ಯೆಹೆಜ್ಕೇಲನು 16 - ಕನ್ನಡ ಸತ್ಯವೇದವು J.V. (BSI)ಯೆಹೂದವೆಂಬಾಕೆಯ ಪತಿದ್ರೋಹ 1 ಆಮೇಲೆ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 2 ನರಪುತ್ರನೇ, ನೀನು ಯೆರೂಸಲೇವಿುಗೆ ಅದರ ಅಸಹ್ಯಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ - 3 ಕರ್ತನಾದ ಯೆಹೋವನು ಯೆರೂಸಲೇಮೆಂಬಾಕೆಗೆ ಈ ಮಾತನ್ನು ಹೇಳಿಕಳುಹಿಸಿದ್ದಾನೆ - ನೀನು ಹುಟ್ಟಿದ್ದು ಕಾನಾನ್ ದೇಶ, ಅದೇ ನಿನ್ನ ಜನ್ಮಭೂವಿು, ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತೀಯಳು. 4 ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿವಸದಲ್ಲಿ ಯಾರೂ ನಿನ್ನ ಹೊಕ್ಕಳು ಕೊಯ್ದುಕಟ್ಟಲಿಲ್ಲ, ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವೂ ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲಿ ಎಷ್ಟು ಮಾತ್ರವೂ ಸುತ್ತಲಿಲ್ಲ. 5 ನಿನ್ನನ್ನು ಕಟಾಕ್ಷಿಸಿ ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿವಸದಲ್ಲಿ ನೀನು ಹೇಸಿಗೆಯಾಗಿದ್ದಿ, ನಿನ್ನನ್ನು ಬೈಲಿನಲ್ಲಿ ಬಿಸಾಟುಬಿಟ್ಟರು. 6 ನಾನು ಹಾದುಹೋಗುತ್ತಾ ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ ನೀನು ರಕ್ತದಿಂದ ಹೊಲೆಯಾಗಿದ್ದರೂ ಬದುಕು ಎಂದು ಹೇಳಿದೆನು, ಹೌದು, ನೀನು ರಕ್ತದಿಂದ ಹೊಲೆಯಾಗಿದ್ದರೂ ಬದುಕು ಎಂದು ಹೇಳಿ ಬದುಕಿಸಿದೆನು. 7 ಭೂವಿುಯಲ್ಲಿ ಮೊಳಿಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಲು ನೀನು ಬಲಿತು ಪ್ರಾಯತುಂಬಿ ಅತಿಸುಂದರಿಯಾದಿ; ನಿನಗೆ ಸ್ತನಬಂತು, ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದಿ. 8 ನಾನು ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದಿ; ಆಗ ನಾನು ನನ್ನ ಹೊದಿಕೆಯ ನೆರಿಗೆಯನ್ನು ನಿನ್ನ ಮೇಲೆ ಹಾಕಿ ನಿನ್ನ ಮಾನವನ್ನು ಕಾಪಾಡಿದೆನು; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡದರಿಂದ ನೀನು ನನ್ನವಳಾದಿ; ಇದು ಕರ್ತನಾದ ಯೆಹೋವನ ನುಡಿ. 9 ಆಗ ನಾನು ನೀರಿನಲ್ಲಿ ನಿನ್ನನ್ನು ಸ್ನಾನಮಾಡಿಸಿ ನಿನ್ನ ಮೇಲಣ ರಕ್ತವನ್ನು ತೊಳೆದುಬಿಟ್ಟು ನಿನಗೆ ತೈಲವನ್ನು ಹಚ್ಚಿದೆನು. 10 ಇದಲ್ಲದೆ ನಾನು ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ ಕಡಲುಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ ನಯವಾದ ನಾರುಮಡಿಯನ್ನು ನಿನಗೆ ಉಡಿಸಿ ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು. 11 ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು, ಕಂಠಕ್ಕೆ ಮಾಲೆಯನ್ನು, 12 ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರಕಿರೀಟವನ್ನು ಇಟ್ಟು ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆನು. 13 ನಿನ್ನ ಒಡವೆಗಳು ಬೆಳ್ಳಿಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ಬಟ್ಟೆ; ನಿನ್ನ ಆಹಾರವು ಗೋದಿಹಿಟ್ಟು, ಜೇನು, ಎಣ್ಣೆ; ನಿನ್ನ ಲಾವಣ್ಯವು ಅತಿಮನೋಹರ; ನೀನು ವೃದ್ಧಿಗೊಂಡು ರಾಣಿಯಾದಿ. 14 ನಾನು ನಿನಗೆ ಅನುಗ್ರಹಿಸಿದ ನನ್ನ ವೈಭವದಿಂದ ನಿನ್ನ ಸೌಂದರ್ಯವು ಪರಿಪೂರ್ಣವಾಯಿತು; ನಿನ್ನ ಚೆಲುವಿಕೆಯ ಹೆಸರುವಾಸಿಯು ಜನಾಂಗಗಳಲ್ಲಿ ಹಬ್ಬಿತು; ಇದು ಕರ್ತನಾದ ಯೆಹೋವನ ನುಡಿ. 15 ಆದರೆ ನೀನು ನಿನ್ನ ಸೌಂದರ್ಯದಲ್ಲಿಯೇ ನಂಬಿಕೆಯಿಟ್ಟು ನಾನು ಪ್ರಸಿದ್ಧಳಾಗಿದ್ದೇನಲ್ಲಾ ಎಂದು ಉಬ್ಬಿಕೊಂಡು ಸೂಳೆತನಮಾಡಿದಿ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ವಿುತಿಮೀರಿ ಹಾದರಮಾಡಿದಿ, ಒಬ್ಬೊಬ್ಬನಿಗೂ ಒಳಗಾದಿ. 16 ನೀನು ಪೂಜಾಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರನಡಿಸಿದಿ. (ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು.) 17 ಮತ್ತು ನಾನು ನನ್ನ ಬೆಳ್ಳಿಬಂಗಾರದಿಂದ ಮಾಡಿಸಿ ನಿನಗೆ ಕೊಟ್ಟಿದ್ದ ನಿನ್ನ ಚಂದವಾದ ಆಭರಣಗಳನ್ನು ನೀನು ತೆಗೆದು ಅವುಗಳಿಂದ ಪುರುಷಮೂರ್ತಿಗಳನ್ನು ರೂಪಿಸಿಕೊಂಡು ಅವುಗಳೊಡನೆ ಹಾದರಮಾಡಿದಿ; 18 ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು ಮೂರ್ತಿಗಳಿಗೆ ಹೊದಿಸಿ ಅವುಗಳ ಮುಂದೆ ನನ್ನ ತೈಲವನ್ನೂ ನನ್ನ ಧೂಪವನ್ನೂ ಅರ್ಪಿಸಿದಿ. 19 ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು ಇವುಗಳನ್ನೂ ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದಿ; ಅಯ್ಯೋ, ಹೀಗಾಯಿತಲ್ಲ! ಇದು ಕರ್ತನಾದ ಯೆಹೋವನ ನುಡಿ. 20 ಇದಲ್ಲದೆ ನೀನು ನನಗೆ ಹೆತ್ತ ಗಂಡು ಹೆಣ್ಣು ಮಕ್ಕಳನ್ನು ಹಿಡಿದು ಮೂರ್ತಿಗಳಿಗೆ ಅಹಾರವಾಗಲೆಂದು ಯಜ್ಞಮಾಡಿದಿ. 21 ನಿನ್ನ ಸೂಳೆತನವು ಅಲ್ಪಕಾರ್ಯವೆಂದು ಭಾವಿಸಿದಿಯೋ? ಅದನ್ನೂ ಮೀರಿಸಬೇಕೆಂದು ನೀನು ನನ್ನ ಮಕ್ಕಳನ್ನು ಹತಿಸಿ ಆಹುತಿಕೊಟ್ಟು ಮೂರ್ತಿಗಳಿಗೆ ಅರ್ಪಿಸಿದಿಯೋ? 22 ಈ ನಿನ್ನ ಅಸಹ್ಯಕಾರ್ಯಗಳನ್ನೂ ಸೂಳೆತನವನ್ನೂ ನೀನು ಪದೇಪದೇ ನಡಿಸುತ್ತಿದ್ದಾಗ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದ ನಿನ್ನ ಎಳೆತನವನ್ನು ನೀನು ಜ್ಞಾಪಕಕ್ಕೆ ತಂದುಕೊಳ್ಳಲಿಲ್ಲ. 23 ಅಯ್ಯಯ್ಯೋ, ನಿನ್ನ ಗತಿಯನ್ನು ಏನು ಹೇಳಲಿ ಎಂಬದು ಕರ್ತನಾದ ಯೆಹೋವನ ನುಡಿ. 24 ನೀನು ಈ ದುಷ್ಕೃತ್ಯಗಳನ್ನೆಲ್ಲಾ ನಡಿಸಿದ್ದಲ್ಲದೆ ಪ್ರತಿಯೊಂದು ಚೌಕದಲ್ಲಿ ದಿಬ್ಬವನ್ನು ಮಾಡಿ ಜಗಲಿಯನ್ನು ಕಟ್ಟಿಕೊಂಡಿದ್ದೀ. 25 ಒಂದೊಂದು ಬೀದಿಯ ಕೊನೆಯಲ್ಲಿಯೂ ನೀನು ಜಗಲಿಯನ್ನು ಕಟ್ಟಿಕೊಂಡು ನಿನ್ನ ಸೌಂದರ್ಯವನ್ನು ನೀಚ ಕೆಲಸಕ್ಕೆ ಒಪ್ಪಿಸಿ ಹಾದುಹೋಗುವವರೆಲ್ಲರನ್ನು ಸೇರಿ ಸೂಳೆತನವನ್ನು ಹೆಚ್ಚಾಗಿ ನಡಿಸಿದ್ದೀ. 26 ನಿನ್ನ ನೆರೆಯವರೂ ಅತಿಕಾವಿುಗಳೂ ಆದ ಐಗುಪ್ತ್ಯರೊಂದಿಗೆ ಸಹ ನೀನು ಕಲೆತು ಹೆಚ್ಚಾಗಿ ಹಾದರಮಾಡಿ ನನ್ನನ್ನು ರೇಗಿಸಿದ್ದೀ. 27 ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನ ಆಹಾರವನ್ನು ಕಡಿಮೆಮಾಡಿದೆನು; ನಿನ್ನನ್ನು ದ್ವೇಷಿಸಿ ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯದ ಕುಮಾರ್ತೆಯರ ಕೈಗೆ ನಿನ್ನನ್ನು ಸಿಕ್ಕಿಸಿದೆನು. 28 ಮತ್ತು ಇಷ್ಟೂ ಸಾಲದೆಂದು ಅಶ್ಯೂರ್ಯರೊಂದಿಗೂ ಹಾದರಮಾಡಿದಿ; ಹೌದು, ಅವರೊಡನೆ ಹಾದರಮಾಡಿದರೂ ನಿನಗೆ ತೃಪ್ತಿಯಾಗಲಿಲ್ಲ. 29 ಇದಲ್ಲದೆ ನೀನು ತುಂಬಾ ವ್ಯಾಪಾರವುಳ್ಳ ಕಸ್ದೀಯ ದೇಶಕ್ಕೆ ಸೇರಿ ಅಲ್ಲಿಯೂ ಬಹಳ ಸೂಳೆತನ ಮಾಡಿದಿ, ಆದರೂ ನಿನಗೆ ತೃಪ್ತಿಯಾಗಲಿಲ್ಲ. 30 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಿನ್ನ ಮನಸ್ಸು ಮೋಹಕ್ಕೆ ಎಷ್ಟೋ ಸೋತಿದೆ! ಇಷ್ಟೆಲ್ಲಾ ದುಷ್ಕೃತ್ಯಗಳನ್ನು ನಡಿಸಿ ಕಟ್ಟಿಲ್ಲದ ಜಾರಸ್ತ್ರೀಯಾಗಿದ್ದೀಯಲ್ಲಾ; 31 ಒಂದೊಂದು ಬೀದಿಯ ಕೊನೆಯಲ್ಲಿಯೂ ನೀನು ಗದ್ದುಗೆಯನ್ನು ಕಟ್ಟಿ ಎಲ್ಲಾ ಚೌಕಗಳಲ್ಲಿ ಜಗಲಿಯನ್ನು ಸ್ಥಾಪಿಸಿಕೊಂಡಿದ್ದೀ; ದೊರೆತದ್ದನ್ನು ಕಡಿಮೆಯೆಂದು ತಿರಸ್ಕರಿಸುವ ಸೂಳೆಯಂತೆ ನೀನು ನಡೆಯುವವಳಲ್ಲ. 32 ನೀನು ಸೂಳೆತನಮಾಡುವ ಪತಿವತಿ! ಗಂಡನಿಗೆ ಬದಲಾಗಿ ಅನ್ಯರನ್ನು ಸೇರುವ ಜಾರಿಣಿ! 33 ಎಲ್ಲಾ ಕಡೆ ಸೂಳೆಯರಿಗೆ ಹಣಕೊಡುವದುಂಟು; ನೀನಾದರೂ ನಿನ್ನ ಎಲ್ಲಾ ವಿುಂಡರಿಗೆ ನೀನೇ ಕೊಡುತ್ತೀ; ಅವರು ಎಲ್ಲಾ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಇನಾಮು ಕೊಡುತ್ತಿ. 34 ನಿನ್ನ ಸೂಳೆತನಕ್ಕೂ ಇತರ ವೇಶಿಗಳ ಸೂಳೆತನಕ್ಕೂ ವ್ಯತ್ಯಾಸವುಂಟು; ನಿನ್ನಲ್ಲಿ ವ್ಯಭಿಚಾರಮಾಡಲಿಕ್ಕೆ ಯಾರೂ ನಿನ್ನ ಹಿಂದೆ ಬಾರರು; ನೀನೇ ಕೊಡುತ್ತೀಯೇ ಹೊರತು ನಿನಗೇನೂ ಸಿಕ್ಕದು; ನಿನ್ನ ದುರಾಚಾರವು ವಿಪರೀತವೇ ಸರಿ. 35 ಹೀಗಿರಲು, ಸೂಳೆಯೇ, ಯೆಹೋವನ ಈ ವಾಕ್ಯವನ್ನು ಕೇಳು! 36 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ವಿುತಿಮೀರಿದ ನಿನ್ನ ಕಾಮಾತುರ, ನಿನ್ನಲ್ಲಿ ವ್ಯಭಿಚಾರಮಾಡಿದ ನಿನ್ನ ವಿುಂಡರ ಮೂಲಕ ನಿನಗಾದ ಮಾನಭಂಗ, ನಿನ್ನ ಎಲ್ಲಾ ಅಸಹ್ಯ ವಿಗ್ರಹಗಳು, ನೀನು ಅವುಗಳಿಗೆ ಅರ್ಪಿಸಿದ ನಿನ್ನ ಮಕ್ಕಳ ರಕ್ತ, 37 ಇವುಗಳನ್ನು ನಾನು ನೋಡಿ ನೀನು ರವಿುಸಿದ ನಿನ್ನ ಎಲ್ಲಾ ವಿುಂಡರನ್ನೂ ನೀನು ಮೋಹಿಸಿದ ಸಮಸ್ತರನ್ನೂ ನೀನು ಹಗೆಮಾಡಿದ ಎಲ್ಲರೊಂದಿಗೆ ಸುತ್ತುಮುತ್ತಲು ನಿನಗೆ ವಿರುದ್ಧವಾಗಿ ಕೂಡಿಸಿ ಅವರ ಕಣ್ಣೆದುರಿಗೆ ನಿನ್ನನ್ನು ಬೆತ್ತಲೆಗೈದು ನಿನ್ನ ಮಾನವನ್ನು ಬಟ್ಟಬೈಲುಮಾಡುವೆನು. 38 ವ್ಯಭಿಚಾರಮಾಡುವಂಥ, ರಕ್ತಸುರಿಸುವಂಥ ಹೆಂಗಸರಿಗೆ ತಕ್ಕ ದಂಡನೆಗಳನ್ನು ನಾನು ನಿನಗೆ ವಿಧಿಸಿ ಕೋಪೋದ್ರೇಕದಿಂದಲೂ ರೋಷಾವೇಶದಿಂದಲೂ ನಿನ್ನ ರಕ್ತವನ್ನು ಸುರಿಸುವೆನು. 39 ನಾನು ನಿನ್ನನ್ನು ಸುತ್ತಲಿನವರ ಕೈವಶಮಾಡುವೆನು; ಅವರು ನಿನ್ನ ದಿಬ್ಬವನ್ನು ಕೆಡವಿ ನಿನ್ನ ಜಗಲಿಗಳನ್ನು ಒಡೆದು ನಿನ್ನ ಬಟ್ಟೆಗಳನ್ನು ಕಿತ್ತು ನಿನ್ನ ಒಡವೆಗಳನ್ನು ಸುಲಿದುಕೊಂಡು ನಿನ್ನನ್ನು ಬಟ್ಟಬರಿದಾಗಿ ಬಿಟ್ಟುಹೋಗುವರು. 40 ಅವರು ನಿನ್ನ ವಿಚಾರವಾಗಿ ನ್ಯಾಯಸಭೆಯನ್ನು ಕೂಡಿಸಿ ನಿನ್ನನ್ನು ಕಲ್ಲೆಸೆದು ಕೊಲ್ಲುವರು, ಕತ್ತಿಗಳಿಂದ ಹತಿಸುವರು. 41 ನಿನ್ನ ಮನೆಗಳನ್ನು ಬೆಂಕಿಯಿಂದ ಸುಡುವರು; ಬಹುಮಂದಿ ಹೆಂಗಸರ ಕಣ್ಣೆದುರಿನಲ್ಲಿ ನಿನ್ನನ್ನು ದಂಡಿಸುವರು; ನೀನು ನಿನ್ನ ಸೂಳೆತನವನ್ನು ನಿಲ್ಲಿಸಿಬಿಡುವಂತೆ ನಾನು ಮಾಡುವೆನು; ನೀನು [ನಿನ್ನ ವಿುಂಡರಿಗೆ] ಇನ್ನು ಹಣಕೊಡದಿರುವಿ. 42 ಹೀಗೆ ನಾನು ನಿನ್ನ ಮೇಲಣ ಸಿಟ್ಟನ್ನು ತೀರಿಸಲು ನನ್ನ ರೋಷವು ನಿನ್ನ ಕಡೆಯಿಂದ ತೊಲಗಿಬಿಡುವದು; ನಾನು ಶಾಂತನಾಗಿ ಇನ್ನು ಮೇಲೆ ಕೋಪಗೊಳ್ಳೆನು. 43 ನೀನು ನಿನ್ನ ಯೌವನಕಾಲವನ್ನು ಜ್ಞಾಪಕಮಾಡಿಕೊಳ್ಳದೆ ಈ ದುಷ್ಕೃತ್ಯಗಳನ್ನೆಲ್ಲಾ ನಡಿಸಿ ನನ್ನನ್ನು ರೇಗಿಸಿದ್ದರಿಂದ ಇಗೋ, ನಾನು ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು; ನೀನು ಲೆಕ್ಕವಿಲ್ಲದ ದುರಾಚಾರಗಳನ್ನು ನಡಿಸಿದ್ದಲ್ಲದೆ ಈ ಅಸಹ್ಯ ಕಾರ್ಯವನ್ನೂ ಮಾಡಿದ್ದೀಯಲ್ಲಾ. ಇದು ಕರ್ತನಾದ ಯೆಹೋವನ ನುಡಿ. 44 ಆಹಾ, ಗಾದೆಗಳಲ್ಲಿ ಜಾಣರು ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನ್ನ ವಿಷಯವಾಗಿ ನುಡಿಯುವರು. 45 ಗಂಡನಿಗೂ ಮಕ್ಕಳಿಗೂ ಬೇಸರಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನಿಗೂ ಮಕ್ಕಳಿಗೂ ಬೇಸರಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು; 46 ನಿನ್ನೆಡಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯ ನಿನ್ನ ಅಕ್ಕ, ಬಲಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್ ನಿನ್ನ ತಂಗಿ. 47 ಆದರೆ ನೀನು ನಡೆದ ದುರ್ಮಾರ್ಗವು ಅವರು ನಡೆದಂಥದಲ್ಲ, ನಿನ್ನ ಅಸಹ್ಯಕಾರ್ಯಗಳು ಅವರು ನಡಿಸಿದಂಥವುಗಳಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸರ್ವದಾ ಅವರಿಗಿಂತ ಬಹುಕೆಟ್ಟವಳಾಗಿ ನಡೆದುಕೊಂಡಿ. 48 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನನ್ನ ಜೀವದಾಣೆ, ನೀನೂ ನಿನ್ನ ಕುಮಾರ್ತೆಯರೂ ನಡೆದಂತೆ ಸೊದೋಮೆಂಬ ನಿನ್ನ ತಂಗಿಯಾಗಲಿ ಆಕೆಯ ಕುಮಾರ್ತೆಯರಾಗಲಿ ನಡೆಯಲಿಲ್ಲ. 49 ಸೊದೋಮೆಂಬ ನಿನ್ನ ತಂಗಿಯ ದೋಷವನ್ನು ನೋಡು; ಹೆಮ್ಮೆಪಡುವದು, ಹೊಟ್ಟೆತುಂಬಿಸಿಕೊಳ್ಳುವದು, ಸ್ವಸುಖದಲ್ಲಿ ಮುಳುಗಿರುವದು, ಇವು ಆಕೆಯಲ್ಲಿಯೂ ಆಕೆಯ ಕುಮಾರ್ತೆಯರಲ್ಲಿಯೂ ಇದ್ದವು. ಅಲ್ಲದೆ ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ. 50 ಅವರು ಸೊಕ್ಕೇರಿ ನನ್ನ ಕಣ್ಣೆದುರಿಗೆ ಅಸಹ್ಯಾಚಾರಗಳನ್ನು ನಡಿಸಿದರು; ನಾನು ಅದನ್ನು ನೋಡಿ ಅವರನ್ನು ನಿರ್ಮೂಲಮಾಡಿದೆನು. 51 ಸಮಾರ್ಯವೆಂಬಾಕೆಯು ಕೂಡ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯಕಾರ್ಯಗಳನ್ನು ನಡಿಸಿದ್ದೀ; ನೀನು ಮಾಡಿದ ಲೆಕ್ಕವಿಲ್ಲದ ದುರಾಚಾರಗಳಿಂದ ಅವರನ್ನು ನಿರ್ದೋಷಿಗಳೆಂದು ತೋರ್ಪಡಿಸಿದಿ. 52 ನಿನ್ನ ದೋಷಗಳೇ ನಿನ್ನ ಅಕ್ಕತಂಗಿಯರ ಪಕ್ಷವಾಗಿ ನಿಂತದರಿಂದ ನೀನು ನಾಚಿಕೆಪಡು; ಅವರಿಗಿಂತ ಅಧಿಕವಾಗಿ ನೀನು ಮಾಡಿದ ಅಸಹ್ಯಪಾಪಗಳ ಮೂಲಕ ಅವರು ನಿನಗಿಂತ ಉತ್ತಮರೆಂದು ಕಂಡುಬಂದಿದ್ದಾರೆ; ಹೌದು, ನೀನು ಲಜ್ಜೆಪಡು, ನಾಚಿಕೆಗೊಳ್ಳು; ನಿನ್ನ ಅಕ್ಕತಂಗಿಯರನ್ನು ನಿರ್ದೋಷಿಗಳೆಂದು ತೋರ್ಪಡಿದ್ದೀಯಷ್ಟೆ. 53 ಸೊದೋಮ್, ಆಕೆಯ ಕುಮಾರ್ತೆಯರು, ಸಮಾರ್ಯ, ಆಕೆಯ ಕುಮಾರ್ತೆಯರು, ಇವರ ದುರವಸ್ಥೆಯನ್ನು ನಾನು ತಪ್ಪಿಸುವೆನು, ಅದರೊಂದಿಗೆ ನಿನ್ನ ದುರವಸ್ಥೆಯನ್ನೂ ತಪ್ಪಿಸುವೆನು. 54 ಹೀಗಿರಲು ನೀನು ನಿನ್ನ ಲೆಕ್ಕವಿಲ್ಲದ ದುಷ್ಕೃತ್ಯಗಳ ಮೂಲಕ ಅವರನ್ನು ಸಂತೈಸಿದ್ದರಿಂದ ಲಜ್ಜೆಪಡುವಿ, ನಾಚಿಕೆಗೊಳ್ಳುವಿ. 55 ಆಗ ಸಮಾರ್ಯ, ಸೊದೋಮ್ ಎಂಬ ನಿನ್ನ ಅಕ್ಕತಂಗಿಯರೂ ಅವರ ಕುಮಾರ್ತೆಯರೂ ತಮ್ಮ ಪೂರ್ವಸ್ಥಿತಿಗೆ ಸೇರುವರು, ನೀನೂ ನಿನ್ನ ಕುಮಾರ್ತೆಯರೂ ನಿಮ್ಮ ಪೂರ್ವಸ್ಥಿತಿಗೆ ಸೇರುವಿರಿ. 56 ಅರಾವಿುನ ಕುಮಾರ್ತೆಯರು, ಆಕೆಯ ಸುತ್ತಮುತ್ತಲಿನ ಸಮಸ್ತರು, ನಿನ್ನನ್ನು ಎಲ್ಲಿಯೂ ಹೀನೈಸುತ್ತಿರುವ ಫಿಲಿಷ್ಟಿಯದ ಕುಮಾರ್ತೆಯರು, ಇವರೆಲ್ಲರ ದೂಷಣೆಗೆ ನೀನು ಗುರಿಯಾಗುವದಕ್ಕೆ ಮುಂಚೆ, 57 ನಿನ್ನ ಕೆಟ್ಟತನವು ಬೈಲಿಗೆ ಬರುವದಕ್ಕೆ ಮೊದಲು ಆ ನಿನ್ನ ಗರ್ವಕಾಲದಲ್ಲಿ ಸೊದೋಮೆಂಬ ನಿನ್ನ ತಂಗಿಯ ಹೆಸರು ನಿನ್ನ ಬಾಯಲ್ಲಿ ಬರಲೇ ಇಲ್ಲ; 58 ಈಗ ನಿನ್ನ ದುರ್ನಡತೆಯ ಮತ್ತು ದುರಾಚಾರಗಳ ಫಲವನ್ನು ನೀನು ಅನುಭವಿಸಬೇಕಾಗಿ ಬಂತು. ಇದು ಯೆಹೋವನ ನುಡಿ. 59 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀನು ಒಡಂಬಡಿಕೆಯನ್ನು ಮೀರಿ ನಿನ್ನ ಆಣೆಯನ್ನು ತಿರಸ್ಕರಿಸಿದಿ, ನೀನು ಮಾಡಿದ್ದಕ್ಕೆ ತಕ್ಕದ್ದನ್ನು ನಾನು ನಿನಗೆ ಮಾಡುವೆನು. 60 ಹೀಗಾದರೂ ನಾನು ನಿನ್ನ ಯೌವನಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಸಂಗಡ ಎಂದಿಗೂ ತಪ್ಪದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು. 61 ಇದಕ್ಕನುಸಾರ ನಾನು ಕುಮಾರ್ತೆಯರನ್ನೋ ಎಂಬಂತೆ ನಿನಗೆ ದಯಪಾಲಿಸುವ ನಿನ್ನ ಅಕ್ಕಂದಿರೂ ತಂಗಿಯರೂ ನಿನ್ನಲ್ಲಿ ಸೇರಿಕೊಳ್ಳುವಾಗ ನೀನು ನಿನ್ನ ದುರ್ಮಾರ್ಗಗಳನ್ನು ನೆನಸಿಕೊಂಡು ನಾಚಿಕೆಪಡುವಿ; ಈ ನನ್ನ ದಯೆ ನಿನ್ನ [ಹಿಂದಿನ] ಒಡಂಬಡಿಕೆಯ ಫಲವಲ್ಲ. 62 ನಾನು ಈ ಒಡಂಬಡಿಕೆಯನ್ನು ನಿನ್ನೊಂದಿಗೆ ಮಾಡಿಕೊಳ್ಳಲು ನಾನೇ ಯೆಹೋವನು ಎಂದು ನಿನಗೆ ಗೊತ್ತಾಗುವದು; 63 ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷವಿುಸಿಬಿಟ್ಟ ಮೇಲೆ ನೀನು ಅವುಗಳನ್ನು ಜ್ಞಾಪಕಕ್ಕೆ ತಂದು ನಾಚಿಕೆಪಟ್ಟು ನಿನ್ನ ಅವಮಾನದ ನಿವಿುತ್ತ ಇನ್ನು ಬಾಯಿ ತೆರೆಯದಿರುವಿ. ಇದು ಕರ್ತನಾದ ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India