ಯೆಹೆಜ್ಕೇಲನು 18 - ಕನ್ನಡ ಸತ್ಯವೇದವು J.V. (BSI)ಕರ್ಮಫಲಾನುಭವದ ನ್ಯಾಯ 1 ಯೆಹೋವನು ಮತ್ತೊಂದು ವಾಕ್ಯವನ್ನು ನನಗೆ ದಯಪಾಲಿಸಿದನು - 2 ತಂದೆಗಳು ಹುಳಿದ್ರಾಕ್ಷೆಯನ್ನು ತಿಂದರು, ಮಕ್ಕಳ ಹಲ್ಲುಗಳು ಚಳಿತುಹೋಗಿವೆ ಎಂಬ ಗಾದೆಯನ್ನು ನೀವು ಇಸ್ರಾಯೇಲ್ ದೇಶದ ವಿಷಯವಾಗಿ ಹೇಳುವದೇಕೆ? 3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಎತ್ತಬೇಕಾಗುವದಿಲ್ಲ. 4 ಇಗೋ, ಸಕಲ ನರಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ; ಪಾಪಮಾಡುವ ಪ್ರಾಣಿಯೇ ಸಾಯುವನು. 5 ಒಬ್ಬನು ಸದ್ಧರ್ಮಿಯಾಗಿ ನೀತಿನ್ಯಾಯಗಳನ್ನು ನಡಿಸಿ 6 ಗುಡ್ಡಗಳ ಮೇಲೆ [ಯಜ್ಞಶೇಷವನ್ನು] ತಿನ್ನದೆ ಇಸ್ರಾಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ ನೆರೆಯವನ ಹೆಂಡತಿಯನ್ನು ಕೆಡಿಸದೆ 7 ಮುಟ್ಟಿನ ಹೆಂಗಸನ್ನು ಸೇರದೆ ಯಾರನ್ನೂ ಹಿಂಸಿಸದೆ ಸಾಲಮಾಡಿದವನ ಒತ್ತೆಯನ್ನು ಬಿಗಿಹಿಡಿಯದೆ ಯಾರ ಸೊತ್ತನ್ನೂ ಅಪಹರಿಸದೆ ಹಸಿದವನಿಗೆ ಅನ್ನವಿಕ್ಕಿ ಬೆತ್ತಲೆಯಿರುವವನಿಗೆ ಹೊದಿಕೆಯನ್ನು ಹೊದಿಸಿ 8 ಸಾಲಕ್ಕೆ ಬಡ್ಡಿ ತೆಗೆಯದೆ ಲಾಭಕ್ಕೆ ಹಣಕೊಡದೆ ಅನ್ಯಾಯಕ್ಕೆ ಕೈಹಾಕದೆ ವಾದಿಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ 9 ನನ್ನ ನಿಯಮಗಳನ್ನು ಅನುಸರಿಸಿ ನನ್ನ ವಿಧಿಗಳನ್ನು ಕೈಕೊಂಡು ಸತ್ಯಪರನಾಗಿಯೇ ನಡೆದರೆ ಇಂಥವನು ಸದ್ಧರ್ಮಿಯಾಗಿರುವದರಿಂದ ಬಾಳೇ ಬಾಳುವನು; ಇದು ಕರ್ತನಾದ ಯೆಹೋವನ ನುಡಿ. 10 ಇಂಥವನು ಪಡೆದ ಮಗನು ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವದನ್ನಾದರೂ ನಡಿಸಿ 11 ಸುಕೃತ್ಯಗಳಲ್ಲಿ ಯಾವದನ್ನೂ ನಡಿಸದೆ ಗುಡ್ಡಗಳ ಮೇಲೆ [ಯಜ್ಞಶೇಷವನ್ನು] ತಿಂದು ನೆರೆಯವನ ಹೆಂಡತಿಯನ್ನು ಕೆಡಿಸಿ 12 ದೀನದರಿದ್ರರನ್ನು ಹಿಂಸಿಸಿ ಜನರ ಸೊತ್ತನ್ನು ಅಪಹರಿಸಿ ಸಾಲಗಾರನ ಒತ್ತೆಯನ್ನು ಬಿಗಿಹಿಡಿದು ವಿಗ್ರಹಗಳ ಕಡೆಗೆ ಕಣ್ಣೆತ್ತಿ ಅಸಹ್ಯಕಾರ್ಯವನ್ನು ಮಾಡಿ 13 ಸಾಲಕ್ಕೆ ಬಡ್ಡಿತೆಗೆದು ಲಾಭಕ್ಕೆ ಹಣಕೊಟ್ಟು ಬಲಾತ್ಕಾರಿಯೂ ರಕ್ತ ಸುರಿಸುವವನೂ ಆಗಿದ್ದರೆ ಬಾಳುವನೇ? ಬಾಳಲೇ ಬಾಳನು; ಈ ದುರಾಚಾರಗಳನ್ನೆಲ್ಲಾ ನಡಿಸಿದನಲ್ಲಾ; ಸತ್ತೇ ಸಾಯುವನು; ತನ್ನ ಮರಣದಂಡನೆಗೆ ತಾನೇ ಕಾರಣ. 14 ಇಗೋ, ಇವನು ಪಡೆದ ಮಗನು ತನ್ನ ತಂದೆಯು ಮಾಡಿದ ಪಾಪಗಳನ್ನೆಲ್ಲಾ ಕಂಡು ಭಯಪಟ್ಟು ಇಂಥಾ ಕಾರ್ಯಗಳನ್ನು ನಡಿಸದೆ 15 ಗುಡ್ಡಗಳ ಮೇಲೆ [ಯಜ್ಞಶೇಷವನ್ನು] ತಿನ್ನದೆ ಇಸ್ರಾಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ ನೆರೆಯವನ ಹೆಂಡತಿಯನ್ನು ಕೆಡಿಸದೆ 16 ಯಾರನ್ನೂ ಹಿಂಸಿಸದೆ ಒತ್ತೆಯನ್ನು ಕೇಳದೆ ಯಾರ ಸೊತ್ತನ್ನೂ ಅಪಹರಿಸದೆ ಹಸಿದವನಿಗೆ ಅನ್ನವಿಕ್ಕಿ ಬೆತ್ತಲೆಯಿರುವವನಿಗೆ ಹೊದಿಕೆಯನ್ನು ಹೊದಿಸಿ 17 ಬಡವನ ಮೇಲೆ ಕೈಮಾಡದೆ ಬಡ್ಡಿಯನ್ನು ಕೇಳದೆ ಲಾಭಕ್ಕೆ ಹಣಕೊಡದೆ ನನ್ನ ವಿಧಿಗಳನ್ನು ಆಚರಿಸಿ ನನ್ನ ನಿಯಮಗಳನ್ನು ಅನುಸರಿಸಿದರೆ ತನ್ನ ತಂದೆಯ ಅಧರ್ಮದ ನಿವಿುತ್ತ ಸಾಯನು, ಬಾಳೇ ಬಾಳುವನು. 18 ಇವನ ತಂದೆಯೋ ಸ್ವಕುಲದವರನ್ನು ಬಹಳವಾಗಿ ಅರೆದು ಸುಲಿದು ಸ್ವಜನರ ನಡುವೆ ಕೆಟ್ಟದನ್ನು ನಡಿಸಿದ ಕಾರಣ ಇಗೋ, ತನ್ನ ಅಧರ್ಮದಿಂದಲೇ ಸಾಯುವನು. 19 ಆದರೆ ನೀವು - ತಂದೆಯ ದೋಷಫಲವನ್ನು ಮಗನು ಹೇಗೆ ಅನುಭವಿಸುವದಿಲ್ಲ ಎಂದು ಆಕ್ಷೇಪಿಸುವಿರೋ? ಮಗನು ನೀತಿನ್ಯಾಯಗಳನ್ನು ನಡಿಸಿ ನನ್ನ ವಿಧಿಗಳನ್ನೆಲ್ಲಾ ಕೈಕೊಂಡು ಆಚರಿಸಿದರೆ ಬಾಳೇ ಬಾಳುವನು. 20 ಪಾಪಮಾಡುವವನೇ ಸಾಯುವನು; ಮಗನು ತಂದೆಯ ದೋಷಫಲವನ್ನು ಅನುಭವಿಸನು, ತಂದೆಯು ಮಗನ ದೋಷಫಲವನ್ನು ಅನುಭವಿಸನು; ಶಿಷ್ಟನ ಶಿಷ್ಟತನದ ಫಲವು ಶಿಷ್ಟನದೇ, ದುಷ್ಟನ ದುಷ್ಟತನದ ಫಲವು ದುಷ್ಟನದೇ. 21 ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು ನನ್ನ ಸಕಲ ವಿಧಿಗಳನ್ನು ಕೈಕೊಂಡು ನೀತಿನ್ಯಾಯಗಳನ್ನು ನಡಿಸಿದರೆ ಸಾಯನು, ಬಾಳೇ ಬಾಳುವನು. 22 ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಬಾಳುವನು. 23 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವುಂಟೋ? ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವದೇ ನನಗೆ ಸಂತೋಷ. 24 ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮಮಾಡಿ ದುಷ್ಟನು ನಡಿಸುವ ದುರಾಚಾರಗಳನ್ನೆಲ್ಲಾ ನಡಿಸಿದರೆ ಅವನು ಬಾಳುವನೋ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು. 25 ಆದರೆ ನೀವು - ಕರ್ತನ ಕ್ರಮವು ಸಮವಲ್ಲ ಎಂದು ಹೇಳುತ್ತಿದ್ದೀರಿ; ಇಸ್ರಾಯೇಲ್ ವಂಶದವರೇ, ನನ್ನ ಕ್ರಮವು ಸಮವಲ್ಲವೋ? ನಿಮ್ಮ ಕ್ರಮವೇ ಸಮವಲ್ಲವಷ್ಟೆ. 26 ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮ ಮಾಡಿ ಅದರಲ್ಲಿ ಸತ್ತರೆ ತಾನು ಮಾಡಿದ ಅಧರ್ಮದಿಂದಲೇ ಸಾಯಬೇಕಾಯಿತು. 27 ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು ನೀತಿನ್ಯಾಯಗಳನ್ನು ನಡಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ಅವನು ಯೋಚಿಸಿ ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದರಿಂದ ಸಾಯನು, ಬಾಳೇ ಬಾಳುವನು. 29 ಆದರೆ ಇಸ್ರಾಯೇಲ್ ವಂಶದವರು ಕರ್ತನ ಕ್ರಮವು ಸಮವಲ್ಲ ಎಂದು ಹೇಳುತ್ತಿದ್ದಾರೆ; ಇಸ್ರಾಯೇಲ್ ವಂಶದವರೇ, ನನ್ನ ಕ್ರಮವು ಸಮವಲ್ಲವೋ? ನಿಮ್ಮ ಕ್ರಮ ಸಮವಲ್ಲವಷ್ಟೆ. 30 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪುಮಾಡುವೆನು; ಅಧರ್ಮವು ನಿಮ್ಮನ್ನು ನಾಶಮಾಡದಂತೆ ತಿರುಗಿಕೊಂಡು ನಿಮ್ಮ ಅಪರಾಧಗಳನ್ನೆಲ್ಲಾ ಬಿಟ್ಟುಬಿಡಿರಿ. 31 ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನಮಾಡಿಕೊಳ್ಳಿರಿ; ಇಸ್ರಾಯೇಲ್ ವಂಶದವರೇ, ನೀವು ಸಾಯಲೇಕೆ? 32 ಸಾಯುವವರ ಸಾವಿನಲ್ಲಿ ನನಗೆ ಸಂತೋಷವಿಲ್ಲ; ತಿರುಗಿಕೊಂಡು ಬಾಳಿರಿ; ಇದು ಕರ್ತನಾದ ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India