ಯೆಹೆಜ್ಕೇಲನು 30 - ಕನ್ನಡ ಸತ್ಯವೇದವು J.V. (BSI)ಐಗುಪ್ತವು ನೆಬೂಕದ್ನೆಚ್ಚರನಿಂದ ಹಾಳಾಗುವದು 1 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು - 2 ನರಪುತ್ರನೇ, ನೀನು ಈ ದೈವೋಕ್ತಿಯನ್ನು ಪ್ರಕಟಿಸು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಅರಚಿಕೊಳ್ಳಿರಿ! ಅಯ್ಯೋ ದಿನವೇ! 3 ದಿನವು ಹತ್ತಿರವಾಯಿತು; ಹೌದು, ಯೆಹೋವನ ದಿನ, ಕಾರ್ಮುಗಿಲಿನ ದಿನ ಸಮೀಪಿಸಿತು; ಅದು ಜನಾಂಗಗಳಿಗೆ ನ್ಯಾಯ ತೀರಿಸತಕ್ಕ ಕಾಲ. 4 ಖಡ್ಗವು ಐಗುಪ್ತದ ಮೇಲೆ ಬೀಳುವದು; ಅಲ್ಲಿನ ಪ್ರಜೆಗಳು ಹತರಾಗಲು ಕೂಷಿನಲ್ಲಿಯೂ ಸಂಕಟವಾಗುವದು ; ಐಗುಪ್ತದ ಲಕ್ಷೋಪಲಕ್ಷ ಪ್ರಜೆಯು ಒಯ್ಯಲ್ಪಡುವದು; ಅದರ ಅಸ್ತಿವಾರವು ಹಾಳಾಗುವದು; 5 ಕೂಷ್ಯರು, ಪೂಟ್ಯರು, ಲೂದ್ಯರು, ಬಗೆಬಗೆಯ ಸಕಲ ವಿದೇಶೀಯರು, ಕೂಬ್ಯರು, ವಿುತ್ರರಾಜ್ಯದವರು, ಇವರೆಲ್ಲಾ ಐಗುಪ್ತ್ಯರೊಂದಿಗೆ ಖಡ್ಗದಿಂದ ಹತರಾಗುವರು. 6 ಯೆಹೋವನು ಇಂತೆನ್ನುತ್ತಾನೆ - ಐಗುಪ್ತಕ್ಕೆ ಆಧಾರವಾದವರು ಬೀಳುವರು, ಅದರ ಶಕ್ತಿಮದವು ಇಳಿದುಹೋಗುವದು; ಅಲ್ಲಿನ ಜನರು ವಿುಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು; ಇದು ಕರ್ತನಾದ ಯೆಹೋವನ ನುಡಿ. 7 ಹಾಳಾಗಿರುವ ದೇಶಗಳೊಳಗೆ ಆ ದೇಶವೂ ಹಾಳಾಗಿರುವದು, ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳೂ ಪಾಳುಬಿದ್ದಿರುವವು. 8 ನಾನು ಐಗುಪ್ತಕ್ಕೆ ಬೆಂಕಿಹಚ್ಚಿ ಅದರ ಸಹಾಯಕರನ್ನೆಲ್ಲಾ ನಾಶಮಾಡಿದ ಮೇಲೆ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವದು. 9 ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು; ಐಗುಪ್ತದ ನಾಶನದಿನದಲ್ಲಿ ಕೂಷ್ಯರಿಗೂ ಸಂಕಟವಾಗುವದು; ಇಗೋ ಬಂತು. 10 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಐಗುಪ್ತದ ಅಸಂಖ್ಯಾತಪ್ರಜೆಯನ್ನು ಕೊನೆಗಾಣಿಸುವೆನು. 11 ಆ ದೇಶವನ್ನು ನಾಶಪಡಿಸಲಿಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು; ಅವರು ಐಗುಪ್ತದ ಮೇಲೆ ಕತ್ತಿಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು. 12 ನಾನು ನದೀಶಾಖೆಗಳನ್ನು ಬತ್ತಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು; ಹೌದು, ದೇಶವನ್ನೂ ಅದರಲ್ಲಿನ ಸಮಸ್ತವನ್ನೂ ಅನ್ಯರ ಕೈಯಿಂದ ಹಾಳುಮಾಡಿಸುವೆನು; ಯೆಹೋವನಾದ ನಾನೇ ನುಡಿದಿದ್ದೇನೆ. 13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ನೋಫಿನ ಬೊಂಬೆಗಿಂಬೆಗಳನ್ನೆಲ್ಲ ಒಡೆದು ಕೊನೆಗಾಣಿಸುವೆನು; ಐಗುಪ್ತದೇಶದಲ್ಲಿ ಇನ್ನು ಯಾವ ಪ್ರಭುವೂ ಇರನು; ನಾನು ಆ ದೇಶಕ್ಕೆ ಭಯವನ್ನೊಡ್ಡುವೆನು. 14 ನಾನು ಪತ್ರೋಸನ್ನು ಹಾಳುಮಾಡಿ ಚೋವನಿಗೆ ಬೆಂಕಿಯಿಕ್ಕಿ ನೋಪುರವನ್ನು ದಂಡಿಸಿ 15 ಐಗುಪ್ತಕ್ಕೆ ರಕ್ಷಣೆಯ ಕೋಟೆಯಾದ ಸೀನಿನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ ನೋಪುರದ ನಿವಾಸಿಗಳನ್ನೆಲ್ಲಾ ಕತ್ತರಿಸಿಬಿಡುವೆನು. 16 ನಾನು ಐಗುಪ್ತಕ್ಕೆ ಕಿಚ್ಚನ್ನು ಹತ್ತಿಸಲು ಸೀನು ಪ್ರಾಣಸಂಕಟಪಡುವದು; ನೋಪುರವು ಭಂಗಕ್ಕೆ ಈಡಾಗುವದು; ನೋಫಿನ ಮೇಲೆ ವೈರಿಗಳು ಮಧ್ಯಾಹ್ನದಲ್ಲೇ ಬೀಳುವರು. 17 ಓನಿನ ಮತ್ತು ಪೀಬೆಸೆತಿನ ಯುವಕರು ಖಡ್ಗದಿಂದ ಹತರಾಗುವರು; ಅಲ್ಲಿನ ನಿವಾಸಿಗಳು ಸೆರೆಯಾಗಿ ಹೋಗುವರು. 18 ಐಗುಪ್ತವು ಹೊರಿಸಿದ ನೊಗಗಳನ್ನು ನಾನು ತಹಪನೇಸಿನಲ್ಲಿ ಮುರಿಯುವಾಗ ಅಲ್ಲಿ ಹೊತ್ತು ಮೂಡದು, ಅದರ ಶಕ್ತಿಮದವು ಅಡಗಿಹೋಗುವದು, ಕಾರ್ಮುಗಿಲು ಅದನ್ನು ಆವರಿಸುವದು, ಅದರ ಯುವತಿಯರು ಸೆರೆಗೆ ಒಯ್ಯಲ್ಪಡುವರು. 19 ಹೀಗೆ ನಾನು ಐಗುಪ್ತ್ಯರಿಗೆ ದಂಡನೆಗಳನ್ನು ವಿಧಿಸಿ ತೀರಿಸುವಾಗ ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವದು. 20 [ಯೆಹೋಯಾಖೀನನು ಸೆರೆಯಾದ] ಹನ್ನೊಂದನೆಯ ವರುಷದ ಮೊದಲನೆಯ ತಿಂಗಳಿನ ಏಳನೆಯ ದಿವಸದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 21 ನರಪುತ್ರನೇ, ನಾನು ಐಗುಪ್ತದ ಅರಸನಾದ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ, ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆಸುತ್ತಿ ಅದನ್ನು ಬಿಗಿಸಲಿಲ್ಲ. 22 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಐಗುಪ್ತದ ಅರಸನಾದ ಫರೋಹನಿಗೆ ವಿರುದ್ಧನಾಗಿ ಅವನ ಕೈಗಳನ್ನು, ಅಂದರೆ ಸರಿಯಾಗಿರುವದನ್ನೂ, ಮುರಿದದನ್ನೂ ತೀರಾ ಮುರಿದುಬಿಟ್ಟು ಖಡ್ಗವು ಅವನ ಕೈಯೊಳಗಿಂದ ಬೀಳುವಂತೆ ಮಾಡುವೆನು. 23 ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದರಿಸಿ ದೇಶದೇಶಗಳಿಗೆ ತೂರಿಬಿಡುವೆನು. 24 ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸಿ ನನ್ನ ಖಡ್ಗವನ್ನು ಅವನ ಕೈಗೆ ಕೊಟ್ಟು ಫರೋಹನ ಕೈಗಳನ್ನು ಮುರಿಸಲು ಗಾಯದಿಂದ ಪ್ರಾಣಸಂಕಟಪಡುವವನಂತೆ ಫರೋಹನು ಆ ಅರಸನ ಮುಂದೆ ನರಳಾಡುವನು. 25 ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸುವೆನು; ಫರೋಹನ ಕೈಗಳಾದರೋ ಜೋಲುಬೀಳುವವು; ನಾನು ನನ್ನ ಖಡ್ಗವನ್ನು ಬಾಬೆಲಿನ ಅರಸನಿಗೆ ಕೊಡಲು ಅವನು ಅದನ್ನು ಐಗುಪ್ತದೇಶದ ಮೇಲೆ ಎತ್ತುವನು. ಆಗ ನಾನೇ ಯೆಹೋವನು ಎಂದು ಎಲ್ಲರಿಗೆ ಗೊತ್ತಾಗುವದು. 26 ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದರಿಸಿ ದೇಶದೇಶಗಳಿಗೆ ತೂರಿಬಿಡುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿದುಬರುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India