ಯೆಹೆಜ್ಕೇಲನು 15 - ಕನ್ನಡ ಸತ್ಯವೇದವು J.V. (BSI)ಪ್ರಯೋಜನಕ್ಕೆ ಬಾರದ ದ್ರಾಕ್ಷಾಲತೆಯ ಸಾಮ್ಯ 1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು. 2 ನರಪುತ್ರನೇ, ದ್ರಾಕ್ಷೆಯ ಗಿಡವು ವಿುಕ್ಕ ಗಿಡಗಳಿಗಿಂತ ಏನು ಹೆಚ್ಚು? ವನವೃಕ್ಷಗಳಲ್ಲಿ ದ್ರಾಕ್ಷಾಲತೆಯ ವಿಶೇಷವೇನು? 3 ದ್ರಾಕ್ಷೆಯ ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವದನ್ನಾದರೂ ಮಾಡುವರೋ? ಯಾವ ಸಾಮಾನನ್ನಾದರೂ ತಗಲಿಹಾಕುವದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ? 4 ಆಹಾ, ಅದನ್ನು ಸೌದೆಯಾಗಿ ಬೆಂಕಿಯಲ್ಲಿ ಹಾಕುವರು; ಬೆಂಕಿಯು ಅದರ ಎರಡು ಕೊನೆಗಳನ್ನು ಸುಟ್ಟುಬಿಡುವದು, ಮಧ್ಯಭಾಗವು ಇದ್ದಲಾಗುವದು; 5 ಆಗ ಯಾವ ಮುಟ್ಟಿಗಾದರೂ ಬರುವದೋ? ಇಗೋ, ಅದು ಇದ್ದ ಹಾಗೆಯೇ ಇದ್ದಾಗ ಯಾವ ಕೆಲಸಕ್ಕೂ ಬರಲಿಲ್ಲ; ಬೆಂಕಿಯಲ್ಲಿ ಸುಟ್ಟು ಇದ್ದಲಾದ ಮೇಲೆ ಯಾವ ಕೆಲಸಕ್ಕೆ ಬಂದೀತು? 6 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ವನವೃಕ್ಷಗಳಲ್ಲಿ ದ್ರಾಕ್ಷೆಯ ಗಿಡವನ್ನು ನಾನು ಹೇಗೆ ಬೆಂಕಿಗೆ ಸೌದೆಯಾಗಿ ಕೊಟ್ಟಿದ್ದೇನೋ ಹಾಗೆಯೇ ನಾನು ಯೆರೂಸಲೇವಿುನವರನ್ನು [ನಾಶನಕ್ಕೆ] ಕೊಟ್ಟಿದ್ದೇನೆ. 7 ಅವರ ಮೇಲೆ ಕೋಪದೃಷ್ಟಿಯನ್ನಿಡುವೆನು; ಅವರು ಬೆಂಕಿಯೊಳಗಿಂದ ತಪ್ಪಿಸಿಕೊಂಡರೂ ಬೆಂಕಿಯು ಅವರನ್ನು ನುಂಗಿಬಿಡುವದು; ನಾನು ಅವರ ಮೇಲೆ ಕೋಪದೃಷ್ಟಿಯನ್ನಿಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು. 8 ಅವರು ದ್ರೋಹಮಾಡಿದ್ದರಿಂದ ನಾನು ದೇಶವನ್ನು ಹಾಳುಮಾಡುವೆನು; ಇದು ಕರ್ತನಾದ ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India