ಯೆಹೆಜ್ಕೇಲನು 36 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರ ಮುಂದಿನ ಸೌಭಾಗ್ಯವೂ ಮನಶುದ್ಧಿಯೂ 1 ನರಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಈ ದೈವೋಕ್ತಿಯನ್ನು ನುಡಿ - ಇಸ್ರಾಯೇಲಿನ ಪರ್ವತಗಳೇ, ಯೆಹೋವನ ವಾಕ್ಯವನ್ನು ಕೇಳಿರಿ. 2 ಶತ್ರುವು ನಿಮ್ಮನ್ನು ನೋಡಿ ಆಹಾ, ಎನ್ನುತ್ತಾ ಈ ಪುರಾತನದುರ್ಗಗಳು ನಮ್ಮ ವಶವಾಗಿವೆ ಎಂದು ಹಿಗ್ಗಿಕೊಂಡದರಿಂದ ಈ ದೈವೋಕ್ತಿಯನ್ನು ನುಡಿಯಬೇಕೆಂದು ಕರ್ತನಾದ ಯೆಹೋವನ ಅಪ್ಪಣೆಯಾಯಿತು - 3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಅಯ್ಯೋ, ಎಲ್ಲಾ ಕಡೆಯೂ ತುಳಿಯಲ್ಪಟ್ಟು ಹಾಳಾದ ನೀವು ಜನಾಂಗಗಳಲ್ಲಿ ಉಳಿದವರ ವಶವಾಗಿದ್ದೀರಲ್ಲಾ! ಹರಟೆಗಾರರ ಬಾಯಿಗೆ ಬಿದ್ದು ಜನರ ದೂಷಣೆಗೆ ಗುರಿಯಾಗಿದ್ದೀರಲ್ಲಾ! 4 ಆದಕಾರಣ ಇಸ್ರಾಯೇಲಿನ ಪರ್ವತಗಳೇ, ಕರ್ತನಾದ ಯೆಹೋವನ ವಾಕ್ಯಗಳನ್ನು ಕೇಳಿರಿ - ಬೆಟ್ಟಗುಡ್ಡ ತೊರೆತಗ್ಗುಗಳಿಗೂ ಕಾಡಾದ ಹಾಳುಪ್ರದೇಶಗಳಿಗೂ ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ ಯೆಹೋವಕರ್ತನು ಹೀಗೆ ನುಡಿಯುತ್ತಾನೆ - 5 ಆಹಾ, ನನ್ನ ದೇಶವನ್ನು ತಮ್ಮ ಸ್ವಾಸ್ತ್ಯಮಾಡಿಕೊಂಡು ಪೂರ್ಣಹೃದಯದಿಂದ ಆನಂದಪಟ್ಟವರೂ ಅದನ್ನು ಮನಃಪೂರ್ವಕವಾಗಿ ತಿರಸ್ಕರಿಸಿ ಸೂರೆಗೆ ತಳ್ಳಿಬಿಟ್ಟವರೂ ಆದ ಎದೋವಿುನವರೆಲ್ಲರನ್ನೂ ಇತರ ಜನಾಂಗಗಳಲ್ಲಿ ಉಳಿದವರನ್ನೂ ನಾನು ರೋಷದಿಂದುರಿಯುತ್ತಾ ಶಪಿಸೇ ಶಪಿಸಿದ್ದೇನೆ; 6 ಹೀಗಿರಲು ಇಸ್ರಾಯೇಲ್ ದೇಶದ ವಿಷಯವಾದ ಈ ದೈವೋಕ್ತಿಯನ್ನು ಅದರ ಬೆಟ್ಟಗುಡ್ಡ ತೊರೆತಗ್ಗುಗಳಿಗೆ ನುಡಿಯಬೇಕೆಂದು ಅಪ್ಪಣೆಯಾಗಿದೆ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ಕೋಪೋದ್ರೇಕದಿಂದಲೂ ರೋಷಾವೇಶದಿಂದಲೂ ಮಾತಾಡಿದ್ದೇನೆ, ನೀವು ಅನ್ಯಜನಾಂಗಗಳಿಂದ ಅವಮಾನವನ್ನು ಅನುಭವಿಸಿದ್ದೀರಲ್ಲಾ! 7 ಆದಕಾರಣ ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ಸುತ್ತಣ ಆ ಅನ್ಯಜನಾಂಗಗಳೇ ತಮ್ಮ ಮೇಲೆ ಬಿದ್ದ ಅವಮಾನವನ್ನು ಅನುಭವಿಸುವದು ಖಂಡಿತ ಎಂದು ಕೈಯೆತ್ತಿ ಪ್ರಮಾಣಮಾಡಿದ್ದೇನೆ. 8 ಇಸ್ರಾಯೇಲಿನ ಪರ್ವತಗಳೇ, ನಿಮ್ಮ ಗಿಡಗಳು ರೆಂಬೆಗಳನ್ನು ಹರಡಿಕೊಂಡು ನನ್ನ ಜನರಾದ ಇಸ್ರಾಯೇಲ್ಯರಿಗೆ ಫಲಕೊಡುವವು; ಅವರ ಬರುವಿಕೆಯು ಸಮೀಪವಾಯಿತು. 9 ಇಗೋ, ನಾನು ನಿಮ್ಮ ಪಕ್ಷದವನು; ನಿಮ್ಮ ಕಡೆಗೆ ತಿರುಗಿಕೊಳ್ಳುವೆನು; ನಿಮ್ಮಲ್ಲಿ ಗೆಯ್ಯುವರು, ಬಿತ್ತುವರು; 10 ನಿಮ್ಮಲ್ಲಿ ಬಹುಜನರು ಅಂದರೆ ಇಸ್ರಾಯೇಲ್ ವಂಶವೆಲ್ಲವೂ ವಾಸಿಸುವಂತೆ ಮಾಡುವೆನು; ಪಟ್ಟಣಗಳು ಜನಭರಿತವಾಗುವವು, ಹಾಳುನಿವೇಶನಗಳಲ್ಲಿ ಕಟ್ಟಡಗಳು ಏಳುವವು; 11 ನಿಮ್ಮಲ್ಲಿ ಬಹುಜನರನ್ನೂ ಪಶುಗಳನ್ನೂ ವೃದ್ಧಿಗೊಳಿಸುವೆನು; ಅವು ಹೆಚ್ಚಿ ಅಭಿವೃದ್ಧಿಯಾಗುವವು; ಮೊದಲಿನಂತೆ ನಿಮ್ಮಲ್ಲಿ ನಿವಾಸಿಗಳನ್ನು ತುಂಬಿಸಿ ಮೊದಲಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ನಾನೇ ಯೆಹೋವನು ಎಂದು ನಿಮಗೆ ದೃಢವಾಗುವದು. 12 ಬೆಟ್ಟದ ಸೀಮೆಯೇ, ನಾನು ನಿನ್ನಲ್ಲಿ ಜನಸಂಚಾರವನ್ನುಂಟುಮಾಡುವೆನು; ನನ್ನ ಜನರಾದ ಇಸ್ರಾಯೇಲ್ಯರೇ ನಿನ್ನಲ್ಲಿ ಸಂಚರಿಸುತ್ತಾ ನಿನ್ನನ್ನು ಸ್ವಾಸ್ತ್ಯವಾಗಿ ಅನುಭವಿಸುವರು; ನೀನು ಇನ್ನು ಅವರಿಗೆ ಪುತ್ರಶೋಕವನ್ನು ಕೊಡದಿರುವಿ. 13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀನು ನರಭಕ್ಷಕನಾಗಿ ನಿನ್ನ ಪ್ರಜೆಗೆ ಪುತ್ರಶೋಕವನ್ನು ಕೊಟ್ಟಿದ್ದೀ ಎಂದು ನಿನ್ನನ್ನು ಬಯ್ಯುತ್ತಾರಲ್ಲಾ; 14 ಇನ್ನು ಮುಂದೆ ನೀನು ನರಭಕ್ಷಕನಾಗುವದಿಲ್ಲ, ನಿನ್ನ ಪ್ರಜೆಗೆ ಇನ್ನು ಪುತ್ರಶೋಕವನ್ನು ಕೊಡದಿರುವಿ; 15 ಮ್ಲೇಚ್ಫರ ಧಿಕ್ಕಾರವನ್ನು ಇನ್ನು ನಿನ್ನ ಕಿವಿಗೆ ಬೀಳಿಸೆನು; ನೀನು ಜನಾಂಗಗಳಿಂದ ಇನ್ನು ಅವಮಾನವನ್ನು ಅನುಭವಿಸದಿರುವಿ; ನಿನ್ನ ಪ್ರಜೆಯು ಮುಗ್ಗರಿಸುವದಕ್ಕೆ ಇನ್ನು ನೀನು ಕಾರಣನಾಗುವದಿಲ್ಲ; ಇದು ಕರ್ತನಾದ ಯೆಹೋವನ ನುಡಿ. 16 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 17 ನರಪುತ್ರನೇ, ಇಸ್ರಾಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ ದುರಾಚಾರಗಳಿಂದ ಅದನ್ನು ಹೊಲೆಗೈದರು; ಅವರ ನಡತೆಯು ಮುಟ್ಟಿನ ಹೊಲಸಿನಂತೆ ನನಗೆ ಅಸಹ್ಯವಾಗಿತ್ತು. 18 ಅವರು ದೇಶದ ಮೇಲೆ ರಕ್ತವನ್ನು ಸುರಿಸಿ ತಮ್ಮ ಬೊಂಬೆಗಳಿಂದ ಅದನ್ನು ಹೊಲೆಗೈದ ಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ 19 ಜನಾಂಗಗಳೊಳಗೆ ಅವರನ್ನು ಚದರಿಸಿ ದೇಶದೇಶಗಳಿಗೆ ತೂರಿಬಿಟ್ಟು ಅವರ ದುರ್ಮಾರ್ಗ ದುರಾಚಾರಗಳಿಗೆ ಸರಿಯಾಗಿ ದಂಡಿಸಿದೆನು. 20 ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ ಓಹೋ, ಇವರು ಯೆಹೋವನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ ಎಂದೆನ್ನಿಸಿಕೊಂಡು ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತರಲು 21 ಇಸ್ರಾಯೇಲ್ ವಂಶದವರು ಜನಾಂಗಗಳೊಳಗೆ ಸೇರಿ ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮವನ್ನು ಕುರಿತು ನಾನು ಮರುಗಿದೆನು. 22 ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ ವಂಶದವರೇ, ನಿಮ್ಮ ನಿವಿುತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿವಿುತ್ತವೇ ಈ ರಕ್ಷಣಕಾರ್ಯವನ್ನು ಮಾಡುತ್ತೇನೆ. 23 ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಘನನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು; ಹೀಗೆ ನಾನು ಅವುಗಳ ಕಣ್ಣೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವಾಗ ನಾನೇ ಯೆಹೋವನು ಎಂದು ಅವುಗಳಿಗೆ ನಿಶ್ಚಿತವಾಗುವದು; ಇದು ಕರ್ತನಾದ ಯೆಹೋವನ ನುಡಿ. 24 ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡಿಸಿ ಸಕಲ ದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡುವೆನು. 25 ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸಲು ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. 26 ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. 27 ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ. 28 ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ದೇಶದಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು. 29 ನಾನು ನಿಮ್ಮನ್ನು ನಿಮ್ಮ ಎಲ್ಲಾ ಹೊಲಸಿನಿಂದ ಉದ್ಧರಿಸಿ ಬೆಳೆ ಬೆಳೆಯಲೆಂದು ಅಪ್ಪಣೆಕೊಟ್ಟು ಅದನ್ನು ವೃದ್ಧಿಗೊಳಿಸುವೆನು; ನಿಮಗೆ ಕ್ಷಾಮವನ್ನು ಇನ್ನು ಬರಮಾಡೆನು. 30 ನೀವು ಕ್ಷಾಮದೇಶದವರೆಂದು ಜನಾಂಗಗಳು ನಿಮ್ಮನ್ನು ನಿಂದಿಸದಂತೆ ನಾನು ಮರದ ಹಣ್ಣನ್ನೂ ಹೊಲದ ಬೆಳೆಯನ್ನೂ ಹೆಚ್ಚಿಸುವೆನು. 31 ಆಗ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿವಿುತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ. 32 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಈ ರಕ್ಷಣಕಾರ್ಯವನ್ನು ಮಾಡುವದು ನಿಮ್ಮ ನಿವಿುತ್ತವಲ್ಲವೆಂದು ನಿಮಗೆ ತಿಳಿದಿರಲಿ; ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳಿಗೆ ಲಜ್ಜೆಗೊಳ್ಳಿರಿ, ನಾಚಿಕೆಪಡಿರಿ. 33 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ನಿಮ್ಮನ್ನು ನಿಮ್ಮ ಅಪರಾಧಗಳಿಂದೆಲ್ಲಾ ಶುದ್ಧಿಮಾಡುವ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು, ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವವು. 34 ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ಬೀಡುಬಿದ್ದು ಕಾಡಾದ ಭೂವಿುಯನ್ನು ಗೆಯ್ಯುವರು. 35 ಆಗ ಜನರು - ಕಾಡಾಗಿದ್ದ ಈ ದೇಶವು ಏದೆನ್ ಉದ್ಯಾನದಂತೆ ಕಳಕಳಿಸುತ್ತದೆ; ಬಿದ್ದುಹೋಗಿ ಹಾಳುಪಾಳಾದ ಪಟ್ಟಣಗಳು ಕೋಟೆಕೊತ್ತಲಗಳಿಂದ ಕೂಡಿ ಜನಭರಿತವಾಗಿವೆಯಲ್ಲಾ ಎಂದು ಹೇಳುವರು. 36 ಯೆಹೋವನಾದ ನಾನೇ ಬಿದ್ದುಹೋದದನ್ನು ಕಟ್ಟಿ ಹಾಳಾದದನ್ನು ಬೆಳೆಯಿಸಿದ್ದೇನೆಂಬದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವದು; ಯೆಹೋವನಾದ ನಾನೇ ನುಡಿದಿದ್ದೇನೆ, ನಡಿಸುತ್ತೇನೆ. 37 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಇನ್ನೊಂದು ವಿಷಯದಲ್ಲಿ ಇಸ್ರಾಯೇಲ್ ವಂಶದವರ ವಿಜ್ಞಾಪನೆಯನ್ನು ಲಾಲಿಸಿ ನೆರವೇರಿಸುವೆನು; ಅಂದರೆ ಅವರ ಜನಸಂಖ್ಯೆಯನ್ನು ಹಿಂಡಿನೋಪಾದಿಯಲ್ಲಿ ಹೆಚ್ಚಿಸುವೆನು. 38 ಮೀಸಲಾದ ಮಂದೆಯಂತೆ, ಹಬ್ಬಗಳಲ್ಲಿ ಯೆರೂಸಲೇವಿುಗೆ ಬಂದು ಸೇರುವ ಹಿಂಡಿನ ಹಾಗೆ ಮನುಷ್ಯರು ಹಾಳುಪಟ್ಟಣಗಳಲ್ಲಿ ಹಿಂಡುಹಿಂಡಾಗಿ ತುಂಬಿಕೊಳ್ಳುವರು; ಆಗ ನಾನೇ ಯೆಹೋವನು ಎಂದು ಅವರಿಗೆ ನಿಶ್ಚಯವಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India