Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 21 - ಕನ್ನಡ ಸತ್ಯವೇದವು J.V. (BSI)


ಯೆಹೋವನ ಖಡ್ಗ, ಪ್ರವಾದಿಯ ದುಃಖ

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು -

2 ನರಪುತ್ರನೇ, ನೀನು ಯೆರೂಸಲೇವಿುಗೆ ಅಭಿಮುಖನಾಗಿ ಅಲ್ಲಿನ ಪವಿತ್ರಸ್ಥಾನಗಳ ಕಡೆಗೆ ಮಾತಾಡುತ್ತಾ ಇಸ್ರಾಯೇಲ್ ದೇಶದ ಪ್ರಸ್ತಾಪವನ್ನೆತ್ತಿ ಆ ದೇಶಕ್ಕೆ ಹೀಗೆ ಸಾರಿಹೇಳು -

3 ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ನಿನಗೆ ವಿರುದ್ಧನಾಗಿದ್ದೇನೆ, ನನ್ನ ಖಡ್ಗವನ್ನು ಒರೆಯಿಂದ ಹಿರಿದು ನಿನ್ನಲ್ಲಿನ ಶಿಷ್ಟರನ್ನೂ ದುಷ್ಟರನ್ನೂ ಸಂಹರಿಸಿಬಿಡುವೆನು.

4 ನಾನು ನಿನ್ನಲ್ಲಿನ ಶಿಷ್ಟರನ್ನೂ ದುಷ್ಟರನ್ನೂ ಸಂಹರಿಸಬೇಕೆಂದಿರುವದರಿಂದ ನನ್ನ ಖಡ್ಗವು ಒರೆಯಿಂದ ಹೊರಟು ತೆಂಕಲಿಂದ ಬಡಗಲವರೆಗೆ ಸಕಲನರಪ್ರಾಣಿಗಳ ಮೇಲೆ ಬೀಳುವದು;

5 ಆಗ ಯೆಹೋವನಾದ ನಾನೇ ನನ್ನ ಖಡ್ಗವನ್ನು ಒರೆಯಿಂದ ಹಿರಿದಿದ್ದೇನೆ ಎಂಬದು ಎಲ್ಲಾ ನರಮನುಷ್ಯರಿಗೂ ಗೊತ್ತಾಗುವದು; ಅದು ಪುನಃ ಒರೆಗೆ ಸೇರದು.

6 ನರಪುತ್ರನೇ, ಮೊರೆಯಿಡು; ಸೊಂಟಮುರಿದಷ್ಟು ದುಃಖದಿಂದ ಜನರ ಮುಂದೆ ನರಳಾಡು.

7 ಏಕೆ ನರಳಾಡುತ್ತೀ ಎಂದು ಅವರು ನಿನ್ನನ್ನು ಕೇಳಲು ನೀನು ಅವರಿಗೆ - ದುರ್ವಾರ್ತೆಯ ನಿವಿುತ್ತ ನರಳುತ್ತೇನೆ; ಇಗೋ, ವಿಪತ್ತು ಬಂತು; ಎಲ್ಲರ ಹೃದಯವು ಕರಗಿ ನೀರಾಗುವದು; ಎಲ್ಲರ ಕೈ ಜೋಲು ಬೀಳುವದು, ಎಲ್ಲರ ಮನಸ್ಸು ಕುಂದುವದು, ಎಲ್ಲರ ಮೊಣಕಾಲು ನೀರಿನಂತೆ ಚಂಚಲವಾಗುವದು; ಇಗೋ, ಬಂತು, ಆಯಿತು; ಇದು ಕರ್ತನಾದ ಯೆಹೋವನ ನುಡಿ ಎಂದು ಉತ್ತರಕೊಡು.


ಖಡ್ಗ ಗೀತ

8 ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - ನರಪುತ್ರನೇ,

9 ಕರ್ತನು ಇಂತೆನ್ನುತ್ತಾನೆ ಎಂಬದಾಗಿ ನುಡಿದು ಹೀಗೆ ಸಾರು - ಆಹಾ, ಖಡ್ಗ, ಖಡ್ಗ, ಸಾಣೆಹಿಡಿದಿದೆ, ತಿಕ್ಕಿದೆ.

10 ಸಂಹರಿಸುವಂತೆ ಸಾಣೆಹಿಡಿದಿದೆ, ವಿುಂಚುವಂತೆ ತಿಕ್ಕಿದೆ. ನಮ್ಮ ಕುಮಾರನ ರಾಜದಂಡವು ವಿುಕ್ಕ ಎಲ್ಲಾ ದಂಡಗಳನ್ನು ತಿರಸ್ಕರಿಸುತ್ತದಲ್ಲಾ ಎಂಬದಾಗಿ ನಾವು ಸಂಭ್ರಮಪಡಬಹುದೇ?

11 ಖಡ್ಗವು ಕೈಗೆ ಸಿದ್ಧವಾಗುವಂತೆ ತಿಕ್ಕುವದಕ್ಕೆ ಕೊಟ್ಟಿದೆ, ಘಾತಕನ ಕೈಗೆ ಈಡಾಗುವ ಹಾಗೆ ಸಾಣೆಹಿಡಿದಿದೆ, ತಿಕ್ಕಿದೆ.

12 ನರಪುತ್ರನೇ, ಕೂಗಿಕೋ, ಗೋಳಾಡು! ಖಡ್ಗವು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಪ್ರಭುಗಳೆಲ್ಲರ ಮೇಲೆಯೂ ಬಿದ್ದಿದೆ; ಆ ಪ್ರಭುಗಳು ನನ್ನ ಜನರೊಂದಿಗೆ ಖಡ್ಗಕ್ಕೆ ತುತ್ತಾಗಿದ್ದಾರೆ; ತೊಡೆಯನ್ನು ಬಡಿದುಕೋ.

13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಶೋಧನೆಯು ಸಂಭವಿಸಿತು; ತಿರಸ್ಕರಿಸುತ್ತಿದ್ದ ರಾಜದಂಡವೇ ನಾಶವಾದರೆ ಗತಿಯೇನು?

14 ನರಪುತ್ರನೇ, ನೀನು ದೈವಸಂಕಲ್ಪವನ್ನು ಸಾರಿ ಚಪ್ಪಾಳೆಬಡಿ; ಖಡ್ಗವು ಎರಡರಷ್ಟು ಮೂರರಷ್ಟು ಸಂಹರಿಸಲಿ! ಪ್ರಜೆಯನ್ನು ಹತಿಸುವ ಖಡ್ಗ! ಸುತ್ತಲು ಬೀಸಿ ಅಧಿಪತಿಯನ್ನು ಹತಿಸುವ ಖಡ್ಗ!

15 ಅವರ ಹೃದಯವು ನೀರಾಗಿ ಬಹುಜನ ಎಡವಿಬೀಳುವಂತೆ ಸಂಹರಿಸುವ ಖಡ್ಗವನ್ನು ಅವರ ಪುರದ್ವಾರಗಳಿಗೆಲ್ಲಾ ತಂದಿದ್ದೇನೆ. ಆಹಾ, ವಿುಂಚಿನಂತೆ ವಿುಂಚುತ್ತದೆ, ವಧೆಗಾಗಿ ಉಜ್ಜಿದೆ!

16 [ಖಡ್ಗವೇ,] ಏಕಾಗ್ರವಾಗಿ ಬಲಕ್ಕೆ ಹೋಗು, ಸಿದ್ಧವಾಗಿ ಎಡಕ್ಕೆ ಸಾಗು, ನಿನ್ನ ಮುಖವಿದ್ದ ಕಡೆಗೇ ಹೊರಡು.

17 ನಾನು ಚಪ್ಪಾಳೆಬಡಿದು ನನ್ನ ರೋಷವನ್ನು ತೀರಿಸಿಕೊಳ್ಳುವೆನು. ಕರ್ತನಾದ ನಾನೇ ಇದನ್ನು ನುಡಿದಿದ್ದೇನೆ.


ಶತ್ರುರಾಜನ ಆಗಮನ

18 ಯೆಹೋವನು ನನಗೆ ಮತ್ತೊಂದು ವಾಕ್ಯವನ್ನು ದಯಪಾಲಿಸಿದನು -

19 ನರಪುತ್ರನೇ, ಬಾಬೆಲಿನ ಅರಸನ ಖಡ್ಗವು ಬರುವದಕ್ಕೆ ಎರಡು ದಾರಿಗಳ ನಕ್ಷೆಯನ್ನು ಬರೆ; ಅವೆರಡು ಒಂದೇ ದೇಶದಿಂದ ಹೊರಟಹಾಗಿರಲಿ; ಒಂದೊಂದು ಪಟ್ಟಣಕ್ಕೆ ಹೋಗುವ ದಾರಿಯ ಮೊದಲಲ್ಲಿ ಕೈಮರವನ್ನು ಚಿತ್ರಿಸು.

20 ಅಮ್ಮೋನ್ಯರ ರಬ್ಬಾ ಎಂಬ ಪಟ್ಟಣಕ್ಕೂ ಯೆಹೂದದೊಳಗೆ ಕೋಟೆಕೊತ್ತಲಗಳಿಂದ ಕೂಡಿದ ಯೆರೂಸಲೇವಿುಗೂ ಖಡ್ಗವು ಬರುವದಕ್ಕೆ ದಾರಿಗಳನ್ನು ಮಾಡು.

21 ಮಾರ್ಗವು ಒಡೆಯುವ ಸ್ಥಳದಲ್ಲಿ, ಎರಡು ದಾರಿಗಳ ಮೊದಲಲ್ಲಿ ಬಾಬೆಲಿನ ಅರಸನು ಶಕುನನೋಡುವದಕ್ಕೆ ನಿಂತಿದ್ದಾನೆ; ಬಾಣಗಳನ್ನು ಕಲಕಿ ವಿಗ್ರಹಗಳನ್ನು ಪ್ರಶ್ನೆಕೇಳಿ ಕಾಳಿಜವನ್ನು ಪರೀಕ್ಷಿಸಿದ್ದಾನೆ.

22 ಯೆರೂಸಲೇಮ್ ಗುರುತಿನ ಬಾಣವು ಅವನ ಬಲಗೈಗೆ ಸಿಕ್ಕಿದೆ; ಭಿತ್ತಿಭೇದಕ ಯಂತ್ರಗಳನ್ನು ನಿಲ್ಲಿಸಿ ಬಾಯಿಬಿಟ್ಟು ಸಂಹಾರಧ್ವನಿಗೈದು ಕೂಗಿ ಹೌದು ಭಿತ್ತಿಭೇದಕಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ ದಿಬ್ಬಹಾಕಿ ಒಡ್ಡುಕಟ್ಟಬೇಕೆಂದು ಅದರಿಂದ ಸೂಚನೆಯಾಯಿತು.

23 ಪುರನಿವಾಸಿಗಳು ತಾವು ಆ ಅರಸನಿಂದ ಮಾಡಿಸಿಕೊಂಡ ಪ್ರಮಾಣಗಳಲ್ಲಿ ಭರವಸವಿಟ್ಟು ಈ ಶಕುನವು ಸುಳ್ಳೆಂದು ಭಾವಿಸುವರು; ಆದರೆ ಅವನು ಅವರ ಅಧರ್ಮವನ್ನು ಬೈಲಿಗೆ ತರಲು [ಅವನ ಕೈಗೆ] ಸಿಕ್ಕಿಬೀಳುವರು.


ಚಿದ್ಕೀಯನ ದುರ್ಗತಿ

24 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ಅಪರಾಧಗಳು ಬೈಲಿಗೆ ಬಂದು ನಿಮ್ಮ ಪಾಪಗಳು ನಿಮ್ಮ ಕಾರ್ಯಗಳಲ್ಲೆಲ್ಲಾ ತಲೆದೋರಿ ನೀವು ನಿಮ್ಮ ಅಧರ್ಮವನ್ನು ನನ್ನ ಜ್ಞಾಪಕಕ್ಕೆ ತಂದು [ಪಾಪಿಗಳಾಗಿ] ನನ್ನ ನೆನಪಿಗೆ ಬಂದಿರಾದ ಕಾರಣ ಶತ್ರುವಿನ ಕೈಗೆ ಸಿಕ್ಕಿಬೀಳುವಿರಿ.

25 ಇಸ್ರಾಯೇಲಿನ ದೊರೆಯೇ, ದುಷ್ಟನೇ, ಭ್ರಷ್ಟನೇ! ನಿನಗೆ ಸಮಯವು ಹತ್ತರಿಸಿದೆ; ಇದೇ ನಿನ್ನ ಅಪರಾಧದ ಕಡೆಗಾಲ.

26 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಮುಂಡಾಸವನ್ನು ಕಿತ್ತುಬಿಡು! ಕಿರೀಟವನ್ನು ಎತ್ತಿಹಾಕು! ಎಲ್ಲವೂ ವ್ಯತ್ಯಸ್ತವಾಗಲಿ; ಕೆಳಗಿನದನ್ನು ಮೇಲೆ ಮಾಡು, ಮೇಲಿನದನ್ನು ಕೆಳಗೆ ಮಾಡು;

27 ನಾನು ದೊಬ್ಬಿಬಿಡುವೆನು, ದೊಬ್ಬಿಬಿಡುವೆನು, ದೊಬ್ಬಿಬಿಡುವೆನು; [ರಾಜ್ಯಕ್ಕೆ] ಬಾಧ್ಯನು ಬರುವದರೊಳಗೆ ಒಂದೂ ಇದ್ದಂತಿರದು; ಅವನಿಗೇ ರಾಜ್ಯವನ್ನು ವಹಿಸುವೆನು.


ಅಮ್ಮೋನಿನ ಮೇಲೆ ಬೀಳುವ ಖಡ್ಗ

28 ನರಪುತ್ರನೇ, ನೀನು ದೈವಸಂಕಲ್ಪವನ್ನು ಪ್ರಕಟಿಸುತ್ತಾ ಹೀಗೆ ನುಡಿ - ಅಮ್ಮೋನ್ಯರ ವಿಷಯದಲ್ಲಿಯೂ ಅವರು ಮಾಡುವ ದೂಷಣೆಯ ವಿಷಯದಲ್ಲಿಯೂ ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ಖಡ್ಗ, ಖಡ್ಗ, ಸಂಹರಿಸುವದಕ್ಕೆ ಹಿರಿದಿದೆ, ವಿುಂಚುವಂತೆ ತೀರಾತಿಕ್ಕಿದೆ;

29 [ಅಮ್ಮೋನೇ,] ನಿನ್ನ ಜೋಯಿಸರು ವಿುಥ್ಯೆಯನ್ನು ಸಾಕ್ಷಾತ್ಕರಿಸಿ ಸುಳ್ಳುಸುಳ್ಳಾಗಿ ಕಣಿ ಹೇಳುತ್ತಿದ್ದಾರೆ. ಸಮಯವು ಹತ್ತರಿಸಿ ಅಪರಾಧದ ಕಡೆಗಾಲವು ಸಂಭವಿಸಿ ಹತರಾಗಿ ಬಿದ್ದಿರುವ ದುಷ್ಟರ ಗತಿಯನ್ನು ನೋಡು! ಜೋಯಿಸರನ್ನು ನಂಬಿದ ನೀನೂ ಆ ದುಷ್ಟರ ಕತ್ತುಗಳ ಮೇಲೆ ಒರಗಿಹೋಗುವಿ.

30 ಕತ್ತಿಯನ್ನು ಒರೆಗೆ ಸೇರಿಸು. ನಿನ್ನ ಸೃಷ್ಟಿಸ್ಥಳದಲ್ಲಿ, ನಿನ್ನ ಜನ್ಮಭೂವಿುಯಲ್ಲಿ ನಿನಗೆ ನ್ಯಾಯತೀರಿಸುವೆನು.

31 ನಿನ್ನ ಮೇಲೆ ನನ್ನ ಕೋಪವನ್ನು ಸುರಿಸಿ ರೋಷಾಗ್ನಿಯನ್ನು ಊದಿ ನಿನ್ನನ್ನು ಮೃಗಪ್ರಾಯರೂ ಹಾಳುಮಾಡುವದರಲ್ಲಿ ಗಟ್ಟಿಗರೂ ಆದವರ ಕೈಗೆ ಸಿಕ್ಕಿಸುವೆನು.

32 ನೀನು ಅಗ್ನಿಗೆ ಆಹುತಿಯಾಗುವಿ; ನಿನ್ನ ರಕ್ತವು ದೇಶದಲ್ಲೆಲ್ಲಾ ಇಂಗಿರುವದು; ನೀನು ಇನ್ನು ಜ್ಞಾಪಕಕ್ಕೆ ಬರುವದಿಲ್ಲ; ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು