ಯೆಹೆಜ್ಕೇಲನು 45 - ಕನ್ನಡ ಸತ್ಯವೇದವು J.V. (BSI)ಮೀಸಲುಭೂವಿು ಮತ್ತು ಪ್ರಭುವಿನ ಸ್ವಾಸ್ತ್ಯ 1 ನೀವು ದೇಶವನ್ನು ಸ್ವಾಸ್ತ್ಯಸ್ವಾಸ್ತ್ಯವಾಗಿ ಹಂಚುವಾಗ ಒಂದು ಭಾಗವನ್ನು ಮೀಸಲಾಗಿ ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸಬೇಕು; ಅದರ ಉದ್ದವು ಇಪ್ಪತ್ತೈದು ಸಾವಿರ ಮೊಳ, ಅಗಲವು ಇಪ್ಪತ್ತು ಸಾವಿರ ಮೊಳ; ಆ ಪ್ರಾಂತವೆಲ್ಲಾ ಸುತ್ತುಮುತ್ತಲು ಪರಿಶುದ್ಧವಾಗಿರಬೇಕು. 2 ಇದರಲ್ಲಿ ಐನೂರು ಮೊಳ ಉದ್ದದ ಐನೂರು ಮೊಳ ಅಗಲದ ಚಚ್ಚೌಕದ ಸ್ಥಳವು ಪವಿತ್ರಾಲಯಕ್ಕೆ ನಿವೇಶನವಾಗಿರುವದು; ಅದರ ಸುತ್ತ ಐವತ್ತು ಮೊಳ ಅಗಲ ಉಳದ ಭೂವಿು ಇರುವದು. 3 ಮೊದಲು ಅಳೆದ ಕ್ಷೇತ್ರದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಹತ್ತು ಸಾವಿರ ಮೊಳ ಅಗಲದ ಒಂದು ಅಂಶವನ್ನು ಅಳೆ; ಇದರಲ್ಲಿ ಅತಿಪರಿಶುದ್ಧವಾದ ಪವಿತ್ರಾಲಯವು ಇರಬೇಕು. 4 ಇದು ದೇಶದಲ್ಲಿ ಪರಿಶುದ್ಧ ಭಾಗ; ಇದು ಪವಿತ್ರಾಲಯದ ಅರ್ಚಕರೂ ಯೆಹೋವನ ಸನ್ನಿಧಿಸೇವಕರೂ ಆದ ಯಾಜಕರಿಗೆ ಸಲ್ಲತಕ್ಕದ್ದು; ಇದು ಯಾಜಕರ ಮನೆಗಳಿಗೆ ಅಗ್ರಹಾರವಾಗಿಯೂ ಪವಿತ್ರಾಲಯಕ್ಕೆ ಪವಿತ್ರಸ್ಥಾನವಾಗಿಯೂ ಇರುವದು. 5 ದೇವಾಲಯದ ಸೇವಕರಾದ ಲೇವಿಯರು ಊರುಗಳನ್ನು ಕಟ್ಟಿಕೊಂಡು ವಾಸಿಸುವಂತೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಹತ್ತು ಸಾವಿರ ಮೊಳ ಅಗಲದ ಕ್ಷೇತ್ರವು ಅವರಿಗೆ ಸ್ವಾಸ್ತ್ಯವಾಗುವದು. 6 ನೀವು ನನಗೆ ಸಮರ್ಪಿಸುವ ಪರಿಶುದ್ಧ ಭಾಗದ ಪಕ್ಕಪಕ್ಕದಲ್ಲಿ ಐದು ಸಾವಿರ ಮೊಳ ಅಗಲದ ಇಪ್ಪತ್ತೈದು ಸಾವಿರ ಮೊಳ ಉದ್ದದ ಕ್ಷೇತ್ರವನ್ನು ರಾಜಧಾನಿಗೆ ಒಳಪಟ್ಟ ಭೂವಿುಯನ್ನಾಗಿ ನೇವಿುಸಬೇಕು; ಅದರಲ್ಲಿ ಇಸ್ರಾಯೇಲ್ ವಂಶದವರಿಗೆಲ್ಲಾ ಹಕ್ಕಿರುವದು. 7 ಪ್ರಭುವಿನ ಸ್ವಾಸ್ತ್ಯವು ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರಕ್ಕೂ ರಾಜಧಾನಿಗೆ ಒಳಪಟ್ಟ ಭೂವಿುಗೂ ಉಭಯಪಾರ್ಶ್ವಗಳಲ್ಲಿರುವದು; ನೀವು ಮೀಸಲಾಗಿ ಸಮರ್ಪಿಸುವ ಕ್ಷೇತ್ರದ ಮತ್ತು ರಾಜಧಾನಿಗೆ ಒಳಪಟ್ಟ ಭೂವಿುಯ ಪಡುವಲಲ್ಲಿ ಅದು ಪಡುವಲಿಗೆ ಹರಡುವದು, ಮೂಡಲಲ್ಲಿ ಮೂಡಲಿಗೆ ಹರಡುವದು, ಅದರ ಉದ್ದವು ಪಡುವಲಿಂದ ಮೂಡಲಿಗೆ ಒಂದು ಕುಲದ ಸ್ವಾಸ್ತ್ಯದ ಉದ್ದಕ್ಕೆ ಸರಿಸಮಾನವಾಗಿರುವದು. 8 ಅದು ಅವನಿಗೆ ಇಸ್ರಾಯೇಲಿನಲ್ಲಿ ಭೂಸ್ವಾಸ್ತ್ಯವಾಗುವದು; ಇನ್ನು ಮೇಲೆ ಪ್ರಭುಗಳು ನನ್ನ ಪ್ರಜೆಗಳನ್ನು ಹಿಂಸಿಸರು; ದೇಶದ ಭೂವಿುಯನ್ನು ಇಸ್ರಾಯೇಲ್ಯರಿಗೆ ಕುಲಕುಲಕ್ಕೂ ಹಂಚುವರು. ಪ್ರಭುವಿನ ಕರ್ತವ್ಯ 9 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲಿನ ಪ್ರಭುಗಳೇ, ಇನ್ನು ಸಾಕು, ಸಾಕು; ಕೊಳ್ಳೆಯನ್ನೂ ಬಲಾತ್ಕಾರವನ್ನೂ ತ್ಯಜಿಸಿ ನೀತಿನ್ಯಾಯಗಳನ್ನು ನಡಿಸಿರಿ; ನನ್ನ ಜನರ ಬಾಧ್ಯತೆಗಳನ್ನು ತಪ್ಪಿಸುವ ಅನ್ಯಾಯವನ್ನು ಬಿಟ್ಟುಬಿಡಿರಿ; ಇದು ಕರ್ತನಾದ ಯೆಹೋವನ ನುಡಿ, 10 ನಿಮ್ಮ ತಕ್ಕಡಿಯೂ ಧಾನ್ಯದ ಅಳತೆಯೂ ರಸದ್ರವ್ಯದ ಅಳತೆಯೂ ನ್ಯಾಯವಾಗಿಯೇ ಇರಬೇಕು. 11 ಏಫಾ [ಎಂಬ ಧಾನ್ಯದ ಅಳತೆಯು] ಮತ್ತು ಬತ್ [ಎಂಬ ರಸದ್ರವ್ಯದ ಅಳತೆಯು] ಒಂದೇ ಪ್ರಮಾಣವಾಗಿರತಕ್ಕದ್ದು; ಬತ್ ಎಂಬದು ಹೋಮೆರಿನ ಹತ್ತನೆಯ ಒಂದು ಪಾಲು; ಏಫಾ ಎಂಬದು ಹೋಮೆರಿನ ಹತ್ತನೆಯ ಒಂದು ಪಾಲು; ಈ ಎರಡೂ ಹೋಮೆರ್ ಅಳತೆಗೆ ಸಂಬಂಧವಾಗಿರಬೇಕು. 12 ತೊಲೆಯು ಇಪ್ಪತ್ತು ಗೇರಾ ತೂಕವಾಗಿರಬೇಕು; ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು, ಇಪ್ಪತ್ತೈದು [ಅಥವಾ] ಹದಿನೈದು ತೊಲೆಯ ತೂಕದ್ದಾಗಿರಲಿ. 13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀವು ನಿಮ್ಮ ದೋಷಪರಿಹಾರಕ್ಕಾಗಿ ಧಾನ್ಯ ನೈವೇದ್ಯವನ್ನೂ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಮಾಡುವದಕ್ಕೋಸ್ಕರ ಸಮರ್ಪಿಸತಕ್ಕದ್ದೇನಂದರೆ ಒಂದು ಹೋಮೆರ್ ಅಳತೆಯ ಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; ಒಂದು ಹೋಮೆರ್ ಅಳತೆಯ ಜವೆಗೋದಿಯಲ್ಲಿ ಏಫಾ ಅಳತೆಯ ಆರನೆಯ ಒಂದು ಪಾಲು; 14 ಒಂದು ಬತ್ ಎಣ್ಣೆಯಲ್ಲಿ ಸಮರ್ಪಿಸಬೇಕಾದ ಭಾಗವೆಷ್ಟಂದರೆ ಒಂದು ಕೋರ್ ಅಂದರೆ ಹತ್ತು ಬತ್ ಅಥವಾ ಒಂದು ಹೋಮೆರ್ ಅಳತೆಯ ಎಣ್ಣೆಯಲ್ಲಿ ಒಂದು ಬತ್ ಅಳತೆಯ ಹತ್ತನೆಯ ಒಂದು ಪಾಲು; (ಹತ್ತು ಬತ್ ಅಂದರೆ ಒಂದು ಹೋಮೆರ್); 15 ಇನ್ನೂರು ಕುರಿಗಳಲ್ಲಿ ಇಸ್ರಾಯೇಲಿನ ನೀರಾವರಿಯ ಹುಲ್ಗಾವಲಿನ ಒಂದು ಕುರಿ; 16 ಇವುಗಳನ್ನು ದೇಶದ ಸಕಲ ಜನರು ಇಸ್ರಾಯೇಲಿನ ಪ್ರಭುವಿಗೆ ಒಪ್ಪಿಸತಕ್ಕದ್ದು. 17 ಉತ್ಸವಗಳಲ್ಲಿಯೂ ಅಮಾವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲ್ ವಂಶದವರಿಗೆ ನೇಮಕವಾದ ಎಲ್ಲಾ ಹಬ್ಬಗಳಲ್ಲಿಯೂ ಸರ್ವಾಂಗಹೋಮಪಶು, ಧಾನ್ಯನೈವೇದ್ಯ, ಪಾನನೈವೇದ್ಯ, ಇವುಗಳನ್ನು ಒದಗಿಸುವದು ಪ್ರಭುವಿನ ಕರ್ತವ್ಯ; ಇಸ್ರಾಯೇಲ್ ವಂಶದ ದೋಷನಿವಾರಣೆಗಾಗಿ ಅವನು ದೋಷಪರಿಹಾರಕಯಜ್ಞಪಶು, ಧಾನ್ಯನೈವೇದ್ಯ, ಸರ್ವಾಂಗಹೋಮಪಶು, ಸಮಾಧಾನಯಜ್ಞಪಶು, ಇವುಗಳನ್ನು ಒಪ್ಪಿಸತಕ್ಕದ್ದು. ಪಸ್ಕ ಮತ್ತು ಪರ್ಣಶಾಲೆ ಹಬ್ಬಗಳ ಬಲಿಗಳು 18 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಪೂರ್ಣಾಂಗವಾದ ಹೋರಿಯನ್ನು ಆರಿಸಿ ಅದರಿಂದ ಪವಿತ್ರಾಲಯವನ್ನು ಶುದ್ಧೀಕರಿಸಬೇಕು. 19 ಆಗ ಯಾಜಕನು ಆ ದೋಷಪರಿಹಾರಕಯಜ್ಞಪಶುವಿನ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವಸ್ಥಾನದ ಬಾಗಿಲ ಚೌಕಟ್ಟಿಗೂ ಯಜ್ಞವೇದಿಯ ದೊಡ್ಡ ಅಂತಸ್ತಿನ ನಾಲ್ಕು ಮೂಲೆಗಳಿಗೂ ಒಳಗಣ ಪ್ರಾಕಾರದ ಹೆಬ್ಬಾಗಿಲ ನಿಲವುಕಂಬಗಳಿಗೂ ಹಚ್ಚಬೇಕು. 20 ಅದೇ ಮೇರೆಗೆ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಯಜ್ಞಮಾಡಿ ಯಾರಾದರೂ ಅಕಸ್ಮಾತ್ತಾಗಿ ಮಾಡಿದ ತಪ್ಪಿನಿಂದಾಗಲಿ ಬುದ್ಧಿಹೀನರ ಅವಿವೇಕದಿಂದಾಗಲಿ ದೇವಾಲಯಕ್ಕೆ ಸಂಭವಿಸಿದ ದೋಷವನ್ನೆಲ್ಲಾ ಪರಿಹರಿಸಬೇಕು. 21 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಏಳು ದಿವಸದ ಪಸ್ಕಹಬ್ಬವನ್ನು ಆಚರಿಸತೊಡಗಬೇಕು; ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು. 22 ಆ ದಿನದಲ್ಲಿ ಪ್ರಭುವು ತನ್ನ ನಿವಿುತ್ತವೂ ದೇಶದ ಜನರೆಲ್ಲರ ನಿವಿುತ್ತವೂ ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋರಿಯನ್ನು ಒಪ್ಪಿಸಲಿ. 23 ಹಬ್ಬದ ಏಳು ದಿನಗಳಲ್ಲಿಯೂ ಯೆಹೋವನಿಗೆ ಸಮರ್ಪಿಸತಕ್ಕ ಸರ್ವಾಂಗಹೋಮಕ್ಕಾಗಿ ಅವನು ಏಳು ದಿನಗಳವರೆಗೆ ದಿನವೊಂದಕ್ಕೆ ಪೂರ್ಣಾಂಗವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಒದಗಿಸಲಿ, ಮತ್ತು ದೋಷಪರಿಹಾರಕಯಜ್ಞಕ್ಕಾಗಿ ದಿನವಹಿ ಒಂದು ಹೋತವನ್ನು ಕೊಡಲಿ. 24 ಇದಲ್ಲದೆ ಒಂದೊಂದು ಹೋರಿಯ ಮತ್ತು ಟಗರಿನ ಸಂಗಡ ಮೂವತ್ತು ಮೂವತ್ತು ಸೇರು [ಗೋದಿ ಹಿಟ್ಟನ್ನೂ] ಆರಾರು ಸೇರು ಎಣ್ಣೆಯನ್ನೂ ಧಾನ್ಯನೈವೇದ್ಯಕ್ಕಾಗಿ ಒಪ್ಪಿಸಬೇಕು. 25 ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪ್ರಾರಂಭವಾಗುವ ಹಬ್ಬದ ಏಳು ದಿವಸಗಳಲ್ಲಿಯೂ ಅವನು ದೋಷಪರಿಹಾರಕಯಜ್ಞಪಶು, ಸರ್ವಾಂಗಹೋಮಪಶು, ಧಾನ್ಯನೈವೇದ್ಯ, ಎಣ್ಣೆ, ಇವುಗಳನ್ನು ಅದೇ ಕ್ರಮದಂತೆ ಕೊಡಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India