ಯೆಹೆಜ್ಕೇಲನು 14 - ಕನ್ನಡ ಸತ್ಯವೇದವು J.V. (BSI)ಕಪಟಿಗಳಾಗಿ ಯೆಹೋವನ ಹತ್ತಿರ ಪ್ರಶ್ನೆಮಾಡುವವರನ್ನು ಎಚ್ಚರಿಸಿದ್ದು 1 ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಬಂದು ನನ್ನ ಮುಂದೆ ಕೂತುಕೊಂಡಿರುವಾಗ 2 ಯೆಹೋವನು ಈ ವಾಕ್ಯವನ್ನು ನನಗೆ ಅನುಗ್ರಹಿಸಿದನು - 3 ನರಪುತ್ರನೇ, ಇವರು ತಮ್ಮ ಬೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತಮಗೆ ಪಾಪಕಾರಿಯಾದ ವಿಘ್ನವನ್ನು ತಮ್ಮ ಮುಂದೆ ಇಟ್ಟುಕೊಂಡಿದ್ದಾರೆ; ಇಂಥವರಿಗೆ ನಾನು ದೈವೋತ್ತರವನ್ನು ದಯಪಾಲಿಸುವದು ಯುಕ್ತವೋ? ಎಂದಿಗೂ ಅಲ್ಲ. 4 ಆದಕಾರಣ ನೀನು ಅವರನ್ನು ಸಂಬೋಧಿಸಿ ಹೀಗೆ ಹೇಳು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ ವಂಶದವರಲ್ಲಿ ಯಾವ ಯಾವನು ತನ್ನ ಬೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯನ್ನು ಪ್ರಶ್ನೆಕೇಳುವದಕ್ಕೆ ಬರುವನೋ ಅವನ ಪಾತಕಕ್ಕೆ ಅಂದರೆ ಅವನ ಲೆಕ್ಕವಿಲ್ಲದ ಬೊಂಬೆಗಳಿಗೆ ತಕ್ಕ ಹಾಗೆ ಯೆಹೋವನಾದ ನಾನು ಅವನಿಗೆ ಉತ್ತರವನ್ನು ಕೊಡುವೆನು; 5 ಇಸ್ರಾಯೇಲ್ ವಂಶದವರೆಲ್ಲರೂ ತಮ್ಮ ಬೊಂಬೆಗಳ ನಿವಿುತ್ತ ನನ್ನನ್ನು ತೊರೆದದರಿಂದ ನಾನು ಅವರನ್ನೆಲ್ಲಾ ಅವರ ಆಶಾಪಾಶದಲ್ಲಿ ಸಿಕ್ಕಿಸಿ ಹಿಡಿಯುವೆನು. 6 ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀವು ನಿಮ್ಮ ಬೊಂಬೆಗಳನ್ನು ತೊರೆದುಬಿಟ್ಟು ಹಿಂದಿರುಗಿರಿ, ನಿಮ್ಮ ಎಲ್ಲಾ ಅಸಹ್ಯವಸ್ತುಗಳ ಕಡೆಗೆ ಬೆನ್ನುಮಾಡಿರಿ. 7 ಏಕಂದರೆ ಇಸ್ರಾಯೇಲ್ ವಂಶದವರಲ್ಲಾಗಲಿ ಇಸ್ರಾಯೇಲಿನೊಳಗೆ ವಾಸವಾಗಿರುವ ವಿದೇಶಿಗಳಲ್ಲಾಗಲಿ ಯಾವನು ನನ್ನಿಂದ ಅಗಲಿ ತನ್ನ ಬೊಂಬೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನಗೆ ಪಾಪಕಾರಿಯಾದ ವಿಘ್ನವನ್ನು ತನ್ನ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ಬಂದು ಅವನ ಮೂಲಕ ದೈವೋತ್ತರವನ್ನು ಕೇಳಿಕೊಳ್ಳುವನೋ ಅವನಿಗೆ ಯೆಹೋವನಾದ ನಾನೇ ಉತ್ತರಕೊಟ್ಟು 8 ಅವನ ಮೇಲೆ ಉಗ್ರಕೋಪಗೊಂಡು ಅವನ ಗತಿಯನ್ನು ಬೆರಗಿಗೂ ಎಚ್ಚರಿಕೆಯ ಮಾತುಗಳಿಗೂ ಕಟ್ಟುಗಾದೆಗಳಿಗೂ ಈಡುಮಾಡಿ ಅವನನ್ನು ನನ್ನ ಜನರೊಳಗಿಂದ ಕಿತ್ತುಹಾಕುವೆನು; ಹೀಗೆ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು. 9 ಒಬ್ಬ ಪ್ರವಾದಿಯು ಮರುಳುಗೊಂಡು ದೈವೋಕ್ತಿಯನ್ನು ನುಡಿದರೆ ಆ ಪ್ರವಾದಿಯನ್ನು ಮರುಳುಗೊಳಿಸಿದವನು ಯೆಹೋವನಾದ ನಾನೇ; ನಾನು ಅವನ ಮೇಲೆ ಕೈಯೆತ್ತಿ ಇಸ್ರಾಯೇಲ್ಯರಾದ ನನ್ನ ಜನರೊಳಗಿಂದ ಅವನನ್ನು ಕಿತ್ತು ನಿರ್ನಾಮಮಾಡುವೆನು. 10 ಪ್ರವಾದಿಯ ದೋಷವು ಎಷ್ಟೋ, ಅವನನ್ನು ಪ್ರಶ್ನೆಕೇಳುವವನ ದೋಷವೂ ಅಷ್ಟೇ; ಉಭಯರೂ ತಮ್ಮ ತಮ್ಮ ದೋಷಫಲವನ್ನು ಅನುಭವಿಸುವರು. 11 ಹೀಗಾದರೆ ಇಸ್ರಾಯೇಲ್ ವಂಶದವರು ಇನ್ನು ನನ್ನನ್ನು ತೊರೆಯರು, ತಮ್ಮ ಲೆಕ್ಕವಿಲ್ಲದ ದ್ರೋಹಗಳಿಂದ ತಮ್ಮನ್ನು ಹೊಲೆಮಾಡಿಕೊಳ್ಳರು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು, ಇದು ಕರ್ತನಾದ ಯೆಹೋವನ ನುಡಿ. ಶಿಷ್ಟನ ಸಂಬಂಧವಿದ್ದರೂ ದುಷ್ಟನಿಗೆ ದಂಡನೆ ತಪ್ಪದು 12 ಮತ್ತು ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 13 ನರಪುತ್ರನೇ, ಅಪರಾಧವನ್ನು ನಡಿಸಿ ನನಗೆ ವಿರುದ್ಧವಾಗಿ ಪಾಪಮಾಡಿದ ದೇಶದ ಮೇಲೆ ನಾನು ಕೈಯೆತ್ತಿ ಅದರ ಜೀವನಾಧಾರವನ್ನು ತೆಗೆದುಬಿಟ್ಟು ಕ್ಷಾಮವನ್ನು ಬರಮಾಡಿ ಜನಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ 14 ನೋಹ ದಾನಿಯೇಲ ಯೋಬ ಎಂಬೀ ಮೂವರು ಪುರುಷರು ಅದರಲ್ಲಿದ್ದರೂ ತಮ್ಮ ಸದಾಚಾರದಿಂದ ಸ್ವಂತಪ್ರಾಣಗಳನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರು; ಇದು ಕರ್ತನಾದ ಯೆಹೋವನ ನುಡಿ. 15 ನನ್ನ ಅಪ್ಪಣೆಯ ಮೇರೆಗೆ ದುಷ್ಟ ಮೃಗಗಳು ದೇಶದಲ್ಲಿ ತಿರುಗುತ್ತಾ ಅದನ್ನು ನಿರ್ಜನಪಡಿಸಿ ಹಾಳುಮಾಡಿ ಯಾರೂ ಹಾದುಹೋಗದಂತೆ ಹೆದರಿಸುವ ಪಕ್ಷದಲ್ಲಿ 16 ಈ ಮೂವರು ಪುರುಷರು ಅದರಲ್ಲಿದ್ದರೂ ನನ್ನ ಜೀವದಾಣೆ ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ದೇಶವು ಹಾಳಾಗಿ ಹೋಗುವದು; ಇದು ಕರ್ತನಾದ ಯೆಹೋವನ ನುಡಿ. 17 ಖಡ್ಗವೇ, ದೇಶವನ್ನು ಹೊಕ್ಕು ಹೋಗು ಎಂದು ಆಜ್ಞಾಪಿಸಿ ನಾನು ಅದನ್ನು ಆ ದೇಶಕ್ಕೆ ತಂದು ಜನಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ 18 ಈ ಮೂವರು ಪುರುಷರು ಅದರಲ್ಲಿದ್ದರೂ ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ಇದು ಕರ್ತನಾದ ಯೆಹೋವನ ನುಡಿ. 19 ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು ರಕ್ತವನ್ನು ಸುರಿಸಿ ವ್ಯಾಧಿಯನ್ನು ಕಳುಹಿಸಿ ಜನಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ 20 ನೊಹ ದಾನಿಯೇಲ ಯೋಬ ಎಂಬಿವರು ಅದರಲ್ಲಿದ್ದರೂ ನನ್ನ ಜೀವದಾಣೆ, ತಮ್ಮ ಸದಾಚಾರದಿಂದ ಸ್ವಂತಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡುಮಗನನ್ನಾಗಲೀ ಹೆಣ್ಣುಮಗಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ಇದು ಕರ್ತನಾದ ಯೆಹೋವನ ನುಡಿ. 21 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಖಡ್ಗ ಕ್ಷಾಮ ದುಷ್ಟಮೃಗ ವ್ಯಾಧಿ ಎಂಬೀ ನಾಲ್ಕು ಬಾಧೆಗಳನ್ನು ಯೆರೂಸಲೇವಿುನ ಮೇಲೆ ಒಟ್ಟಿಗೆ ತಂದು ಜನಪಶುಗಳನ್ನು ನಿರ್ಮೂಲಮಾಡುವಾಗ ಹೇಳತಕ್ಕದ್ದೇನು! 22 ಆದರೂ ಸ್ತ್ರೀಪುರುಷರಲ್ಲಿ ಕೆಲವರು ಹೇಗೋ ತಪ್ಪಿಸಿಕೊಂಡು ಉಳಿದು ಅಲ್ಲಿಂದ ಒಯ್ಯಲ್ಪಡುವರು; ಆಹಾ, ಅವರು ನಿಮ್ಮ ಬಳಿಗೆ ಸೇರಿದಾಗ ನೀವು ಅವರ ದುರ್ಮಾರ್ಗ ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇವಿುನ ಮೇಲೆ ಬರಮಾಡಿದ ಕೇಡಿನ ವಿಷಯವಾಗಿ, ಅದಕ್ಕೆ ಉಂಟುಮಾಡಿದ ಎಲ್ಲಾ ಕೇಡುಗಳ ವಿಷಯವಾಗಿಯೂ ಸಮಾಧಾನ ಹೊಂದುವಿರಿ. 23 ನೀವು ಅವರ ದುರ್ಮಾರ್ಗ ದುಷ್ಕೃತ್ಯಗಳನ್ನು ನೋಡುವಾಗ ಅವರಿಂದಲೇ ನಿಮಗೆ ಸಮಾಧಾನವಾಗುವದು; ನಾನು ಯೆರೂಸಲೇವಿುಗೆ ಮಾಡಿದ್ದೆಲ್ಲಾ ಸುಮ್ಮನೆ ಮಾಡಿದ್ದಲ್ಲವೆಂದು ನಿಮಗೆ ತಿಳಿದುಬರುವದು; ಇದು ಕರ್ತನಾದ ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India