Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 47 - ಕನ್ನಡ ಸತ್ಯವೇದವು J.V. (BSI)


ದೇವಸ್ಥಾನದಿಂದ ಹೊರಡುವ ಪ್ರವಾಹ

1 ಆಮೇಲೆ ಅವನು ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರತಂದನು; ಆಹಾ, ದೇವಸ್ಥಾನದ ಹೊಸ್ತಲ ಕೆಳಗಿನಿಂದ ನೀರು ಹೊರಟು ಮೂಡಲಿಗೆ ಹರಿಯುತ್ತಿತ್ತು (ದೇವಸ್ಥಾನವು ಪೂರ್ವಾಭಿಮುಖವಷ್ಟೆ); ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಯಜ್ಞವೇದಿಯ ದಕ್ಷಿಣದಲ್ಲಿ ಹರಿಯುತ್ತಿತ್ತು.

2 ಆಗ ಅವನು ನನ್ನನ್ನು ಬಡಗಣ ಹೆಬ್ಬಾಗಿಲಿಂದ ದೇವಾಲಯದ ಹೊರಗಣ ಮಾರ್ಗವಾಗಿ ಸುತ್ತಿಸಿಕೊಂಡು ಮೂಡಲ ಹೆಬ್ಬಾಗಿಲಿಗೆ ಕರತಂದನು; ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು.

3 ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಮೂಡಲಿಗೆ ಮುಂದರಿದು ಸಾವಿರ ಮೊಳ ಅಳೆದು ನನ್ನನ್ನು ನೀರಿನ ಆಚೆಗೆ ದಾಟಿಸಿದನು; ಅಲ್ಲಿ ನೀರು ಹೆಜ್ಜೆ ಮುಳುಗುವಷ್ಟಿತ್ತು.

4 ಅವನು ಪುನಃ ಸಾವಿರ ಮೊಳ ಅಳೆದು ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಪುನಃ ಸಾವಿರ ಮೊಳ ಅಳೆದು ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ನೀರು ಸೊಂಟದವರೆಗೆ ಇತ್ತು.

5 ಅವನು ಮತ್ತೆ ಸಾವಿರ ಮೊಳ ಅಳೆದನು; ಅದು ನನ್ನಿಂದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು; ದಾಟಲಾಗದ ತೊರೆಯಾಗಿತ್ತು.

6 ಆಗ ಅವನು ನನಗೆ - ನರಪುತ್ರನೇ, ಇದನ್ನು ನೋಡಿದಿಯಾ ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು.

7 ನಾನು ಹಿಂದಿರುಗಲು ಆಹಾ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು.

8 ಆಗ ಅವನು ನನಗೆ ಹೀಗೆ ಹೇಳಿದನು - ಈ ಪ್ರವಾಹವು ಪೂರ್ವಪ್ರಾಂತ್ಯಕ್ಕೆ ಹೊರಟು ಅರಾಬಾ ಎಂಬ ತಗ್ಗಿಗೆ ಇಳಿದು ಲವಣಸಮುದ್ರದ ಕಡೆಗೆ ಹರಿಯುವದು; [ದೇವಸ್ಥಾನದಿಂದ] ಹೊರಟ ಪ್ರವಾಹವು ಲವಣ ಸಮುದ್ರಕ್ಕೆ [ಸೇರಲು] ಅದರ ನೀರು ಸಿಹಿಯಾಗುವದು.

9 ಈ ತೊರೆಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪುಗುಂಪಾಗಿ ಚಲಿಸುವ ಸಕಲವಿಧ ಜಲಜಂತುಗಳು ಬದುಕಿಬಾಳುವವು; ಮೀನುಗಳು ತಂಡೋಪತಂಡವಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು [ಆ ನೀರೂ] ಸಿಹಿಯಾಗುವದು; ಈ ತೊರೆಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವದು.

10 ಆಗ ಆ ಸಮುದ್ರದ ತೀರದಲ್ಲಿ ಬೆಸ್ತರು ನಿಂತಿರುವರು; ಏನ್‍ಗೆದಿಯಿಂದ ಏನ್ಎಗ್ಲಯಿವಿುನವರೆಗೆ ದಡವೆಲ್ಲಾ ಬಲೆಹಾಸುವ ಸ್ಥಳವಾಗುವದು; ಬಗೆಬಗೆಯ ಮೀನುಗಳು ಮಹಾಸಾಗರದ ಮೀನುಗಳಂತೆ ಅವರಿಗೆ ರಾಶಿರಾಶಿಯಾಗಿ ಸಿಕ್ಕುವವು.

11 ಆದರೆ ಅದರ ಸುತ್ತಣ ಜವುಗು ನೆಲವೂ ಸವುಳುಹೊಂಡಗಳೂ ಸಿಹಿಯಾಗುವದಿಲ್ಲ, ಅವು ಉಪ್ಪಿನ ಗಣಿಯಾಗುವವು.

12 ತೊರೆಯ ಎರಡು ದಡಗಳಲ್ಲಿಯೂ ಸಕಲಫಲವೃಕ್ಷಗಳು ಬೆಳೆಯುವವು; ಅವುಗಳ ಎಲೆ ಬಾಡದು, ಹಣ್ಣು ತೀರದು; ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳುತಿಂಗಳಲ್ಲಿಯೂ ಹೊಸಹೊಸ ಫಲವನ್ನು ಕೊಡುತ್ತಲಿರುವವು; ಅವುಗಳ ಹಣ್ಣು ಆಹಾರಕ್ಕೂ ಸೊಪ್ಪು ಔಷಧಕ್ಕೂ ಅನುಕೂಲಿಸುವವು.


ಇಸ್ರಾಯೇಲ್ ದೇಶದ ಎಲ್ಲೆಗಳೂ ಭಾಗಗಳೂ

13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀವು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ದೇಶವನ್ನು ಬಾಧ್ಯವಾಗಿ ಹಂಚಿಕೊಡುವಾಗ ಮುಂದಿನ ಮೇರೆಗಳನ್ನು ಅನುಸರಿಸಬೇಕು. ಯೋಸೇಫಿಗೆ ಎರಡುಪಾಲು ಸೇರಲಿ.

14 ನಾನು ನಿಮ್ಮ ಪಿತೃಗಳಿಗೆ ಪ್ರಮಾಣವಾಗಿ ವಾಗ್ದಾನಮಾಡಿದ ಈ ದೇಶವನ್ನು ನೀವೆಲ್ಲರೂ ಸರಿಸಮಾನವಾಗಿ ಅನುಭವಿಸುವಿರಿ; ಇದು ನಿಮಗೆ ಸ್ವಾಸ್ತ್ಯವಾಗಿಯೇ ಇರುವದು.

15 ನಿಮ್ಮ ದೇಶದ ಮೇರೆಗಳು ಹೀಗಿರಬೇಕು - ಬಡಗಣ ಮೇರೆಯು ದೊಡ್ಡ ಸಮುದ್ರದಿಂದ ಆರಂಭವಾಗಿ ಚೆದಾದಿನ ದಾರಿಯಲ್ಲಿನ ಹೆತ್ಲೋನಿನ ಮಾರ್ಗವಾಗಿ ಬಂದು

16 ಹಮಾತ್, ಬೇರೋತ, ದಮಸ್ಕದ ಎಲ್ಲೆಗೂ ಹಮಾತಿನ ಎಲ್ಲೆಗೂ ನಡುವಣ ಸಿಬ್ರಯಿಮ್ ಎಂಬ ಊರುಗಳ ಮೇಲೆ ಹವ್ರಾನಿನ ಸರಹದ್ದಿಗೆ ಹತ್ತಿರವಾದ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು.

17 ಹೀಗೆ ಬಡಗಣ ಮೇರೆಯು ಸಮುದ್ರದಿಂದ ದಮಸ್ಕದ ಸರಹದ್ದಿನಲ್ಲಿರುವ ಹಚರ್ ಐನೋನಿನವರೆಗೆ ಹಬ್ಬುವದು; ಅದರ ಉತ್ತರದಲ್ಲಿ ಹಮಾತಿನ ಪ್ರಾಂತವಿರುವದು. ಇದು ಬಡಗಣ ಮೇರೆ.

18 ಮೂಡಲಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯು ಎಲ್ಲೆಯಾಗಿರುವದು; [ಬಡಗಣ] ಮೇರೆಯಿಂದ ಮೂಡಣ ಸಮುದ್ರದವರೆಗೆ ನೀವು ಗುರುತು ಹಾಕಿಕೊಳ್ಳಬೇಕು. ಇದು ಮೂಡಣ ಮೇರೆ.

19 ತೆಂಕಣ ಮೇರೆಯು ತಾಮಾರಿನಿಂದ ಹೊರಟು ಮೆರೀಬೋತ್ ಕಾದೇಶಿನ ಹಳ್ಳದ ಮೇಲೆ [ಐಗುಪ್ತದ ಮುಂದಿರುವ] ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರಕ್ಕೆ ಮುಟ್ಟಬೇಕು. ಇದು ತೆಂಕಣ ಮೇರೆಯು.

20 ಪಡುವಲಲ್ಲಿ [ತೆಂಕಣ] ಮೇರೆಯಿಂದ ಹಮಾತಿನ ದಾರಿಗೆ ಎದುರಿನ [ಕರಾವಳಿಯ] ತನಕ ದೊಡ್ಡ ಸಮುದ್ರವು ಎಲ್ಲೆಯಾಗಿರುವದು. ಇದು ಪಡುವಣ ಮೇರೆ.

21 ಈ ದೇಶವನ್ನು ನೀವು ಇಸ್ರಾಯೇಲಿನ ಕುಲಕುಲಕ್ಕೂ ಹಂಚಿಕೊಳ್ಳಬೇಕು.

22 ನಿಮಗೂ ನಿಮ್ಮ ಮಧ್ಯದಲ್ಲಿ ಪ್ರವಾಸಮಾಡುತ್ತಾ ಮಕ್ಕಳನ್ನು ಪಡೆದಿರುವ ವಿದೇಶಿಗಳಿಗೂ ದೇಶವನ್ನು ಬಾಧ್ಯವಾಗಿ ಹಂಚಬೇಕು; ಅವರು ಇಸ್ರಾಯೇಲ್ಯರ ಮಧ್ಯೆ ನಿಮಗೆ ಸ್ವದೇಶಿಗಳಂತೆಯೇ ಇರತಕ್ಕದ್ದು; ಇಸ್ರಾಯೇಲಿನ ಕುಲಗಳೊಳಗೆ ನಿಮ್ಮೊಂದಿಗೆ ಅವರಿಗೆ ಸ್ವಾಸ್ತ್ಯವಾಗಲಿ.

23 ಯಾವ ಕುಲದಲ್ಲಿ ವಿದೇಶಿಯು ಪ್ರವಾಸವಾಗಿರುತ್ತಾನೋ ಅಲ್ಲಿ ಅವನಿಗೆ ಸ್ವಾಸ್ತ್ಯವನ್ನು ಕೊಡಬೇಕು; ಇದು ಕರ್ತನಾದ ಯೆಹೋವನ ನುಡಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು