ಯೆಹೆಜ್ಕೇಲನು 31 - ಕನ್ನಡ ಸತ್ಯವೇದವು J.V. (BSI)ಐಗುಪ್ತದೊಡೆಯನೆಂಬ ದೊಡ್ಡ ಮರದ ಧ್ವಂಸವು 1 [ಯೆಹೋಯಾಖೀನನು ಸೆರೆಯಾದ] ಹನ್ನೊಂದನೆಯ ವರುಷದ ಮೂರನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 2 ನರಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನಿಗೂ ಅವನ ಅಸಂಖ್ಯಾತವಾದ ಪ್ರಜೆಗೂ ಹೀಗೆ ನುಡಿ - ದೊಡ್ಡಸ್ತಿಕೆಯಲ್ಲಿ ನಿನಗೆ ಸರಿಸಮಾನರು ಯಾರು? 3 ಆಹಾ, ತಿಲಕವೋ ದೇವದಾರುವೋ ಒಂದು ವೃಕ್ಷವು ಲೆಬನೋನಿನಲ್ಲಿತ್ತು; ಅದರ ರೆಂಬೆಗಳು ಅಂದ, ಅದರ ನೆರಳು ದಟ್ಟ, ಅದರ ಎತ್ತರವು ಬಹಳ, ಅದರ ತುದಿಯು ಮೇಘಚುಂಬಿತ. 4 ಅದನ್ನು ಜಲಪ್ರವಾಹಗಳು ಬೆಳೆಯಿಸಿದವು, ಮಹಾನದಿಯು ವೃದ್ಧಿಗೊಳಿಸಿತು, ನದೀಶಾಖೆಗಳು ಅಲ್ಲಿನ ಉದ್ಯಾನವನ್ನು ಸುತ್ತಿಕೊಂಡಿದ್ದವು, ಭೂವಿುಯ ಎಲ್ಲಾ ಮರಗಳಿಗೂ ನದಿಯು ತನ್ನ ಕಾಲುವೆಗಳನ್ನು ಕೊಟ್ಟಿತ್ತು. 5 ಹೀಗಿರಲು ಆ ವೃಕ್ಷವು ಅಡವಿಯ ಎಲ್ಲಾ ಮರಗಳಿಗಿಂತಲೂ ಅತ್ಯುನ್ನತವಾಗಿತ್ತು; ಅದರ ಕೊಂಬೆಗಳು ನಿಬಿಡವಾಗಿದ್ದವು; ಅಲ್ಲಿ ನೀರಾವರಿಯಿದ್ದ ಕಾರಣ ಅದರ ರೆಂಬೆಗಳು ಉದ್ದವಾಗಿ ಚಾಚಿಕೊಂಡಿದ್ದವು. 6 ಎಲ್ಲಾ ಆಕಾಶಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಮಾಡಿಕೊಂಡಿದ್ದವು; ಸಮಸ್ತಭೂಜಂತುಗಳು ಅದರ ಕೊಂಬೆಗಳ ಕೆಳಗೆ ಇದ್ದುಕೊಂಡು ಮರಿಗಳನ್ನು ಈಯುತ್ತಿದ್ದವು; ಮಹಾಜನಾಂಗಗಳೆಲ್ಲಾ ಅದರ ನೆರಳನ್ನು ಆಶ್ರಯಿಸಿದ್ದವು. 7 ಅದರ ಬೇರಿಗೆ ಜಲಾಸರೆಯಿದ್ದದರಿಂದ ಆ ಮರವು ಎತ್ತರದಿಂದಲೂ ಕೊಂಬೆಗಳ ನೀಳದಿಂದಲೂ ಕಂಗೊಳಿಸುತ್ತಿತ್ತು. 8 ದೇವರ ಉದ್ಯಾನವನದಲ್ಲಿನ ದೇವದಾರುಗಳು ಅದನ್ನು ಮುಚ್ಚಲಾರದೆ ಹೋದವು; ತುರಾಯಿಮರಗಳು ಅದರ ರೆಂಬೆಗಳಷ್ಟು ಉದ್ದವಾಗಿರಲಿಲ್ಲ; ಅತ್ತಿಮರಗಳು ಅದರ ಕೊಂಬೆಗಳಷ್ಟು ದಪ್ಪವಾಗಿರಲಿಲ್ಲ; ದೇವರ ವನದಲ್ಲಿನ ಯಾವ ಮರವೂ ಅದರಷ್ಟು ರಮಣೀಯವಾಗಿರಲಿಲ್ಲ. 9 ನಾನು ಅದನ್ನು ಬಹು ಶಾಖೋಪಶಾಖೆಗಳಿಂದ ಅಂದಗೊಳಿಸಿದೆನು; ದೇವರ ಉದ್ಯಾನವಾದ ಏದೆನಿನ ಸಕಲವೃಕ್ಷಗಳೂ ಅದಕ್ಕೆ ಅಸೂಯೆಪಡುತ್ತಿದ್ದವು. 10 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆ ವೃಕ್ಷವು ಬಹಳ ಎತ್ತರವಾಗಿ ಬೆಳೆದು ತನ್ನ ತುದಿಯನ್ನು ಮೋಡಕ್ಕೆ ತಗಲಿಸಿ ತನ್ನ ನೀಳದ ವಿಷಯವಾಗಿ ಉಬ್ಬಿಕೊಂಡದರಿಂದ 11 ನಾನು ಅದನ್ನು ಜನಾಂಗಗಳಲ್ಲಿ ಮಹಾಬಲಿಷ್ಠನಾದವನ ಕೈಗೆ ಕೊಟ್ಟುಬಿಟ್ಟಿದ್ದೇನೆ. ಅವನು ಅದರ ಕೆಟ್ಟತನಕ್ಕೆ ತಕ್ಕಂತೆ ಅದನ್ನು ದಂಡಿಸೇ ದಂಡಿಸುವನು; ನಾನು ಅದನ್ನು ತಳ್ಳಿಹಾಕಿದೆನು. 12 ಅತಿಭಯಂಕರ ಜನಾಂಗದವರಾದ ಮ್ಲೇಚ್ಫರು ಅದನ್ನು ಕಡಿದುಹಾಕಿ ಹೋಗಿಬಿಟ್ಟಿದ್ದಾರೆ; ಅದರ ರೆಂಬೆಗಳು ಗುಡ್ಡಗಳಲ್ಲಿಯೂ ಎಲ್ಲಾ ಹಳ್ಳಕೊಳ್ಳಗಳಲ್ಲಿಯೂ ಬಿದ್ದಿವೆ; ಅದರ ಕೊಂಬೆಗಳು ದೇಶದ ಎಲ್ಲಾ ತೊರೆಗಳ ಹತ್ತಿರ ಮುರಿದುಹಾಕಲ್ಪಟ್ಟಿವೆ; ಲೋಕದ ಸಮಸ್ತಜನಾಂಗಗಳು ಅದರ ನೆರಳಿನಿಂದ ತೊಲಗಿ ಅದನ್ನು ಬಿಟ್ಟುಹೋಗಿವೆ. 13 ಬಿದ್ದ ಬುಡದ ಮೇಲೆ ಎಲ್ಲಾ ಆಕಾಶಪಕ್ಷಿಗಳು ಎರಗುವವು; ಅದರ ರೆಂಬೆಗಳನ್ನು ಸಮಸ್ತಭೂಜಂತುಗಳು ತುಳಿದಾಡುವವು. 14 ನೀರಾವರಿಯ ಯಾವ ಮರಗಳೂ ತಮ್ಮ ನೀಳವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗಲಿಸದಿರಲೆಂದೂ ನೀರನ್ನು ಹೀರುತ್ತಲೇ ಇರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ನಿಗುರಿಕೊಳ್ಳದಿರಲೆಂದೂ ಹೀಗಾಯಿತು; ಅವೆಲ್ಲಾ ಮರಣದ ಪಾಲಾಗುವವು, ಅಧೋಲೋಕವೇ ಅವುಗಳ ಗತಿ; ಪಾತಾಳಕ್ಕೆ ಇಳಿದುಹೋದವರ ಬಳಿಗೆ ನರಜನ್ಮದವರೊಂದಿಗೆ ಒಂದೇ ಗುಂಪಾಗಿ ಸೇರುವವು. 15 ಕರ್ತನಾದ ಯೇಹೋವನು ಇಂತೆನ್ನುತ್ತಾನೆ - ಆ ವೃಕ್ಷವು ಪಾತಾಳಕ್ಕೆ ಇಳಿದುಹೋದ ದಿನದಲ್ಲಿ ನಾನು ದುಃಖದ ಚಿಹ್ನೆಗಳನ್ನು ಏರ್ಪಡಿಸಿದೆನು; ಅದರ ವಿಯೋಗಕ್ಕಾಗಿ ನಾನು ಮಹಾನದಿಯನ್ನು ಮರೆಮಾಡಿ ನದಿಯ ಶಾಖೆಗಳನ್ನು ತಡೆದುಬಿಟ್ಟೆನು, ಜಲಪ್ರವಾಹವು ನಿಂತುಹೋಯಿತು; ಅದಕ್ಕಾಗಿ ಲೆಬನೋನು ಗೋಳಿಡುವಂತೆ ಮಾಡಿದೆನು, ಭೂವಿುಯ ಸಕಲ ವೃಕ್ಷಗಳು ಆ ದುಃಖಕ್ಕೆ ಮೂರ್ಛೆಹೋದವು. 16 ನಾನು ಅದನ್ನು ಪ್ರೇತಗಳ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲಜನಾಂಗಗಳು ನಡುಗಿದವು; ಮತ್ತು [ಪೂರ್ವಕಾಲದಲ್ಲಿ] ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮ ವೃಕ್ಷಗಳು, ಅಂತು ನೀರಾವರಿಯ ಸಕಲ ವನಸ್ಪತಿಗಳೂ ಅಲ್ಲಿ ಸಂತೈಸಿಕೊಂಡವು. 17 ಇದಲ್ಲದೆ ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯದಲ್ಲಿ ಅದರ ನೆರಳನ್ನು ಆಶ್ರಯಿಸಿದವರು ಅದರೊಂದಿಗೆ ಪಾತಾಳಕ್ಕೆ ಇಳಿದು ಖಡ್ಗಹತರ ಜೊತೆಗೆ ಸೇರಿದರು. 18 ಇಂಥಾ ವೈಭವದಿಂದಲೂ ಮಹಿಮೆಯಿಂದಲೂ ಕೂಡಿದ ನೀನು ಏದೆನಿನ ವೃಕ್ಷಗಳಲ್ಲಿ ಯಾವದಕ್ಕಿಂತ ಕಡಿಮೆ? ಆದರೂ ನೀನು ಏದೆನಿನ ವೃಕ್ಷಗಳೊಂದಿಗೆ ಅಧೋಲೋಕಕ್ಕೆ ತಳ್ಳಲ್ಪಟ್ಟು ಸುನ್ನತಿಹೀನರ ನಡುವೆ ಖಡ್ಗಹತರ ಸಂಗಡ ಒರಗಿಹೋಗುವಿ. ಫರೋಹನೂ ಅವನ ಎಲ್ಲಾ ಪ್ರಜೆಗಳೂ ಇದೇ ಗತಿಯನ್ನು ಹೊಂದುವರು ಎಂಬದು ಕರ್ತನಾದ ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India