Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 44 - ಕನ್ನಡ ಸತ್ಯವೇದವು J.V. (BSI)


ಪೂರ್ವದ್ವಾರಪ್ರವೇಶನಿಷೇಧ

1 ತರುವಾಯ ಆ ಪುರುಷನು ನನ್ನನ್ನು ಪವಿತ್ರಾಲಯದ ಮೂಡಣ ಹೊರಗಣ ಹೆಬ್ಬಾಗಿಲಿಗೆ ಪುನಃ ಕರತಂದನು; ಅದು ಮುಚ್ಚಿತ್ತು.

2 ಆಗ ಯೆಹೋವನು ನನಗೆ - ಈ ಬಾಗಿಲು ಮುಚ್ಚಿರಬೇಕು, ಇದನ್ನು ತೆರೆಯಕೂಡದು. ಇದರಿಂದ ಯಾರೂ ಪ್ರವೇಶಿಸದಿರಲಿ; ಇಸ್ರಾಯೇಲಿನ ದೇವರಾದ ಯೆಹೋವನು ಇದರಿಂದ ಪ್ರವೇಶಿಸಿದ್ದಾನಲ್ಲಾ; ಇದು ಮುಚ್ಚೇ ಇರಬೇಕು.

3 ಪ್ರಭುವೋ ಯೆಹೋವನ ಸನ್ನಿಧಿಯಲ್ಲಿ ಹವಿರ್ಭೋಜನಮಾಡುವದಕ್ಕೆ ಇಲ್ಲಿ ಪ್ರಭುವಾಗಿ ಕೂತುಕೊಳ್ಳಬಹುದು; ಅವನು ಹೆಬ್ಬಾಗಿಲ ಕೈಸಾಲೆಯ ಮಾರ್ಗವಾಗಿ ಸೇರಿ ಅದೇ ಮಾರ್ಗವಾಗಿ ಹೊರಡಬೇಕು ಎಂದು ಹೇಳಿದನು.


ಲೇವಿಯರ ಕರ್ತವ್ಯ

4 ಬಳಿಕ ಆ ಪುರುಷನು ಬಡಗಣ ಹೆಬ್ಬಾಗಿಲ ಮಾರ್ಗವಾಗಿ ನನ್ನನ್ನು ದೇವಸ್ಥಾನದ ಮುಂದುಗಡೆಗೆ ಕರತಂದನು; ಆಹಾ, ನಾನು ನೋಡಲಾಗಿ ಯೆಹೋವನ ತೇಜಸ್ಸು ಯೆಹೋವನ ಆಲಯವನ್ನು ತುಂಬಿಕೊಂಡಿತ್ತು; ಅದನ್ನು ನೋಡಿ ಅಡ್ಡಬಿದ್ದೆನು.

5 ಆಗ ಯೆಹೋವನು ನನಗೆ ಹೀಗೆ ಹೇಳಿದನು - ನರಪುತ್ರನೇ, ಯೆಹೋವನ ಆಲಯದ ಸಕಲ ನಿಯಮನಿಷ್ಠೆಗಳ ವಿಷಯವಾಗಿ ನಾನು ನಿನಗೆ ಹೇಳುವದನ್ನೆಲ್ಲಾ ನೀನು ಕಿವಿಯಾರೆ ಕೇಳಿ ಕಣ್ಣಾರೆ ಕಂಡು ಮಂದಟ್ಟುಮಾಡಿಕೋ; ಮತ್ತು ಪವಿತ್ರಾಲಯದ ಗಮನಾಗಮನ ವಿಧಿಗಳನ್ನು ಗಮನಿಸು.

6 ಇದಲ್ಲದೆ ನೀನು ಆ ದ್ರೋಹಿಗಳಿಗೆ ಅಂದರೆ ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ -

7 ಇಸ್ರಾಯೇಲ್ ವಂಶದವರೇ, ನೀವು ನನ್ನ ಆಹಾರವಾದ ರಕ್ತಮೇದಸ್ಸುಗಳನ್ನು ಅರ್ಪಿಸುವಾಗ ತನುಮನಗಳಲ್ಲಿ ಸುನ್ನತಿಹೀನರಾದ ಮ್ಲೇಚ್ಫರನ್ನು ನನ್ನ ಪವಿತ್ರಾಲಯದೊಳಗೆ ಬರಮಾಡಿ ನನ್ನ ಮಂದಿರವನ್ನು ಹೊಲೆಗೆಡಿಸಿ ನನ್ನ ಒಡಂಬಡಿಕೆಯನ್ನು ಭಂಗಪಡಿಸಿ ನಿಮ್ಮ ಅವಿುತದುರಾಚಾರಗಳ ಲೆಕ್ಕವನ್ನು ಹೆಚ್ಚಿಸಿದ್ದೀರಿ;

8 ನೀವು ನನ್ನ ಪರಿಶುದ್ಧವಸ್ತುಗಳ ಪಾರುಪತ್ಯ ಮಾಡಲಿಲ್ಲ; ಈ ಮ್ಲೇಚ್ಫರನ್ನು ನನ್ನ ಪವಿತ್ರಾಲಯದಲ್ಲಿ ನನ್ನ ವಸ್ತುಗಳ ಮೇಲೆ ಪಾರುಪತ್ಯಗಾರರನ್ನಾಗಿ ನೇವಿುಸಿಕೊಂಡಿರಿ; ನಿಮ್ಮ ಅಪಾರದುರಾಚಾರಗಳು ಇನ್ನು ಸಾಕು.

9 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ಯರಲ್ಲಿ ಸೇರಿಕೊಂಡಿರುವ ಮ್ಲೇಚ್ಫರೊಳಗೆ ತನುಮನಗಳಲ್ಲಿ ಸುನ್ನತಿಹೀನನಾದ ಯಾವನೂ ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು.

10 ಇಸ್ರಾಯೇಲ್ಯರು ನನ್ನನ್ನು ತೊರೆದಾಗ ನನ್ನಿಂದಗಲಿ ತಮ್ಮ ಬೊಂಬೆಗಳ ಕಡೆಗೆ ತಿರುಗಿಕೊಂಡು ನನಗೆ ದೂರವಾಗಿ ಹೋದ ಲೇವಿಯರು ತಮ್ಮ ದೋಷಫಲವನ್ನು ಅನುಭವಿಸುವರು.

11 ಅವರು ನನ್ನ ಪವಿತ್ರಾಲಯದಲ್ಲಿ ಪರಿಚಾರಕರೂ ಮಂದಿರದ್ವಾರಪಾಲಕರೂ ಆಗಿ ಮಂದಿರದಲ್ಲಿ ಸೇವೆಮಾಡಬೇಕು; ಜನರ ಪಕ್ಷವಾಗಿ ಸರ್ವಾಂಗಹೋಮ ಪಶುವನ್ನೂ [ಸಮಾಧಾನ] ಯಜ್ಞಪಶುವನ್ನೂ ವಧಿಸಿ ಅವರಿಗೆ ಸೇವೆಮಾಡಲು ಸಿದ್ಧರಾಗಿರಬೇಕು.

12 ಅವರು ತಮ್ಮ ಬೊಂಬೆಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾಯೇಲ್ ವಂಶದವರಿಗೆ ಪಾಪಕಾರಿ ವಿಘ್ನವಾದದರಿಂದ ನಾನು ಅವರ ಮೇಲೆ ಕೈಯೆತ್ತಿದ್ದೇನೆ, ಅವರು ತಮ್ಮ ದೋಷಫಲವನ್ನು ಅನುಭವಿಸೇ ತೀರಬೇಕು; ಇದು ಕರ್ತನಾದ ಯೆಹೋವನ ನುಡಿ.

13 ಅವರು ನನಗೆ ಯಾಜಕಸೇವೆಮಾಡುವದಕ್ಕೆ ನನ್ನ ಸನ್ನಿಧಿಗೆ ಸೇರಕೂಡದು; ನನ್ನ ಅತಿಪವಿತ್ರವಾದ ಪರಿಶುದ್ಧವಸ್ತುಗಳಲ್ಲಿ ಯಾವದನ್ನೂ ಸಮೀಪಿಸಬಾರದು; ತಮಗಾದ ಅವಮಾನವನ್ನೂ ತಾವು ನಡಿಸಿದ ದುರಾಚಾರಗಳ ಫಲವನ್ನೂ ಅನುಭವಿಸುವರು.

14 ದೇವಾಲಯದ ಸಕಲ ಸೇವೆಯಲ್ಲಿಯೂ ಅಲ್ಲಿ ನಡೆಯುವ ಸಮಸ್ತ ಕಾರ್ಯಗಳಲ್ಲಿಯೂ ಸೇವಕ ವೃತ್ತಿಯನ್ನೇ ಅವರಿಗೆ ಕೊಡುವೆನು.


ಯಾಜಕರ ವಿಷಯವಾದ ವಿವಿಧ ನಿಯಮಗಳು

15 ಆದರೆ ಇಸ್ರಾಯೇಲ್ಯರು ನನ್ನನ್ನು ತೊರೆದಾಗ ಲೇವಿಯರೂ ಚಾದೋಕನ ಸಂತಾನದವರೂ ಆದ ಯಾಜಕರು ನನ್ನ ಪವಿತ್ರಾಲಯದ ಪಾರುಪತ್ಯವನ್ನು ನೆರವೇರಿಸಿದ್ದರಿಂದ ಅವರು ನನ್ನನ್ನು ಸೇವಿಸಲು ನನ್ನ ಸನ್ನಿಧಿಗೆ ಸೇರುವರು, ನನಗೆ ರಕ್ತಮೇದಸ್ಸುಗಳನ್ನು ಅರ್ಪಿಸಲು ನನ್ನ ಸಮ್ಮುಖದಲ್ಲಿ ನಿಂತುಕೊಳ್ಳುವರು; ಇದು ಕರ್ತನಾದ ಯೆಹೋವನ ನುಡಿ.

16 ಅವರು ನನ್ನ ಪವಿತ್ರಾಲಯವನ್ನು ಪ್ರವೇಶಿಸಿ ನನ್ನ ಸೇವೆಮಾಡುವದಕ್ಕೆ ನನ್ನ ವೇದಿಯನ್ನು ಸಮೀಪಿಸಿ ನನ್ನ [ಆಲಯದ] ಪಾರುಪತ್ಯವನ್ನು ವಹಿಸುವರು.

17 ಅವರು ಒಳಗಣ ಪ್ರಾಕಾರದ ಬಾಗಿಲುಗಳನ್ನು ಪ್ರವೇಶಿಸುವಾಗ ನಾರುಬಟ್ಟೆಗಳನ್ನು ಧರಿಸಿರಬೇಕು; ಒಳಗಣ ಪ್ರಾಕಾರದ ಬಾಗಿಲುಗಳಲ್ಲಿಯೂ ದೇವಸ್ಥಾನದಲ್ಲಿಯೂ ಸೇವೆಮಾಡುತ್ತಿರುವಾಗ ಯಾವ ಉಣ್ಣೆಯ ಉಡುಪೂ ಅವರ ಮೇಲೆ ಇರಕೂಡದು.

18 ಇವರು ತಲೆಗೆ ನಾರಿನ ಮುಂಡಾಸವನ್ನು, ಸೊಂಟಕ್ಕೆ ನಾರಿನ ಚಡ್ಡಿಯನ್ನು ಹಾಕಿಕೊಂಡಿರಲಿ; ಬೆವರುವ ಯಾವ ಉಡುಪನ್ನೂ ಉಟ್ಟುಕೊಳ್ಳಬಾರದು.

19 ಅವರು ಹೊರಗಣ ಪ್ರಾಕಾರಕ್ಕೆ ಅಂದರೆ ಅಲ್ಲಿನ ಜನರ ಬಳಿಗೆ ಹೊರಡುವಾಗ ತಮ್ಮ ದೀಕ್ಷಾವಸ್ತ್ರಗಳನ್ನು ಅವರಿಗೆ ತಗಲಿಸಿ ಅವರನ್ನು ಪರಿಶುದ್ಧರಾಗಮಾಡದಂತೆ ಅವುಗಳನ್ನು ತೆಗೆದು ಪರಿಶುದ್ಧವಾದ ಕೋಣೆಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಳ್ಳಲಿ.

20 ಅವರು ತಲೆ ಬೋಳಿಸಬಾರದು, ಕೂದಲನ್ನು ಬೆಳಸಬಾರದು, ಕತ್ತರಿಸಿಕೊಂಡಿರಬೇಕು.

21 ಒಳಗಣ ಪ್ರಾಕಾರವನ್ನು ಪ್ರವೇಶಿಸುವಾಗ ಯಾವ ಯಾಜಕನೂ ದ್ರಾಕ್ಷಾರಸವನ್ನು ಕುಡಿದಿರಬಾರದು.

22 ಯಾಜಕರು ವಿಧವೆಯನ್ನಾಗಲಿ ಗಂಡನಿಂದ ಬಿಡಲ್ಪಟ್ಟವಳನ್ನಾಗಲಿ ಮದುವೆಯಾಗಬಾರದು; ಆದರೆ ಇಸ್ರಾಯೇಲ್‍ವಂಶದ ಕನ್ಯೆಯನ್ನಾಗಲಿ ಯಾಜಕನ ವಿಧವೆಯನ್ನಾಗಲಿ ಮದುವೆಮಾಡಿಕೊಳ್ಳಲಿ.

23 ಮೀಸಲಾದದ್ದಕ್ಕೂ ಮೀಸಲಲ್ಲದ್ದಕ್ಕೂ ಭೇದವನ್ನು ನನ್ನ ಜನರಿಗೆ ತೋರಿಸಿ ಶುದ್ಧಾಶುದ್ಧವಿವೇಚನೆಯನ್ನು ಅವರಿಗೆ ಬೋಧಿಸಲಿ.

24 ವ್ಯಾಜ್ಯವಾಗುವಲ್ಲಿ ಅದನ್ನು ತೀರಿಸಲು ನಿಂತು ನನ್ನ ನ್ಯಾಯವಿಧಿಗಳಿಗೆ ಅನುಸಾರವಾಗಿ ತೀರಿಸಲಿ; ನಾನು ಏರ್ಪಡಿಸಿದ ಹಬ್ಬಗಳಲ್ಲಿ ನನ್ನ ನಿಯಮನಿಷ್ಠೆಗಳನ್ನು ಕೈಕೊಂಡು ನನ್ನ ಸಬ್ಬತ್ತುಗಳು ಆಚರಿಸಲ್ಪಡುವಂತೆ ನೋಡಿಕೊಳ್ಳಲಿ.

25 ಸತ್ತವರ ಹೆಣವನ್ನು ಸಮೀಪಿಸಿ ತಮ್ಮನ್ನು ಅಪವಿತ್ರಮಾಡಿಕೊಳ್ಳಬಾರದು; ಆದರೆ [ಸತ್ತ] ತಂದೆ, ತಾಯಿ, ಮಗನು, ಮಗಳು, ತಮ್ಮ, ಮದುವೆಯಿಲ್ಲದ ತಂಗಿ, ಇವರಿಗೋಸ್ಕರ ಒಬ್ಬನು ತನ್ನನ್ನು ಅಪವಿತ್ರಮಾಡಿಕೊಳ್ಳಬಹುದು;

26 ಅಂಥವನನ್ನು ಶುದ್ಧನಾದ ಮೇಲೂ ಏಳು ದಿವಸ ಪ್ರತ್ಯೇಕಿಸಬೇಕು.

27 ಅವನು ಸೇವೆಮಾಡಲು ಪವಿತ್ರಾಲಯವನ್ನು ಪ್ರವೇಶಿಸಿ ಒಳಗಣ ಪ್ರಾಕಾರಕ್ಕೆ ಸೇರುವ ದಿನದಲ್ಲಿ ತನ್ನ ದೋಷಪರಿಹಾರಕ್ಕಾಗಿ ಬಲಿಯನ್ನು ಅರ್ಪಿಸಬೇಕು; ಇದು ಕರ್ತನಾದ ಯೆಹೋವನ ನುಡಿ.

28 ಯಾಜಕರಿಗೆ ಒಂದು ಸ್ವಾಸ್ತ್ಯವಾಗುವದು, ನಾನೇ ಅವರ ಸ್ವಾಸ್ತ್ಯ; ಇಸ್ರಾಯೇಲಿನಲ್ಲಿ ಅವರಿಗೆ ಯಾವ ಆಸ್ತಿಯನ್ನೂ ಕೊಡಬಾರದು; ನಾನೇ ಅವರಿಗೆ ಆಸ್ತಿ.

29 ಅವರು ಧಾನ್ಯನೈವೇದ್ಯವನ್ನೂ ದೋಷಪರಿಹಾರಕಯಜ್ಞದ್ರವ್ಯವನ್ನೂ ಪ್ರಾಯಶ್ಚಿತ್ತಯಜ್ಞದ್ರವ್ಯವನ್ನೂ ಅನುಭವಿಸಲಿ; ಕೇವಲ ಯೆಹೋವನದಾಗಿಯೇ ಇರಲೆಂದು ಇಸ್ರಾಯೇಲ್ಯರು ಹರಕೆಮಾಡಿಕೊಡುವದೆಲ್ಲವೂ ಅವರಿಗೆ ಸಲ್ಲಬೇಕು.

30 ಎಲ್ಲಾ ಪ್ರಥಮಫಲಗಳಲ್ಲಿ ಉತ್ಕೃಷ್ಟವಾದದ್ದೂ ನೀವು ನನಗೆ ಪ್ರತ್ಯೇಕಿಸಿ ಸಮರ್ಪಿಸುವ ಎಲ್ಲಾ ಪದಾರ್ಥಗಳೂ ಅವರಿಗಾಗಬೇಕು; ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ನೀವು ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು.

31 ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲ್ಪಟ್ಟ ಪಕ್ಷಿಯನ್ನಾಗಲಿ ಪಶುವನ್ನಾಗಲಿ ತಿನ್ನಬಾರದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು