Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 41 - ಕನ್ನಡ ಸತ್ಯವೇದವು J.V. (BSI)


ಪರಿಶುದ್ಧ ಸ್ಥಳ

1 ಆಮೇಲೆ ಅವನು ನನ್ನನ್ನು ಪರಿಶುದ್ಧಸ್ಥಳಕ್ಕೆ ತಂದು ಅದನ್ನು ಅಳೆಯಲು ಅದರ ಎದುರುಬದುರಿನ ನಿಲವುಕಂಬಗಳ ಅಗಲ ದೇವರ ಗುಡಾರದ ಅಗಲದಂತೆ ಆರಾರು ಮೊಳ, ದ್ವಾರದ ಅಗಲ ಹತ್ತು ಮೊಳ,

2 ದ್ವಾರದ ಎರಡು ಪಕ್ಕದ ಗೋಡೆಗಳ ಅಗಲ ಐದೈದು ಮೊಳ, ಪರಿಶುದ್ಧ ಸ್ಥಳದ ಉದ್ದ ನಾಲ್ವತ್ತು ಮೊಳ, ಅಗಲ ಇಪ್ಪತ್ತು ಮೊಳ ಇದ್ದವು.


ಮಹಾಪರಿಶುದ್ಧ ಸ್ಥಳ

3 ಆಮೇಲೆ ಅವನು ಇನ್ನೂ ಮುಂದಕ್ಕೆ ಹೋಗಿ ಪರಿಶುದ್ಧ ಸ್ಥಳದ ಕೊನೆಯಲ್ಲಿ [ಗರ್ಭಗೃಹವನ್ನು] ಅಳೆಯಲು ದ್ವಾರದ ಒಂದೊಂದು ನಿಲವುಕಂಬದ ಅಗಲ ಎರಡೆರಡು ಮೊಳ, ದ್ವಾರದ ಅಗಲ ಆರು ಮೊಳ,

4 ದ್ವಾರದ ಪಕ್ಕದ ಗೋಡೆಗಳ ಅಗಲ ಏಳೇಳು ಮೊಳ, ಗರ್ಭಗೃಹದ ಉದ್ದ ಇಪ್ಪತ್ತು ಮೊಳ, ಅಗಲ ಇಪ್ಪತ್ತು ಮೊಳ ಇದ್ದವು; ಆಗ ಅವನು ನನಗೆ - ಇದು ಮಹಾಪರಿಶುದ್ಧಸ್ಥಳವೆಂದು ಹೇಳಿದನು.


ದೇವಸ್ಥಾನದ ಸುತ್ತಣ ಕೊಠಡಿಗಳು

5 ಆಮೇಲೆ ಅವನು ಅಳೆಯಲು ದೇವಸ್ಥಾನದ ಗೋಡೆಯ ಅಗಲ ಆರು ಮೊಳ, ದೇವಸ್ಥಾನದ ಸುತ್ತುಮುತ್ತಲು ಎಲ್ಲಾ ಕಡೆ ಅದರ ಪಕ್ಕಗಳಿಗೆ ಅಂಟಿಕೊಂಡಿದ್ದ ಕೊಠಡಿಗಳ ಅಗಲ ನಾಲ್ಕು ನಾಲ್ಕು ಮೊಳ ಇದ್ದವು.

6 ಆ ಕೊಠಡಿಗಳು ಒಂದರ ಮೇಲೊಂದು ಮೂರಂತಸ್ತಾಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಮೂವತ್ತಿದ್ದವು; ದೇವಸ್ಥಾನದ ಗೋಡೆಯು ಮೆಟ್ಲು ಮೆಟ್ಲಾಗಿ ಕಟ್ಟಲ್ಪಟ್ಟಿತ್ತು. ಗೋಡೆಯಲ್ಲಿ ತೂತಿಲ್ಲದೆ ಆ ಮೆಟ್ಲುಗಳೇ ಸುತ್ತಣ ಕೊಠಡಿಗಳ ತೊಲೆಗಳಿಗೆ ಅಧಾರವಾಗಿದ್ದವು.

7 ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆಲ್ಲಾ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂತು; ಅವು ದೇವಸ್ಥಾನವನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಬಿಗಿಯಾಗಿ ತಬ್ಬಿಕೊಂಡಂತೆ ಇದ್ದವು. ಹೀಗೆ ಮೇಲುಮೇಲಿನ ಅಂತಸ್ತುಗಳು ದೇವಸ್ಥಾನದ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಣ ಅಂತಸ್ತಿನಿಂದ ನಡುವಣ ಅಂತಸ್ತಿನ ಮಾರ್ಗವಾಗಿ ಮೇಲಣ ಅಂತಸ್ತಿಗೆ ಹತ್ತುತ್ತಿದ್ದರು.

8 ದೇವಸ್ಥಾನದ ಸುತ್ತುಮುತ್ತಲು ಒಂದು ಜಗಲಿಯು ಕಾಣಿಸಿತು; ಅದು ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ತುಂಬಾ ಆರು ಮೊಳದ ಅಳತೇಕೋಲಿನಷ್ಟು ಎತ್ತರವಾಗಿತ್ತು.

9 ಕೊಠಡಿಗಳ ಹೊರಗೋಡೆಯ ದಪ್ಪವು ಐದು ಮೊಳವಿತ್ತು.

10 ದೇವಸ್ಥಾನಕ್ಕೆ ಅಂಟಿಕೊಂಡ ಆ ಕೊಠಡಿಗಳಿಗೂ [ದೀಕ್ಷಿತ ಯಾಜಕರ] ಕೋಣೆಗಳಿಗೂ ನಡುವೆ ದೇವಸ್ಥಾನದ ಸುತ್ತುಮುತ್ತಲೂ ಇಪ್ಪತ್ತು ಮೊಳ ಅಂತರವಿತ್ತು.

11 ಆ ಎಲ್ಲಾ ಕೊಠಡಿಗಳ ಪ್ರವೇಶಕ್ಕೂ ಎರಡೇ ಬಾಗಿಲು, ಬಡಗಲಿಗೊಂದು ತೆಂಕಲಿಗೊಂದು, ಅವೆರಡೂ ಜಗಲಿಯ ಕಡೆಗಿದ್ದವು; ಆ ಜಗಲಿಯು ಎಲ್ಲಾ ಕಡೆ ಐದು ಮೊಳ ಅಗಲವಾಗಿತ್ತು.


ದೇವಸ್ಥಾನದ ಹಿಂದಿನ ಶಾಲೆಯ ಅಳತೆಗಳೂ ಇತರ ಅಳತೆಗಳೂ

12 ಪಡುವಲಲ್ಲಿ ದೀಕ್ಷಿತರ ಪ್ರಾಕಾರದ ಹಿಂದಿನ ಶಾಲೆಯ ಅಗಲ ಎಪ್ಪತ್ತು ಮೊಳ, ಉದ್ದ ತೊಂಭತ್ತು ಮೊಳ, ಅದರ ಗೋಡೆಯ ದಪ್ಪ ಐದು ಮೊಳ.

13 ಆ ಪುರುಷನು ಅಳೆಯಲು ದೇವಸ್ಥಾನದ ಉದ್ದ ನೂರು ಮೊಳವೂ ದೀಕ್ಷಿತರ ಪ್ರಾಕಾರ, ಶಾಲೆ, ಶಾಲೆಯ ಗೋಡೆಗಳು, ಇವುಗಳ ಒಟ್ಟಗಲ ನೂರು ಮೊಳವೂ,

14 ಮೂಡಲಲ್ಲಿನ ದೇವಸ್ಥಾನ ಮುಖ, ದೀಕ್ಷಿತರ ಪ್ರಾಕಾರ, ಇವುಗಳ ಒಟ್ಟಗಲ ನೂರು ಮೊಳವೂ ಇದ್ದವು.

15 ಅವನು ದೀಕ್ಷಿತರ ಪ್ರಾಕಾರದ ಹಿಂದಿನ ಶಾಲೆಯನ್ನು ಆ ಪ್ರಾಕಾರದ ಕಡೆಯಲ್ಲಿ ಅಳೆಯಲು ಅದರ ಉದ್ದ ಎರಡು ಪಕ್ಕದ ಗೋಡೆಗಳ ಸಹಿತ ನೂರು ಮೊಳವಿತ್ತು.


ದೇವಸ್ಥಾನದ ಒಳಭಾಗದ ವರ್ಣನೆ

16 ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರಮಂಟಪಗಳು, ಹೊಸ್ತಲುಗಳು, ತೆರೆಯಲಾಗದ ಕಿಟಕಿಗಳು, ಹೊಸ್ತಲಿನ ಎದುರಿಗೆ ಮೂರಂತಸ್ತಾಗಿ ಸುತ್ತಲು ಕಟ್ಟಲ್ಪಟ್ಟ ಗೋಡೆಯಟ್ಟಗಳು, ಇವುಗಳನ್ನೂ ಅಳೆದನು;

17 ನೆಲದಿಂದ ಕಿಟಕಿಗಳವರೆಗೂ ದ್ವಾರದ ಮೇಲೂ ಗರ್ಭಗೃಹದ ಮತ್ತು ಈಚಿನ ಗೃಹದ ಗೋಡೆಗೆಲ್ಲಾ ಸುತ್ತುಮುತ್ತಲು ಹಲಿಗೆಗಳು ಚೌಕಚೌಕವಾಗಿ ಹೊದಿಸಲ್ಪಟ್ಟಿದ್ದವು; ಕಿಟಕಿಗಳ [ಪಕ್ಕಗಳಿಗೂ ಹಲಿಗೆಯ] ಹೊದಿಕೆಯಿತ್ತು.

18 [ಆ ಚೌಕಗಳಲ್ಲಿ] ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಚಿತ್ರಿತವಾಗಿದ್ದವು; ಎರಡೆರಡು ಕೆರೂಬಿಗಳ ನಡುವೆ ಒಂದೊಂದು ಖರ್ಜೂರ ವೃಕ್ಷ; ಒಂದೊಂದು ಕೆರೂಬಿಗೆ ಎರಡೆರಡು ಮುಖ;

19 ಖರ್ಜೂರ ವೃಕ್ಷದ ಒಂದು ಪಕ್ಕವು ಮನುಷ್ಯ ಮುಖಕ್ಕೆ ಎದುರು, ಇನ್ನೊಂದು ಪಕ್ಕವು ಸಿಂಹಮುಖಕ್ಕೆ ಎದುರು; ದೇವಸ್ಥಾನದ ಒಳಭಾಗವೆಲ್ಲಾ ಸುತ್ತುಮುತ್ತು ಹೀಗೆ ಚಿತ್ರಮಯವಾಗಿತ್ತು.

20 ನೆಲದಿಂದ ದಾರವಂದದ ಮೇಲ್ಮಟ್ಟದ ತನಕ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಚಿತ್ರಿತವಾಗಿದ್ದವು.

21 ಪರಿಶುದ್ಧ ಸ್ಥಳದ [ಈಚಿನ] ಗೋಡೆಯ ಬಾಗಿಲ ಚೌಕಟ್ಟು ಚಚ್ಚೌಕವಾಗಿತ್ತು; ಮಹಾಪರಿಶುದ್ಧಸ್ಥಳದ ಈಚಿನ ಗೋಡೆಯ ಚೌಕಟ್ಟೂ ಹಾಗೆಯೇ ಇತ್ತು.

22 ಅಲ್ಲಿ ಮರದ ವೇದಿಯೊಂದಿತ್ತು; ಅದರ ಎತ್ತರ ಮೂರು ಮೊಳ, ಉದ್ದ ಎರಡು ಮೊಳ; ಅದರ ಮೂಲೆಗಳೂ ಪೀಠವೂ ಪಕ್ಕಗಳೂ ಮರದ್ದೇ; ಆ ಪುರುಷನು ನನಗೆ - ಇದು ಯೆಹೋವನ ಸಮ್ಮುಖದ ಮೇಜು ಎಂದು ಹೇಳಿದನು.

23 ಪರಿಶುದ್ಧಸ್ಥಳದ ಮತ್ತು ಮಹಾಪರಿಶುದ್ಧಸ್ಥಳದ ಬಾಗಿಲುಗಳಿಗೆ ಎರಡೆರಡು ಕದಗಳು;

24 ಒಂದೊಂದು ಕದಕ್ಕೆ ಎರಡೆರಡು ಮಡಚುವ ಭಾಗಗಳು; ಇತ್ತಕಡೆಯ ಕದಕ್ಕೆ ಎರಡು ಭಾಗ, ಅತ್ತಕಡೆಯ ಕದಕ್ಕೆ ಎರಡು ಭಾಗ ಇದ್ದವು.

25 ಆ ಕದಗಳಲ್ಲಿ, ಅಂದರೆ ಪರಿಶುದ್ಧಸ್ಥಳದ ಕದಗಳಲ್ಲಿ ಕೆರೂಬಿಗಳೂ ಖರ್ಜೂರ ವೃಕ್ಷಗಳೂ ಗೋಡೆಗಳಲ್ಲಿ ಚಿತ್ರಿಸಲ್ಪಟ್ಟ ಹಾಗೆಯೇ ಚಿತ್ರಿತವಾಗಿದ್ದವು; ದ್ವಾರಮಂಟಪದ ಹೊರಗಡೆ ಮರದ ಸೂರು ಇತ್ತು

26 ದ್ವಾರಮಂಟಪದ ಪಕ್ಕದ ಗೋಡೆಗಳಲ್ಲಿ ತೆರೆಯಲಾಗದ ಕಿಟಕಿಗಳೂ [ಚಿತ್ರಿತ] ಖರ್ಜೂರ ವೃಕ್ಷಗಳೂ ಇದ್ದವು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು