ಯೆಹೆಜ್ಕೇಲನು 24 - ಕನ್ನಡ ಸತ್ಯವೇದವು J.V. (BSI)ಕಿಲುಬಿನ ಹಂಡೆಯ ಸಾಮ್ಯ 1 [ಯೆಹೋಯಾಖೀನನು ಸೆರೆಯಾದ] ಒಂಭತ್ತನೆಯ ವರುಷದ ಹತ್ತನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು. 2 ನರಪುತ್ರನೇ, ಈ ದಿನದ, ಇದೇ ದಿನದ ಹೆಸರನ್ನು ಬರೆದುಕೋ; ಇದೇ ದಿನದಲ್ಲಿ ಬಾಬೆಲಿನ ಅರಸನು ಯೆರೂಸಲೇವಿುಗೆ ಮುತ್ತಿಗೆಹಾಕಿದ್ದಾನೆ. 3 ಈ ದ್ರೋಹಿವಂಶಕ್ಕೆ ದೃಷ್ಟಾಂತವನ್ನೆತ್ತಿ ಹೀಗೆ ಹೇಳು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಹಂಡೆಯನ್ನು ಒಲೆಯ ಮೇಲಿಡು, ಮೇಲಿಡು, ಅದರಲ್ಲಿ ನೀರನ್ನು ಹೊಯ್ಯಿ; 4 ಮಾಂಸಖಂಡಗಳನ್ನು ಅಂದರೆ ತೊಡೆ ಮುಂದೊಡೆ ಮೊದಲಾದ ಒಳ್ಳೆಯ ಖಂಡಗಳನ್ನೆಲ್ಲಾ ಅದರಲ್ಲಿ ಒಟ್ಟಿಗೆ ಹಾಕು, ಉತ್ತಮವಾದ ಎಲುಬುಗಳನ್ನು ಅದರಲ್ಲಿ ತುಂಬಿಸು. 5 ಹಿಂಡಿನಲ್ಲಿ ಶ್ರೇಷ್ಠವಾದದ್ದನ್ನು ತೆಗೆದುಕೋ; ಹಂಡೆಯ ತಳದಲ್ಲಿ ಎಲುಬುಗಳನ್ನು ರಾಶಿಯಾಗಿ ಒಟ್ಟು; ಚೆನ್ನಾಗಿ ಕುದಿಸು; ಹೌದು, ಎಲುಬುಗಳು ಅದರಲ್ಲಿ ಬೇಯಲಿ. 6 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಹಾ, ರಕ್ತಮಯವಾದ ಪಟ್ಟಣದ ಗತಿಯನ್ನು ಏನು ಹೇಳಲಿ! ಆ ಹಂಡೆಯ ಕಿಲುಬು ಬಿಟ್ಟುಹೋಗದೆ ಅದರಲ್ಲೇ ಲೆಪ್ಪವಾಗಿದೆಯಲ್ಲಾ! ಮಾಂಸದ ತುಂಡುಗಳನ್ನು ಸಿಕ್ಕಿ ಸಿಕ್ಕಿದ ಹಾಗೆ ತೆಗೆದುಬಿಡು, ಇದಕ್ಕೆ ಕ್ರಮದ ಚೀಟು ಇಲ್ಲ. 7 ಯೆರೂಸಲೇಮು ಸುರಿಸಿದ ರಕ್ತವು ಅದರಲ್ಲೇ ನಿಂತಿದೆ; ದೂಳು ಮುಚ್ಚೀತೆಂದು ಆ ಪಟ್ಟಣದವರು ಅದನ್ನು ನೆಲದ ಮೇಲೆ ಹೊಯ್ಯದೆ ಬರೀ ಬಂಡೆಯ ಮೇಲೆ ನಿಲ್ಲಿಸಿರುತ್ತಾರೆ; 8 ಆ ರಕ್ತದಿಂದ ರೋಷವೆದ್ದು ಮುಯ್ಯಿಗೆ ಮುಯ್ಯಿತೀರಿಸಲೆಂದು ಅದನ್ನು ನಾನು ಇಂಗಗೊಡಿಸದೆ ಬರೀ ಬಂಡೆಯ ಮೇಲೆ ನಿಲ್ಲಿಸಿದ್ದೇನೆ. 9 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಹಾ, ರಕ್ತಮಯವಾದ ಪಟ್ಟಣದ ಗತಿಯನ್ನು ಏನು ಹೇಳಲಿ! ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು. 10 ತುಂಬಾ ಸೌದೆ ಹಾಕು, ಬೆಂಕಿಯನ್ನುರಿಸು, ಮಾಂಸವನ್ನು ತೀರಾ ಬೇಯಿಸು, ಸಾರನ್ನು ಮಂದಮಾಡು, ಎಲುಬುಗಳು ಹೊತ್ತಿಹೋಗಲಿ. 11 ಆಮೇಲೆ ಹಂಡೆಯು ಕಾದು ತಾಮ್ರವು ಕೆಂಪಾಗಿ ಒಳಗಣ ಕಲ್ಮಷವು ಕರಗಿ ಕಿಲುಬು ಇಲ್ಲವಾಗುವಂತೆ ಅದನ್ನು ಬರಿದುಮಾಡಿ ಕೆಂಡಗಳ ಮೇಲೆ ಇಡು. 12 ಅದು ನನಗೆ ಕೇವಲ ಪ್ರಯಾಸವನ್ನೂ ಆಯಾಸವನ್ನೂ ಉಂಟುಮಾಡಿದೆ; ಆದರೂ ಅದಕ್ಕೆ ಹತ್ತಿದ್ದ ಬಲು ಕಿಲುಬು ಹೋಗಲಿಲ್ಲ, ಬೆಂಕಿಯಿಂದಲೂ ನೀಗಲಿಲ್ಲ. 13 ನಿನ್ನ ಪುಂಡಾಟವು ಅಸಹ್ಯವಾಗಿರುವದರಿಂದಲೂ ನಾನು ನಿನ್ನನ್ನು ಎಷ್ಟು ಶುದ್ಧಿಮಾಡಿದರೂ ನೀನು ಶುದ್ಧಿಯಾಗದೆ ಹೋದದರಿಂದಲೂ ನಾನು ನನ್ನ ರೋಷವನ್ನು ನಿನ್ನಲ್ಲಿ ತೀರಿಸಿ ಶಾಂತನಾಗುವವರೆಗೂ ನೀನು ನಿನ್ನ ಕೊಳೆಯನ್ನು ಇನ್ನು ಕಳೆದುಕೊಳ್ಳದೆ ಶುದ್ಧಿಯಾಗದೆ ಇರುವಿ. 14 ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ; ಇದು ಸಾಗುವದು, ನಾನು ನೆರವೇರಿಸುವೆನು; ಹಿಂದೆಗೆಯೆನು, ಕ್ಷವಿುಸೆನು, ಕರುಣಿಸೆನು; ನಿನ್ನ ದುರ್ಮಾರ್ಗ ದುಷ್ಕೃತ್ಯಗಳಿಗೆ ಸರಿಯಾಗಿ ನಿನಗೆ ನ್ಯಾಯತೀರ್ಪು ಆಗುವದು; ಇದು ಕರ್ತನಾದ ಯೇಹೋವನ ನುಡಿ. ಯೆಹೆಜ್ಕೇಲನ ಪತ್ನಿವಿಯೋಗದಿಂದಾಗುವ ಸೂಚನೆ 15 ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು - 16 ನರಪುತ್ರನೇ, ಇಗೋ, ಒಂದೇ ಏಟಿನಿಂದ ನಾನು ನಿನಗೆ ನೇತ್ರಾನಂದವಾಗಿರುವವಳನ್ನು ನಿನ್ನಿಂದ ತೆಗೆದುಬಿಡುವೆನು, ಆದರೂ ನೀನು ಗೋಳಾಡಬೇಡ, ಅಳಬೇಡ, ನಿನ್ನ ಕಣ್ಣೀರು ಸುರಿಯದಿರಲಿ, ಸದ್ದಿಲ್ಲದೆ ಮೊರೆಯಿಡು, 17 ವಿಯೋಗದುಃಖವನ್ನು ತೋರಿಸಬೇಡ, ರುಮಾಲನ್ನು ಸುತ್ತಿಕೊಂಡಿರು, ಕೆರಗಳನ್ನು ಮೆಟ್ಟಿಕೊಂಡಿರು, ಬಾಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಡ, ಗಾರಿಗೆಯನ್ನು ತಿನ್ನಬೇಡ. 18 ಹೀಗೆ ಆಜ್ಞೆಯಾಗಲು ನಾನು ಪ್ರಾತಃಕಾಲದಲ್ಲಿ ಜನರಿಗೆ ಪ್ರವಾದಿಸಿದೆನು; ಸಾಯಂಕಾಲಕ್ಕೆ ನನ್ನ ಪತ್ನಿಯು ತೀರಿಹೋದಳು; ಮಾರಣೆ ಬೆಳಿಗ್ಗೆ ನನಗೆ ಅಪ್ಪಣೆಯಾದಂತೆ ನಡೆದೆನು. 19 ಜನರು ನೀನು ಹೀಗೆ ಮಾಡುವದರಿಂದ ನಾವು ತಿಳಿಯತಕ್ಕದ್ದೇನು? ತಿಳಿಸುವದಿಲ್ಲವೋ? ಎಂದು ನನ್ನನ್ನು ಕೇಳಲು 20 ನಾನು ಅವರಿಗೆ ಹೀಗೆ ಹೇಳಿದೆನು - ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದ್ದಾನೆ - 21 ಇಸ್ರಾಯೇಲ್ ವಂಶದವರಿಗೆ ಹೀಗೆ ಸಾರು - ಹಾ, ನಿಮಗೆ ಮುಖ್ಯಬಲವೂ ನೇತ್ರಾನಂದವೂ ಪ್ರಾಣಪ್ರಿಯವೂ ಆದ ನನ್ನ ಪವಿತ್ರಾಲಯವನ್ನು ನಾನು ಹೊಲೆಮಾಡಿಸುವೆನು. ನೀವು ಬಿಟ್ಟುಬಂದಿರುವ ನಿಮ್ಮ ಗಂಡುಹೆಣ್ಣುಮಕ್ಕಳು ಖಡ್ಗಕ್ಕೆ ತುತ್ತಾಗುವರು ಎಂಬದಾಗಿ ಕರ್ತನಾದ ಯೆಹೋವನು ನುಡಿದಿದ್ದಾನೆ. 22 ನಾನು ಮಾಡಿದಂತೆ ಆಗ ನೀವೂ ಮಾಡುವಿರಿ, ಅಂದರೆ ಬಟ್ಟೆಯಿಂದ ಬಾಯನ್ನು ಮುಚ್ಚಿಕೊಳ್ಳದೆ ಗಾರಿಗೆಯನ್ನು ತಿನ್ನದೆ 23 ರುಮಾಲನ್ನು ಸುತ್ತಿಕೊಂಡು ಕೆರಗಳನ್ನು ಮೆಟ್ಟಿಕೊಂಡು ಇರುವಿರಿ; ನೀವು ಗೋಳಾಡುವದಿಲ್ಲ, ಅಳುವದಿಲ್ಲ; ನಿಮ್ಮ ಅಧರ್ಮದಿಂದ ಕ್ಷೀಣವಾಗಿ ಹೋಗುವಿರಿ, ಒಬ್ಬರೆದುರಿಗೊಬ್ಬರು ನರಳುವಿರಿ. 24 [ಯೆಹೋವನ ಈ ಮಾತನ್ನು ಕೇಳಿರಿ -] ಈ ವಿಷಯದಲ್ಲಿ ಯೆಹೆಜ್ಕೇಲನು ನಿಮಗೆ ಮುಂಗುರುತಾಗಿರುವನು, ಅವನು ಮಾಡಿದಂತೆಯೇ ಎಲ್ಲವನ್ನು ಮಾಡುವಿರಿ; ಇದು ಸಂಭವಿಸುವಾಗ ನಾನೇ ಕರ್ತನಾದ ಯೆಹೋವನು ಎಂದು ನಿಮಗೆ ಗೊತ್ತಾಗುವದು. 25 ನರಪುತ್ರನೇ, ಅವರಿಗೆ ಬಲಾಧಾರವೂ ನೇತ್ರಾನಂದವೂ ಆದ ಅವರ ಇಷ್ಟಸುಂದರಾಲಯವನ್ನೂ ಹೃದಯೋಲ್ಲಾಸವಾದ ಅವರ ಗಂಡುಹೆಣ್ಣುಮಕ್ಕಳನ್ನೂ 26 ನಾನು ನಿರ್ಮೂಲಮಾಡುವ ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಬಳಿಗೆ ಬಂದೇ ಬರುವನು, ನಡೆದ ಸಂಗತಿಯನ್ನು ನೀನು ಕಿವಿಯಾರ ಕೇಳುವಂತೆ ನಿನಗೆ ತಿಳಿಸುವನು. 27 ಆ ದಿನದಲ್ಲಿ ತಪ್ಪಿಸಿಕೊಂಡವನಿಗಾಗಿ ನೀನು ಬಾಯಿಬಿಡುವಿ, ನಿನ್ನ ಮೂಕತನವನ್ನು ಕಳಕೊಂಡು ಮಾತಾಡುವಿ; ಹೀಗೆ ನೀನು ಅವರಿಗೆ ಗುರುತಾಗಲು ನಾನೇ ಯೆಹೋವನು ಎಂದು ಅವರಿಗೆ ಗೊತ್ತಾಗುವದು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India