Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಯೆಹೆಜ್ಕೇಲನು 19 - ಕನ್ನಡ ಸತ್ಯವೇದವು J.V. (BSI)


ಯೆಹೂದದ ಪ್ರಭುಗಳ ವಿಷಯವಾದ ಶೋಕಗೀತ

1 ಇಸ್ರಾಯೇಲಿನ ಪ್ರಭುಗಳ ವಿಷಯವಾಗಿ ಈ ಶೋಕಗೀತವನ್ನು ಎತ್ತು -

2 ಆಹಾ, ನಿನ್ನ ತಾಯಿಯು ಸಿಂಹಗಳೊಳಗಿನ ಸಿಂಹಿ, ಪ್ರಾಯದ ಸಿಂಹಗಳ ನಡುವೆ ಮಲಗಿತು, ಮರಿಗಳನ್ನು ಸಾಕಿತು.

3 ಅದು ಬೆಳೆಯಿಸಿದ ಒಂದು ಮರಿಯು ಪ್ರಾಯದ ಸಿಂಹವಾಗಿ ಬೇಟೆಯನ್ನು ಕಲಿತು ಮನುಷ್ಯರನ್ನು ನುಂಗಲಾರಂಭಿಸಿತು.

4 ಜನಾಂಗಗಳು ಈ ವಾರ್ತೆಯನ್ನು ಕೇಳಿ ಅದಕ್ಕೆ ಗುಂಡಿತೋಡಲು ಅಲ್ಲಿ ಸಿಕ್ಕಿಬಿದ್ದಿತು; ಅದನ್ನು ಸರಪಣಿಗಳಿಂದ ಬಿಗಿದು ಐಗುಪ್ತದೇಶಕ್ಕೆ ಒಯ್ದವು.

5 ಆ ಸಿಂಹಿಯು ತಾನು ಕಾದುಕೊಂಡಿದ್ದರೂ ತನ್ನ ನಿರೀಕ್ಷೆಯು ಹಾಳಾಯಿತೆಂದು ತನ್ನ ಮರಿಗಳಲ್ಲಿ ಇನ್ನೊಂದನ್ನು ತೆಗೆದು ಸಾಕಿ ಪ್ರಾಯಕ್ಕೆ ತಂದಿತು.

6 ಅದೂ ಪ್ರಾಯದ ಸಿಂಹವಾಗಿ ಸಿಂಹಗಳ ನಡುವೆ ತಿರುಗುತ್ತಾ ಬೇಟೆ ಕಲಿತು ಮನುಷ್ಯರನ್ನು ನುಂಗಲಾರಂಭಿಸಿತು.

7 ಅದು ಪಟ್ಟಣಗಳನ್ನು ಹಾಳುಮಾಡಿ [ಬಹುಮಂದಿ] ವಿಧವೆಯರಾದವರನ್ನು ಕಂಡಿತು, ಅದರ ಗರ್ಜನೆಯ ಶಬ್ದಕ್ಕೆ ದೇಶವೂ ಅದರಲ್ಲಿದ್ದದ್ದೆಲ್ಲವೂ ಕ್ಷೀಣವಾದವು.

8 ಆಗ ಜನಾಂಗಗಳು ಸುತ್ತಲಿನ ರಾಷ್ಟ್ರಗಳಿಂದ ಕೂಡಿಬಂದು ಅದಕ್ಕೆ ವಿರುದ್ಧವಾಗಿ ನಿಂತು ಬಲೆಯೊಡ್ಡಿ ಗುಂಡಿತೋಡಲು ಅಲ್ಲಿ ಸಿಕ್ಕಿಬಿದ್ದಿತು.

9 ಅವು ಅದನ್ನು ಸರಪಣಿಗಳಿಂದ ಬಿಗಿದು ಪಂಜರದಲ್ಲಿ ಹಾಕಿ ಬಾಬೆಲಿನ ಅರಸನ ಬಳಿಗೆ ತಂದವು. ಅದರ ಧ್ವನಿಯು ಇಸ್ರಾಯೇಲಿನ ಪರ್ವತಗಳಲ್ಲಿ ಇನ್ನು ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿಬಿಟ್ಟವು.

10 ನಿನ್ನ ಹೆತ್ತ ತಾಯಿ ನೀರಾವರಿಯಲ್ಲಿ ನಾಟಿಕೊಂಡಿದ್ದ ದ್ರಾಕ್ಷಾಲತೆಯಾಗಿದ್ದಳು, ಆ ಲತೆಯು ತುಂಬಾ ತಂಪಿನಿಂದ ಫಲವತ್ತಾಗಿಯೂ ಪೊದೆಯಾಗಿಯೂ ಬೆಳೆದಿತ್ತು.

11 ಅದರಲ್ಲಿ ರಾಜದಂಡಯೋಗ್ಯವಾದ ಗಟ್ಟಿ ಕೊಂಬೆಗಳಿದ್ದವು, ಅವುಗಳ ಎತ್ತರವು ವಿುಕ್ಕ ರೆಂಬೆಗಳಿಗಿಂತ ಹೆಚ್ಚಾಗಿತ್ತು, ಬಹು ರೆಂಬೆಗಳ ಮಧ್ಯದಲ್ಲಿ ಉದ್ದುದ್ದವಾಗಿ ಕಾಣಿಸಿದವು.

12 ಆ ಲತೆಯನ್ನು ಕ್ರೋಧಿಗಳು ಕಿತ್ತು ನೆಲದ ಮೇಲೆ ಬಿಸಾಟುಬಿಟ್ಟರು, ಮೂಡಣ ಗಾಳಿಯು ಅದರ ಫಲವನ್ನು ಬಾಡಿಸಿತು, ಅದರ ಗಟ್ಟಿಕೊಂಬೆಗಳು ಮುರಿದು ಒಣಗಿಹೋದವು, ಬೆಂಕಿಯು ಅವುಗಳನ್ನು ನುಂಗಿತು.

13 ಈಗ ಅದು ನೀರಿಲ್ಲದ ಬೆಂಗಾಡಿನಲ್ಲಿ ನಾಟಿಕೊಂಡಿದೆ.

14 ಬೆಂಕಿಯು ದಂಡರೂಪವಾದ ಅದರ ಶಾಖೆಗಳಿಂದ ಹೊರಟು ಅದರ ಫಲವನ್ನು ನುಂಗಿಬಿಟ್ಟದ್ದರಿಂದ ರಾಜದಂಡಕ್ಕೆ ಯೋಗ್ಯವಾದ ಯಾವ ಗಟ್ಟಿಕೊಂಬೆಯೂ ಅದರಲ್ಲಿ ಉಳಿದಿಲ್ಲ. ಇದು ಶೋಕಗೀತ, ಶೋಕಗೀತವಾಗಿ ವಾಡಿಕೆಯಲ್ಲಿದೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು