Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 2 - ಕನ್ನಡ ಸತ್ಯವೇದವು J.V. (BSI)


ಪ್ರವಾದಿಯು ಪ್ರಬೋಧಿಸತಕ್ಕ ಜನರ ಮೂರ್ಖತನ

1 ಆತನು ನನಗೆ - ನರಪುತ್ರನೇ, ಎದ್ದು ನಿಂತುಕೋ, ನಿನ್ನ ಸಂಗಡ ಮಾತಾಡುವೆನು ಎಂದು ಹೇಳಿದನು.

2 ಆತನು ಈ ಮಾತನ್ನು ಹೇಳಿದ ಕೂಡಲೆ ದೇವರಾತ್ಮವು ನನ್ನೊಳಗೆ ಸೇರಿ ನಾನು ಎದ್ದುನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತಾಡಿದಾತನ ನುಡಿಯನ್ನು ಚೆನ್ನಾಗಿ ಕೇಳಿದೆನು.

3 ಆತನು ನನಗೆ ಹೀಗೆ ಹೇಳಿದನು - ನರಪುತ್ರನೇ, ನನಗೆ ವಿರುದ್ಧವಾಗಿ ತಿರುಗಿಬಿದ್ದು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲ್ಯರ ಬಳಿಗೆ ನಿನ್ನನ್ನು ಕಳುಹಿಸುವೆನು; ಈ ದಿನದವರೆಗೆ ಅವರೂ ಅವರ ಪಿತೃಗಳೂ ನನಗೆ ಅಪರಾಧಮಾಡುತ್ತಲೇ ಇದ್ದಾರೆ.

4 ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ ಹಟಗಾರರೂ ಆಗಿರುತ್ತಾರೆ; ನೀನು ಅವರಿಗೆ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ನುಡಿ.

5 ಅವರು ದ್ರೋಹಿವಂಶದವರು, ಒಂದು ವೇಳೆ ಕೇಳದೆ ಹೋದಾರು; ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಕಾಣಿಸಿಕೊಂಡಿದ್ದಾನೆಂದು ತಿಳಿದೇ ಇರುವರು.

6 ನರಪುತ್ರನೇ, ನೀನು ಮುಳ್ಳುಕೊಂಪೆಗಲಿಗೆ ಸಿಕ್ಕಿಕೊಂಡು ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯದಲ್ಲಿದ್ದರೂ ಅವರಿಗೆ ಭಯಪಡಬೇಡ, ಅವರ ಗದರಿಕೆಗೆ ಹೆದರದಿರು; ಅವರು ದ್ರೋಹಿವಂಶದವರು; ಅವರ ಬಿರುನುಡಿಗೆ ದಿಗಿಲುಪಡಬೇಡ, ಅವರ ಬಿರುನೋಟಕ್ಕೆ ಬೆಚ್ಚದಿರು.

7 ಅವರು ಕೇಳಿದರೂ ಕೇಳದೆಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ನುಡಿಯಲೇಬೇಕು; ಅವರು ದ್ರೋಹಿಗಳೇ ಹೌದು.


ಪ್ರವಾದಿಗೆ ಲಭಿಸಿದ ವರ

8 ಇದಲ್ಲದೆ ಆತನು - ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಿರಬೇಡ; ನಾನು ಕೊಡುವದನ್ನು ಬಾಯಿತೆರೆದು ತಿಂದುಬಿಡು ಅಂದನು.

9 ಆಹಾ, ನಾನು ನೋಡಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರಳಿಯು ಕಾಣಿಸಿತು:

10 ಆತನು ಆ ಸುರಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದನು; ಅದರ ಎರಡು ಪಕ್ಕೆಗಳಲ್ಲಿಯೂ ಬರೆದಿತ್ತು; ಅದರಲ್ಲಿ ಬರೆದದ್ದು ಗೋಳು, ಮೂಲುಗು, ಮೊರೆ ಇವುಗಳೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು