Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 37 - ಕನ್ನಡ ಸತ್ಯವೇದವು J.V. (BSI)


ಒಣಗಿದ ಎಲುಬುಗಳ ಪುನರ್ಜೀವನ

1 ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು ಆತನು ತನ್ನ ಆತ್ಮದ ಮೂಲಕ ನನ್ನನ್ನು ಒಯ್ದು ಎಲುಬುಗಳಿಂದ ತುಂಬಿದ್ದ ಒಂದು ತಗ್ಗಿನಲ್ಲಿ ಇಳಿಸಿ

2 ನಾನು ಆ ಎಲುಬುಗಳ ಮಧ್ಯೆ ತಗ್ಗನ್ನು ಬಳಸಿಕೊಂಡು ಬರುವಂತೆ ಮಾಡಿದನು; ಇಗೋ, ತಗ್ಗಿನ ಮೇಲೆಲ್ಲಾ ತೀರಾ ಒಣಗಿದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು.

3 ಆತನು ನನ್ನನ್ನು - ನರಪುತ್ರನೇ, ಈ ಎಲುಬುಗಳಿಗೆ ಜೀವವು ಬರಬಹುದೋ ಎಂದು ಕೇಳಲು ನಾನು - ಕರ್ತನಾದ ಯೆಹೋವನೇ, ನೀನೇ ಬಲ್ಲೆ ಎಂದುತ್ತರಕೊಟ್ಟೆನು.

4 ಆಗ ಆತನು ನನಗೆ ಹೀಗೆ ಅಪ್ಪಣೆಮಾಡಿದನು - ನೀನು ಎಲುಬುಗಳ ಮೇಲೆ ಧ್ವನಿಯನ್ನು ಹರಡಿ ಅದಕ್ಕೆ ಈ ದೈವೋಕ್ತಿಯನ್ನು ನುಡಿ - ಒಣಗಿದ ಎಲುಬುಗಳೇ, ಯೆಹೋವನ ವಾಕ್ಯವನ್ನು ಕೇಳಿರಿ.

5 ಕರ್ತನಾದ ಯೆಹೋವನು ನಿಮಗೆ ಹೀಗೆ ಹೇಳುತ್ತಾನೆ - ಇಗೋ, ನಾನು ನಿಮ್ಮೊಳಗೆ ಶ್ವಾಸವನ್ನು ಹೊಗಿಸುವೆನು; ನೀವು ಬದುಕುವಿರಿ.

6 ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ಹರಡಿ ಚರ್ಮವನ್ನು ಹೊದಿಸಿ ನಿಮ್ಮಲ್ಲಿ ಶ್ವಾಸವನ್ನು ತುಂಬುವೆನು; ಆಗ ನೀವು ಬದುಕಿ ನಾನೇ ಯೆಹೋವನು ಎಂದು ತಿಳಿದುಕೊಳ್ಳುವಿರಿ.

7 ನನಗೆ ಅಪ್ಪಣೆಯಾದಂತೆ ನಾನು ಆ ದೈವೋಕ್ತಿಯನ್ನೆತ್ತಿ ನುಡಿಯುತ್ತಿರಲು ಸದ್ದಾಯಿತು, ಇಗೋ, ಟಕಟಕ ಎನ್ನುತ್ತಾ ಎಲುಬು ಎಲುಬಿಗೆ ಜೋಡನೆಯಾದವು.

8 ನಾನು ನೋಡಲಾಗಿ ಆಹಾ, ಅವುಗಳ ಮೇಲೆ ನರಗಳು ಹಬ್ಬಿಕೊಂಡವು, ಮಾಂಸವು ಹರಡಿಕೊಂಡಿತು, ಚರ್ಮವು ಮೇಲ್ಹೊದಿಕೆಯಾಯಿತು; ಶ್ವಾಸ ಮಾತ್ರ ಇರಲಿಲ್ಲ.

9 ಆಗ ಅತನು ನನಗೆ - ನರಪುತ್ರನೇ, ನೀನು ಶ್ವಾಸಕ್ಕೆ ನುಡಿ, ನುಡಿ; ಶ್ವಾಸವೇ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀನು ಚತುರ್ದಿಕ್ಕುಗಳಿಂದ ಬೀಸಿ ಹತಶರೀರಗಳು ಬದುಕುವಂತೆ ಅವುಗಳ ಮೇಲೆ ಸುಳಿ ಎಂಬದಾಗಿ ಶ್ವಾಸಕ್ಕೆ ನುಡಿ ಎಂದು ಅಪ್ಪಣೆಕೊಡಲು ನಾನು ಅಪ್ಪಣೆಯಂತೆ ನುಡಿದೆನು.

10 ಇಗೋ, ಶ್ವಾಸವು ಅವುಗಳಲ್ಲಿ ಹೊಕ್ಕಿತು, ಬದುಕಿದವು, ಕಾಲೂರಿ ನಿಂತವು, ಅತ್ಯಂತ ದೊಡ್ಡ ಸೈನ್ಯವಾದವು.

11 ಆಮೇಲೆ ಅತನು ನನಗೆ ಹೀಗೆ ಹೇಳಿದನು - ನರಪುತ್ರನೇ, ಈ ಎಲುಬುಗಳು ಇಸ್ರಾಯೇಲಿನ ಪೂರ್ಣವಂಶವು; ಇಗೋ, ಆ ವಂಶೀಯರು - ಅಯ್ಯೋ, ನಮ್ಮ ಎಲುಬುಗಳು ಒಣಗಿಹೋದವು, ನಮ್ಮ ನಿರೀಕ್ಷೆಯು ಹಾಳಾಯಿತು; ನಾವು ಬುಡನಾಶವಾದೆವು ಅಂದುಕೊಳ್ಳುತ್ತಿದ್ದಾರೆ.

12 ಆದಕಾರಣ ನೀನು ಈ ದೈವೋಕ್ತಿಯನ್ನು ಅವರಿಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನನ್ನ ಜನರೇ, ನೋಡಿರಿ, ನಾನು ನಿಮ್ಮ ಗೋರಿಗಳನ್ನು ತೆರೆದು ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿ ಇಸ್ರಾಯೇಲ್ ದೇಶಕ್ಕೆ ಸೇರಮಾಡುವೆನು.

13 ನನ್ನ ಜನರೇ, ನಾನು ನಿಮ್ಮ ಗೋರಿಗಳನ್ನು ತೆರೆದು ಅವುಗಳೊಳಗಿಂದ ನಿಮ್ಮನ್ನು ಎಬ್ಬಿಸಿದಾಗ ನಾನೇ ಯೆಹೋವನು ಎಂದು ನಿಮಗೆ ದೃಢವಾಗುವದು.

14 ನಾನು ನನ್ನ ಶ್ವಾಸವನ್ನು ನಿಮ್ಮಲ್ಲಿ ಹೊಗಿಸಿ ನಿಮ್ಮನ್ನು ಬದುಕಿಸಿ ನಿಮ್ಮ ದೇಶದಲ್ಲಿ ನೆಲೆಗೊಳಿಸುವೆನು; ಆಗ ಯೆಹೋವನಾದ ನಾನೇ ಇದನ್ನು ನುಡಿದು ನಡಿಸಿದ್ದೇನೆ ಎಂದು ತಿಳಿದುಕೊಳ್ಳುವಿರಿ; ಇದು ಯೆಹೋವನ ಸಂಕಲ್ಪ.


ಇಸ್ರಾಯೇಲೂ ಯೆಹೂದವೂ ಒಂದಾಗುವದು

15 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು -

16 ನರಪುತ್ರನೇ, ನೀನು ಒಂದು ದಂಡವನ್ನು ತೆಗೆದು ಅದರಲ್ಲಿ - ಯೆಹೂದದ್ದು, ಯೆಹೂದಕ್ಕೆ ಸೇರಿದ ಇಸ್ರಾಯೇಲ್ಯರದು ಎಂದು ಬರೆದು ಇನ್ನೊಂದು ದಂಡವನ್ನು ತೆಗೆದು ಅದರಲ್ಲಿ - ಯೋಸೇಫಿನದು, ಎಫ್ರಾಯೀವಿುನದು ಯೋಸೇಫಿಗೆ ಸೇರಿದ ಎಲ್ಲಾ ಇಸ್ರಾಯೇಲ್ಯರದು ಎಂದು ಬರೆ;

17 ಆಮೇಲೆ ಅವು ನಿನ್ನ ಕೈಯಲ್ಲಿ ಒಂದಾಗುವಂತೆ ಅವೆರಡನ್ನೂ ಒಂದಕ್ಕೊಂದು ಉದ್ದವಾಗಿ ಸೇರಿಸಿ ಹಿಡಿ.

18 ನಿನ್ನ ಜನರು - ಇದೇನು? ನಮಗೆ ತಿಳಿಸುವದಿಲ್ಲವೋ ಎಂದು ನಿನ್ನನ್ನು ಕೇಳುವಲ್ಲಿ ನೀನು ಅವರಿಗೆ -

19 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಗೋ, ಎಫ್ರಾಯೀಮು ಹಿಡಿದಿರುವ ದಂಡವನ್ನು ಅಂದರೆ ಯೋಸೇಫಿನ ಮತ್ತು ಯೋಸೇಫಿಗೆ ಸೇರಿದ ಇಸ್ರಾಯೇಲ್ ಕುಲಗಳ ದಂಡವನ್ನು ನಾನು ತೆಗೆದು ಯೆಹೂದದ ದಂಡಕ್ಕೆ ಉದ್ದವಾಗಿ ಸೇರಿಸಿ ಅವೆರಡನ್ನು ನನ್ನ ಕೈಯಲ್ಲಿ ಒಂದೇ ದಂಡವಾಗಿ ಹಿಡಿಯುವೆನು ಎಂಬದನ್ನು ಹೇಳು.

20 ಹೇಳುವಾಗ ನೀನು ಹೆಸರು ಬರೆದಿರುವ ದಂಡಗಳು ಅವರ ಕಣ್ಣೆದುರಿಗೆ ನಿನ್ನ ಕೈಯಲ್ಲಿರಲಿ.

21 ಇದನ್ನೂ ಅವರಿಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಗೋ, ಇಸ್ರಾಯೇಲ್ಯರು ವಶವಾಗಿರುವ ಜನಾಂಗಗಳೊಳಗಿಂದ ನಾನು ಅವರನ್ನು ಉದ್ಧರಿಸಿ ಎಲ್ಲಾ ಕಡೆಯಿಂದಲೂ ಒಟ್ಟುಗೂಡಿಸಿ ಸ್ವದೇಶಕ್ಕೆ ಕರತಂದು

22 ಅಲ್ಲಿ ಇಸ್ರಾಯೇಲಿನ ಪರ್ವತಗಳ ಮೇಲೆ ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿಯೂ ಭಿನ್ನರಾಜ್ಯದವರಾಗಿಯೂ ಇರರು;

23 ತಮ್ಮ ಬೊಂಬೆಗಳಿಂದಾಗಲಿ ಅಸಹ್ಯ ವಸ್ತುಗಳಿಂದಾಗಲಿ ಯಾವ ದುರಾಚಾರದಿಂದಲೇ ಆಗಲಿ ತಮ್ಮನ್ನು ಇನ್ನು ಮುಂದೆ ಹೊಲೆಗೆಯ್ದುಕೊಳ್ಳರು; ಅವರು ಪಾಪಮಾಡಿಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು.

24 ನನ್ನ ಸೇವಕನಾದ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು.

25 ನನ್ನ ಸೇವಕನಾದ ಯಾಕೋಬನಿಗೆ ನಾನು ದಯಪಾಲಿಸಿದ ದೇಶದಲ್ಲಿ ಅವರು ವಾಸಿಸುವರು; ಹೌದು, ನಿಮ್ಮ ಪಿತೃಗಳು ವಾಸಿಸಿದ ದೇಶದಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ಸೇವಕನಾದ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು.

26 ಮತ್ತು ನಾನು ಅವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವದು; ನಾನು ಅವರನ್ನು ನೆಲೆಗೊಳಿಸಿ ವೃದ್ಧಿಮಾಡಿ ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು.

27 ಹೌದು, ನನ್ನ ವಾಸಸ್ಥಾನವು ಅವರ ಮಧ್ಯದಲ್ಲಿರುವದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.

28 ನನ್ನ ಪವಿತ್ರಾಲಯವು ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಾಯೇಲನ್ನು ಮೀಸಲು ಮಾಡಿಕೊಂಡಾತನು ಯೆಹೋವನಾದ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು