ಯೆಹೋಶುವ 14 - ಕನ್ನಡ ಸತ್ಯವೇದವು J.V. (BSI)ಉಳಿದ ಇಸ್ರಾಯೇಲ್ಯರಿಗೆ ಯೊರ್ದನಿನ ಪಶ್ಚಿಮದಲ್ಲಿ ಸ್ವಾಸ್ತ್ಯವು ಸಿಕ್ಕಿದ್ದು 1 ಮಹಾಯಾಜಕ ಎಲ್ಲಾಜಾರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲ್ ಕುಲಾಧಿಪತಿಗಳೂ 2 ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದಂತೆ [ಯೊರ್ದನಿನ ಪಶ್ಚಿಮದ] ಕಾನಾನ್ ದೇಶವನ್ನು ಚೀಟುಹಾಕಿ ಇಸ್ರಾಯೇಲ್ಯರ ಒಂಭತ್ತುವರೆ ಕುಲದವರಿಗೆ ಸ್ವಾಸ್ತ್ಯವಾಗಿ ಹಂಚಿಕೊಟ್ಟರು. 3 ಉಳಿದ ಎರಡುವರೆ ಕುಲಗಳ ಜನರಿಗೆ ಯೊರ್ದನಿನ ಆಚೆಯಲ್ಲಿ ಮೋಶೆಯೇ ಸ್ವಾಸ್ತ್ಯವನ್ನು ಕೊಟ್ಟಿದ್ದನು. 4 ಲೇವಿಯರಿಗೆ ಮಾತ್ರ ಕೊಡಲಿಲ್ಲ. ಯೋಸೇಫ್ಯರು ಮನಸ್ಸೆ, ಎಫ್ರಾಯೀಮ್ ಎಂಬ ಎರಡು ಕುಲಗಳಾಗಿ ಎಣಿಸಲ್ಪಟ್ಟರಲ್ಲಾ; ಲೇವಿಯರಿಗೆ ಕೆಲವು ಪಟ್ಟಣಗಳೂ ಅವರ ದನಕುರಿಗಳಿಗೋಸ್ಕರ ಅವುಗಳಿಗೆ ಸೇರಿದ ಹುಲ್ಲುಗಾವಲುಗಳೂ ಹೊರತಾಗಿ ಬೇರೇನೂ ಸಿಕ್ಕಲಿಲ್ಲ. 5 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ದೇಶವನ್ನು ಹಂಚಿಕೊಂಡರು. ಕಾಲೇಬನ ಸ್ವಾಸ್ತ್ಯವು 6 ಯೆಹೋಶುವನು ಗಿಲ್ಗಾಲಿನಲ್ಲಿದ್ದಾಗ ಯೆಹೂದ ಕುಲದವರು ಅವನ ಬಳಿಗೆ ಬಂದರು. ಅವರಲ್ಲಿ ಕೆನಿಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಅವನಿಗೆ - ಯೆಹೋವನು ಕಾದೇಶ್ ಬರ್ನೇಯದಲ್ಲಿ ನಮ್ಮಿಬ್ಬರ ವಿಷಯವಾಗಿ ದೇವರ ಮನುಷ್ಯನಾದ ಮೋಶೆಗೆ ಹೇಳಿದ್ದು ನಿನಗೆ ಗೊತ್ತಿರುವದಷ್ಟೆ. 7 ಯೆಹೋವನ ಸೇವಕನಾದ ಮೋಶೆಯು ಈ ದೇಶವನ್ನು ಸಂಚರಿಸಿನೋಡುವದಕ್ಕೋಸ್ಕರ ಕಾದೇಶ್‍ಬರ್ನೇಯದಿಂದ ನನ್ನನ್ನು ಕಳುಹಿಸಿದಾಗ ನನಗೆ ನಾಲ್ವತ್ತು ವರುಷವಾಗಿತ್ತು. 8 ನನ್ನ ಜೊತೆಯಲ್ಲಿ ಬಂದಿದ್ದ ಸಹೋದರರು ಜನರನ್ನು ಎದೆಗೆಡಿಸಿದರು. ನಾನಾದರೋ ನನ್ನ ದೇವರಾದ ಯೆಹೋವನನ್ನೇ ಸಂಪೂರ್ಣವಾಗಿ ನಂಬಿಕೊಂಡು ಯಥಾರ್ಥವನ್ನೇ ಹೇಳಿದೆನು. 9 ಮೋಶೆಯು ಆ ದಿವಸ - ನೀನು ಪೂರ್ಣಮನಸ್ಸಿನಿಂದ ನನ್ನ ದೇವರಾದ ಯೆಹೋವನನ್ನು ಹೊಂದಿಕೊಂಡದರಿಂದ ನೀನು ಸಂಚರಿಸಿದ ಪ್ರದೇಶವು ನಿನಗೂ ನಿನ್ನ ಸಂತಾನದವರಿಗೂ ಶಾಶ್ವತ ಸ್ವಾಸ್ತ್ಯವಾಗುವದು ಎಂದು ಪ್ರಮಾಣಮಾಡಿ ನನಗೆ ಹೇಳಿದನು. 10 ಯೆಹೋವನು ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆಯುತ್ತಿದ್ದ ವರುಷಗಳೂ ಸೇರಿ ನಾಲ್ವತ್ತೈದು ವರುಷಗಳು ದಾಟಿದವು. ಯೆಹೋವನು ತಾನು ನುಡಿದಂತೆಯೇ ಈ ಕಾಲವೆಲ್ಲಾ ನನ್ನನ್ನು ಜೀವದಿಂದುಳಿಸಿದ್ದಾನೆ. ಈಗ ನಾನು ಎಂಭತ್ತೈದು ವರುಷದವನಾಗಿದ್ದೇನೆ. 11 ಮೋಶೆಯು ನನ್ನನ್ನು ಕಳುಹಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟಿದೆ. ಯುದ್ಧಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಮುಂಚಿನಂತೆಯೇ ಶಕ್ತಿಯಿರುತ್ತದೆ. 12 ಹೀಗಿರಲಾಗಿ ಯೆಹೋವನು ಆ ದಿನದಲ್ಲಿ ಸೂಚಿಸಿದಂಥ ಈ ಪರ್ವತಪ್ರದೇಶವನ್ನು ನನಗೆ ಕೊಡು. ಇದರಲ್ಲಿ ಉನ್ನತ ಪುರುಷರಿರುತ್ತಾರೆಂದೂ ಇದರ ಪಟ್ಟಣಗಳು ದೊಡ್ಡವೂ ಕೋಟೆಕೊತ್ತಲುಳ್ಳವುಗಳೂ ಆಗಿವೆ ಎಂದೂ ಆ ಕಾಲದಲ್ಲಿ ನೀನು ಕೇಳಿದಿಯಲ್ಲಾ. ಅವರೆಲ್ಲರನ್ನೂ ಓಡಿಸಿ ಬಿಡುವದಕ್ಕೋಸ್ಕರ ಯೆಹೋವನು ತನ್ನ ಮಾತಿಗನುಸಾರವಾಗಿ ನನಗೆ ಸಹಾಯ ಮಾಡುವನೆಂದು ನಿರೀಕ್ಷಿಸಿಕೊಂಡಿದ್ದೇನೆ ಅಂದನು. 13 ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ ಹೆಬ್ರೋನ್ ಪಟ್ಟಣವನ್ನು ಅವನಿಗೆ ಸ್ವಾಸ್ತ್ಯವಾಗಿ ಕೊಟ್ಟನು. 14 ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಾಯೇಲ್‍ದೇವರಾದ ಯೆಹೋವನನ್ನು ಸಂಪೂರ್ಣವಾಗಿ ಹೊಂದಿಕೊಂಡದರಿಂದ ಹೆಬ್ರೋನ್ ಅವನಿಗೆ ಸ್ವಾಸ್ತ್ಯವಾಗಿ ಸಿಕ್ಕಿತು. ಅದು ಇಂದಿನವರೆಗೂ ಅವನದೇ ಆಗಿರುತ್ತದೆ. 15 ಅದರ ಮುಂಚಿನ ಹೆಸರು ಕಿರ್ಯತ್ಅರ್ಬ ಎಂಬದು. ಅರ್ಬ ಎಂಬವನು ಉನ್ನತ ಪುರುಷರಲ್ಲಿ ಪ್ರಮುಖನು. ಯುದ್ಧವು ನಿಂತು ದೇಶದಲ್ಲಿ ಸಮಾಧಾನವುಂಟಾಯಿತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India