ್ಯವು 1 ಯೋಸೇಫನ ಚೊಚ್ಚಲಮಗನಾದ ಮನಸ್ಸೆಯ ವಂಶದವರಿಗೆ ಸಿಕ್ಕಿದ ಸ್ವಾಸ್ತ್ಯದ ವಿವರ. ಮನಸ್ಸೆಯ ಹಿರೀಮಗನೂ ಗಿಲ್ಯಾದನ ತಂದೆಯೂ ಆಗಿರುವ ಮಾಕೀರನು ಯುದ್ಧವೀರನಾದದರಿಂದ ಅವನಿಗೆ ಗಿಲ್ಯಾದ್, ಬಾಷಾನ್ ಎಂಬ ಪ್ರಾಂತಗಳು ಸಿಕ್ಕಿದವು. 2 ಯೋಸೇಫನ ಮಗನಾಗಿರುವ ಮನಸ್ಸೆಯ ಉಳಿದ ಗಂಡು ಮಕ್ಕಳಾದ ಅಬೀಯೆಜೆರ್, ಹೇಲೆಕ್, ಅಸ್ರೀಯೇಲ್, ಶೆಕೆಮ್, ಹೇಫೆರ್, ಶೆಮೀದಾ ಎಂಬವರ ವಂಶದವರಿಗೆ [ಯೊರ್ದನಿನ ಈಚೆಯಲ್ಲಿ] ಸ್ವಾಸ್ತ್ಯವು ಸಿಕ್ಕಿತು. 3 ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನೂ ಆದ ಚಲ್ಪಹಾದನಿಗೆ ಹೆಣ್ಣುಮಕ್ಕಳು ಹುಟ್ಟಿದರೇ ಹೊರತು ಗಂಡು ಮಕ್ಕಳು ಹುಟ್ಟಲಿಲ್ಲ. ಮಹ್ಲಾ, ನೋವಾ, ಹೊಗ್ಲಾ, ವಿುಲ್ಕಾ, ತಿರ್ಚಾ ಎಂಬವರು ಅವನ ಹೆಣ್ಣುಮಕ್ಕಳು. 4 ಇವರು ಮಹಾಯಾಜಕನಾದ ಎಲ್ಲಾಜಾರ್, ನೂನನ ಮಗನಾದ ಯೆಹೋಶುವ, ಕುಲಾಧಿಪತಿಗಳು ಇವರ ಬಳಿಗೆ ಬಂದು - ನಮ್ಮ ಅಣ್ಣತಮ್ಮಂದಿರ ಮಧ್ಯದಲ್ಲಿ ನಮಗೆ ಪಾಲುಕೊಡಬೇಕೆಂದು ಯೆಹೋವನು ಮೋಶೆಗೆ ಆಜ್ಞಾಪಿಸಿದನಲ್ಲಾ ಎಂದು ಹೇಳಲು ಯೆಹೋಶುವನು ಯೆಹೋವನ ಅಪ್ಪಣೆಯಂತೆ ಅವರಿಗೆ ಅವರ ತಂದೆಯ ಅಣ್ಣತಮ್ಮಂದಿರ ಮಧ್ಯದಲ್ಲಿ ಸ್ವಾಸ್ತ್ಯವನ್ನು ಕೊಟ್ಟನು. 5 ಮನಸ್ಸೆಕುಲದ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ಸಂಗಡ ಸ್ವಾಸ್ತ್ಯದೊರಕಿದ್ದರಿಂದ ಮನಸ್ಸೆಯವರಿಗೆ ಯೊರ್ದನಿನ ಆಚೆಯಿದ್ದ ಬಾಷಾನ್ ಗಿಲ್ಯಾದ್ ಪ್ರಾಂತಗಳ ಹೊರತು ಈಚೆಯಲ್ಲಿಯೂ ಹತ್ತು ಪಾಲು ಸಿಕ್ಕಿದವು. 6 ಗಿಲ್ಯಾದ್ ಸೀಮೆಯು ಮನಸ್ಸೆಯ ಉಳಿದ ಗೋತ್ರಗಳಿಗೆ ಸಿಕ್ಕಿತು. 7 ಮನಸ್ಸೆಯವರ ಸ್ವಾಸ್ತ್ಯದ ಮೇರೆಯು ಆಶೇರ್ ಊರಿನಿಂದ ತೊಡಗಿ ಶೆಕೆವಿುನ ಪೂರ್ವದಲ್ಲಿರುವ ವಿುಕ್ಮೆತಾತಿನ ಮೇಲೆ ದಕ್ಷಿಣದಲ್ಲಿರುವ ತಪ್ಪೂಹದ ಬುಗ್ಗೆಗೆ ಹೋಗುತ್ತದೆ. 8 ತಪ್ಪೂಹ ಪಟ್ಟಣಕ್ಕೆ ಸೇರುವ ಭೂವಿುಯು ಮನಸ್ಸೆಯವರದು; ಆದರೆ ಅವರ ಮೇರೆಗೆ ಹೊಂದಿರುವ ತಪ್ಪೂಹ ಪಟ್ಟಣವು ಎಫ್ರಾಯೀಮ್ಯರದು. 9 ಅಲ್ಲಿಂದ ಮೇರೆಯು ಇಳಿಯುತ್ತಾ ಕಾನಾ ಹಳ್ಳದ ದಕ್ಷಿಣಕ್ಕೆ ಹೋಗುತ್ತದೆ. ಅಲ್ಲಿ ಮನಸ್ಸೆಯವರಿಗಿರುವಂತೆ ಎಫ್ರಾಯೀಮ್ಯರಿಗೂ ಕೆಲವು ಪಟ್ಟಣಗಳಿರುತ್ತವೆ. ಮನಸ್ಸೆಯವರ ಮುಂದಿನ ಮೇರೆಯು ಹಳ್ಳದ ಉತ್ತರ ತೀರವನ್ನನುಸರಿಸಿ ಹೋಗಿ ಸಮುದ್ರದ ದಡದಲ್ಲಿ ಮುಗಿಯುವದು. 10 ಹಳ್ಳದ ದಕ್ಷಿಣ ತೀರವು ಎಫ್ರಾಯೀಮ್ಯರದು; ಉತ್ತರ ತೀರವು ಮನಸ್ಸೆಯವರದು. ಮಹಾಸಾಗರವೇ ಇವರ ಪಶ್ಚಿಮದ ಮೇರೆ. ಉತ್ತರಕ್ಕೆ ಆಶೇರ್ ಕುಲದವರ ಪ್ರಾಂತವೂ ಪೂರ್ವಕ್ಕೆ ಇಸ್ಸಾಕಾರ್ ಕುಲದವರ ದೇಶವೂ ಇರುತ್ತವೆ. 11 ಇದಲ್ಲದೆ ಮನಸ್ಸೆಯವರಿಗೆ ಇಸ್ಸಾಕಾರ್, ಆಶೇರ್ ಎಂಬವರ ಪ್ರಾಂತಗಳಲ್ಲಿ ಬೇತ್‍ಷೆಯಾನ್, ಇಬ್ಲೆಯಾಮ್, ದೋರ್ ಎಂಬ ಪಟ್ಟಣಗಳೂ ಅವುಗಳ ಗ್ರಾಮಗಳೂ ದುರ್ಗತ್ರಯವಾದ ಎಂದೋರ್, ತಾನಕ್, ಮೆಗಿದ್ದೋ ಎಂಬ ಪಟ್ಟಣಗಳೂ ಅವುಗಳಿಗೆ ಸೇರಿದ ಊರುಗಳೂ ಸಿಕ್ಕಿದವು. 12 ಆದರೆ ಮನಸ್ಸೆಯವರು ಆ ಪಟ್ಟಣಗಳ ನಿವಾಸಿಗಳನ್ನು ಹೊರಡಿಸಲಾರದವರಾದರು. ಕಾನಾನ್ಯರಿಗೆ ಅಲ್ಲಿ ವಾಸಿಸುವದಕ್ಕೆ ಅನುಕೂಲವಾಯಿತು. 13 ಇಸ್ರಾಯೇಲ್ಯರು ಬಲಗೊಂಡ ಮೇಲೆ ಕಾನಾನ್ಯರನ್ನು ಹೊರಡಿಸದೆ ಅವರನ್ನು ದಾಸತ್ವಕ್ಕೆ ಹಚ್ಚಿದರು. 14 ಆದರೆ ಯೋಸೇಫ್ಯರು ಯೆಹೋಶುವನಿಗೆ - ನೀನು ಚೀಟುಹಾಕಿ ನಮಗೆ ಒಂದೇ ಭಾಗವನ್ನು ಕೊಟ್ಟದ್ದೇಕೆ? ಯೆಹೋವನು ನಮ್ಮನ್ನು ಇಂದಿನವರೆಗೂ ಆಶೀರ್ವದಿಸಿದ್ದರಿಂದ ನಾವು ಮಹಾಜನಾಂಗವಾಗಿದ್ದೇವಲ್ಲಾ ಎಂದು ಹೇಳಲು 15 ಯೆಹೋಶುವನು ಅವರಿಗೆ - ಮಹಾಜನಾಂಗವಾದ ನಿಮಗೆ ಎಫ್ರಾಯೀಮ್ ಬೆಟ್ಟದ ಸೀಮೆ ಸಾಲದಿದ್ದರೆ ಪೆರಿಜ್ಜೀಯರ ಮತ್ತು ರೆಫಾಯರ ಸೀಮೆಗಳಿಗೆ ಹೋಗಿ ಅಲ್ಲಿನ ಕಾಡು ಕಡಿದು ಸ್ಥಳಮಾಡಿಕೊಳ್ಳಿರಿ ಅಂದನು. 16 ಅವರು ತಿರಿಗಿ ಯೆಹೋಶುವನಿಗೆ - ನಮ್ಮ ಪರ್ವತಪ್ರದೇಶವು ನಮಗೆ ಸಾಲುವದಿಲ್ಲ; ಬೇತ್‍ಷೆಯಾನ್ ಮತ್ತು ಅದಕ್ಕೆ ಸೇರಿದ ಊರುಗಳಿರುವ ತಗ್ಗಿನಲ್ಲಿಯೂ ಇಜ್ರೇಲಿನ ತಗ್ಗಿನಲ್ಲಿಯೂ ವಾಸಿಸುವ ಕಾನಾನ್ಯರೆಲ್ಲರಿಗೆ ಕಬ್ಬಿಣದ ರಥಗಳಿವೆ ಅನ್ನಲು 17 ಅವನು ಯೋಸೇಫ್ಯರಾದ ಎಫ್ರಾಯೀಮ್ ಮನಸ್ಸೆ ಕುಲಗಳ ಜನರಿಗೆ - ನೀವು ಮಹಾಜನಾಂಗವೂ ಬಹುಬಲವುಳ್ಳವರೂ ಆಗಿರುವದು ನಿಜ; ನೀವು ಒಂದು ಭಾಗಕ್ಕಿಂತ ಹೆಚ್ಚು ತೆಗೆದುಕೊಳ್ಳಬಹುದಲ್ಲಾ! 18 ಆ ಬೆಟ್ಟದ ಸೀಮೆಯನ್ನು ನಿಮಗೆ ಕೊಟ್ಟಿರುತ್ತೇನೆ. ಅದರಲ್ಲಿ ಕಾಡುಗಳಿದ್ದರೂ ನೀವು ಅವುಗಳನ್ನು ಕಡಿದು ಹಾಕಬಹುದು. ಅದಕ್ಕೆ ಸೇರಿರುವ ಬೈಲೂ ನಿಮ್ಮದೇ. ಕಾನಾನ್ಯರು ಬಲಿಷ್ಠರಾಗಿ ಕಬ್ಬಿಣದ ರಥಗಳುಳ್ಳವರಾಗಿದ್ದರೂ ನೀವು ಅವರನ್ನು ಹೊರಡಿಸುವಿರಿ ಎಂದು ಉತ್ತರಕೊಟ್ಟನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India