Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 27 - ಕನ್ನಡ ಸತ್ಯವೇದವು J.V. (BSI)


ವ್ಯಾಪಾರದ ಅದ್ಭುತನಾವೆಯಂತಿರುವ ತೂರಿನ ವೈಭವವೂ ನಾಶನವೂ

1 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು -

2 ನರಪುತ್ರನೇ, ನೀನು ತೂರಿನ ವಿಷಯದಲ್ಲಿ ಶೋಕಗೀತವನ್ನೆತ್ತು, ಅದಕ್ಕೆ ಹೀಗೆ ನುಡಿ -

3 ಸಮುದ್ರದ್ವಾರದಲ್ಲಿ ವಾಸಿಸುತ್ತಾ ಜನಾಂಗಗಳಿಗಾಗಿ ಬಹುದ್ವೀಪಗಳೊಂದಿಗೆ ವ್ಯಾಪಾರಮಾಡುವ ಪುರಿಯೇ! ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ತೂರೇ, ಪರಿಪೂರ್ಣಸುಂದರಿಯಾಗಿದ್ದೇನೆ ಅಂದುಕೊಂಡಿಯಲ್ಲಾ!

4 ನಿನ್ನ ನೆಲೆಯು ಸಮುದ್ರಮಧ್ಯವೇ; ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.

5 ಸೆನೀರಿನ ತುರಾಯಿಮರದಿಂದ ನಿನ್ನ ಪಕ್ಕಗಳ ಹಲಿಗೆಗಳನ್ನು ಮಾಡಿ ನಿನ್ನ ಸ್ತಂಭವನ್ನು ರಚಿಸುವದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.

6 ಬಾಷಾನಿನ ಅಲ್ಲೋನ್ ಮರದಿಂದ ನಿನ್ನ ಹುಟ್ಟುಗಳನ್ನು ರೂಪಿಸಿ ಕಿತ್ತೀಮ್ ದ್ವೀಪದ ತಿಲಕದ ಹಲಿಗೆಯಿಂದ ನಿನ್ನ ಮೇಲ್ಮಾಳಿಗೆಯನ್ನು ಕಟ್ಟಿ ದಂತದಿಂದ ಕೆತ್ತಿದರು.

7 ನಿನ್ನ ಹಾಯಿಯು ನಿನಗೆ ಧ್ವಜವೂ ಆಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರುಬಟ್ಟೆಯಿಂದ ಮಾಡಿದರು. ನಿನ್ನ ಮೇಲ್ಕಟ್ಟು ಎಲೀಷಕರಾವಳಿಯ ಧೂಮ್ರರಕ್ತವರ್ಣಗಳಿಂದ ಚಿತ್ರಿತವಾಗಿತ್ತು.

8 ಚೀದೋನಿನವರೂ ಅರ್ವಾದಿನವರೂ ನಿನಗೆ ಹುಟ್ಟುಹಾಕುವರು; ತೂರೇ, ನಿನ್ನಲ್ಲಿನ ವಿವೇಕಿಗಳು ನಿನ್ನ ನಾವಿಕರು;

9 ನಿನ್ನಲ್ಲಿ ಸೇರಿಕೊಂಡಿದ್ದ ಗೆಬಲಿನ ಹಿರಿಯರೂ ಜಾಣರೂ ನಿನ್ನ ಕಂಡಿಗಳನ್ನು ಭದ್ರಪಡಿಸುವವರು. ಸಮುದ್ರದ ಸಕಲ ನಾವೆಗಳು ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸುತ್ತಿದ್ದವು,

10 ಪಾರಸಿಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯದ ಭಟರಾಗಿ ಖೇಡ್ಯಶಿರಸ್ತ್ರಾಣಗಳನ್ನು ನಿನ್ನಲ್ಲಿ ನೇತು ಹಾಕಿ ನಿನ್ನನ್ನು ಭೂಷಿಸುತ್ತಿದ್ದರು.

11 ಅರ್ವಾದಿನವರೂ ನಿನ್ನ ಸೈನಿಕರೂ ಸುತ್ತುಮುತ್ತಲು ನಿನ್ನ ತೆನೆಗೋಡೆಗಳಲ್ಲಿ ನಿಂತಿದ್ದರು, ಗಮ್ಮಾದ್ಯರು ನಿನ್ನ ಕೊತ್ತಲಗಳಲ್ಲಿ ಕಾವಲಾಗಿದ್ದರು, ಎಲ್ಲರೂ ತಮ್ಮ ಖೇಡ್ಯಗಳನ್ನು ಸುತ್ತಮುತ್ತಲು ನಿನ್ನ ಗೋಡೆಗಳಿಗೆ ನೇತುಹಾಕಿ ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.

12 ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿದ್ದದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ ಕಬ್ಬಿಣ ತವರ ಸೀಸಗಳನ್ನು ನಿನಗೆ ಒದಗಿಸಿದರು.

13 ಯಾವಾನಿನವರೂ ತೂಬಲಿನವರೂ ಮೆಷೆಕಿನವರೂ ನಿನ್ನ ಪರವಾಗಿ ವ್ಯಾಪಾರಮಾಡಿ ನರಪ್ರಾಣಿಗಳನ್ನೂ ತಾಮ್ರದ ಪಾತ್ರೆಗಳನ್ನೂ ನಿನಗೆ ಸರಬರಾಯಿಮಾಡಿದರು.

14 ತೋಗರ್ಮ ವಂಶದವರು ಕುದುರೆ, ಜಾತಿಯ ಕುದುರೆ, ಹೇಸರಕತ್ತೆ ಇವುಗಳನ್ನು ನಿನಗಾಗಿ ತಂದರು.

15 ದೇದಾನಿನವರು ನಿನ್ನ ವರ್ತಕರು; ಬಹು ದ್ವೀಪಗಳ ಉತ್ಪತ್ತಿಯು ನಿನ್ನ ಕೈಗೆ ಸೇರಿತು; ಗಜದಂತಗಳನ್ನೂ ಕರೀಮರವನ್ನೂ ನಿನಗೆ ಕಪ್ಪವಾಗಿ ಸಲ್ಲಿಸಿದರು.

16 ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದದರಿಂದ ಅರಾವಿುನವರೂ ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಲು ರಕ್ತಾಂಬರ ಕಸೂತಿಯ ವಸ್ತ್ರ ನಾರುಬಟ್ಟೆ ಹವಳ ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.

17 ಯೆಹೂದ್ಯರೂ ಇಸ್ರಾಯೇಲ್ ದೇಶದವರೂ ನಿನ್ನ ಕಡೆಯ ವರ್ತಕರಾಗಿ ವಿುನ್ನೀಥಿನ ಗೋದಿ ಕಂಡಸಕ್ಕರೆ ಜೇನು ಎಣ್ಣೆ ಸುಗಂಧತೈಲ ಈ ಸಾಮಗ್ರಿಗಳನ್ನು ನಿನಗೆ ಸೇರಿಸಿದರು.

18 ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದದರಿಂದಲೂ ಅಪರಿವಿುತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ ಹೆಲ್ಬೋನಿನ ದ್ರಾಕ್ಷಾರಸವನ್ನೂ ಚಾಹರಿನ ಉಣ್ಣೆಯನ್ನೂ ನಿನ್ನಲ್ಲಿ ತುಂಬಿಸಿದರು.

19 ವೆದಾನಿನವರೂ ಯಾವಾನಿನವರೂ ಊಜಾಲಿನಿಂದ ನಾನಾ ಸನುಗುಗಳನ್ನು ತಂದು ನಿನಗೆ ಒಪ್ಪಿಸಿದರು. ಉಕ್ಕುಬಜೆಲವಂಗಚಕ್ಕೆಗಳು ನಿನಗೆ ಆಮದಾದವು.

20 ದೆದಾನಿನವರು ಹಲ್ಲಣಕ್ಕೆ ಸರಿಯಾದ ಒಳ್ಳೆಯ ಜಮಖಾನೆಗಳನ್ನು ನಿನಗೋಸ್ಕರ ತರುವ ವ್ಯಾಪಾರಿಗಳಾಗಿದ್ದರು.

21 ಅರಾಬ್ಯರೂ ಕೇದಾರಿನ ಪ್ರಧಾನರೂ ನಿನ್ನ ಕೈಕೆಳಗಣ ವರ್ತಕರು; ಕುರಿ ಟಗರು ಹೋತಗಳನ್ನು ನಿನಗಾಗಿ ಸಾಗಿಸಿಕೊಂಡು ಬಂದರು.

22 ಶೆಬದವರೂ ರಗ್ಮದವರೂ ನಿನ್ನ ಕಡೆಯ ವರ್ತಕರಾಗಿ ಕನಕ ಮುಖ್ಯ ಮುಖ್ಯ ಸುಗಂಧದ್ರವ್ಯ ಸಮಾಸ್ತಾಮೂಲ್ಯರತ್ನ ಈ ಸರಕುಗಳನ್ನು ನಿನಗೋಸ್ಕರ ತಂದರು.

23 ಹಾರಾನ್ ಕನ್ನೆ ಎದೆನ್ ಸ್ಥಳಗಳವರೂ ಶೆಬ ಅಶ್ಶೂರ್‍ಕಿಲ್ಮದ್ ಪ್ರಾಂತಗಳ ವರ್ತಕರೂ

24 ನಿನ್ನ ವ್ಯಾಪಾರಿಗಳಾಗಿ ಉತ್ತಮಾಂಬರ ಕಸೂತಿಯ ಧೂಮ್ರದ ನಿಲುವಂಗಿ ಮೊದಲಾದ ಮಾಲುಗಳನ್ನೂ ಹಗ್ಗಗಳಿಂದ ಬಲವಾಗಿ ಬಿಗಿದ ವಿಚಿತ್ರವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಗಳಿಸಿದರು.

25 ತಾರ್ಷೀಷಿನ ಹಡಗುಗಳು ಸಾಲುಸಾಲಾಗಿ ನಿನಗೆ ಬೇಕಾದ ದಿನಸುಗಳನ್ನು ಒಯ್ದುಕೊಂಡು ಬಂದವು. ನೀನು ಭರ್ತಿಯಾಗಿ ಸಮುದ್ರಮಧ್ಯದಲ್ಲಿ ಬಹು ಭಾರವಾದಿ.

26 ಹುಟ್ಟುಹಾಕುವವರು ನಿನ್ನನ್ನು ಮಹಾತರಂಗಗಳಿಗೆ ಸಿಕ್ಕಿಸಿದ್ದಾರೆ; ಮೂಡಣ ಗಾಳಿಯು ನಿನ್ನನ್ನು ಸಾಗರಮಧ್ಯದಲ್ಲಿ ಒಡೆದುಬಿಟ್ಟಿದೆ.

27 ನಿನ್ನ ಆಸ್ತಿಯು, ನಿನ್ನ ದಿನಸುಗಳು, ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಕಂಡಿಗಳನ್ನು ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ನಿನ್ನಲ್ಲಿನ ಸಮಸ್ತ ಸೈನಿಕರು, ಅಂತು ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶನದ ದಿನದಲ್ಲಿ ಸಮುದ್ರದೊಳಗೆ ಮುಣುಗಿಹೋಗುವದು.

28 ನಿನ್ನ ನಾವಿಕರ ಕೂಗಾಟಕ್ಕೆ ಸಮೀಪಪ್ರದೇಶಗಳು ನಡುಗುವವು.

29 ಹುಟ್ಟುಹಾಕುವವರೆಲ್ಲರೂ ಅಂಬಿಗರೂ ಸಮುದ್ರದ ಸಕಲ ನಾವಿಕರೂ ತಮ್ಮತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು

30 ನಿನ್ನ ನಿವಿುತ್ತ ದನಿಗೈದು ದುಃಖದಿಂದರಚಿ ತಲೆಗೆ ದೂಳೆರಚಿಕೊಂಡು ಬೂದಿಯಲ್ಲಿ ಬಿದ್ದು ಹೊರಳಾಡಿ

31 ನಿನಗಾಗಿ ತಲೆಬೋಳಿಸಿಕೊಂಡು ಗೋಣೀತಟ್ಟು ಸುತ್ತಿಕೊಂಡು ಮನೋವ್ಯಥೆಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.

32 ಅವರು ರೋದನಮಾಡುತ್ತಾ ನಿನ್ನ ವಿಷಯವಾಗಿ ಶೋಕಗೀತವನೆತ್ತಿ ಹೀಗೆ ಪ್ರಲಾಪಿಸುವರು - ಸಮುದ್ರದ ನಡುವೆ ಬಿಕೋ ಎನ್ನುವ ತೂರಿಗೆ ಯಾವದು ಸಮಾನ?

33 ನಿನ್ನ ಸರಕುಗಳು ಸಮುದ್ರಗಳನ್ನು ಹಾದು ಹರಡಿಕೊಂಡವು. ಅವುಗಳಿಂದ ಬಹುಜನಾಂಗಗಳನ್ನು ತುಂಬಿಸಿದಿ; ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದಿ.

34 ಈಗಲಾದರೋ ನೀನು ಸಮುದ್ರದಿಂದ ಹಾಳಾದಿ. ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಅಗಾಧಜಲದಲ್ಲಿ ಮುಣುಗಿಹೋದರು.

35 ಕರಾವಳಿಯ ಸಮಸ್ತನಿವಾಸಿಗಳು ನಿನ್ನ ಗತಿಗೆ ಬೆಚ್ಚಿಬಿದ್ದಿದ್ದಾರೆ; ರಾಜರು ಮೊಗಗೆಟ್ಟು ರೋಮಾಂಚಿತರಾಗಿದ್ದಾರೆ.

36 ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸಿಳ್ಳುಹಾಕುತ್ತಾರೆ; ನೀನು ತೀರಾ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾದಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು