ಯೆಹೆಜ್ಕೇಲನು 48 - ಕನ್ನಡ ಸತ್ಯವೇದವು J.V. (BSI)1 [ಹಂಚುವಿಕೆಯನ್ನು ಅನುಸರಿಸಿ] ಕುಲಗಳ ಹೆಸರುಗಳು ಇವೇ; [ದೇಶದ] ಕೇವಲ ಉತ್ತರದಲ್ಲಿ ಹಮಾತ್ ಸೀಮೆಯ ಹತ್ತಿರ ದಾನಿಗೆ ಒಂದು ಪಾಲು; ಅದರ ಬಡಗಣ ಮೇರೆಯು ಹೆತ್ಲೋನಿನ ದಾರಿಯ ಪಕ್ಕದಲ್ಲಿ ಹೊರಟು ಹಮಾತಿನ ದಾರಿಯನ್ನು ದಾಟಿ ದಮಸ್ಕದ ಸರಹದ್ದಿನಲ್ಲಿರುವ ಹಚರ್ ಏನಾನಿನವರೆಗೆ ಹಬ್ಬುವದು; ಅದರ ಪಾರ್ಶ್ವಗಳು [ದೇಶದ] ಪೂರ್ವಪಶ್ಚಿಮಗಳ [ಎಲ್ಲೆಗಳ] ತನಕ ಚಾಚಿಕೊಂಡಿರುವವು. 2 ದಾನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಆಶೇರಿಗೆ ಒಂದು ಪಾಲು. 3 ಆಶೇರಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನಫ್ತಾಲಿಗೆ ಒಂದು ಪಾಲು. 4 ನಫ್ತಾಲಿಯ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಮನಸ್ಸೆಗೆ ಒಂದು ಪಾಲು. 5 ಮನಸ್ಸೆಯ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಎಫ್ರಾಯೀವಿುಗೆ ಒಂದು ಪಾಲು. 6 ಎಫ್ರಾಯೀವಿುನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ರೂಬೇನಿಗೆ ಒಂದು ಪಾಲು. 7 ರೂಬೇನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಯೆಹೂದಕ್ಕೆ ಒಂದು ಪಾಲು. 8 ಯೆಹೂದದ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ನೀವು ಮೀಸಲಾಗಿ ಸಮರ್ಪಿಸುವ ಪಾಲು ಇರುವದು; ಅದರ ಅಗಲವು ಇಪ್ಪತ್ತೈದು ಸಾವಿರ ಮೊಳ, ಉದ್ದವು ಪಡುವಲಿಂದ ಮೂಡಲಿಗೆ ಕುಲಗಳ ಪಾಲುಗಳ ಉದ್ದಕ್ಕೆ ಸರಿಸಮಾನ; ಅದರ ಮಧ್ಯದಲ್ಲಿ ಪವಿತ್ರಾಲಯವಿರುವದು. 9 ನೀವು [ಮೀಸಲು ಭೂವಿುಯಲ್ಲಿ] ಯೆಹೋವನಿಗೆ ವಿಶೇಷವಾದ ಮೀಸಲಾಗಿ ಸಮರ್ಪಿಸುವ ಪಾಲಿನ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಹತ್ತು ಸಾವಿರ ಮೊಳ. 10 ಮೀಸಲಾದ ಆ ಪವಿತ್ರಕ್ಷೇತ್ರವು ಯಾಜಕರಿಗೆ ಸಲ್ಲತಕ್ಕದ್ದು; ಬಡಗಲಲ್ಲಿ ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳ, ಪಡುವಲಲ್ಲಿ ಅಗಲವು ಹತ್ತು ಸಾವಿರ ಮೊಳ, ಮೂಡಲಲ್ಲಿ ಅಗಲವು ಹತ್ತು ಸಾವಿರ ಮೊಳ, ತೆಂಕಲಲ್ಲಿ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅದರ ಮಧ್ಯದಲ್ಲಿ ಯೆಹೋವನ ಪವಿತ್ರಾಲಯವಿರುವದು. 11 ಆ ಕ್ಷೇತ್ರವು ಚಾದೋಕನ ಸಂತಾನದವರಲ್ಲಿ ನನಗಾಗಿ ಪ್ರತಿಷ್ಠಿತರೂ ನನ್ನ ಆಲಯದ ಪಾರುಪತ್ಯವನ್ನು ನೆರವೇರಿಸಿದವರೂ ಆದ ಯಾಜಕರಿಗೇ ಸೇರತಕ್ಕದ್ದು; ಇಸ್ರಾಯೇಲ್ಯರು ನನ್ನನ್ನು ತೊರೆದಾಗ ಲೇವಿಯರೂ ತೊರೆದಂತೆ ಇವರು ತೊರೆಯಲಿಲ್ಲವಲ್ಲಾ. 12 ಲೇವಿಯರ ಪಾಲಿನ ಸರಹದ್ದಿಗೆ ಪಕ್ಕದಲ್ಲಿರುವ ಆ ಕ್ಷೇತ್ರವು ಅತಿಪವಿತ್ರವೂ ದೇಶದೊಳಗಣ ಮೀಸಲಲ್ಲಿ ಮೀಸಲೂ ಆಗಿ ಯಾಜಕರದಾಗಿರುವದು. 13 ಮತ್ತು ಇಪ್ಪತ್ತೈದು ಸಾವಿರ ಮೊಳ ಉದ್ದದ, ಹತ್ತು ಸಾವಿರ ಮೊಳ ಅಗಲದ ಒಂದು ಪಾಲು ಯಾಜಕರ ಪಾಲಿನ ಸರಹದ್ದಿಗೆ ಪಕ್ಕದಲ್ಲಿ ಲೇವಿಯರಿಗೆ ಸಲ್ಲತಕ್ಕದ್ದು; [ಈ ಎರಡು ಪಾಲುಗಳ] ಒಟ್ಟಳತೆ ಎಷ್ಟಂದರೆ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತು ಸಾವಿರ ಮೊಳ. 14 ಆ ಕ್ಷೇತ್ರವು ಯೆಹೋವನಿಗೆ ಮೀಸಲಾದದರಿಂದ ಅದರಲ್ಲಿ ಯಾವ ಭಾಗವನ್ನೂ ಮಾರಬಾರದು, ಬದಲಾಬದಲಿ ಮಾಡಕೂಡದು, ದೇಶದ ಆ ಶ್ರೇಷ್ಠಾಂಶವು ಪರವಶವಾಗದಿರಲಿ. 15 ಇಪ್ಪತ್ತೈದು ಸಾವಿರ ಮೊಳ ಉದ್ದದ ಆ ಕ್ಷೇತ್ರದ ಪಕ್ಕದಲ್ಲಿ [ಮೀಸಲುಪಾಲಿನ ಒಟ್ಟಳತೆಯಲ್ಲಿ] ವಿುಕ್ಕ ಐದು ಸಾವಿರ ಮೊಳ ಅಗಲದ ಭೂವಿುಯು ಮೀಸಲಲ್ಲವೆಂದೆಣಿಸಿ ರಾಜಧಾನಿಗೆ ಅಂದರೆ ಜನರ ನಿವಾಸಕ್ಕೂ ಸುತ್ತಣ ಪ್ರದೇಶಕ್ಕೂ ಪ್ರತ್ಯೇಕಿಸಲ್ಪಡಲಿ, ರಾಜಧಾನಿಯು ಅದರ ಮಧ್ಯದಲ್ಲಿರಲಿ. 16 ರಾಜಧಾನಿಯ ಆಳತೆಯು ಹೀಗಿರಬೇಕು; ಬಡಗಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ತೆಂಕಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ಮೂಡಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ, ಪಡುವಣ ಪಕ್ಕವು ನಾಲ್ಕು ಸಾವಿರದ ಐನೂರು ಮೊಳ. 17 ರಾಜಧಾನಿಗೆ ಸುತ್ತಣ ಪ್ರದೇಶವಿರಬೇಕು; ಅದರ ಅಗಲವು ಬಡಗಲಲ್ಲಿ ಇನ್ನೂರೈವತ್ತು ಮೊಳ, ತೆಂಕಲಲ್ಲಿ ಇನ್ನೂರೈವತ್ತು ಮೊಳ, ಮೂಡಲಲ್ಲಿ ಇನ್ನೂರೈವತ್ತು ಮೊಳ, ಪಡುವಲಲ್ಲಿ ಇನ್ನೂರೈವತ್ತು ಮೊಳ. 18 ರಾಜಧಾನಿ ಹೊರತು ಅದಕ್ಕೆ ಒಳಪಟ್ಟ ವಿುಕ್ಕ ಭೂವಿುಯ ಉದ್ದವು ಮೀಸಲಾದ ಪವಿತ್ರಕ್ಷೇತ್ರದ ಪಕ್ಕದಲ್ಲಿ ಮೂಡಲ ಕಡೆ ಹತ್ತು ಸಾವಿರ ಮೊಳ, ಪಡುವಲ ಕಡೆ ಹತ್ತು ಸಾವಿರ ಮೊಳ; ಆ ಭೂವಿುಯು ಮೀಸಲಾದ ಪವಿತ್ರಕ್ಷೇತ್ರದ ಎಲ್ಲೆಯನ್ನು ಅನುಸರಿಸಿರುವದು; ಅದರ ಉತ್ಪತ್ತಿಯು ಅದನ್ನು ಗೆಯ್ಯುವ ಆ ಪುರನಿವಾಸಿಗಳಿಗೆ ಆಹಾರವಾಗುವದು. 19 ಅವರು ಇಸ್ರಾಯೇಲಿನ ಯಾವ ಕುಲಕ್ಕೆ ಸೇರಿದ್ದರೂ ಪುರದಲ್ಲಿ ವಾಸಿಸುತ್ತಾ ಆ ಭೂವಿುಯನ್ನು ಗೆಯ್ಯುವರು. 20 ಮೀಸಲಾದ ಪೂರ್ಣಕ್ಷೇತ್ರದ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತೈದು ಸಾವಿರ ಮೊಳ; ನೀವು ಮೀಸಲಾಗಿ ಅರ್ಪಿಸುವ ಪವಿತ್ರಕ್ಷೇತ್ರವು ರಾಜಧಾನಿಗೆ ಒಳಪಟ್ಟ ಭೂವಿುಸಹಿತವಾಗಿ ಚಚ್ಚೌಕವಾಗಿರಬೇಕು. 21 ಮೀಸಲಾದ ಪವಿತ್ರಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂವಿುಯ ಎರಡು ಕಡೆಗಳಲ್ಲಿ ವಿುಕ್ಕ ಭೂವಿುಯು ಪ್ರಭುವಿನ ಪಾಲಾಗಿರಲಿ; ಆ ಪಾಲು ಮೀಸಲಾದ ಕ್ಷೇತ್ರದ ಮೂಡಲ ಕಡೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಎಲ್ಲೆಯ ಪಕ್ಕದಲ್ಲಿಯೂ ಪಡುವಲ ಕಡೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಎಲ್ಲೆಯ ಪಕ್ಕದಲ್ಲಿಯೂ ಕುಲಗಳ ಪಾಲಿನಷ್ಟು ಉದ್ದವಾಗಿ ಹಬ್ಬುವದು; ಅದು ಪ್ರಭುವಿನದು; ಮೀಸಲಾದ ಪವಿತ್ರ ಕ್ಷೇತ್ರವೂ ಪವಿತ್ರಾಲಯವೂ ಅದರ [ಎರಡು ಭಾಗಗಳ] ಮಧ್ಯದಲ್ಲಿರುವವು. 22 ಪ್ರಭುವಿನ ಪಾಲಿನ [ಎರಡು ಭಾಗಗಳ] ನಡುವಣ ಲೇವಿಯರ ಪಾಲಿನ [ಬಡಗಣ] ಮೇರೆಯಿಂದ ರಾಜಧಾನಿಗೆ ಒಳಪಟ್ಟ ಭೂವಿುಯ [ತೆಂಕಣ] ಮೇರೆಯ ತನಕ ಅಂದರೆ ಯೆಹೂದದ [ತೆಂಕಣ] ಸರಹದ್ದಿನಿಂದ ಬೆನ್ಯಾಮೀನಿನ [ಬಡಗಣ] ಸರಹದ್ದಿನವರೆಗೆ ಪ್ರಭುವಿನ ಪಾಲು ಹರಡಿರುವದು. 23 ವಿುಕ್ಕ ಕುಲಗಳ ಪಾಲಿನ ಕ್ರಮವೇನಂದರೆ, ಪೂರ್ವದಿಂದ ಪಶ್ಚಿಮದತನಕ ಬೆನ್ಯಾಮೀನಿಗೆ ಒಂದು ಪಾಲು. 24 ಬೆನ್ಯಾಮೀನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಸಿಮೆಯೋನಿಗೆ ಒಂದು ಪಾಲು. 25 ಸಿಮೆಯೋನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಇಸ್ಸಾಕಾರಿಗೆ ಒಂದು ಪಾಲು. 26 ಇಸ್ಸಾಕಾರಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಜೆಬುಲೂನಿಗೆ ಒಂದು ಪಾಲು. 27 ಜೆಬುಲೂನಿನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದ ತನಕ ಗಾದಿಗೆ ಒಂದು ಪಾಲು. 28 ಗಾದಿನ ತೆಂಕಣ ಸರಹದ್ದಿನಲ್ಲಿ ದೇಶದ ಮೇರೆಯು ತಾಮಾರಿನಿಂದ ಹೊರಟು ಮೇರೀಬತ್‍ಕಾದೇಶಿನ ಹಳ್ಳವನ್ನು ದಾಟಿ [ಐಗುಪ್ತದ ಮುಂದಣ] ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟುವದು. 29 ನೀವು ಇಸ್ರಾಯೇಲಿನ ಕುಲಗಳಿಗೆ ಸ್ವಾಸ್ತ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಕುಲಗಳ ಪಾಲುಗಳು ಇವೇ; ಇದು ಕರ್ತನಾದ ಯೆಹೋವನ ನುಡಿ. 30 ರಾಜಧಾನಿಯ ಗಡಿಗಳು ಹೀಗಿರಬೇಕು; ಬಡಗಣ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳ; 31 ಪಟ್ಟಣದ ಬಾಗಿಲುಗಳಿಗೆ ಇಸ್ರಾಯೇಲಿನ ಕುಲಗಳ ಆಯಾ ಹೆಸರುಗಳು ಇರಲಿ; ಬಡಗಲಲ್ಲಿ ಮೂರು ಬಾಗಿಲುಗಳು; ಒಂದು ರೂಬೇನ್ ಬಾಗಿಲು, ಇನ್ನೊಂದು ಯೆಹೂದ ಬಾಗಿಲು, ಮತ್ತೊಂದು ಲೇವಿ ಬಾಗಿಲು; 32 ಮೂಡಣ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳ; ಅದರಲ್ಲಿ ಮೂರು ಬಾಗಿಲುಗಳು; ಒಂದು ಯೋಸೇಫ್ ಬಾಗಿಲು; ಇನ್ನೊಂದು ಬೆನ್ಯಾಮೀನ್ ಬಾಗಿಲು, ಮತ್ತೊಂದು ದಾನ್ ಬಾಗಿಲು; 33 ತೆಂಕಣ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳ; ಅದರಲ್ಲಿ ಮೂರು ಬಾಗಿಲುಗಳು; ಒಂದು ಸಿಮೆಯೋನ್ ಬಾಗಿಲು, ಇನ್ನೊಂದು ಇಸ್ಸಾಕಾರ್ ಬಾಗಿಲು, ಮತ್ತೊಂದು ಜೆಬುಲೂನ್ ಬಾಗಿಲು; 34 ಪಡುವಣ ಗಡಿಯ ಉದ್ದವು ನಾಲ್ಕು ಸಾವಿರದ ಐನೂರು ಮೊಳ; ಅದರಲ್ಲಿ ಮೂರು ಬಾಗಿಲುಗಳು; ಒಂದು ಗಾದ್ ಬಾಗಿಲು, ಇನ್ನೊಂದು ಆಶೇರ್ ಬಾಗಿಲು, ಮತ್ತೊಂದು ನಫ್ತಾಲಿ ಬಾಗಿಲು; 35 ಪಟ್ಟಣದ ಸುತ್ತಳತೆಯು ಹದಿನೆಂಟು ಸಾವಿರ ಮೊಳ; ಅದನ್ನು ನಿರ್ಮಿಸಿದಂದಿನಿಂದ ಆ ಪಟ್ಟಣಕ್ಕೆ ಯೆಹೋವನ ನೆಲೆ ಎಂಬ ಹೆಸರಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India