ಯೆಹೆಜ್ಕೇಲನು 3 - ಕನ್ನಡ ಸತ್ಯವೇದವು J.V. (BSI)1 ಆತನು ನನಗೆ - ನರಪುತ್ರನೇ, ನಿನಗೆ ಸಿಕ್ಕಿದ ಈ ಸುರಳಿಯನ್ನು ತಿನ್ನು; [ಇದರಲ್ಲಿನ ಸಂಗತಿಗಳನ್ನು] ಇಸ್ರಾಯೇಲ್ ವಂಶದವರಿಗೆ ಸಾರು, ನಡೆ ಎಂದು ಅಪ್ಪಣೆಕೊಟ್ಟನು. 2 ನಾನು ಬಾಯಿತೆರೆಯಲು ಆತನು ಆ ಸುರಳಿಯನ್ನು ನನಗೆ ತಿನ್ನಿಸಿದನು. 3 ಆಗ ಆತನು ನನಗೆ - ನರಪುತ್ರನೇ, ನಾನು ಕೊಡುವ ಈ ಸುರಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ ಎಂದು ಹೇಳಲು ಅದನ್ನು ತಿಂದುಬಿಟ್ಟೆನು; ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು. ಪ್ರವಾದಿಗೆ ಅವಶ್ಯಕವಾದ ಸ್ಥೈರ್ಯ 4 ಆಮೇಲೆ ಆತನು ನನಗೆ ಹೀಗೆ ಹೇಳಿದನು - ನರಪುತ್ರನೇ, ನೀನು ಇಸ್ರಾಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ನುಡಿ. 5 ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಬಳಿಗೆ ಕಳುಹಿಸುತ್ತೇನೆಯೇ ಹೊರತು ಕಷ್ಟಕರವಾದ ಅನ್ಯಭಾಷೆಯ ಜನರ ಬಳಿಗೆ ಕಳುಹಿಸುವದಿಲ್ಲ; 6 ಹೌದು, ನಿನಗೆ ತಿಳಿಯಲಾಗದ ಕಷ್ಟಕರವಾದ ಅನ್ಯಭಾಷೆಯನ್ನಾಡುವ ನಾನಾ ಜನಾಂಗಗಳ ಕಡೆಗೆ ನೀನು ಕಳುಹಿಸಲ್ಪಟ್ಟವನಲ್ಲ. ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ ಪಕ್ಷದಲ್ಲಿ ಅವರಾದರೂ ನಿಶ್ಚಯವಾಗಿ ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು. 7 ಇಸ್ರಾಯೇಲ್ ವಂಶದವರೋ ನಿನಗೆ ಕಿವಿಗೊಡಲೊಲ್ಲರು; ನನಗೂ ಕಿವಿಗೊಡಲೊಲ್ಲರು; ಅವರೆಲ್ಲರೂ ನಾಚಿಕೆಗೆಟ್ಟವರೂ ಹಟಗಾರರೂ ಆಗಿದ್ದಾರಲ್ಲಾ. 8 ಇಗೋ, ಅವರ ಕಠಿನ ಮುಖಕ್ಕೆ ವಿರುದ್ಧವಾಗಿ ನಿನ್ನ ಮುಖವನ್ನು ಕಠಿನಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ. 9 ನಿನ್ನ ಹಣೆಯನ್ನು ಕಗ್ಗಲ್ಲಿಗಿಂತ ಕಠಿನವಾದ ವಜ್ರದಷ್ಟು ಕಠಿನಪಡಿಸಿದ್ದೇನೆ; ಅವರು ದ್ರೋಹಿವಂಶದವರು, ಅವರಿಗೆ ಭಯಪಡಬೇಡ; ಅವರ ಬಿರುನೋಟಕ್ಕೆ ಬೆಚ್ಚದಿರು. 10 ಇದಲ್ಲದೆ ಆತನು ನನಗೆ ಹೀಗೆ ಹೇಳಿದನು - ನರಪುತ್ರನೇ, ನಾನು ನಿನಗೆ ನುಡಿಯುವ ಮಾತುಗಳನ್ನೆಲ್ಲಾ ಕಿವಿಯಿಂದ ಕೇಳಿ ಹೃದಯದಲ್ಲಿಟ್ಟುಕೋ. 11 ಸೆರೆಯಾಗಿರುವ ನಿನ್ನ ಸ್ವಜನರ ಬಳಿಗೆ ಹೋಗಿ ಅವರು ಕೇಳಿದರೂ ಕೇಳದೆಹೋದರೂ ಅವರನ್ನು ಪ್ರಬೋಧಿಸಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ಅವರಿಗೆ ಸಾರು. ಪ್ರವಾದಿಯು ತನ್ನ ಉದ್ಯೋಗಸ್ಥಳಕ್ಕೆ ಸೇರಿದ್ದು 12 ಆಮೇಲೆ ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಗಲಾಗಿ ಮಹಿಮೆಯಿಂದ ಕೂಡಿದ ಯೆಹೋವನಿಗೆ ಆತನ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ ಎಂಬ ಮಹಾಶಬ್ದವು ನನ್ನ ಹಿಂದೆ ಭರಭರನೆ ಕೇಳಿಸಿತು. 13 ಜೀವಿಗಳ ರೆಕ್ಕೆಗಳು ಒಂದಕ್ಕೊಂದು ಬಡಿದಾಡುವ ಸಪ್ಪಳ, ಅವುಗಳ ಪಕ್ಕದಲ್ಲಿ ಗರಗರನೆ ತಿರುಗುವ ಚಕ್ರಗಳ ಸದ್ದು, ಹೀಗೆ ಬಿರ್ರನ್ನುವ ಮಹಾಶಬ್ದವು [ನನ್ನ ಕಿವಿಗೆ ಬಿತ್ತು]. 14 ದೇವರಾತ್ಮವು ನನ್ನನ್ನು ಎತ್ತಿಕೊಂಡು ಹೋಯಿತು. ನಾನು ಯೆಹೋವನ ಹಸ್ತಸ್ಪರ್ಶದಿಂದ ತುಂಬಾ ಪರವಶನಾಗಿದ್ದು ವ್ಯಥೆಗೊಳ್ಳುತ್ತಾ ಮನಸ್ತಾಪಪಡುತ್ತಾ ನಡೆದೆನು. 15 ಆಗ ಸೆರೆಯಾಗಿ ಒಯ್ಯಲ್ಪಟ್ಟು ಕೆಬಾರ್ ನದಿಯ ಹತ್ತಿರ ತೇಲ್ ಆಬೀಬಿನಲ್ಲಿ ವಾಸವಾಗಿದ್ದವರ ಬಳಿಗೆ ಬಂದು ಅವರು ಕೂತಿದ್ದ ಸ್ಥಳದಲ್ಲಿಯೇ ಕೂತುಕೊಂಡೆನು; ಏಳು ದಿವಸ ಅಲ್ಲೇ ಅವರ ಮಧ್ಯದಲ್ಲಿ ಸ್ತಬ್ಧನಾಗಿ ಇದ್ದುಬಿಟ್ಟೆನು. ಪ್ರವಾದಿಯ ಮೇಲೆ ಬಿದ್ದ ಭಾರ 16 ಏಳು ದಿವಸಗಳಾದ ಮೇಲೆ ಯೆಹೋವನು ಈ ಮಾತನ್ನು ನನಗೆ ದಯಪಾಲಿಸಿದನು - 17 ನರಪುತ್ರನೇ, ನಾನು ನಿನ್ನನ್ನು ಇಸ್ರಾಯೇಲ್ ವಂಶದವರ ಮೇಲೆ ಕಾವಲುಗಾರನನ್ನಾಗಿ ನೇವಿುಸಿದ್ದೇನೆ. ಹೀಗಿರಲು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ ನನ್ನ ಪರವಾಗಿ ಅವರನ್ನು ಎಚ್ಚರಿಸು. 18 ನಾನು ದುಷ್ಟನಿಗೆ - ಸತ್ತೇ ಸಾಯುವಿ ಎಂದು ನುಡಿಯುವಾಗ ನೀನು ಅವನನ್ನು ಎಚ್ಚರಿಸದೆಯೂ ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಅವನಿಗೆ ಬುದ್ಧಿಹೇಳದೆಯೂ ಇದ್ದರೆ ಆ ದುಷ್ಟನು ತನ್ನ ಅಪರಾಧದಿಂದ ಸಾಯಬೇಕಾಗುವದು; ಅವನ ಮರಣಕ್ಕಾಗಿ ನಿನಗೇ ಮುಯ್ಯಿತೀರಿಸುವೆನು. 19 ನೀನು ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ ದುರ್ಮಾರ್ಗವನ್ನೂ ಬಿಡದೆಹೋದರೆ ತನ್ನ ಅಪರಾಧದಿಂದ ಸಾಯುವನು; ನೀನೋ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. 20 ಇದಲ್ಲದೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮಮಾಡಿ ನಾನು ಅವನ ಮುಂದೆ ಒಡ್ಡಿದ ಆಟಂಕವನ್ನು ಎಡವಿದರೆ ಅವನು ಸತ್ತೇ ಸಾಯುವನು; ನೀನು ಅವನನ್ನು ಎಚ್ಚರಿಸದೆಹೋದ ಕಾರಣ ಅವನು ತನ್ನ ಪಾಪದಿಂದ ಸಾಯಬೇಕಾಯಿತು. ಅವನು ಮಾಡಿದ ಸುಕೃತ್ಯಗಳು ಲೆಕ್ಕಕ್ಕೆ ಬಾರವು; ಅವನ ಮರಣಕ್ಕಾಗಿ ನಿನಗೇ ಮುಯ್ಯಿತೀರಿಸುವೆನು. 21 ನೀನು ಶಿಷ್ಟನನ್ನು ಪಾಪಮಾಡದಂತೆ ಎಚ್ಚರಿಸಿದ ಮೇಲೆ ಅವನು ಪಾಪಮಾಡದೆಹೋದರೆ ಎಚ್ಚರಗೊಂಡ ಕಾರಣ ಜೀವದಿಂದ ಉಳಿಯುವನು; ನೀನೂ ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. ಪ್ರವಾದಿಯ ವಾಗ್ಬಂಧನ 22 ಅದೇ ಸ್ಥಳದಲ್ಲಿ ನಾನು ಯೆಹೋವನ ಹಸ್ತಸ್ಪರ್ಶದಿಂದ ಪರವಶನಾಗಿರಲು ಆತನು ನನಗೆ - ನೀನೆದ್ದು ಬೈಲುಸೀಮೆಗೆ ಹೊರಡು, ಅಲ್ಲಿ ನಾನು ನಿನ್ನೊಂದಿಗೆ ಮಾತನಾಡುವೆನು ಎಂದು ಹೇಳಿದನು. 23 ನಾನೆದ್ದು ಬೈಲುಸೀಮೆಗೆ ಹೊರಟುಹೋದಾಗ ಕೆಬಾರ್ ನದಿಯ ಹತ್ತಿರ ನನಗೆ ಮಹಿಮಾದ್ಭುತದರ್ಶನವು ಆದಂತೆ ಆಹಾ, ಅಲ್ಲಿಯೂ ಯೆಹೋವನ ಮಹಿಮೆಯು ಪ್ರತ್ಯಕ್ಷವಾಯಿತು. ಅದನ್ನು ನೋಡಿ ಅಡ್ಡಬಿದ್ದೆನು. 24 ದೇವರಾತ್ಮವು ನನ್ನೊಳಗೆ ಹೊಕ್ಕು ನಾನು ಎದ್ದು ನಿಂತುಕೊಳ್ಳುವಂತೆ ಮಾಡಿದ ಮೇಲೆ ಆತನು ನನಗೆ ಹೀಗೆ ಹೇಳಿದನು - ನೀನು ಹೋಗಿ ನಿನ್ನ ಮನೆಯೊಳಗೆ ಅಡಗಿಕೋ. 25 ನರಪುತ್ರನೇ, ಇಗೋ, [ನಿನ್ನ ಸ್ವಜನರು] ನಿನ್ನನ್ನು ಬಂಧಿಸಿ ಕಟ್ಟುವರು, ನೀನು ಅವರಲ್ಲಿ ಆಚೀಚೆ ಸಂಚರಿಸದಿರುವಿ. 26 ಇದಲ್ಲದೆ ನಿನ್ನ ನಾಲಿಗೆಯು ಸೇದಿಹೋಗಿ ನೀನು ಮೂಕನಾಗಿರುವಂತೆ ಮಾಡುವೆನು; ನೀನು ಅವರನ್ನು ಖಂಡಿಸದಿರುವಿ; ಅವರು ದ್ರೋಹಿವಂಶದವರು. 27 ನಾನು ನಿನ್ನೊಡನೆ ಮತ್ತೆ ಮಾತಾಡುವ ಕಾಲದಲ್ಲಿ ನಿನ್ನ ಬಾಯನ್ನು ಬಿಚ್ಚುವೆನು; ಆಗ ನೀನು ಅವರಿಗೆ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ನುಡಿಯಬೇಕು; ಕೇಳುವವನು ಕೇಳಲಿ. ಕೇಳದವನು ಬಿಡಲಿ; ಅವರು ದ್ರೋಹದ ಜನವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India