ಯೆಹೋಶುವ 13 - ಕನ್ನಡ ಸತ್ಯವೇದವು J.V. (BSI)ಯೆಹೋಶುವನು ಇಸ್ರಾಯೇಲ್ಯರಿಗೆ ಕಾನಾನ್ ದೇಶವನ್ನು ಹಂಚಿಕೊಟ್ಟದ್ದು ( 13—21 ) ದೇಶವನ್ನು ಹಂಚಿಕೊಡಬೇಕೆಂಬ ಅಪ್ಪಣೆ 1 ಯೆಹೋಶುವನು ದಿನತುಂಬಿದ ಮುದುಕನಾಗಲು ಯೆಹೋವನು ಅವನಿಗೆ - ನೀನು ಈಗ ಮುದುಕನಾದಿ; ಸ್ವಾಧೀನಮಾಡಿಕೊಳ್ಳತಕ್ಕ ದೇಶಗಳು ಇನ್ನೂ ಬಹಳ ಇರುತ್ತವೆ. 2-3 ಅವು ಯಾವವಂದರೆ - ಐಗುಪ್ತದ ಈಚೆಯಲ್ಲಿರುವ ಶೀಹೋರ್ ಹಳ್ಳ ಮೊದಲುಗೊಂಡು ಕಾನಾನ್ಯರಿಗೆ ಸೇರಿದ್ದ ಉತ್ತರ ಮೇರೆಯಾದ ಎಕ್ರೋನಿನವರೆಗಿದ್ದು ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರು, ಎಕ್ರೋನ್ ಎಂಬ ಪಟ್ಟಣಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯವು, 4 ಗೆಷೂರ್ಯರ ಸೀಮೆಯು, ದಕ್ಷಿಣದಲ್ಲಿದ್ದ ಅವ್ವೀಯರ ದೇಶವು ಇವುಗಳೂ ಚೀದೋನ್ಯರಿಗೆ ಸೇರಿದ ಮೆಯಾರಾ ಮೊದಲುಗೊಂಡು ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ದೇಶವು, 5 ಗೆಬಾಲ್ಯರ ಸೀಮೆ, ಹೆರ್ಮೋನ್ ಬೆಟ್ಟದ ಬುಡದಲ್ಲಿರುವ ಬಾಲ್ಗಾದಿನಿಂದ ಹಾಮಾತಿನ ದಾರಿಯವರೆಗಿರುವ ಲೆಬನೋನಿನ ಪೂರ್ವಪ್ರದೇಶ, 6 ಒಟ್ಟಾರೆ ಲೆಬನೋನಿನಿಂದ ವಿುಸ್ರೆಫೋತ್ಮಯಿವಿುನವರೆಗಿರುವ ಚೀದೋನ್ಯರ ಎಲ್ಲಾ ಪರ್ವತ ಪ್ರಾಂತ್ಯಗಳೂ ಇವೇ. ನಾನೇ ಈ ಎಲ್ಲಾ ಜನಾಂಗಗಳನ್ನು ಇಸ್ರಾಯೇಲ್ಯರ ಎದುರಿನಿಂದ ಹೊರಡಿಸಿಬಿಡುವೆನು. ನೀನಾದರೋ ನಾನು ಮೊದಲೇ ಆಜ್ಞಾಪಿಸಿದಂತೆ ಇಸ್ರಾಯೇಲ್ಯರಿಗೆ ದೇಶವನ್ನು ಹಂಚಿಕೊಡುವಾಗ 7 ಇವುಗಳನ್ನೂ ಸೇರಿಸಿ ದೇಶವನ್ನೆಲ್ಲಾ ಒಂಭತ್ತು ಕುಲಗಳಿಗೂ ಮನಸ್ಸೆಕುಲದ ಅರ್ಧಜನರಿಗೂ ಪಾಲುಮಾಡಿ ಕೊಡು ಅಂದನು. ಯೊರ್ದನಿನ ಪೂರ್ವದಲ್ಲಿ ಎರಡುವರೆ ಕುಲಗಳಿಗೆ ಸಿಕ್ಕಿದ ಸ್ವಾಸ್ತ್ಯ 8 ಮನಸ್ಸೆಕುಲದ ಉಳಿದ ಅರ್ಧಜನರಿಗೂ ರೂಬೇನ್ಯರಿಗೂ ಗಾದ್ಯರಿಗೂ ಮೋಶೆಯಿಂದ ಯೊರ್ದನಿನ ಆಚೆಯಲ್ಲೇ ಸ್ವಾಸ್ತ್ಯವು ದೊರಕಿತು. ಯೆಹೋವನ ಸೇವಕನಾದ ಮೋಶೆಯು ಅವರಿಗೆ ಕೊಟ್ಟ ಪ್ರಾಂತಗಳು ಯಾವವಂದರೆ - 9 ಅರ್ನೋನ್ ತಗ್ಗಿನ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣವು ಮತ್ತು ತಗ್ಗಿನಲ್ಲಿಯೇ ಇದ್ದ ಪಟ್ಟಣವು ಇವು ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬದ ತಪ್ಪಲಸೀಮೆ, 10 ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯ ಅರಸನಾದ ಸೀಹೋನನ ವಶದಲ್ಲಿದ್ದು ಅಮ್ಮೋನಿಯರ ಮೇರೆಯ ಈಚೆಗಿದ್ದಂಥ ಎಲ್ಲಾ ಪಟ್ಟಣಗಳು, 11 ಗಿಲ್ಯಾದ್ ಸೀಮೆಯು, ಗೆಷೂರ್ಯರ ಮತ್ತು ಮಾಕತೀಯರ ಪ್ರಾಂತ್ಯಗಳು, ಹೆರ್ಮೋನ್ ಬೆಟ್ಟದ ಮೇಲಿನ ಎಲ್ಲಾ ಪ್ರದೇಶವು, 12 ಅಷ್ಟರೋತ್, ಎದ್ರೈ ಎಂಬ ಊರುಗಳಲ್ಲಿ ಆಳುತ್ತಿದ್ದ ರೆಫಾಯರ ವಂಶಸ್ಥನಾದ ಓಗನ ರಾಜ್ಯವಾಗಿದ್ದು ಸಲ್ಕಾಪಟ್ಟಣದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು ಇವುಗಳೇ. ಮೋಶೆಯೇ ಅವರನ್ನು ಜಯಿಸಿ ಅವರ ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದನು. 13 ಇಸ್ರಾಯೇಲ್ಯರು ಗೆಷೂರ್ಯರನ್ನೂ ಮಾಕತೀಯರನ್ನೂ ದೇಶದೊಳಗಿಂದ ಅಟ್ಟಿಬಿಡಲಿಲ್ಲ. ಅವರು ಇಂದಿನವರೆಗೂ ಇಸ್ರಾಯೇಲ್ಯರ ಮಧ್ಯದಲ್ಲಿಯೇ ಇರುತ್ತಾರೆ. 14 ಲೇವಿ ಕುಲದವರಿಗೆ ಮಾತ್ರ ಪಾಲು ಸಿಕ್ಕಲಿಲ್ಲ. ಇಸ್ರಾಯೇಲ್ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಆತನ ಯಜ್ಞಶೇಷವೇ ಅವರ ಸ್ವಾಸ್ತ್ಯ. 15 ಮೋಶೆಯು ರೂಬೇನ್ಯರ ಗೋತ್ರಗಳಿಗೆ ಸ್ವಾಸ್ತ್ಯವಾಗಿ ಕೊಟ್ಟ ಪ್ರದೇಶಗಳು ಯಾವವಂದರೆ - 16 ಅರ್ನೋನ್ ತಗ್ಗಿನ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ, ಆ ತಗ್ಗಿನ ಮಧ್ಯದಲ್ಲಿದ್ದ ಪಟ್ಟಣ ಇವುಗಳೂ 17 ಮೇದೆಬದ ತಪ್ಪಲಸೀಮೆಗೆ ಸೇರಿದ ಹೆಷ್ಬೋನ್ ಪಟ್ಟಣವೂ ಅದೇ ಎತ್ತರವಾದ ಬೈಲಿನಲ್ಲಿರುವ ದೀಬೋನ್, ಬಾಮೋತ್‍ಬಾಳ್, ಬೇತ್ಬಾಳ್ಮೆಯೋನ್, 18 ಯಹಚಾ, ಕೆದೇಮೋತ್, ಮೇಫಾಯತ್, 19 ಕಿರ್ಯಾತಯಿಮ್, ಸಿಬ್ಮಾ ಎಂಬ ಹೆಷ್ಬೋನಿನ ಉಪಗ್ರಾಮಗಳೂ ತಗ್ಗಿನಲ್ಲಿರುವ ಬೆಟ್ಟದ ಮೇಲಿನ ಚೆರೆತ್ ಶಹರ್, 20 ಬೇತ್ಪೆಗೋರ್ ಎಂಬ ಪಟ್ಟಣಗಳೂ ಪಿಸ್ಗದ ಬುಡದಲ್ಲಿರುವ ಸೀಮೆ, ಬೇತ್‍ಯೆಷಿಮೋತ್ ಪಟ್ಟಣ ಇವುಗಳೂ 21 ಒಟ್ಟಾರೆ ಮೀಶೋರೆಂಬ ಎತ್ತರವಾದ ಬೈಲಿನಲ್ಲಿದ್ದ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸನಾದ ಸೀಹೋನನ ಸಮಸ್ತರಾಜ್ಯವೂ ಇವುಗಳೇ. ಮೋಶೆಯು ಆ ದೇಶದಲ್ಲಿ ವಾಸವಾಗಿದ್ದ ಸೀಹೋನನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ವಿುದ್ಯಾನ್ ಪ್ರಭುಗಳಾಗಿರುವ ಅವನ ಸರದಾರರನ್ನೂ ಹೊಡೆದುಹಾಕಿದನು. 22 ಇಸ್ರಾಯೇಲ್ಯರು ಕತ್ತಿಯಿಂದ ಸಂಹರಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಇದ್ದನು. 23 ಯೊರ್ದನ್ ಹೊಳೆಯು ರೂಬೇನ್ಯರ [ಪಡುವಣ] ಮೇರೆಯಾಗಿತ್ತು. ರೂಬೇನ್ ಗೋತ್ರಗಳಿಗೆ ಸ್ವಾಸ್ತ್ಯವಾಗಿ ಸಿಕ್ಕಿದ ಗ್ರಾಮನಗರಗಳು ಇವೇ. 24 ಮೋಶೆಯು ಗಾದ್ ಕುಲದ ಗೋತ್ರಗಳಿಗೆ ಸ್ವಾಸ್ತ್ಯವಾಗಿ ಕೊಟ್ಟ ಪ್ರದೇಶಗಳು ಯಾವವಂದರೆ - 25 ಹೆಷ್ಬೋನಿನ ಅರಸನಾದ ಸೀಹೋನನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್ ಮೊದಲಾದ ಗಿಲ್ಯಾದಿನ ಎಲ್ಲಾ ಪಟ್ಟಣಗಳು, ರಬ್ಬಾ ಊರಿನ ಪೂರ್ವದಲ್ಲಿರುವ ಅರೋಯೇರ್ ಪಟ್ಟಣದವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧರಾಜ್ಯ, 26 ಹೆಷ್ಬೋನಿನಿಂದ ರಾಮತ್‍ಮಿಚ್ಪೆ, ಬೆಟೋನೀಮ್ ಎಂಬ ಊರುಗಳವರೆಗೂ ಇರುವ ಪ್ರದೇಶ, ಮಹನಯಿವಿುನಿಂದ ದೆಬೀರ್ ಪ್ರಾಂತ್ಯದವರೆಗೂ ಇರುವ ಸೀಮೆ, 27 ಯೊರ್ದನ್ ತಗ್ಗಿನಲ್ಲಿರುವ ಬೇತ್‍ಹಾರಾಮ್, ಬೇತ್‍ನಿಮ್ರಾ, ಸುಕ್ಕೋತ್, ಚಾಫೋನ್ ಎಂಬ ಪಟ್ಟಣಗಳು, ಕಿನ್ನೆರೆತ್ ಸಮುದ್ರದ [ದಕ್ಷಿಣದಿಕ್ಕಿನ] ಮೂಲೆಯವರೆಗೆ ವಿಸ್ತರಿಸಿಕೊಂಡಿರುವ ಯೊರ್ದನ್ ಪೂರ್ವಪ್ರದೇಶ ಇವುಗಳೇ. 28 ಈ ಎಲ್ಲಾ ಗ್ರಾಮನಗರಗಳು ಗಾದ್ ಕುಲದ ಸ್ವಾಸ್ತ್ಯ. 29 ಮಹನಯಿವಿುನ [ಉತ್ತರದಲ್ಲಿದ್ದು] ಮೊದಲು ಬಾಷಾನಿನ ಅರಸನಾದ ಓಗನ ರಾಜ್ಯವಾಗಿದ್ದ ಎಲ್ಲಾ ಬಾಷಾನ್ ಸೀಮೆಯನ್ನು ಮೋಶೆಯು ಮನಸ್ಸೆ ಕುಲದ ಅರ್ಧಗೋತ್ರಗಳಿಗೆ ಕೊಟ್ಟನು. 30 ಯಾಯೀರನ ಗ್ರಾಮಗಳೆನಿಸಿಕೊಳ್ಳುವ ಅರುವತ್ತು ಊರುಗಳು ಇದರಲ್ಲೇ ಇರುತ್ತವೆ. 31 ಗಿಲ್ಯಾದಿನ ಅರ್ಧಭಾಗವೂ ಓಗನ ರಾಜಧಾನಿಗಳಾಗಿದ್ದ ಬಾಷಾನಿನ ಅಷ್ಟರೋತ್, ಎದ್ರೈ ಎಂಬ ಪಟ್ಟಣಗಳೂ ಮನಸ್ಸೆಯ ಮಗನಾದ ಮಾಕೀರನ ಗೋತ್ರದ ಅರ್ಧಜನರಿಗೆ ಸಿಕ್ಕಿದವು. 32 ಮೋಶೆಯು ಯೊರ್ದನಿನ ಆಚೆ ಯೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬೈಲಿನಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಾಸ್ತ್ಯವಾಗಿ ಕೊಟ್ಟನು. 33 ಆದರೆ ಲೇವಿಯ ಕುಲಕ್ಕೆ ಮೋಶೆಯು ಸ್ವಾಸ್ತ್ಯವನ್ನು ಕೊಡಲಿಲ್ಲ. ಇಸ್ರಾಯೇಲ್‍ದೇವರಾದ ಯೆಹೋವನ ವಾಗ್ದಾನದಂತೆ ಆತನೇ ಅವರ ಸ್ವಾಸ್ತ್ಯವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India